ಗಾಜಿಯಾಬಾದ್ : ಐದು ಜನರ ಕೊಲೆಯಾಗಿದೆ ಎಂದು ಎಂಟು ವರ್ಷದ ಹುಡುಗಿಯೊಬ್ಬಳು ಸ್ಥಳೀಯ ಪೊಲೀಸ್ ಠಾಣೆಗೆ ಮಂಗಳವಾರ ಮಾಡಿದ್ದಾಳೆ. ಕೂಡಲೇ ಕಾರ್ಯನಿರತರಾದ ಪೊಲೀಸರಿಗೆ ಶಾಕ್ ಕಾದಿತ್ತು. ಮಧ್ಯಾಹ್ನ ಸುಮಾರು 2.30ರ ಸಮಯಕ್ಕೆ ಮೂರನೇ ತರಗತಿಯ ಹುಡುಗಿಯೊಬ್ಬಳು ತನ್ನ ತಂದೆಯ ಮೊಬೈಲ್‍ನಿಂದ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸ್ ಅಂಕಲ್, 5 ನಂಬರ್ ರಸ್ತೆಯ ಬಳಿ ಇರುವ ಸರ್ಕಾರಿ ಶಾಲೆಯ ಹತ್ತಿರ 5 ಕೊಲೆಗಳಾಗಿವೆ. ನೀವು ಬೇಗ ಬನ್ನಿ , ನಾನಿಲ್ಲಿ ಒಬ್ಬಳೇ ಇದ್ದೀನಿ ಎಂದಿದ್ದಾಳೆ. ಕರೆಗೆ ಸ್ಪಂದಿಸಿದ ಪೊಲೀಸರ ತಂಡ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿತು. ಪೊಲೀಸರ ತಂಡಕ್ಕೆ ಆ ಸ್ಥಳದಲ್ಲಿ ಕೊಲೆ ಸಂಭವಿಸಿದ ಕುರಿತು ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ.
ಕೂಡಲೇ ತಮಗೆ ಕರೆ ಬಂದಿದ್ದ ಸಂಖ್ಯೆಗೆ ಡಯಲ್ ಮಾಡಿದ್ದಾರೆ. ನಂಬರ್ ಸ್ವಿಚ್ ಅಫ್ ಆಗಿತ್ತು. ಸುಮಾರು 30 ನಿಮಿಷಗಳ ಬಳಿಕ ಫೋನ್ ಆನ್ ಆಗಿತ್ತು. ಪೊಲೀಸರು ಮತ್ತೆ ಫೋನ್ ಮಾಡಿದರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಬಾಲಕಿಯ ತಂದೆ ಫೋನ್ ಕರೆಯನ್ನು ಸ್ವೀಕರಿಸಿದರು. ಆಗ ಬಾಲಕಿ ಪೊಲೀಸರಿಗೆ ಹುಸಿ ಕರೆ ಮಾಡಿರುವುದು ಬೆಳಕಿಗೆ ಬಂತು. ಈ ಮೊದಲು ಕೂಡ ಬಾಲಕಿ ಹುಸಿ ಕರೆಗಳನ್ನು ಮಾಡಿದ್ದಾಳೆ ಎಂಬುವುದು ಆಕೆಯ ಹೆತ್ತವರಿಂದ ತಿಳಿದು ಬಂತು. ಒಂದು ದಿನ ಬಾಲಕಿ ತನ್ನ ಅಂಕಲ್‍ಗೆ ಕರೆ ಮಾಡಿ ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಎಂದು ಹೇಳಿದ್ದನ್ನು ನಂಬಿ ಸಂಬಂಧಿಗಳು ಮತ್ತು ನೆರೆಮನೆಯವರು ಬಾಲಕಿಯ ಮನೆಗೆ ಬಂದಿದ್ದರಂತೆ.
ಆ ಚಿಕ್ಕ ಹುಡುಗಿಗೆ ಟಿವಿಯಲ್ಲಿ ಪ್ರಸಾರ ಆಗುವ ಕ್ರೈಮ್ ಕಾರ್ಯಕ್ರಮಗಳನ್ನು ನೋಡುವುದು ಎಂದರೆ ಇಷ್ಟವಂತೆ. ತೊಂದರೆ ಎದುರಾದಾಗ ‘112’ ಸಹಾಯವಾಣಿಗೆ ಕರೆ ಮಾಡಬೇಕು ಎಂಬುದನ್ನು ಆಕೆ ತಿಳಿದುಕೊಂಡಿದ್ದಳು. ಅವುಗಳನ್ನು ನೋಡಿ ಇಂತಹ ಕಿಡಿಗೇಡಿ ಕೆಲಸಗಳನ್ನು ಮಾಡುತ್ತಾಳೆಯಂತೆ. ಅವಳು ಪೊಲೀಸರು ಸರಿಯಾದ ಸಮಯಕ್ಕೆ ಬಂದಿದ್ದರೇ ಎಂಬುದನ್ನು ಕೂಡ ತಿಳಿದುಕೊಳ್ಳ ಬಯಸಿದ್ದಳು. ನಾವು ಆಕೆಯ ಹೆತ್ತವರಿಗೆ ಮುಂದೆ ಇಂತಹ ಕರೆಗಳನ್ನು ಮಾಡದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಹುಸಿ ಕರೆ ಮಾಡುವ ಕೆಲವು ಗಂಟೆಗಳ ಮೊದಲು, ಕವಿ ನಗರದ ವ್ಯಾಪಾರಿಯೊಬ್ಬರು ‘ಅಪಹರಣಕ್ಕೆ’ ಒಳಗಾಗಿರುವ ತನ್ನ 21 ವರ್ಷದ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದಾದ ಸ್ವಲ್ಪ ಸಮಯದಲ್ಲಿ ಅವರ ಮಗಳು ತನ್ನ ಪ್ರಿಯಕರನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವುದು ಕಂಡು ಬಂತು. ಆದಾದ ಬಳಿಕ ಸುಳ್ಳು ಮಾಹಿತಿ ನೀಡಿದ್ದಕ್ಕೆ ಆ ವ್ಯಕ್ತಿಯನ್ನು ಬಂಧಿಸಲಾಯಿತು. ಸಿಕ್ಕಿಹಾಕಿಕೊಂಡ ಬಳಿಕ ಪೊಲೀಸರೊಂದಿಗೆ ಕೆಟ್ಟದಾಗಿ ನಡೆದುಕೊಂಡದ್ದಕ್ಕೆ ಹುಡುಗಿಯ ಪ್ರಿಯಕರನ ಮೇಲೂ ಕೇಸ್ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ