HOME » NEWS » National-international » POLLING TODAY IN 4 SATES AND 1 UT AS VOTING TO CONCLUDE IN TAMIL NADU ASSAM KERALA PUDUCHERRY

ಪಂಚರಾಜ್ಯ ಚುನಾವಣೆ; ಇಂದು ಮಹತ್ವದ ದಿನ – 4 ರಾಜ್ಯಗಳಲ್ಲಿ ಇಂದೇ ಮತದಾನ ಮುಕ್ತಾಯ

ಪಶ್ಚಿಮ ಬಂಗಾಳ, ಅಸ್ಸಾಮ್, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಇವುಗಳ ಪೈಕಿ ಬಂಗಾಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಇಂದೇ ಅಂತ್ಯವಾಗಲಿದೆ.

Vijayasarthy SN | news18-kannada
Updated:April 6, 2021, 8:55 AM IST
ಪಂಚರಾಜ್ಯ ಚುನಾವಣೆ; ಇಂದು ಮಹತ್ವದ ದಿನ – 4 ರಾಜ್ಯಗಳಲ್ಲಿ ಇಂದೇ ಮತದಾನ ಮುಕ್ತಾಯ
ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯುತ್ತಿರುವುದು
  • Share this:
ಬೆಂಗಳೂರು(ಏ. 06): ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇಂದು ಮಹತ್ವದ ದಿನವಾಗಿದೆ. ಇಂದು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾಗುತ್ತಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ಕಡೆ ಇಂದೇ ಮತದಾನ ಅಂತ್ಯವಾಗಲಿದೆ. ಅಸ್ಸಾಮ್ ರಾಜ್ಯದಲ್ಲಿ ಇಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ಇದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಇಂದು ಮೂರು ಜಿಲ್ಲೆಗಳಲ್ಲಿನ 31 ಕ್ಷೇತ್ರಗಳಲ್ಲಿ ಮತದಾನವಾಗುತ್ತಿದೆ. ಇವತ್ತಿನ ನಂತರ ಬಂಗಾಳದಲ್ಲಿ ಇನ್ನೂ ಐದು ಹಂತಗಳಲ್ಲಿ ಮತದಾನ ಬಾಕಿ ಇರುತ್ತದೆ. ಎಲ್ಲೆಡೆಯೂ ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 6:30ರವರೆಗೂ ನಡೆಯಲಿದೆ.

ತಮಿಳುನಾಡಿನಲ್ಲಿ ಎಲ್ಲಾ 234 ಕ್ಷೇತ್ರಗಳಿಗೂ ಇಂದು ಏಕಕಾಲದಲ್ಲಿ ಚುನಾವಣೆ ಆಗುತ್ತಿದೆ. ಆಡಳಿತಾರೂಢ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೈತ್ರಿಕೂಟ ಮತ್ತು ಡಿಎಂಕೆ ನೇತೃತ್ವದ ಯುಪಿಎ ಮೈತ್ರಿಕೂಟದ ಮಧ್ಯೆ ನೇರ ಹಣಾಹಣಿ ಇದೆ. ಡಿಎಂಕೆ ಮತ್ತು ಎಐಎಡಿಎಂಕೆ ಇಲ್ಲಿ ಪ್ರಮುಖ ಪಕ್ಷಗಳಾಗಿವೆ. ಎಐಎಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 10ಕ್ಕೂ ಹೆಚ್ಚು ಕಡೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಇಲ್ಲಿ ಕಮಲ್ ಹಾಸನ್ ಅವರ ಎಂಎನ್​ಎಂ ಪಕ್ಷ ಕೂಡ ಸ್ಪರ್ಧಾ ಕಣದಲ್ಲಿದೆ.

ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಇಲ್ಲಿ ಯುಡಿಎಫ್ ಮತ್ತು ಎಲ್​ಡಿಎಫ್ ಮೈತ್ರಿಕೂಟಗಳ ಮಧ್ಯೆ ನೇರ ಹಣಾಹಣಿ ಇದೆ. ಬಿಜೆಪಿಯೂ ಇಲ್ಲಿ ಸ್ಪರ್ಧಾಕಣದಲ್ಲಿದೆ. ಬಿಜೆಪಿ ಪಾಲಿಗೆ ಮಹತ್ವವೆನಿಸಿರುವುದು ಪುದುಚೇರಿ ಚುನಾವಣೆ. ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ಪಾಳಯ ಸೇರಿದ್ದಾರೆ. ಇಲ್ಲಿಯ 30 ಕ್ಷೇತ್ರಗಳಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಜಯ ಗಳಿಸುವ ವಿಶ್ವಾಸದಲ್ಲಿದೆ. ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದ ಬೇರೆಲ್ಲೂ ಕಮಲ ಚಿಗುರಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿನ ಅಧಿಕಾರ ಬಿಜೆಪಿಗೆ ಮಹತ್ವದ್ದಾಗಿದೆ. ಇದು ತಮಿಳುನಾಡಿನಲ್ಲಿ ಆಳವಾಗಿ ಬೇರು ಬಿಡಲೂ ಪುದುಚೇರಿ ದಾರಿ ಮಾಡಿಕೊಡಬಹುದು ಎಂಬ ಎಣಿಗೆ ಬಿಜೆಪಿಯದ್ದು.

ಇದನ್ನೂ ಓದಿ: Jaya Bachchan : ಎಲ್ಲರಿಗಾಗಿ ಆಕೆ ಏಕಾಂಗಿಯಾಗಿ ಹೋರಾಡುತ್ತಿದ್ದಾಳೆ; ದೀದಿ ಪರ ಜಯಾ ಬಚ್ಚನ್​ ಪ್ರಚಾರ

ಈ ಪಂಚರಾಜ್ಯ ಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಪಶ್ಚಿಮ ಬಂಗಾಳ. ಕಮ್ಯೂನಿಸ್ಟ್ ಭದ್ರಕೋಟೆ ಛಿದ್ರಗೊಳಿಸಿ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಬಿಜೆಪಿ ಕಠಿಣ ಸವಾಲು ಹಾಕುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಪ್ರಚಾರಕರ ದಂಡೇ ಬಂಗಾಳದಲ್ಲಿ ಬೀಡುಬಿಟ್ಟು ಬಿಜೆಪಿ ಗೆಲುವಿಗೆ ದಾರಿ ಹುಡುಕಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇಲ್ಲಿ ಗಲಭೆ, ಹಿಂಸಾಚಾರ ನಡೆಯುವುದರಿಂದ ಎಂಟು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇಂದು ಮತದಾನ ನಡೆಯುತ್ತಿರುವ ಎಲ್ಲಾ 31 ಕ್ಷೇತ್ರಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಅಸ್ಸಾಮ್ ರಾಜ್ಯದಲ್ಲಿ ಇಂದು ಕೊನೆಯ ಹಂತದ ಮತದಾನವಾಗುತ್ತಿದೆ. ಇಂದು 40 ಕ್ಷೇತ್ರಗಳಿಗೆ ಮತದಾನ ಇದೆ. ಇವತ್ತಿನ ಎಲ್ಲಾ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಅಸ್ಸಾಮ್​ನಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ.

ಇದರ ಜೊತೆಗೆ ಇಂದು ಎರಡು ಲೋಕಸಭಾ ಉಪಚುನಾವಣೆಯೂ ನಡೆಯುತ್ತಿದೆ. ಈ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.
Published by: Vijayasarthy SN
First published: April 6, 2021, 8:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories