ನವ ದೆಹಲಿ (ಆಗಸ್ಟ್ 27); ಕೊರೋನಾ ಸಂದಿಗ್ಧ ಸಂದರ್ಭದಲ್ಲಿ NEET ಮತ್ತು JEE ಪರೀಕ್ಷೆಯನ್ನು ಮುಂದೂಡುವಂತೆ ಹಲವರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ರಾಹುಲ್ ಗಾಂಧಿಯಿಂದ ಮಮತಾ ಬ್ಯಾನರ್ಜಿವರೆಗೆ ಹಲವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಸಹ ವಿರೋಧ ಪಕ್ಷದ ಎಲ್ಲಾ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೆ, NEET, JEE ಪ್ರವೇಶ ಪರೀಕ್ಷೆ ಮುಂದೂಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿರುವ ಬೆನ್ನಲ್ಲೆ ದೇಶ, ವಿದೇಶಗಳ ಸುಮಾರು 150ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ತಜ್ಞರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು ಕೂಡಲೇ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.
NEET, JEE ಪರೀಕ್ಷೆ ವಿಳಂಬವು ವಿದ್ಯಾರ್ಥಿಗಳ ಭವಿಷ್ಯ ಮುಂದೂಡಿದಂತೆ. ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಕಾಲದಲ್ಲಿ ಪರೀಕ್ಷೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
"ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಮುಂದಿಟ್ಟು ಪರೀಕ್ಷೆಗಳನ್ನು ಮುಂದೂಡುವಂತೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಅವರ ಅಜೆಂಡಾ ಹೇರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಬಗ್ಗದೆ ಆದಷ್ಟು ಬೇಗ ಪರೀಕ್ಷೆ ನಡೆಸಬೇಕು. ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅನಿಶ್ಚತತೆಯ ಕಾರ್ಮೋಡಗಳಿವೆ. ಅವರ ಆತಂಕಗಳನ್ನು ಆದಷ್ಟು ಬೇಗನೆ ಪರಿಹರಿಸಬೇಕಾಗಿದೆ" ಎಂದು ತಜ್ಞರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯ, ಇಗ್ನೋ, ಲಕ್ನೋ ವಿಶ್ವವಿದ್ಯಾನಿಲಯ, ಜೆಎನ್ ಯು, ಬಿಎಚ್ ಯು, ಐಐಟಿ ದೆಹಲಿ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳಾದ ಲಂಡನ್ ವಿಶ್ವವಿದ್ಯಾನಿಲಯ, ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯ, ದಿ ಹೀಬ್ರೂ ಯುನಿವರ್ಸಿಟಿ ಆಫ್ ಜೆರುಸಲೆಮ್ ಮತ್ತು ಇಸ್ರೇಲ್ ದೇಶದ ಬೆನ್ ಗುರಿಯನ್ ವಿಶ್ವವಿದ್ಯಾನಿಲಯಗಳ ಶಿಕ್ಷಣ ತಜ್ಞರು ಪತ್ರಕ್ಕೆ ಸಹಿ ಮಾಡಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ.
ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ 7 ರಾಜ್ಯಗಳ ಸಿಎಂಗಳ ಸಭೆ ನಡೆದು ಪರೀಕ್ಷೆ ಮುಂದೂಡಲು ಕಾನೂನು ಸಮರಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. ಇಂದು ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊರೋನಾ ನಡುವೆ ಪರೀಕ್ಷೆ ಬೇಡ, ಪ್ರಧಾನಿಗಳು ಯುವ ವಿದ್ಯಾರ್ಥಿಗಳ ಬಗ್ಗೆ ಸೂಕ್ಷ್ಮತೆ ಹೊಂದಬೇಕು ಮತ್ತು ಪರೀಕ್ಷೆ ಮುಂದೂಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನಿಂದ ಜಿತಿನ್ ಉಚ್ಛಾಟನೆಗೆ ಯತ್ನ; ಭಿನ್ನಮತೀಯರ ಟಾರ್ಗೆಟ್ಗೆ ಸಿಬಲ್ ಅಸಮಾಧಾನ
ಇತ್ತ ಸರ್ಕಾರ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ವ್ಯರ್ಥ ಮಾಡಲು ಸಾದ್ಯವಿಲ್ಲ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಪತ್ರತಿಪಕ್ಷಗಳು ಆಟವಾಡುತ್ತಿವೆ. ಯುವಜನತೆಯ ಭವಿಷ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪರೀಕ್ಷೆ ನಡೆಸಿಯೇ ನಡೆಸುತ್ತೆವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ