5 ವರ್ಷಗಳ ನಂತರ ರಾಹುಲ್​ ಗಾಂಧಿ ಭೇಟಿ ಮಾಡಿದ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​: ಏನಿದು ಲೆಕ್ಕಾಚಾರ!

ಜುಲೈ 16ರ ನಂತರ ಪ್ರಿಯಾಂಕ ಗಾಂಧಿ ತಮ್ಮನ್ನು ಸಂಪೂರ್ಣವಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಸಂಭವವಿದೆ. ಅಲ್ಲದೇ ಸಮಾಜವಾದಿ ಪಕ್ಷವು ಕಾಂಗ್ರೆಸ್​ ಜೊತೆ ಹೆಜ್ಜೆ ಹಾಕುವ ಭರವಸೆ ನೀಡಿದೆ. ಅಲ್ಲದೇ ಪ್ರಶಾಂತ್​ ಕಿಶೋರ್​ ಗೆ ಸಮಾಜವಾದಿ ಪಕ್ಷದ ಜೊತೆ ಕೆಲಸ ಮಾಡಲು ಎಳ್ಳಷ್ಟು ಇಷ್ಟವಿಲ್ಲ ಎಂಬುದು ಆಶ್ಚರ್ಯದ ಸಂಗತಿ.

ಪ್ರಶಾಂತ್ ಕಿಶೋರ್.

ಪ್ರಶಾಂತ್ ಕಿಶೋರ್.

 • Share this:
  ಸುಮಾರು ಐದು ವರ್ಷಗಳ ನಂತರ ಪ್ರಶಾಂತ್ ಕಿಶೋರ್ ಮಂಗಳವಾರ ರಾಹುಲ್ ಗಾಂಧಿಯವರ ನಿವಾಸಕ್ಕೆ ಭೇಟಿ ನೀಡಿದರು. ಪ್ರಶಾಂತ್​ ಕಿಶೋರ್​ ರಾಹುಲ್​ ಗಾಂಧಿ ಮನೆಗೆ ಹೋಗುತ್ತಿದ್ದಂತೆ ಇಡೀ ರಾಜಕೀಯ ವಿಶ್ಲೇಷಕರ, ಧುರೀಣರ ಕಣ್ಣುಗಳು ರಾಹುಲ್​ ಗಾಂಧಿಯ ನಿವಾಸದ ಕಡೆಗೆ ನೆಟ್ಟು ಕುಳಿತಿದ್ದವು. ಸುಮಾರು ಮೂರು ಗಂಟೆಗಳ ಹೊತ್ತು ಇವರಿಬ್ಬರ ಮಾತುಕತೆ ನಡೆಯಿತು.

  2017 ರ ಉತ್ತರ ಪ್ರದೇಶದ ಚುನಾವಣೆಯ ವಿಫಲತೆಯ  ನಂತರ ಕಾಂಗ್ರೆಸ್ ಮತ್ತು ಈ ಚುನಾವಣಾ ಚಾಣಕ್ಯನ ನಡುವೆ ಅಷ್ಟೊಂದು ಉತ್ತಮ ಬಾಂಧವ್ಯ ಇರಲಿಲ್ಲ. ಯುಪಿ ಕಿ ಲಡ್ಕಿ (ಯುಪಿಯ ಮಗಳು) ಎನ್ನುವ ಘೋಷಣೆ ಯಾವಾಗ ಕೈ ಕೊಟ್ಟಿತೋ ಅಂದಿನಿಂದ ಭವಿಷ್ಯದಲ್ಲಿ ಕಾಂಗ್ರೆಸ್​ ಪಕ್ಷದೊಂದಿಗೆ ಕೆಲಸ ಮಾಡುವ ಪ್ರಶ್ನೆಯೂ ಇಲ್ಲ ಎಂದು ಹೇಳಿದ್ದರು. ಆದರೆ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ  ಆಗಾಗ್ಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಪ್ರಸ್ತುತ ಸಂದರ್ಭದ ಬಗ್ಗೆ ಚರ್ಚಿಸುತ್ತಾರೆ ಎನ್ನುವುದು ಗುಟ್ಟಾಗಿ ಉಳಿಯದ ಸಂಗತಿ. ಪ್ರಶಾಂತ್​​ ಕಿಶೋರ್​ ಯಾವಾಗ ಬಂಗಾಳ ಮತ್ತು ತಮಿಳು ನಾಡಿನಲ್ಲಿ ತಮ್ಮ ಕೈಚಳಕ ತೋರಿಸಿದರೂ ಅಂದಿನಿಂದ ಇಡೀ ರಾಷ್ಟ್ರವೇ ಅವರ  ಕಡೆಗೆ ನೆಟ್ಟ ಕಣ್ಣಿನಲ್ಲಿ ನೋಡುತ್ತಿದೆ. ಈಗಂತೂ ಎಲ್ಲಾ ಪಕ್ಷಗಳಿಗೂ ಪ್ರಶಾಂತ್​ ಕಿಶೋರ್​ ಬೇಕಾಗಿರುವ ವ್ಯಕ್ತಿ ಯಾವ ಮಟ್ಟಕ್ಕೆಂದರೆ ಅವರಿಲ್ಲದೇ ನಾವು ಗೆಲ್ಲುವುದಿಲ್ಲ ಎನ್ನುವ ಮಟ್ಟಕ್ಕೆ ಅನೇಕ ಪಕ್ಷಗಳು ಇವರನ್ನು ನಂಬಿ ಕೂತಿವೆ.

  ಪ್ರಶಾಂತ್ ಕಿಶೋರ್ ಅವರು ಪಂಜಾಬ್‌ನ ಕಾಂಗ್ರೆಸ್ ಸರ್ಕಾರದ ಪ್ರಸ್ತುತ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ  2018 ರಲ್ಲಿ ನವಜೋತ್ ಸಿಂಗ್ ಸಿಧು ಅವರನ್ನುಬಿಜೆಪಿಯಿಂದ ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿನ ಪ್ರಮುಖ ಪಾತ್ರವನ್ನು ಇವರು ಹೊಂದಿದ್ದರು. ಈಗ ಸಿಧು ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವೆ ಜೋರು ಕಿತ್ತಾಟ ಬೀದಿಗೆ ಬಂದಿದ್ದು ಇದು ಕಾಂಗ್ರೆಸ್ ಉನ್ನತ ನಾಯಕತ್ವಕ್ಕೆ ದೊಡ್ಡ ಸವಾಲಾಗಿದೆ ಪರಿಹಾರವನ್ನು ಕಂಡುಹಿಡಿಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಅದು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ, ಕಳೆದ ಎರಡು ದಿನಗಳಿಂದ ಸಿಧು ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡುತ್ತಿದ್ದು ಕ್ಯಾಪ್ಟನ್‌ ವಿರುದ್ದ ತೊಡೆ ತಟ್ಟಿದ್ದಾರೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ಚುನಾವಣೆ ನಡೆಯುವವರೆಗೂ ಕ್ಯಾಪ್ಟನ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬುದು ಸ್ಪಷ್ಟವಾದ ಕಾರಣ ಸಿಧು ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  ಬಂಗಾಳ ಚುನಾವಣೆ ಪ್ರಶಾಂತ್​ ಕಿಶೋರ್​ಗೆ ಸ್ಟಾರ್​ ವ್ಯಾಲ್ಯೂ ತಂದು ಕೊಟ್ಟಿದ್ದಂತೂ ನಿಜ. ಈ ಚುನಾವಣೆ ಆದ ಮೇಲೆ ಸ್ವತಃ ಪ್ರಶಾಂತ್​ ಕಿಶೋರ್​ ನಾನಿನ್ನು ರಾಜಕೀಯಕ್ಕೆ ಬರುವುದಿಲ್ಲ ಹಾಗೂ ಈ ರೀತಿಯ ಕೆಲಸಕ್ಕೆ ಕೈ ಹಾಕುವುದಿಲ್ಲ ಮತ್ತು ಇದರಿಂದ ನಿವೃತ್ತಿಯಾಗಿ ಬೇರೆ ಏನಾದರೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಇದು ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು ಅಲ್ಲದೇ 2014 ರಲ್ಲಿ ಮೋದಿ ಅವರೊಟ್ಟಿಗೆ ಕೆಲಸ ಮಾಡಿ ಈ ದೇಶವನ್ನು ಹಾಳು ಮಾಡಿದೆ ಎನ್ನುವ ಸಂದೇಶವನ್ನು ಸಹ ಕೊಟ್ಟಿದ್ದರು.

  ಪ್ರಶಾಂತ್ ಕಿಶೋರ್​ ರಾಜಕೀಯದಿಂದ ಎಷ್ಟೇ ದೂರವಿರುತ್ತೇನೆ ಎಂದರೂ ರಾಜಕೀಯ ಇವರನ್ನು ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಇತ್ತೀಚೆಗೆ ಪ್ರಶಾಂತ್​ ಕಿಶೋರ್​ ಜೊತೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವ ಕಿಶೋರ್​ ನಡೆ ಮುಂದೇನು ಎಂಬುದು ಕುತೂಹಲಕರ ವಿಷಯವಾಗಿದೆ. ಇಡೀ ದೇಶದಲ್ಲಿ ಕಾಂಗ್ರೆಸ್​ ಅಪ್ರಸ್ತುತ ಪಕ್ಷವಾಗಿದ್ದು ಕಳೆದ ಎರಡು ವರ್ಷಗಳಲ್ಲಿ ನಡೆದ ಯಾವುದೇ ಚುನಾವಣೆಯನ್ನು ಗಮನಿಸಿದರು ಅದರ ಇರುವಿಕೆ ತುಂಬಾ ಅಪ್ರಸ್ತುತ ಎಂಬುದು ಎಲ್ಲರ ನಂಬಿಕೆಯಾಗಿದೆ. ಆದ ಕಾರಣ ಅನೇಕ ಪಕ್ಷಗಳು ಕಾಂಗ್ರೆಸ್​ ಬಿಟ್ಟು ಸ್ವಂತವಾಗಿ ನೆಲೆ ನಿಲ್ಲಲು ಹೊರಡುತ್ತಿವೆ ಎನ್ನಬಹುದು.

  ಜುಲೈ 16ರ ನಂತರ ಪ್ರಿಯಾಂಕ ಗಾಂಧಿ ತಮ್ಮನ್ನು ಸಂಪೂರ್ಣವಾಗಿ ಉತ್ತರ ಪ್ರದೇಶ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಸಂಭವವಿದೆ. ಅಲ್ಲದೇ ಸಮಾಜವಾದಿ ಪಕ್ಷವು ಕಾಂಗ್ರೆಸ್​ ಜೊತೆ ಹೆಜ್ಜೆ ಹಾಕುವ ಭರವಸೆ ನೀಡಿದೆ. ಅಲ್ಲದೇ ಪ್ರಶಾಂತ್​ ಕಿಶೋರ್​ ಗೆ ಸಮಾಜವಾದಿ ಪಕ್ಷದ ಜೊತೆ ಕೆಲಸ ಮಾಡಲು ಎಳ್ಳಷ್ಟು ಇಷ್ಟವಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಇದರಂತೆ 2024ರ ಚುನಾವಣೆ ಹೊತ್ತಿಗೆ ಮೋದಿಯ ವಿರುದ್ದ ಪ್ರಭಲ ಎದುರಾಳಿ ಪಕ್ಷಗಳನ್ನು ಪ್ರಶಾಂತ್​ ಕಿಶೋರ್​ ಸಂಘಟಿಸುತ್ತಿದ್ದಾರೆಯೇ? ಇದು ಕೂಡ ಚಿದಂಬರ ರಹಸ್ಯವಾಗಿದೆ. ಅಲ್ಲದೇ ಮೋದಿಯನ್ನೇ ಅಧಿಕಾರಕ್ಕೆ ತಂದ ಈ ವ್ಯಕ್ತಿ ಮೋದಿಯ ವಿರುದ್ದ ತೊಡೆ ತಟ್ಟುತ್ತಿರುವುದಾದರೂ ಏಕೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇದೆ.

  ಇದರ ಜೊತೆಗೆ  ಕಾಂಗ್ರೆಸ್​ ತನ್ನ ಮರು ಹುಟ್ಟಿಗೆ ಅವಕಾಶವನ್ನು ಕಾಯುತ್ತಿದ್ದು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಈ ಮರು ಹುಟ್ಟಿಗೆ ಏನಾದರೂ ಪ್ರಶಾಂತ್​ ಕಿಶೋರ್​ ಸಹಾಯ ಮಾಡುವರೇ, ಗ್ಲೂಕೋಸ್​ ನೀಡುವರೇ ಗೊತ್ತಿಲ್ಲ ಪಂಜಾಬ್​ ಚುನಾವಣೆ ತನಕ ಇದೆಲ್ಲದ್ದಕ್ಕೂ ಕಾಯಬೇಕು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: