ನವದೆಹಲಿ: ಉಳಿತಾಯ ಹಣದ ಹೂಡಿಕೆದಾರರ ಪಾಲಿಗೆ ಅತ್ಯಂತ ಸುರಕ್ಷಿತ ಯೋಜನೆ ಎನಿಸಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದರ ಇತ್ತೀಚೆಗೆ ಇಳಿಯುತ್ತಲೇ ಬಂದಿದೆ. ಅಂದರೆ, ಈ ಹೂಡಿಕೆ ಮೇಲೆ ಸಿಗುವ ಬಡ್ಡಿ ದರ ಕಡಿಮೆಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಪಿಪಿಎಫ್ ಹೂಡಿಕೆ ಮೇಲಿನ ಬಡ್ಡಿ ದರ ಶೇ. 7ಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ. ಸರ್ಕಾರಿ ಬಾಂಡ್ಗಳ ದರ ಸತತವಾಗಿ ಇಳಿಯುತ್ತಿರುವುದು ಪಿಪಿಎಫ್ ಬಡ್ಡಿ ದರ ಇಳಿಕೆಯ ಸುಳಿವು ನೀಡಿದೆ ಎಂದು ತಜ್ಞರು ಹೇಳುತ್ತಾರೆ.
ಪಿಪಿಎಫ್ ಬಡ್ಡಿ ದರಕ್ಕೂ ಗವರ್ನ್ಮೆಂಟ್ ಬಾಂಡ್ ದರಕ್ಕೂ ಸಂಬಂಧ ಇದೆ. ಗವರ್ನ್ಮೆಂಟ್ ಬಾಂಡ್ ದರ ಇಳಿಕೆಯಾದರೆ ಪಿಪಿಎಫ್ನಂಥ ಸಣ್ಣ ಉಳಿತಾಯ ಯೋಜನೆಗಳ ದರವೂ ಇಳಿಯುತ್ತದೆ. ಪ್ರತೀ ತ್ರೈಮಾಸಿಕ ಅವಧಿಯ ಆರಂಭದಲ್ಲಿ ದರ ಪರಿಷ್ಕರಣೆ ಆಗುತ್ತದೆ. ಹಿಂದಿನ ತ್ರೈಮಾಸಿಕದ ಅಂತ್ಯದಲ್ಲಿ ಸರ್ಕಾರಿ ಬಾಂಡ್ನ ಮೌಲ್ಯವರ್ಧನೆಯ ಆಧಾರದ ಮೇಲೆ ಪಿಪಿಎಫ್ನ ದರವನ್ನು ನಿಗದಿ ಮಾಡಲಾಗುತ್ತದೆ.
ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ 10 ವರ್ಷದ ಸರ್ಕಾರಿ ಬಾಂಡ್ ಸರಾಸರಿ ಶೇ. 6.42ರಷ್ಟು ಲಾಭ ಕಂಡಿತು. ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಪಿಪಿಎಫ್ ಬಡ್ಡಿ ದರವನ್ನು ಶೇ. 7.1ಕ್ಕೆ ನಿಗದಿ ಮಾಡಲಾಯಿತು.
ಇದನ್ನೂ ಓದಿ: 150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್
ಈಗ ಏಪ್ರಿಲ್ ತಿಂಗಳಿನಿಂದ ಸರ್ಕಾರಿ ಬಾಂಡ್ಗಳು ಸರಾಸರಿ 6.07 ಲಾಭ ಹೊಂದಿವೆ. ಈಗಿರುವ ಅದರ ದರ ಶೇ. 5.85. ಇದು ಜುಲೈನಿಂದ ಶುರುವಾಗುವ ತ್ರೈಮಾಸಿಕ ಅವಧಿಯಲ್ಲಿ ಪ್ರಕಟವಾಗುವ ಪಿಪಿಎಫ್ ದರದ ಮೇಲೆ ನೇರ ಪ್ರಭಾವ ಬೀರುತ್ತದೆ. ಪಿಪಿಎಫ್ ಬಡ್ಡಿ ದರ ಶೇ. 6.5ಕ್ಕೆ ಇಳಿದರೂ ಅಚ್ಚರಿ ಇಲ್ಲ. ಅಂದರೆ 1974ರ ನಂತರ ಪಿಪಿಎಫ್ ಬಡ್ಡಿ ದರ ಶೇ. 7ಕ್ಕಿಂತ ಕಡಿಮೆಗೊಂಡಿದ್ದೇ ಇಲ್ಲ. 46 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಪಿಪಿಎಫ್ ದರ ಕುಸಿಯುತ್ತಿರುವ ಸ್ಪಷ್ಟ ಸೂಚನೆ ಇದೆ.
ಸಣ್ಣ ಉಳಿತಾಯ ಹಣದ ಹೂಡಿಕೆದಾರರಿಗೆ ಪಿಪಿಎಫ್ ದರ ಮತ್ತು ಗವರ್ನ್ಮೆಂಟ್ ಬಾಂಡ್ ದರ ಎಷ್ಟೇ ಕಡಿಮೆಯಾದರೂ ವಿಶ್ವಾಸ ಕುಂದುವ ಸಾಧ್ಯತೆ ಕಡಿಮೆ. ಷೇರುಮಾರುಕಟ್ಟೆಯಂತೆ ರಿಸ್ಕ್ ಇರುವುದಿಲ್ಲ. ಹೂಡಿದ ಹಣ ವಾಪಸ್ ಬರುವ ಖಾತ್ರಿ ಇರುತ್ತದೆ. ಮುಂದಿನ ವಾರ ಪಿಪಿಎಫ್ನ ಹೊಸ ದರಗಳನ್ನ ಪ್ರಕಟಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ