Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ

ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ಇರುವ ವೀನಸ್ ಗ್ರಹದಲ್ಲಿ ಜೀವದ ಸುಳಿವು ಸಿಕ್ಕಿದೆ. ಭೂಮಿಯಾಚೆ ಜೀವಿಗಳು ಅಸ್ತಿತ್ವದಲ್ಲಿದೆಯಾ ಎಂದು ಮಾನವನ ನಿರಂತರ ಹುಡುಕಾಟಕ್ಕೆ ಒಂದು ಉತ್ತರ ಸಿಕ್ಕಿದೆಯಾ?

ಶುಕ್ರ ಗ್ರಹ

ಶುಕ್ರ ಗ್ರಹ

  • News18
  • Last Updated :
  • Share this:
ಬೆಂಗಳೂರು(ಸೆ. 15): ಭೂಮಿಗೆ ಅತ್ಯಂತ ಸಮೀಪದ ಗ್ರಹವೆನಿಸಿರುವ ಶುಕ್ರನಲ್ಲಿ ಜೀವ ಸಾಧ್ಯತೆ ಇರಬಹುದು ಎಂಬ ಸುಳಿವು ಸಿಕ್ಕಿದೆ. ಜೀವಿಸಲು ಸಾಧ್ಯವೇ ಇಲ್ಲವೆನ್ನುವಂಥ ವಾತಾವರಣ ಇರುವ ಶುಕ್ರ ಗ್ರಹದಲ್ಲೂ ಜೀವ ಜಗತ್ತು ನಿರ್ಮಾಣಗೊಂಡಿರಬಹುದು ಎಂಬ ಆಶಯದಲ್ಲಿ ವಿಜ್ಞಾನಿಗಳಿದ್ದಾರೆ. ಶಕ್ರ (venus) ಗ್ರಹದಲ್ಲಿ ಯಾವುದೇ ಜೀವ ಪತ್ತೆಯಾಗಿಲ್ಲ. ಬದಲಾಗಿ ಜೀವಿಗಳಿಂದ ಸೃಷ್ಟಿಯಾಗಿರುವ ಅನಿಲ ಅಸ್ತಿತ್ವದಲ್ಲಿರುವುದು ಬೆಳಕಿಗೆ ಬಂದಿದೆ. ಆ ಗ್ರಹದ ಮೇಲಿರುವ ತೀವ್ರದ ತರಹದ ಆ್ಯಸಿಡ್​​ಯುಕ್ತ ಮೋಡಗಳಲ್ಲಿ ಫಾಸ್​ಫೈನ್ (Phosphine) ಗ್ಯಾಸ್ ಪತ್ತೆಯಾಗಿದೆ. ಈ ಮೂಲಕ ದೊಡ್ಡ ಕುತೂಹಲ ಗರಿಗೆದರಲು ಕಾರಣವಾಗಿದೆ.

ಭೂಮಿಯಲ್ಲಿರುವ ಫಾಸ್​ಫೈನ್ ಅನಿಲದ ಗುಣಗಳನ್ನ ನೋಡಿದರೆ ವೀನಸ್​ನಲ್ಲಿ ಜೀವ ಸಾಧ್ಯತೆ ಇರಬಹುದು ಎಂಬ ಅನುಮಾನ ಹುಟ್ಟುತ್ತದೆ. ಆಕ್ಸಿಜನ್ ಇಲ್ಲದ ವಾತಾವರಣದಲ್ಲಿ ಬದುಕುವ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲಿ ಫಾಸ್​ಫೈನ್ ಉಪಸ್ಥಿತಿ ಇದೆ ಎಂದಾದರೆ ಅಲ್ಲಿ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ಇದೆ. ಈ ಸಂಶೋಧನೆಯಿಂದ ಹಲವರು ಚಕಿತಗೊಂಡಿದ್ಧಾರೆ. ನೇಚರ್ ಆಸ್ಟ್ರಾನಮಿ ಎಂಬ ಜರ್ನಲ್​ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ವೇಲ್ಸ್​ನ ಕಾರ್ಡಿಫ್ ಯೂನಿವರ್ಸಿಟಿಯ ಖಗೋಲವಿಜ್ಞಾನಿ ಜೇನ್ ಗ್ರೀವ್ಸ್ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ. ಮಸಾಚುಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಲಿಕ್ಯುಲರ್ ಆಸ್ಟ್ರೋಫಿಸಿಸಿಸ್ಟ್ ಕ್ಲಾರಾ ಸೌಸಾ-ಸಿಲ್ವ ಅವರೂ ಈ ಸಂಶೋಧನೆಯ ಭಾಗವಾಗಿದ್ದಾರೆ.

“ನಮ್ಮ ಸಂಶೋಧನೆಯನ್ನು ನೋಡುವುದಾದರೆ ಜೀವ ಸಾಧ್ಯತೆ ತೋರುತ್ತದೆ. ಅದು ಫಾಸ್​ಫೈನ್ ಆಗಿದ್ದರೆ ಜೀವ ಆಗಿರುತ್ತದೆ. ಅಂದರೆ ಜೀವಜಗತ್ತು ಭೂಮಿಗಷ್ಟೇ ಸೀಮಿತವಲ್ಲ. ಎಲ್ಲೆಡೆ ಬಹಳ ಸಾಮಾನ್ಯವಾಗಿ ಜೀವಿಗಳ ಅಸ್ತಿತ್ವದಲ್ಲಿರಬಹುದು. ನಮ್ಮ ಗೆಲಾಕ್ಸಿಯಾದ್ಯಂತ ಬೇರೆ ಬೇರೆ ಗ್ರಹಗಳಲ್ಲಿ ಜೀವಿಗಳು ಇರಬಹುದು” ಎಂದು ಕ್ಲಾರಾ ಸಿಲ್ವ ಹೇಳುತ್ತಾರೆ.

ಇದನ್ನೂ ಓದಿ: ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತ

ಮೂರು ಹ್ರೈಡ್ರೋಜನ್ ಅಣು ಜೊತೆ ಒಂದು ಫಾಸ್​ಫರಸ್ ಅಣು ಸಂಯೋಜನೆಯಲ್ಲಿ ಫಾಸ್​ಫೈನ್ ಅನಿಲ ಇರುತ್ತದೆ. ಇದು ಜನರಿಗೆ ಬಹಳ ವಿಷಕಾರಿಯೂ ಹೌದು. ವೀನಸ್​ನ ವಾತಾವರಣದಲ್ಲಿರ ಕಂಡು ಬಂದಿರುವ ಫಾಸ್​ಫೈನ್​ಗೆ ಏನು ಕಾರಣ ಎಂಬುದನ್ನು ಸಂಶೋಧಕರು ವಿವಿಧ ಅಂಶಗಳನ್ನ ಅವಲೋಕಿಸಿದ್ದಾರೆ. ಉಲ್ಕೆ, ಜ್ವಾಲಾಮುಖಿ, ಮಿಂಚು-ಸಿಡಿಲು ಹಾಗೂ ಇನ್ನಿತರ ರಾಸಾಯನಿಕ ಪ್ರತಿಕ್ರಿಯೆಗಳಿಂದ ಫಾಸ್​ಫೈಟ್ ನಿರ್ಮಾಣವಾಗಿರುವ ಸಾಧ್ಯತೆಯನ್ನ ಅವಲೋಕಿಸಿದ್ದಾರಾದರೂ ಆ ಯಾವುದೂ ಕೂಡ ಸಮಂಜಸ ಉತ್ತರ ನೀಡಲು ಸಾಧ್ಯವಾಗಿಲ್ಲ. ಸೂಕ್ಷ್ಮಜೀವಿಗಳಿಂದ ಫಾಸ್​ಫೈಟ್ ಅನಿಲ ನಿರ್ಮಾಣವಾಗಿರುವ ಸಾಧ್ಯತೆಯೇ ವಾಸ್ತವಕ್ಕೆ ಹೆಚ್ಚು ಹತ್ತಿರವಿದೆ. ಆದರೆ, ಸಂಶೋಧನೆ ಇನ್ನೂ ಮುಂದುವರಿಯುತ್ತಿದೆ ಎಂದು ಜೇನ್ ಗ್ರೀವ್ಸ್ ಹೇಳುತ್ತಾರೆ.

ಮಂಗಳ ಗ್ರಹಕ್ಕಿಂತಲೂ ಶುಕ್ರ ಗ್ರಹ ಭೂಮಿಗೆ ಸಮೀಪದಲ್ಲಿದೆ. ಸೂರ್ಯನಿಂದ ಇದು ಎರಡನೇ ಗ್ರಹವಾದರೆ, ಭೂಮಿ ಮೂರನೇ ಗ್ರಹ. ರಚನೆಯಲ್ಲಿ ಭೂಮಿಯನ್ನ ಬಹಳ ಹೋಲುತ್ತದೆ. ಇಲ್ಲಿಯ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ತತ್​ಪರಿಣಾಮವಾಗಿ ಇಲ್ಲಿನ ಮೇಲ್ಮೈನಲ್ಲಿ ಬರೋಬ್ಬರಿ 471 ಡಿಗ್ರಿ ಸೆಲ್ಸಿಯಸ್​ನಷ್ಟು ಉಷ್ಣಾಂಶ ಇರುತ್ತದೆ. ಭೂಮಿಯಲ್ಲಿ ನಮಗೆ ಗೊತ್ತಿರುವ ಜೀವಿಗಳ್ಯಾವುವು ಇಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ನಂಬಲಾಗಿತ್ತು.

“ವೀನಸ್​ನಲ್ಲಿ ಜೀವ ಇದೆ ಎನ್ನುವುದೇ ಆದರೆ ಯಾವ ಆಧಾರದ ಮೇಲೆ ಅಸ್ತಿತ್ವದಲ್ಲಿದ್ದಿರಬಹುದು? ಅಲ್ಲಿಯ ಮೇಲ್ಮೈನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಾಗುವುದಿಲ್ಲ. ಆದರೆ, ಬಹಳ ಕಾಲದ ಹಿಂದೆ ಶುಕ್ರನಲ್ಲಿ ಜೀವ ಇದ್ದಿರಬಹುದು. ಗ್ರೀನ್​ಹೌಸ್ ಪರಿಣಾಮದಿಂದ ಗ್ರಹ ವಾಸಕ್ಕೆ ಅಯೋಗ್ಯವಾಗಿದ್ದಿರಬಹುದು” ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನೂ ಓದಿ: Laungi Bhuiyan - ಏಕಾಂಗಿಯಾಗಿ 3 ಕಿಮೀ ಉದ್ದದ ಕಾಲುವೆ ತೋಡಿದ ಬಿಹಾರದ ಲೌಂಗಿ ಭುಯನ್

ಶುಕ್ರಗ್ರಹದ ಹೆಚ್ಚು ಎತ್ತರದಲ್ಲಿರುವ ಮೋಡಗಳಲ್ಲಿ 30 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿದೆ. ಅಲ್ಲಿ ಸೂಕ್ಷ್ಮಜೀವಿಗಳು ಇರಬಹುದು. ಆದರೂ ಕೂಡ ಈ ಮೋಡಗಳಲ್ಲಿ ಶೇ. 90ರಷ್ಟು ಸಲ್ಫ್ಯೂರಿಕ್ ಆ್ಯಸಿಡ್ ಇದ್ದು, ಭೂಮಿಯಲ್ಲಿನ ಸೂಕ್ಷ್ಮಜೀವಿಗಳ್ಯಾವುವೂ ಇಲ್ಲಿ ಬದುಕಲು ಸಾಧ್ಯವಿಲ್ಲ. ಒಂದು ವೇಳೆ ಈ ವಿಷಮ ಮೋಡಗಳಲ್ಲಿ ಸೂಕ್ಷ್ಮಜೀವಿಗಳು ಇದ್ದುದೇ ಆದರೆ ಅವುಗಳ ರಕ್ಷಣೆಗೆ ವಿಶೇಷ ವ್ಯವಸ್ಥೆ ಇದ್ದೀತು ಎನ್ನುತ್ತಾರೆ ವಿಜ್ಞಾನಿಗಳು.

ಆದರೆ, ವಿಚಿತ್ರವೆಂದರೆ ಶುಕ್ರ ಗ್ರಹದ ವಾತಾವರಣದಲ್ಲಿ ಆಕ್ಸಿಜನ್ ಸಂಯೋಜನೆಗಳು ಹೇರಳವಾಗಿವೆ. ಇಲ್ಲಿ ಫಾಸ್​ಫೈನ್ ಅನಿಲ ಬೇಗ ನಾಶವಾಗಿಹೋಗುತ್ತದೆ. ಈ ಸಂಗತಿಯನ್ನು ಗಮನಿಸಿದರೆ, ಶುಕ್ರ ಗ್ರಹದಲ್ಲಿ ಯಾವುದೂ ಮೂಲದ ಮೂಲಕ ಬಹಳ ಬೇಗ ಫಾಸ್​ಫೈನ್ ಸೃಷ್ಟಿಯಾಗಿ, ಅಷ್ಟೇ ಬೇಗ ನಾಶವಾಗುತ್ತಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಸಂಶೋಧನೆ ಪ್ರಕಟವಾದ ಬೆನ್ನಲ್ಲೇ ಭಾರತ ಶುಕ್ರಯಾನ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಿದೆ. ಮಂಗಳಯಾನದ ಮೂಲಕ ಮಂಗಳನಲ್ಲಿ ನೀರಿನ ಸುಳಿವು ನೀಡಿದ್ದ ಭಾರತ ಈಗ ಶುಕ್ರಯಾನದಿಂದ ಶುಕ್ರನ ಬಗ್ಗೆ ಮಹತ್ತರ ಸಂಗತಿಯನ್ನು ಪತ್ತೆ ಹಚ್ಚಬಲ್ಲುದಾ ಕಾದು ನೋಡಬೇಕು.

(ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ)
Published by:Vijayasarthy SN
First published: