ಪೊಲೀಸ್ ಅಧಿಕಾರಿಯೊಬ್ಬರು ತನ್ನ ಕರ್ತವ್ಯ ಮೆರೆಯುವ ಜತೆಗೆ ಮಾನವೀಯತೆಯನ್ನೂ ತೋರಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಕೃತ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಪೊಲೀಸರು ಜಪ್ತಿ ಮಾಡಿದ್ದ ತನ್ನ ಆಟೋ ರಿಕ್ಷಾ ಬಿಡಿಸಿಕೊಳ್ಳಲು ಚಾಲಕನೊಬ್ಬ ಮಗನ ಪಿಗ್ಗಿ ಬಾಕ್ಸ್ನಿಂದ ಹಣ ತಂದಿದ್ದಾನೆಂದು ತಿಳಿದ, ನಾಗಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಸ್ವಂತ ಹಣದಿಂದಲೇ ಚಲನ್ ಶುಲ್ಕ ಕಟ್ಟಿದ ಅಪರೂಪದ ಘಟನೆ ಇತ್ತೀಚೆಗೆ ನಡೆದಿದೆ. ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಮಾಲವಿಯಾ, ಆಟೋ ಚಾಲಕನೊಬ್ಬ 2000 ದಂಡ ಪಾವತಿಸಲು ತನ್ನ ಮಗನ ಉಳಿತಾಯದ ಹಣವನ್ನು ತಂದಿರುವ ಸಂಗತಿ ತಿಳಿದು, ಕನಿಕರಗೊಂಡು ತನ್ನ ಜೇಬಿನಿಂದಲೇ ದಂಡದ ಮೊತ್ತ ಪಾವತಿಸಿದರು ಎಂದು ನಾಗಪುರ ಸಿಟಿ ಪೊಲೀಸರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದೇ ಆಗಸ್ಟ್ 8ರಂದು ರೋಹಿತ್ ಖಡ್ಸೆ ಎಂಬ ಆಟೋ ಚಾಲಕ, ನೋ ಪಾರ್ಕಿಂಗ್ ಜೋನ್ನಲ್ಲಿ ಆಟೋ ನಿಲ್ಲಿಸಿದ್ದರು. ಅದಕ್ಕಾಗಿ ಅವರಿಗೆ 200 ರೂ. ದಂಡ ವಿಧಿಸಲಾಗಿತ್ತು. ಜೊತೆಗೆ ಈ ಮೊದಲು ಪಾವತಿಸದೇ ಬಾಕಿ ಉಳಿಸಿದ್ದ ದಂಡದ ಮೊತ್ತ ಸೇರಿ ಒಟ್ಟು 2000 ರೂ. ಹಣ ಕಟ್ಟಬೇಕಿತ್ತು. ಅವರು ಅದನ್ನು ಕಟ್ಟುವುದು ಸಾಧ್ಯವಾಗದ ಕಾರಣ, ಆಟೋ ರಿಕ್ಷಾವನ್ನು ಪೊಲೀಸರು ಜಪ್ತಿ ಮಾಡಿದ್ದರು.
ಅವರಿಗೆ ಆಟೋ ರಿಕ್ಷಾವೊಂದೇ ಜೀವನೋಪಾಯಕ್ಕೆ ಆಧಾರವಾಗಿತ್ತು. ಆದಾಯ ಗಳಿಸಲು ಮತ್ತು ದಂಡದ ಮೊತ್ತ ಪಾವತಿಸಲು ಸಾಧ್ಯವಾಗದಿರುವಂತಹ ಪರಿಸ್ಥಿತಿ ಮನಗಂಡು, ಪೊಲೀಸರಿಗೆ ದಂಡ ಪಾವತಿಸಲು ತನ್ನ ಮಗನ ಪಿಗ್ಗಿ ಬಾಕ್ಸ್ನಲ್ಲಿದ್ದ ನಾಣ್ಯಗಳನ್ನು ತಂದರು. ಆದರೆ ಆ ಹಣ ಸ್ವೀಕರಿಸಲು ಅಲ್ಲಿನ ಪೊಲೀಸರು ನಿರಾಕರಿಸಿದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ದುಃಖ ತಡೆಯಲಾರದೆ, ರೋಹಿತ್ ಖಡ್ಸೆ, ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಮಾಲವೀಯ ಅವರಲ್ಲಿ ತನ್ನ ಆಟೋ ರಿಕ್ಷಾ ಹಿಂದಿರುಗಿಸಿ ಕೊಡುವಂತೆ ಮನವಿ ಮಾಡಿದರು. ಅವರ ಕೈಯಲ್ಲಿ ನಾಣ್ಯಗಳಿದ್ದ ಚೀಲ ಕಂಡು, ಏನು ಸಮಸ್ಯೆ ಎಂದು ಆ ಇನ್ಸ್ಪೆಕ್ಟರ್ ಕೇಳಿದರು. ಆಟೋ ರಿಕ್ಷಾ ಚಾಲಕನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿತ ಅಜಯ್ ಮಾಲವೀಯ, ಮಗನ ಹಣವನ್ನು ವಾಪಾಸು ನೀಡಿ, ತಾನೇ ದಂಡದ ಹಣವನ್ನು ಪಾವತಿಸಿದರು.
ನಾಗಪುರ ಪೊಲೀಸರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ರೋಹಿತ್ ಖಡ್ಸೆ ಕುಟುಂಬವನ್ನು ಕಾಣಬಹುದು. ಅಜಯ್ ಮಾಲವೀಯ ಅವರ ಈ ಮಾನವೀಯ ಗುಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ಹರಿದು ಬಂದಿದೆ.
“ಮಾಲವೀಯ ಸರ್ ಅವರದ್ದು ಶ್ಲಾಘನೀಯ ಕೆಲಸ” ಎಂದು ಒಬ್ಬರು ಬರೆದುಕೊಂಡಿದ್ದರೆ, ಇನ್ನೊಬ್ಬರು “ ಶಿಸ್ತು ಮತ್ತು ಮಾನವೀಯತೆಗೆ ಸೂಕ್ತ ಉದಾಹರಣೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ