ನೂತನ ಸಚಿವರಿಗೆ ಖಾತೆ ಹಂಚಿಕೆ; ಒಂದೂ ಇಲಾಖೆಯನ್ನು ಇಟ್ಟುಕೊಳ್ಳದ ಸಿಎಂ ಕೇಜ್ರಿವಾಲ್

ಕೇಜ್ರಿವಾಲ್ ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಜನಪ್ರಿಯತೆ ಗಳಿಸಿದವು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರು ಕ್ರಾಂತಿಕಾರಕ ಬದಲಾವಣೆಗಳನ್ನ ತಂದರು. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಿದ್ದರು.

ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್.

ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್.

 • Share this:
  ನವದೆಹಲಿ: ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್​ ಆದ್ಮಿ ಪಕ್ಷ ದೆಹಲಿಯ ಅಧಿಕಾರದ ಗದ್ದುಗೆ ಹಿಡಿದಿದೆ. ಭಾನುವಾರವಷ್ಟೇ ಆರು ಮಂದಿ ಸಚಿವರೊಂದಿಗೆ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ಆರು ಸಚಿವರಿಗೂ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ವಿಶೇಷ ಅಂದರೆ ಮುಖ್ಯಮಂತ್ರಿಗಳು ತಮ್ಮ ಬಳಿ ಯಾವುದೇ ಖಾತೆಗಳನ್ನು ಇಟ್ಟುಕೊಂಡಿಲ್ಲ.

  ಮನೀಶ್ ಸಿಸೋಡಿಯಾ, ಸತ್ಯೇಂದರ್ ಕಮಾರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ರಾಜೇಂದ್ರ ಪಾಲ್ ಗೌತಮ್ ಮತ್ತು ಇಮ್ರಾನ್ ಹುಸೇನ್ ಅವರು ನೆನ್ನೆ ಸಚಿವರಾಗಿ ಪ್ರಮಾಣ ವಚನ ಪಡೆದರು. ಇಂದು ಇವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

  ಸತ್ಯೇಂದರ್ ಕುಮಾರ್ ಜೈನ್ ಅವರು ದೆಹಲಿ ಜಲಮಂಡಳಿ ಜವಾಬ್ದಾರಿ ನೀಡಲಾಗಿದೆ.   ಸತ್ಯೇಂದರ್ ಜೈನ್​ ಅವರು ಈ ಹಿಂದಿನ ಎಎಪಿ ಸರ್ಕಾರದಲ್ಲಿ ಆರೋಗ್ಯ, ಕೈಗಾರಿಕೆ, ಇಂಧನ, ಲೋಕೋಪಯೋಗಿ ಇಲಾಖೆ, ಗೃಹ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನು ನಿಭಾಯಿಸಿದ್ದರು.

  ಮನೀಶ್ ಸಿಸೋಡಿಯಾ ಅವರು ಈ ಬಾರಿಯೂ ಉಪಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಜೊತೆಗೆ ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ ಕಣ್ಗಾವಲು, ಪ್ರವಾಸ, ಸೇವೆಗಳು ಹಾಗೂ ಕಲೆ ಖಾತೆಗಳ ಜವಾಬ್ದಾರಿ ನೀಡಲಾಗಿದೆ.

  ಗೋಪಾಲ್ ರೈ ಅವರಿಗೆ ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ರಾಜೇಂದ್ರ ಪಾಲ್ ಗೌತಮ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.

  ಇಮ್ರಾನ್ ಹುಸೈನ್ ಅವರಿಗೆ ಪರಿಸರ ಮತ್ತು ಅರಣ್ಯ ಹಾಗೂ ಆಹಾರ ನಾಗರಿಕ ಪೂರೈಕೆ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಕೈಲಾಶ್ ಗೆಹ್ಲೋಟ್ ಅವರಿಗೆ ಕಂದಾಯ, ಕಾನೂನು, ಸಂಸದೀಯ ವ್ಯವಹಾರ, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಆಡಳಿತ ಸುಧಾರಣೆ ಖಾತೆ ನೀಡಲಾಗಿದೆ.

  ಇದನ್ನು ಓದಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪದಗ್ರಹಣ

  ಫೆ. 8ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನ ಜಯಿಸಿತು. ಬಿಜೆಪಿಗೆ 8 ಸ್ಥಾನಗಳು ಮಾತ್ರ ದಕ್ಕಿದ್ದವು. 2013ರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೂ ಎಎಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದ್ದವು. ಕೇಜ್ರಿವಾಲ್ ಮೊದಲ ಬಾರಿ ಮುಖ್ಯಮಂತ್ರಿ ಆದರು. ಅದಾದ ಬಳಿಕ ಅವಧಿಗೂ ಮುನ್ನವೇ ಕೇಜ್ರಿವಾಲ್ ರಾಜೀನಾಮೆ ನೀಡಿದರು. 2015ರಲ್ಲಿ ನಡೆದ ಚುನಾವಣೆಯಲ್ಲಿ ಎಎಪಿ 67 ಸ್ಥಾನ ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತು. ಕೇಜ್ರಿವಾಲ್ ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಜನಪ್ರಿಯತೆ ಗಳಿಸಿದವು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರು ಕ್ರಾಂತಿಕಾರಕ ಬದಲಾವಣೆಗಳನ್ನ ತಂದರು. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಿದ್ದರು.

  First published: