ನವದೆಹಲಿ: ಬಿಹಾರದ ಒಳಗೆ ಮತ್ತು ಹೊರಗೆ ಬಿಜೆಪಿ ಪಕ್ಷದ ಜೊತೆಗಿನ ಜೆಡಿಯು ಮೈತ್ರಿಯನ್ನು ಧೃಡಪಡಿಸುವ ನಿಟ್ಟಿನಲ್ಲಿ ಪಕ್ಷದ ಬಂಡಾಯ ನಾಯಕರಾದ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರನ್ನು ಜೆಡಿಯು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ. ಆದರೆ, ಇದಕ್ಕೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಗೆ ತಕ್ಕ ಉತ್ತರ ನೀಡಲು ಪ್ರಶಾಂತ್ ಕಿಶೋರ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ
ಕಳೆದ ತಿಂಗಳು ಕೇಂದ್ರ ಸರ್ಕಾರ ವಿವಾದಾತ್ಮಕ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಉಗ್ರವಾಗಿ ಖಂಡಿಸಿದ್ದ ಈ ಇಬ್ಬರೂ ನಾಯಕರು ಬಿಹಾರದ ಹೊರಗೆ ಜೆಡಿಯು ಬಿಜೆಪಿ ಪಕ್ಷದ ಜೊತೆಗೆ ಮೈತ್ರಿ ಸಾಧಿಸುವ ನಿಲುವನ್ನು ಪ್ರಶ್ನಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅಲ್ಲದೆ, ಬಿಜೆಪಿ ನಾಯಕರನ್ನು ಉಗ್ರವಾಗಿ ಖಂಡಿಸಿದ್ದರು.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಫೆಬ್ರವರಿ 2 ರಂದು ದೆಹಲಿಯಲ್ಲಿ ಚುನಾವಣಾ ರ್ಯಾಲಿ ಹಮ್ಮಿಕೊಂಡಿದೆ. ಈ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ, “ಪಕ್ಷದ ಹಿರಿಯ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಪಕ್ಷದ ನಿರ್ಧಾರ ಹಾಗೂ ಕಾರ್ಯವೈಖರಿ ವಿರುದ್ಧ ಮಾತನಾಡುವ ಮೂಲಕ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಕಿಶೋರ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದ್ದಾರೆ.
ತಮ್ಮನ್ನು ಪಕ್ಷದಿಂದ ಉಚ್ಛಾಟಿಸಿರುವ ಪಕ್ಷದ ಕ್ರಮಕ್ಕೆ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್, “ಬಿಹಾರದ ಮುಖ್ಯಮಂತ್ರಿಯಾದ ಕಿಶೋರ್ ಕುಮಾರ್ ಅವರೇ ನಿಮಗೆ ನನ್ನ ಶುಭ ಹಾರೈಕೆಗಳು. ಬಿಹಾರದ ಸಿಎಂ ಪದವಿಯನ್ನು ಉಳಿಸಿಕೊಳ್ಳಿ. ನಿಮಗೆ ದೇವರು ಒಳ್ಳೆಯದನ್ನು ಮಾಡಲಿ” ಎಂದು ತಿಳಿಸಿದ್ದಾರೆ.
ಅಸಲಿಗೆ ಬುಧವಾರ ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಟ್ವಿಟರ್ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಅಮಿತ್ ಶಾ ನಿರ್ದೇಶನದ ಮೇರೆ ಕಿಶೋರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಟ್ವಿಟ್ ಮಾಡಿದ್ದರು. ಆದರೆ, ಇದೊಂದು ಸುಳ್ಳು ಹೇಳಿಕೆ ಎಂದು ತಾನು ಜೆಡಿಯು ಸೇರ್ಪಡೆಯಾಗಿರುವುದನ್ನು ಪ್ರಶಾಂತ್ ಕಿಶೋರ್ ತಳ್ಳಿಹಾಕಿದ್ದರು. ಅಲ್ಲದೆ, ನಿತೀಶ್ ಕುಮಾರ್ ವಿರದ್ಧ ಟೀಕಾ ಪ್ರಹಾರ ನಡೆಸಿದ್ದರು. ಇದಾದ ಮರು ದಿನವೇ ಶಿಸ್ತು ಉಲ್ಲಂಘಟನೆ ನೆಪ ನೀಡಿ ಬಂಡಾಯ ನಾಯಕ ಕಿಶೋರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ಕಾಯ್ದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜೆಡಿಯು ಒಪ್ಪಿಗೆ ಸೂಚಿಸಿದ ನಂತರ ಪ್ರಶಾಂತ್ ಕಿಶೋರ್ ಪಕ್ಷದ ವಿರುದ್ಧವೇ ಬಂಡೆದ್ದಿದ್ದರು. ಇವರ ಮನವೊಲಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಕಷ್ಟು ಪ್ರಯತ್ನಿಸಿದರಾದರೂ ಅದು ಸಫಲವಾಗಿಲ್ಲ.
ದೆಹಲಿ ಚುನಾವಣೆಯಲ್ಲಿ ಇಬ್ಬರು ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಲು ಬಿಜೆಪಿ ಹಸಿರು ನಿಶಾನೆ ನೀಡಿದೆ. ಆದರೆ, ರಾಜಕೀಯ ಚಾಣಕ್ಯ ಖ್ಯಾತಿಯ ಪ್ರಶಾಂತ್ ಕಿಶೋರ್ ಆಮ್ ಆದ್ಮಿ ಪಕ್ಷದ ಪರವಾಗಿ ಚುನಾವಣಾ ರಣತಂತ್ರ ಹೆಣೆಯುತ್ತಿರುವುದು ಇದೀಗ ಬಿಜೆಪಿ ಮತ್ತು ಜೆಡಿಯು ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಮಹಾತ್ಮನನ್ನು ಕೊಂದು ನಾವು ಪಡೆದದ್ದಾದರೂ ಏನು?; ನೆಪಕ್ಕಷ್ಟೇ ಗಾಂಧಿಯನ್ನು ನೆನೆಯುವ ರಾಷ್ಟ್ರದಲ್ಲಿ ನಿಂತು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ