Miracle: ಇದೇ ಪವಾಡ! 7ನೇ ವಯಸ್ಸಿಗೆ ಕಾಣೆಯಾಗಿದ್ದ ಬಾಲಕಿ 16ನೇ ವಯಸ್ಸಲ್ಲಿ ಮನೆ ಸೇರಿದಳು!

DN ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೂಜಾ ಕಾಣೆಯಾದ 166 ನೇ ವ್ಯಕ್ತಿಯಾಗಿದ್ದಳು. ಹೀಗಾಗಿ 'ನಂ 166' ಎಂದು ಪೂಜಾಳನ್ನು ಪೊಲೀಸರು ಹೆಸರಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಏಳನೇ ವಯಸ್ಸಿಗೆ ಮನೆಯಿಂದ ಕಾಣೆಯಾಗಿದ್ದ ಬಾಲಕಿಯೊಬ್ಬಳು ಬರೋಬ್ಬರಿ 9 ವರ್ಷಗಳ ನಂತರ ಮರಳಿ ಮನೆ ಸೇರಿದ ಪವಾಡಸದೃಶ ಘಟನೆಯೊಂದು ನಡೆದಿದೆ. ಪೂಜಾ ಎಂಬ ಬಾಲಕಿಯೇ ಮುಂಬೈನಲ್ಲಿ (Mumbai Pooja Gaud Missing Case) ತನ್ನ ಏಳನೇ ವಯಸ್ಸಿನಲ್ಲಿ ಶಾಲೆಯ ಹೊರಗೆ ಅಪಹರಣಕ್ಕೊಳಗಾಗಿದ್ದಳು. ಆದರೆ ಇದೀಗ ಬರೋಬ್ಬರಿ 9 ವರ್ಷಗಳ ನಂತರ ಆಕೆ ಮನೆ ಸೇರಿದ್ದಾಳೆ. ಆಕೆಯ ಪೋಷಕರು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಾಟ ನಡೆಸಿದ್ದರು. ಇದರ ಫಲವಾಗಿ ಪೂಜಾ (Pooja Gaud Missing Case) ತನ್ನ ಪೋಷಕರ ಮಡಿಲು ಸೇರಿದ್ದಾಳೆ. ಹಾಗಾದರೆ ಹೇಗಿತ್ತು ಆಕೆಯ ಈ ಕಳೆದುಹೋದ ದಿನಗಳು? ಪೂಜಾಳ ಪೋಷಕರ ಹುಡುಕಾಟ ಹೇಗಿತ್ತು? ಪೂಜಾ ಮರಳಿ ಸೇರಿದ ಪವಾಡ (Miracle) ಹೇಗಾಯ್ತು? ಆ ರೋಮಾಂಚಕ ವರದಿ ಇಲ್ಲಿದೆ ನೋಡಿ.

  ಪೂಜಾ ನಾಪತ್ತೆಯಾಗಿದ್ದು ಹೇಗೆ?
  ಜನವರಿ 22, 2013 ರಂದು ಪೂಜಾ ತನ್ನ ಸಹೋದರ ರೋಹಿತ್‌ನೊಂದಿಗೆ ಎಂದಿನಂತೆ ಮುಂಬೈನ ಜುಹು ಗಲ್ಲಿ ಪ್ರದೇಶದಲ್ಲಿ ಶಾಲೆಗೆ ತೆರಳಿದ್ದಳು. ಅಜ್ಜ-ಅಜ್ಜಿ ಕೊಟ್ಟ ಪಾಕೆಟ್ ಮನಿ ವಿಚಾರವಾಗಿ ಒಡಹುಟ್ಟಿದ ಅಣ್ಣ ತಂಗಿ ಜಗಳವಾಡಿದ್ದರು. ಸಿಟ್ಟಾದ ರೋಹಿತ್ ಸ್ವಲ್ಪ   ವೇಗವಾಗಿ ನಡೆದು ಪೂಜಾಳಿಗಿಂತ ಮುಂದೆ ಹೋಗಿ ಶಾಲೆಗೆ ಹೋಗಿಬಿಟ್ಟಿದ್ದ. ಆದರೆ ಪೂಜಾ ಮಾತ್ರ ಹಿಂದೆಯೇ ಉಳಿದಳು. ಆನಂತರ ನೋಡಿದರೆ ಪೂಜಾ ಶಾಲೆಗೂ ಬಂದಿರಲಿಲ್ಲ, ಇತ್ತ ಮನೆಗೂ ಬಂದಿರಲಿಲ್ಲ. ಪೂಜಾ ನಾಪತ್ತೆಯಾಗಿದ್ದಳು. ಪೋಷಕರು ದಿಗಿಲುಗೊಂಡಿದ್ದರು.

  ಐಸ್​ಕ್ರೀಮ್ ಕೊಡಿಸುವುದಾಗಿ ನಂಬಿಸಿ ಕಿಡ್ನಾಪ್!
  ಅಣ್ಣ ಮುಂದೆ ಹೋಗಿದ್ದ. ಇತ್ತ ನಿಧಾನವಾಗಿ ಶಾಲೆಗೆ ಬರುತ್ತಿದ್ದ ಪೂಜಾ ಇನ್ನೇನು ಶಾಲೆಯ ಗೇಟ್ ಪ್ರವೇಶಿಸಬೇಕು ಎಂಬಾಗ ಶಾಲೆಯ ಕ್ಯಾಂಪಸ್‌ನ ಹೊರಗೆ ನಿಂತಿದ್ದ ಓರ್ವ ಮಕ್ಕಳಿಲ್ಲದ ದಂಪತಿಗಳು ಆಕೆಗೆ ಐಸ್​ಕ್ರೀಮ್ ಕೊಡಿಸುವುದಾಗಿ ಹೇಳಿದರು. ಚೆನ್ನಾಗಿ ಮಾತನಾಡಿದರು. ಇಷ್ಟೇ ಗೊತ್ತು, ಅಷ್ಟರಲ್ಲೇ ಪೂಜಾ ಶಾಲಾ ಆವರಣದಿಂದ ನಾಪತ್ತೆಯಾಗಿದ್ದಳು.

  ಪೋಷಕರು, ಪೊಲೀಸರು ನಡೆಸಿದ ನಿರಂತರ ಪ್ರಯತ್ನಗಳ ಹೊರತಾಗಿಯೂ ಪೂಜಾ ಎಲ್ಲೂ ಪತ್ತೆಯಾಗಿರಲಿಲ್ಲ. DN ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೂಜಾ ಕಾಣೆಯಾದ 166 ನೇ ವ್ಯಕ್ತಿಯಾಗಿದ್ದಳು. ಹೀಗಾಗಿ 'ನಂ 166' ಎಂದು ಪೂಜಾಳನ್ನು ಪೊಲೀಸರು ಹೆಸರಿದ್ದರು. ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಭೋಸ್ಲೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಎಲ್ಲ 155 ವ್ಯಕ್ತಿಗಳನ್ನೂ ಹುಡುಕಿತ್ತು. ಆದರೆ ದುರಾದೃಷ್ಟವಷಾತ್ 166 ನೇ ಕಾಣೆಯಾದ ವ್ಯಕ್ತಿ ಪೂಜಾ ಮಾತ್ರ ಎಲ್ಲಿ ಅಂದರೆ ಎಲ್ಲೂ ಪತ್ತೆಯಾಗಲಿಲ್ಲ.

  ಒಂಬತ್ತು ವರ್ಷಗಳ ಕಾಲ ಎಲ್ಲಿದ್ದಳು ಪೂಜಾ?
  ಪೂಜಾಳನ್ನು ಕರೆದೊಯ್ದಿದ್ದ ದಂಪತಿಯ ಹೆಸರು ಹ್ಯಾರಿ ಡಿಸೋಜಾ ಮತ್ತು ಸೋನಿ ಡಿಸೋಜಾ. ಅವರಿಗೆ ಸ್ವಂತ ಮಗು ಇಲ್ಲದ ಕಾರಣ ತನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಪೂಜಾ ಹೇಳುತ್ತಾರೆ. ಆರಂಭದಲ್ಲಿ ಆಕೆಯನ್ನು ಗೋವಾ ಮತ್ತು ಕರ್ನಾಟಕಕ್ಕೆ ಕರೆದೊಯ್ದರಂತೆ. ಆಕೆ ಅತ್ತರೆ ನೋಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೂಜಾ ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ.

  ಇದನ್ನೂ ಓದಿ: Anna Mani Birth Anniversary: ಭಾರತದ ಮೊದಲ ಮಹಿಳಾ ವಿಜ್ಞಾನಿ ಅನ್ನಾ ಮಣಿ 104ನೇ ಜನ್ಮದಿನ; ವಿಶೇಷ ಡೂಡಲ್‌ ರಚಿಸಿ, ಸ್ಮರಿಸಿದ ಗೂಗಲ್

  ಹ್ಯಾರಿ ಡಿಸೋಜಾ ಮತ್ತು ಸೋನಿ ಡಿಸೋಜಾ ಪೂಜಾಳನ್ನು ಸ್ವಲ್ಪ ಸಮಯದವರೆಗೆ ಕರ್ನಾಟಕದ ಬೋರ್ಡಿಂಗ್ ಶಾಲೆಯಲ್ಲಿ ಓದಿಸಿದರು. ಆದರೆ ಈ ದಂಪತಿಗೆ ಕಾಲಕ್ರಮೇಣ ಮಗು ಹುಟ್ಟಿತು. ಮಗುವಾದ ನಂತರ ಪೂಜಾಳನ್ನು ಶಾಲೆಯಿಂದ ಬಿಡಿಸಲಾಯಿತು. ಅಲ್ಲದೇ ಆಕೆಯನ್ನು ಮುಂಬೈಗೆ ಕರೆದೊಯ್ಯಲಾಯಿತು. ಆಗಲೇ ಶುರುವಾಯಿತು ನೋಡಿ ಪೂಜಾ ಬದುಕಿನ ಇನ್ನಷ್ಟು ಕರಾಳ ಅಧ್ಯಾಯ.

  ಕೆಟ್ಟದಾಗಿ ನಡೆಸಿಕೊಳ್ತಿದ್ದರಂತೆ
  ಅವರು ನನ್ನನ್ನು ಬೆಲ್ಟ್‌ನಿಂದ ಹೊಡೆಯುತ್ತಿದ್ದರು. ನನ್ನನ್ನು ಒದೆಯುತ್ತಿದ್ದರು. ಹೊಡೆಯುತ್ತಿದ್ದರು. ಒಮ್ಮೆ ಅವರು ರೋಲಿಂಗ್ ಪಿನ್‌ನಿಂದ ನನ್ನನ್ನು ತುಂಬಾ ಕೆಟ್ಟದಾಗಿ ಹೊಡೆದರು. ನನ್ನ ಬೆನ್ನು ರಕ್ತಸ್ರಾವವಾಗಲು ಪ್ರಾರಂಭಿಸಿತು. ನಾನು ಮನೆಯಲ್ಲಿ ಇಡೀ ದಿನ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೂಜಾ ಮರಳಿ ಸಿಕ್ಕ ಬಳಿಕ ತಿಳಿಸಿದ್ದಾಳೆ. ಆಕೆಗೆ ತನ್ನ ಸುತ್ತಮುತ್ತಲಿನ ವಾತಾವರಣ, ರಸ್ತೆಗಳ ಪರಿಚಯ ಆಗದಂತೆ ನೋಡಿಕೊಳ್ಳಲಾಯಿತಂತೆ.

  ಪೂಜಾ ಪತ್ತೆಯಾಗಿದ್ದೇಗೆ?
  ಅಲ್ಲಿಂದ ತಪ್ಪಿಸಿಕೊಳ್ಳಬೇಕು, ಮರಳಿ ತನ್ನ ಮನೆ ಸೇರಬೇಕು ಎಂಬ ಇಚ್ಛೆ ಪೂಜಾಳನ್ನು ಬಲವಾಗಿ ಕಾಡತೊಡಗಿತು. ಈ ಯೋಜನೆ ರೂಪಿಸಲು ಪೂಜಾಗೆ 7 ತಿಂಗಳು ಬೇಕಾಯಿತು. ಒಂದು ದಿನ ಡಿಸೋಜಾ ದಂಪತಿ ಮಲಗಿದ್ದಾಗ ಅವರ ಮೊಬೈಲ್ ಫೋನ್‌ಗೆ ಬಳಸಿ ಹಾಗೂ ಹೀಗೂ ಸಹಾಯವಾಣಿಗೆ ಕರೆ ಮಾಡಿದಳು. ತನ್ನ ಜೊತೆಯೇ ಕೆಲಸ ಮಾಡುವ ಸಹ ಕೆಲಸಗಾರರ ಸಹಾಯ ಪಡೆದು ತನ್ನ ಮನೆಯವರಿಗೆ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಳು. ಆದರೂ ಅದು ಸಾಧ್ಯವಾಗಲಿಲ್ಲ. ಆದರೆ ಪೂಜಾಳ ಪಕ್ಕದ ಮನೆಯ ರಫೀಕ್ ಎಂಬಾತನ ಸಂಪರ್ಕ ಸಾಧ್ಯವಾಯಿತು. ಹಾಗೂ ಹೀಗೂ ತನ್ನ ನಿಜವಾದ ಅಪ್ಪ ಅಮ್ಮನನ್ನು ಸಂಪರ್ಕಿಸಿದ ಪೂಜಾ ಮನೆ ಸೇರಿದಳು.

  ಇದನ್ನೂ ಓದಿ: Padma Awards 2023: ಪದ್ಮ ಪ್ರಶಸ್ತಿಗೆ ನೀವೂ ನಾಮನಿರ್ದೇಶನ ಮಾಡಿ; ಇಲ್ಲಿದೆ ಆನ್​ಲೈನ್ ಲಿಂಕ್

  ಪೂಜಾಳ ನಾಪತ್ತೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಎಲ್ಲ ಕಥೆ ತಿಳಿದ ಪೊಲೀಸರು ಡಿಸೋಜಾ ದಂಪತಿ ವಿರುದ್ಧ ಅಪಹರಣ, ಬೆದರಿಕೆ, ದೈಹಿಕ ಹಿಂಸೆ ಮತ್ತು ಬಾಲ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
  Published by:guruganesh bhat
  First published: