ತಿರುವನಂತಪುರಂ (ಜೂ. 4): ಕೇರಳದಲ್ಲಿ ಗರ್ಭಿಣಿ ಕಾಡಾನೆಗೆ ಪಟಾಕಿ ತುಂಬಿದ ಪೈನಾಪಲ್ ತಿನ್ನಿಸಿದ ಕಾರಣ ಆ ಆನೆ ಸಾವನ್ನಪ್ಪಿತ್ತು. ಈ ಅಮಾನವೀಯ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯತ್ವವನ್ನೇ ಪ್ರಶ್ನಿಸುವಂತಿರುವ ಈ ಆಘಾತಕಾರಿ ಘಟನೆಯನ್ನು ಕೇರಳ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಕೇರಳದ ಪಲಕ್ಕಾಡ್ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ (ಎಸ್ವಿಎನ್ಪಿ)ನ ಗರ್ಭಿಣಿ ಆನೆ ಮೇ 27ರಂದು ಊರೊಳಗೆ ಪ್ರವೇಶಿಸಿತ್ತು. ಆಹಾರ ಹುಡುಕಿ ಬಂದ ಆನೆಗೆ ಯಾರೋ ಆನೆಗೆ ತಿನ್ನಲು ಪೈನಾಪಲ್ ಹಣ್ಣನ್ನು ನೀಡಿದರು. ಆನೆ ಆ ಹಣ್ಣನ್ನು ತಿನ್ನುತ್ತಿದ್ದಂತೆ ಅದರೊಳಗಿದ್ದ ಮದ್ದುಗುಂಡು ಸ್ಫೋಟವಾಯಿತು. ಪೈನಾಪಲ್ ಹಣ್ಣಿನೊಳಗೆ ಸ್ಫೋಟಕವನ್ನು ತುಂಬಿದ್ದರಿಂದ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು.
ತನಗೆ ಪ್ರಾಣ ಹೋಗುವಷ್ಟು ನೋವಾದರೂ ಆ ಆನೆ ಅಲ್ಲಿದ್ದ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲ, ಮನೆ-ಅಂಗಡಿಗಳಿಗೂ ಹಾನಿ ಮಾಡಲಿಲ್ಲ. ತನ್ನ ನೋವನ್ನು ನುಂಗಿಕೊಂಡು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತಿತು. ಅದರಿಂದ ಆನೆಗೆ ಸ್ವಲ್ಪ ಆರಾಮಾದಂತೆ ಎನಿಸಿರಬೇಕು. ಹಾಗೇ ಗಂಟೆಗಟ್ಟಲೆ ಆನೆ ನೀರಿನಲ್ಲಿ ನಿಂತೇ ಇತ್ತು. ಅಷ್ಟರಲ್ಲಿ ವಿಷಯ ತಿಳಿದು ಎಸ್ವಿಎನ್ಪಿಯ ಅರಣ್ಯಾಧಿಕಾರಿಗಳು ಆನೆಯನ್ನು ಹುಡುಕುತ್ತಾ ಸ್ಥಳಕ್ಕೆ ಬಂದಿದ್ದರು.
ಇದನ್ನೂ ಓದಿ: ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ!
'ನದಿಯ ಮಧ್ಯದಲ್ಲಿ ನಿಂತಿದ್ದ ಆನೆಯನ್ನು ದಡಕ್ಕೆ ಕರೆತಂದು, ಚಿಕಿತ್ಸೆ ಕೊಡಿಸುವ ಸಲುವಾಗಿ ಎರಡು ಆನೆಗಳನ್ನು ಕರೆಸಿದೆವು. ಆದರೆ, ಅದನ್ನು ನೋಡಿದ ಆನೆ ಕಣ್ಮುಚ್ಚಿ ಹಾಗೇ ನೀರಿನಲ್ಲಿ ನಿಂತಿತೇ ವಿನಃ ಒಂದಿಂಚೂ ಕದಲಲಿಲ್ಲ. ಬಹುಶಃ ಆನೆಗೆ ತಾನಿನ್ನು ಬದುಕುವುದಿಲ್ಲ ಎಂಬುದು ಅರ್ಥವಾಗಿತ್ತೇನೋ... ಆ ಕ್ಷಣದಲ್ಲಿ ಆ ಆನೆ ಖಂಡಿತ ತನಗಿಂತ ಹೆಚ್ಚಾಗಿ ತನ್ನ ಹೊಟ್ಟೆಯಲ್ಲಿದ್ದ ಮರಿಯ ಜೀವ ಉಳಿಸಿಕೊಳ್ಳಬೇಕು ಎಂದು ಯೋಚಿಸಿರುತ್ತದೆ' ಎಂದು ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಆ ಪೋಸ್ಟ್ ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿತ್ತು. ರತನ್ ಟಾಟಾ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಸಿನಿಮಾ ನಟರು, ಕ್ರಿಕೆಟಿಗರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನ ಆನೆಯ ದುರಂತ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಟ್ವಿಟ್ಟರ್ನಲ್ಲಿ ಆಗ್ರಹಿಸಿದ್ದರು.
Appalled to hear about what happened in Kerala. Let's treat our animals with love and bring an end to these cowardly acts. pic.twitter.com/3oIVZASpag
— Virat Kohli (@imVkohli) June 3, 2020
ಈ ಅಮಾನುಷ ಘಟನೆಯ ಕುರಿತು ಕೇಂದ್ರ ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಕೇರಳ ಸರ್ಕಾರದಿಂದ ವರದಿ ತರಿಸಿಕೊಂಡಿದ್ದಾರೆ. ಕೇರಳದಲ್ಲಿ ಆನೆಯನ್ನು ಕೊಂದ ಘಟನೆಯನ್ನು ಪರಿಸರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯ ಸಂಪೂರ್ಣ ವರದಿ ತರಿಸಿಕೊಳ್ಳಲಾಗಿದೆ. ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಾವ್ಡೇಕರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ