ಅನ್ನದಾತರ ಹಠಕ್ಕೆ ಮಣಿದ ಪೊಲೀಸರು; ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ಮಾಡಲು ಒಪ್ಪಿಗೆ

ಪ್ರತಿಭಟನೆ ನಡೆಯುತ್ತಿರುವ ಗಡಿಗಳಲ್ಲೇ ಟ್ರ್ಯಾಕ್ಟರ್ ಮೆರವಣಿಗೆ ಮಾಡಿ, ದೆಹಲಿ ಒಳಗೆ ಬರಬೇಡಿ ಎಂದು ಕೇಳಿಕೊಂಡಿದ್ದರು. ರೈತ ನಾಯಕರು ಪೊಲೀಸರ ಪ್ರಸ್ತಾಪವನ್ನು ತಿರಸ್ಕರಿಸಿದ್ದರು‌‌. ರೈತರು ಟ್ರ್ಯಾಕ್ಟರ್ ಮೆರವಣಿಗೆ ಮಾಡಿಯೇ ಸಿದ್ದ ಎಂದು ತೀರ್ಮಾನ ಮಾಡಿದ್ದರಿಂದ ಇಂದು ದೆಹಲಿಯಲ್ಲೇ ಬೇರೆಡೆ ಸ್ಥಳಾವಕಾಶ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

ರೈತ ಮೆರವಣಿಗೆಗೆ ಸಿದ್ದವಾಗಿರುವ ಟ್ರ್ಯಾಕ್ಟರ್​ಗಳು.

ರೈತ ಮೆರವಣಿಗೆಗೆ ಸಿದ್ದವಾಗಿರುವ ಟ್ರ್ಯಾಕ್ಟರ್​ಗಳು.

  • Share this:
ನವದೆಹಲಿ(ಜ. 23): ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲವಾಗಿರುವುದರಿಂದ ಪ್ರತಿಭಟನಾ ರೈತರು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ಚಯಿಸಿದ್ದಾರೆ. ಈ‌ ಹಿನ್ನೆಲೆಯಲ್ಲಿ ರೈತ ಮುಖಂಡರ ಜೊತೆ ಸಭೆ ನಡೆಸಿದ ದೆಹಲಿ ಪೊಲೀಸರು ಕಡೆಗೂ  ರೈತರ ಪಟ್ಟಿಗೆ ಮಣಿದು ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ಒಪ್ಪಿಗೆ ನೀಡಿದ್ದಾರೆ.

2020ರ ನವೆಂಬರ್ 26ರಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಈವರೆಗೆ ಕೇಂದ್ರ ಸರ್ಕಾರ 11 ಸುತ್ತು ಸಭೆ ನಡೆಸಿದೆ. ರೈತರು ತಮ್ಮ ಪಾಲಿಗೆ ಮಾರಕವಾಗಿ ಪರಿಣಮಿಸುವ ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಕಾನೂನುಗಳನ್ನು ಹಿಂಪಡೆಯದೆ ಹಠಮಾರಿತನ ಪ್ರದರ್ಶಿಸುತ್ತಿದೆ. ಪರಿಣಾಮವಾಗಿ 11ನೇ ಸಭೆಯೂ ವಿಫಲವಾಗಿತ್ತು.

ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, 60ಕ್ಕೂ‌ ಹೆಚ್ಚು ರೈತರು ಪ್ರತಿಭಟನಾ ಸ್ಥಳದಲ್ಲಿ ಮೃತಪಟ್ಟಿದ್ದರೂ ಕೇಂದ್ರ ಸರ್ಕಾರ ಸಂವೇದನೆ ಇಲ್ಲದೆ ವರ್ತಿಸುತ್ತಿರುವುದರಿಂದ ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರ ಗೊಳಿಸಲು ನಿರ್ಧರಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರು ವಿಶೇಷವಾಗಿ ರೈತ ಮಹಿಳೆಯರು ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ಚಯಿಸಿದ್ದಾರೆ. ಇದರಿಂದ ಪೀಕಲಾಟಕ್ಕೆ ಸಿಲುಕಿರುವ ಕೇಂದ್ರ ಸರ್ಕಾರದ ಸುಪರ್ದಿಯಲ್ಲೇ ಇರುವ ದೆಹಲಿ ಪೊಲೀಸರು ಇಂದು ರೈತ ನಾಯಕರ ಸಭೆ ಕರೆದಿದ್ದರು.

ಕೇಂದ್ರ ಸರ್ಕಾರದ ಯೋಜನೆಗಳು ಗ್ರಾಮೀಣ ಪ್ರದೇಶದ ನೈರ್ಮಲ್ಯ ರೂಢಿಗಳಲ್ಲಿ ಬದಲಾವಣೆ ತರಲು ಸಾಧ್ಯವೇ?

ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ರೈತ ಸಂಘಟನೆಗಳ ಮುಖಂಡರು ಮತ್ತು ಪೊಲೀಸರ ನಡುವೆ ನಡೆಯುವ ಸಭೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಕೈಬಿಡುವಂತೆ ಪೊಲೀಸರು ರೈತರಿಗೆ ಮನವಿ ಮಾಡಿದರು. ಈ ಹಿಂದೆಯೂ ಪ್ರತಿಭಟನೆ ನಡೆಯುತ್ತಿರುವ ಗಡಿಗಳಲ್ಲೇ ಟ್ರ್ಯಾಕ್ಟರ್ ಮೆರವಣಿಗೆ ಮಾಡಿ, ದೆಹಲಿ ಒಳಗೆ ಬರಬೇಡಿ ಎಂದು ಕೇಳಿಕೊಂಡಿದ್ದರು. ರೈತ ನಾಯಕರು ಪೊಲೀಸರ ಪ್ರಸ್ತಾಪವನ್ನು ತಿರಸ್ಕರಿಸಿದ್ದರು‌‌. ರೈತರು ಟ್ರ್ಯಾಕ್ಟರ್ ಮೆರವಣಿಗೆ ಮಾಡಿಯೇ ಸಿದ್ದ ಎಂದು ತೀರ್ಮಾನ ಮಾಡಿದ್ದರಿಂದ ಇಂದು ದೆಹಲಿಯಲ್ಲೇ ಬೇರೆಡೆ ಸ್ಥಳಾವಕಾಶ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

ರೈತರು ತಮ್ಮ ಟ್ರ್ಯಾಕ್ಟರ್ ಮೆರವಣಿಗೆಯ ಪಟ್ಟಿನಿಂದ ಹಿಂದೆ ಸರಿಯದ ಕಾರಣ 'ರಾಜಪಥದಲ್ಲಿ ಗಣರಾಜ್ಯೋತ್ಸವದ ಪೆರಡ್ ನಡೆಯಲಿದ್ದು ಅದು ಅತ್ಯಂತ ಮಹತ್ವದ್ದಾಗಿರುವುದರಿಂದ ಅದಕ್ಕೆ ತಡೆಯಾಗಿ ಮುಜುಗರ ಆಗಬಾರದು ಎಂಬ ಕಾರಣಕ್ಕೆ ದೆಹಲಿಯಲ್ಲೇ ಬೇರೆಡೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ಅವಕಾಶ ನೀಡುವ' ಪ್ರಸ್ತಾಪ ಇಟ್ಟರು. ಇದಕ್ಕೆ ರೈತರು ಕೂಡ ಒಪ್ಪಿಕೊಂಡಿದ್ದಾರೆ.

ಜನವರಿ 21ರಂದು ಪ್ರತಿಭಟನೆ ನಡೆಯುತ್ತಿರುವ ಗಡಿಯಲ್ಲಿ ಸಭೆ ನಡೆಸಿದ ರೈತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ 18 ತಿಂಗಳ ಕಾಲ ಕೃಷಿ ಕಾನೂನುಗಳನ್ನು ತಡೆಹಿಡಿಯುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ನಿರಾಕರಿಸಿ 'ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವ ವರೆಗೆ ಯಾವ ರೀತಿಯಲ್ಲೂ ರಾಜಿಯಾಗಬಾರದು, ಮಣಿಯಬಾರದು' ಎಂದು ನಿರ್ಧರಿಸಿದ್ದಾರೆ.

ಪೊಲೀಸರೊಂದಿಗಿನ ಸಭೆಯ ಬಳಿಕ ರೈತ ನಾಯಕ ಯೋಗೇಂದ್ರ ಯಾದವ್ 'ಜನವರಿ 26 ರಂದು, ನಾವು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ದೆಹಲಿಯೊಳಗೆ ಹೋಗುತ್ತೇವೆ, ಪೊಲೀಸರು ಕೆಲವು ಮಾರ್ಗಗಳನ್ನು ನಿಗದಿಪಡಿಸಿದ್ದು ಅದೇ ಮಾರ್ಗದಲ್ಲಿ ಮೆರವಣಿಗೆ ಮಾಡಲು ನಾವು ಒಪ್ಪಿದ್ದೇವೆ' ಎಂದು ತಿಳಿಸಿದ್ದಾರೆ.
Published by:Latha CG
First published: