ತಮಿಳುನಾಡಿನಲ್ಲಿ ಗರಿಗೆದರಿದ ಕೇಸರಿ ರಾಜಕೀಯ; ಭಾರತಿಯಾರ್ ವಿವಿ ಆವರಣದಲ್ಲಿಯೇ ಬಿಜೆಪಿ ಸೇರಿದ ಪ್ರಾಧ್ಯಾಪಕ!

ಭಾರತಿಯಾರ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಮುರುಗನ್ ಜುಲೈ 1 ರಂದು ವಿಶ್ವವಿದ್ಯಾಲಯದ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಮುರುಗನ್.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಮುರುಗನ್.

 • Share this:
  ಚೆನ್ನೈ (ಜುಲೈ 05); ತಮಿಳುನಾಡಿನಲ್ಲಿ ಇತ್ತೀಚೆಗೆ ಚುನಾವಣೆ ಮುಕ್ತಾಯವಾಗಿತ್ತು. ನಿರೀಕ್ಷೆಯಂತೆ ಡಿಎಂಕೆ ಪಕ್ಷ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎಂ.ಕೆ. ಸ್ಟಾಲಿನ್ ಮೊದಲ ಬಾರಿಗೆ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಆದರೆ, ಬಿಜೆಪಿ ಪಕ್ಷಕ್ಕೆ ತಮಿಳುನಾಡಿನಲ್ಲಿ ನಿರೀಕ್ಷೆಯ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಪರಿಣಾಮ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸಲು ಅಲ್ಲಿನ ನಾಯಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ತಮಿಳುನಾಡಿನ ಕೊಯಂಬತ್ತೂರಿ ನಲ್ಲಿರುವ ಭಾರತಿಯಾರ್ ವಿಶ್ವವಿದ್ಯಾಲಯವೀಗ ವಿವಾದಕ್ಕೆ ಗುರಿಯಾಗಿದೆ. ಈ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ವಿವಿ ಆವರಣದಲ್ಲಿಯೇ ಬಿಜೆಪಿ ಪಕ್ಷ ಸೇರುವ ಮೂಲಕ ಶಿಕ್ಷಣದಂಗಳದಲ್ಲೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

  ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಮುರುಗನ್ ಜುಲೈ 1 ರಂದು ವಿಶ್ವವಿದ್ಯಾಲಯದ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಬಿಜೆಪಿ ರಾಜ್ಯಘಟಕ ಮುರುಗನ್ ಪಕ್ಷ ಸೇರ್ಪಡೆಯ ಚಿತ್ರವನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ತಮಿಳುನಾಡು ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

  ಭಾರತಿಯಾರ್ ವಿವಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ವಿವಿ ಕುಲಸಚಿವರಾಗಿದ್ದ ಕೆ.ಮುರುಗನ್ ಜೂನ್ 30 ರಂದು ತಮ್ಮ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ಮಾರನೇ ದಿನ ಅವರಿಗೆ ಕುಲಪತಿ ಪಿ ಕಲಿರಾಜ್ ಅವರ ಕಚೇರಿಯಲ್ಲಿ ಬಿಜೆಪಿ ಯುವಘಟಕದ ಅಧ್ಯಕ್ಷೆ ಪ್ರೀತಿ ಲಕ್ಷ್ಮಿ ಮತ್ತು ಮಾಧ್ಯಮ ಘಟಕದ ಅಧ್ಯಕ್ಷ ಶಬರಿ ಗಿರೀಶ್ ಬಿಜೆಪಿ ಸದಸ್ಯತ್ವದ ಕಾರ್ಡ್‌ ನೀಡಿದ್ದಾರೆ. ಕುಲಪತಿಗಳ ಕಚೇರಿಯಲ್ಲಿ ನಡೆದ ಈ ರಾಜಕೀಯ ಚಟುವಟಿಕೆಗೆ ತಮಿಳುನಾಡಿನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಭಾರತಿಯಾರ್ ವಿವಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: Rafale Deal| ರಪೇಲ್ ಅಕ್ರಮ ವಿವಾದ, ತನಿಖೆಗೆ ಆದೇಶಿಸಿದ ಫ್ರೆಂಚ್ ಸರ್ಕಾರ; ಆದರೂ, ಬಿಜೆಪಿ ಮೌನವೇಕೆ? ಕಾಂಗ್ರೆಸ್ ಕಿಡಿ

  "ನಾನು ಮೊದಲೇ ಬಿಜೆಪಿ ಸೇರ ಬಯಸಿದ್ದೆ. ಈ ಸಂಬಂಧ ನಾನು ಬಿಜೆಪಿ ಸದಸ್ಯತ್ವ ವಿಭಾಗಕ್ಕೆ ಜೂನ್‌ 30 ರಂದು ಕರೆ ಮಾಡಿದೆ. ಜುಲೈ 1 ರಂದು ಬಿಜೆಪಿ ಪದಾಧಿಕಾರಿಗಳು ಭೇಟಿಯಾಗಿ ಸದಸ್ಯತ್ವ ಕಾರ್ಡ್‌ ನೀಡಿದರು. ನಾನು ಜುಲೈ 2 ರಂದು ಬಿಜೆಪಿಯಿಂದ ಹೊರಬಂದಿದ್ದೇನೆ” ಎಂದು ಕೆ.ಮುರುಗನ್‌ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ.

  ಇದನ್ನೂ ಓದಿ: ಜನಸಂಖ್ಯಾ ನಿಯಂತ್ರಣದ ಬಗ್ಗೆ ಸ್ಥಳೀಯ ಮುಸ್ಲಿಂ ನಾಯಕರೊಂದಿಗೆ ಚರ್ಚಿಸಿದ ಅಸ್ಸಾಂ ಸಿಎಂ

  ಕುಲಪತಿಗಳು ವಿಶ್ವವಿದ್ಯಾಲಯ ಆವರಣದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಶಿಕ್ಷಣ ಸಂಸ್ಥೆಗಳು ರಾಜಕೀಯ ಸೊಂಕಿನಿಂದ ಮುಕ್ತವಾಗಿರಬೇಕು. ಇದೇ ಸಂಪ್ರದಾಯ ಮುಂದುವರೆದರೆ ಎಲ್ಲಾ ಶಿಕ್ಷಣ ಸಂಸ್ಥೆಗಳು ರಾಜಕೀಯ ಪಕ್ಷಗಳ ಅಧೀನ ಕೇಂದ್ರಗಳಾಗುತ್ತವೆ. ರಾಜ್ಯ ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಟೀ ವೀರಮಣಿ ಆಗ್ರಹಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: