ವಿಶ್ವದಾದ್ಯಂತ ಸೈಬರ್ ಕ್ರೈಮ್ಗಳ (Cyber Crime) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಸೈಬರ್ ಅಪರಾಧ ಎನ್ನುವುದು ಒಂದು ದೊಡ್ಡ ಜಾಲವಾಗಿದ್ದು, ಅನೇಕ ಅಮಾಯಕರು ಈ ಚಕ್ರವ್ಯೂಹದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಕಂಪ್ಯೂಟರ್ (Computer), ನೆಟ್‌ವರ್ಕ್ (Network) ಸಾಧನ ಅಥವಾ ನೆಟ್‌ವರ್ಕ್ ಮೂಲಕ ಮೋಸ ಮಾಡುವ ಇಂತಹ ಕ್ರಿಮಿನಲ್ ಚಟುವಟಿಕೆಯೇ (Criminal Activities) ಸೈಬರ್ ಕ್ರೈಮ್ ಆಗಿದ್ದು, ಸೈಬರ್ ಅಪರಾಧಿಗಳು ಪ್ರೈವೆಸಿಯಿಂದ ಹಿಡಿದು ಹಣದವರೆಗೆ ಎಲ್ಲಕ್ಕೂ ಕನ್ನ ಹಾಕುತ್ತಾರೆ. ಡೇಟಾ ಹ್ಯಾಕಿಂಗ್, ಫಿಶಿಂಗ್ ಮೇಲ್, OTP ವಂಚನೆ ಮತ್ತು ಮೊಬೈಲ್ ವಂಚನೆ, ಸೈಬರ್ ಅಪರಾಧಿಗಳು ಎಸಗುವ ಸೆಕ್ಸ್‌ಟಾರ್ಶನ್‌ನಂತಹ ಅನೇಕ ಅಪರಾಧಗಳಿವೆ. ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪೊಲೀಸರು ಮತ್ತು ಕೇಂದ್ರೀಯ ಸಂಸ್ಥೆಗಳು ನಿರ್ವಹಿಸುತ್ತವೆ.
ವಿಶ್ವದ ಅತಿ ದೊಡ್ಡ ಸೈಬರ್‌ಕ್ರೈಮ್ ವೆಬ್‌ಸೈಟ್ ಸ್ಥಗಿತ
ಸದ್ಯ ಪೊಲೀಸರು ಇಂತಹದ್ದೇ 'ವಿಶ್ವದ ಅತಿ ದೊಡ್ಡ ಸೈಬರ್ ಕ್ರೈಮ್ ವೆಬ್‌ಸೈಟ್‌ಗೆ ಹೆಡೆಮುರಿ ಕಟ್ಟಿದ್ದಾರೆ. ಅಂತರಾಷ್ಟ್ರೀಯ ಕಾರ್ಯಾಚರಣೆಯ ನೇತೃತ್ವ ವಹಿಸಿದ ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಮತ್ತು ಡಚ್ ನ್ಯಾಷನಲ್ ಪೊಲೀಸ್ (ಪಾಲಿಟಿ) ವಿವಿಧ ಜಾರಿ ಕ್ರಮಗಳನ್ನು ಸಂಘಟಿಸುವ ಮೂಲಕ ಅನೇಕರಿಗೆ ವಂಚಿಸಿದ್ದ ಸೈಬರ್ ಜಾಲವನ್ನು ನಿರ್ನಾಮ ಮಾಡಿದೆ.
"ಆಪರೇಷನ್ ಕುಕಿ ಮಾನ್ಸ್ಟರ್" ಹೆಸರಿನಲ್ಲಿ ಕಾರ್ಯಾಚರಣೆ
"ಆಪರೇಷನ್ ಕುಕಿ ಮಾನ್ಸ್ಟರ್" ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವಾರು ದೇಶಗಳಲ್ಲಿ ಹಬ್ಬಿದ್ದ ಸೈಬರ್ ವಂಚನೆಗಳಿಗೆ ಕುಮ್ಮುಕ್ಕು ನೀಡುತ್ತಿದ್ದ ʻಜೆನೆಸಿಸ್ ಮಾರ್ಕೆಟ್ʼ ಎಂಬ ವೆಬ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಬ್ರಿಟಿಷ್, ಆಸ್ಟ್ರೇಲಿಯನ್, ಕೆನಡಿಯನ್, ಸ್ಪ್ಯಾನಿಷ್, ಇಟಾಲಿಯನ್, ಜರ್ಮನ್, ಸ್ವೀಡಿಷ್, ಪೋಲಿಷ್, ಡ್ಯಾನಿಶ್ ಮತ್ತು ರೊಮೇನಿಯನ್ ಸೇರಿ ಒಟ್ಟು 17 ದೇಶಗಳ ಪೋಲೀಸ್ ಪಡೆಗಳು ಭಾಗಿಯಾಗಿದ್ದವು.
ಏನಿದು ಜೆನೆಸಿಸ್ ಮಾರ್ಕೆಟ್ ?
2017 ರಲ್ಲಿ ಸ್ಥಾಪಿತವಾದ ಜೆನೆಸಿಸ್ ಮಾರ್ಕೆಟ್ ಸೈಬರ್ ಕ್ರೈಮ್ ಅನ್ನು ಸುಲಭಗೊಳಿಸುವ ವೆಬ್‌ಸೈಟ್ ಆಗಿದ್ದು, ಅದು ಬಳಕೆಗೆ ಸುಲಭವಾದ ಇಂಟರ್‌ಫೇಸ್‌ಗಾಗಿ ಹೆಸರುವಾಸಿಯಾಗಿದೆ. ಮೇ 2021 ರಲ್ಲಿ, ಈ ಜಾಲ 218 ದೇಶಗಳ 374,401 ಜನರ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕರ್ಸ್‌ಗೆ ಒದಗಿಸಿದೆ ಎಂದು ವರದಿಗಳು ಹೇಳಿವೆ.
"17 ದೇಶಗಳನ್ನು ಒಳಗೊಂಡ ಅಭೂತಪೂರ್ವ ಕಾರ್ಯಾಚರಣೆಯು ಜೆನೆಸಿಸ್ ಮಾರುಕಟ್ಟೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ, ಇದು ವಿಶ್ವದಾದ್ಯಂತ ಹ್ಯಾಕರ್‌ಗಳಿಗೆ ಕದ್ದ ಖಾತೆಯ ರುಜುವಾತುಗಳನ್ನು ಮಾರಾಟ ಮಾಡುವ ಅತ್ಯಂತ ಅಪಾಯಕಾರಿ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ" ಎಂದು ಯುರೋಪೋಲ್‌ನ ಯುರೋಪಿಯನ್ ಸೈಬರ್ ಕ್ರೈಮ್ ಸೆಂಟರ್‌ನ ಮುಖ್ಯಸ್ಥ ಎಡ್ವರ್ದಾಸ್ ಸಿಲೆರಿಸ್ ತಿಳಿಸಿದರು. ಈ ವೆಬ್‌ಸೈಟ್ ಅನ್ನು ಮುಚ್ಚುವ ವೇಳೆ ಜೆನೆಸಿಸ್ ಮಾರ್ಕೆಟ್ ಸುಮಾರು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರ ಗುರುತುಗಳನ್ನು ಮಾರಾಟಕ್ಕಾಗಿ ಪಟ್ಟಿ ಮಾಡಿತ್ತು ಎಂದು ಹೇಗ್ ಮೂಲದ ಸಂಸ್ಥೆ ತಿಳಿಸಿದೆ.
ಅಪರಾಧಿಗಳ ಬಂಧನ
ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನ 10 ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗ್ಲೇ ಅಪರಾಧಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ ಬ್ರಿಟನ್‌ನಲ್ಲಿ 24 ಜನರನ್ನು ಮತ್ತು ನೆದರ್ಲ್ಯಾಂಡ್ಸ್ನಲ್ಲಿ 17 ಜನರನ್ನು ಬಂಧಿಸಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆ ತಿಳಿಸಿದೆ. "ಡಾರ್ಕ್ ವೆಬ್" ಸೇವೆಗಳ ಜೊತೆ ಜೆನೆಸಿಸ್ ತೆರೆದ ವೆಬ್‌ನಲ್ಲೂ ಲಭ್ಯವಿದೆ. ಈ ವೆಬ್‌ಸೈಟ್‌ನಿಂದಾಗಿ ಹಲವಾರು ಗ್ರಾಹಕರು ಸೈಬರ್ ಜಾಲಕ್ಕೆ ಸಿಲುಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹಲವು ಸೈಬರ್ ಜಾಲಗಳನ್ನು ನಿಷ್ಕ್ರಿಯಗೊಳಿಸಿರುವ ಖಾಕಿ
2021 ರಲ್ಲಿ EMOTET ಎಂದು ಕರೆಯಲ್ಪಡುವ ಕಂಪ್ಯೂಟರ್ ಸಿಸ್ಟಮ್‌ಗಳಿಗೆ ಪ್ರವೇಶಿಸಲು ಬಳಸುವ "ವಿಶ್ವದ ಅತ್ಯಂತ ಅಪಾಯಕಾರಿ" ಸೈಬರ್ ಕ್ರೈಮ್ ಮಾಲ್‌ವೇರ್ ಸಾಧನವನ್ನು ಪೊಲೀಸರು ಹ್ಯಾಕ್ ಮಾಡಿ ನಿಷ್ಕ್ರಿಯ ಮಾಡಿದ್ದರು.
ಇದನ್ನೂ ಓದಿ: Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ಅದಾದ ನಂತರ ಏಪ್ರಿಲ್ 2022 ರಲ್ಲಿ, ಅಂತರರಾಷ್ಟ್ರೀಯ ತನಿಖಾಧಿಕಾರಿಗಳು ಯುಎಸ್ ಕಾರ್ಪೊರೇಷನ್‌ಗಳಿಂದ ಕದ್ದ ಹ್ಯಾಕ್ ಮಾಡಿದ ಡೇಟಾಬೇಸ್‌ಗಳಿಗೆ ಪ್ರವೇಶವನ್ನು ಮಾರಾಟ ಮಾಡುವ ಬೃಹತ್ ಆನ್‌ಲೈನ್ ಫೋರಂ "ರೇಡ್‌ಫೋರಮ್ಸ್" ಅನ್ನು ಮುಚ್ಚಿದ್ದರು. ಪ್ರಸ್ತುತ ವಿಶ್ವಕ್ಕೆ ಮಾರಕವಾಗಿದ್ದ ಮತ್ತೊಂದು ಪಿಡುಗನ್ನು ಪೊಲೀಸ್ ಪಡೆ ನಿಷ್ಕ್ರಿಯಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ