ಪೊಲೀಸ್​ ಕಾನ್ಸ್​ಟೇಬಲ್ ಮಗ ಈಗ ಐಪಿಎಸ್​ ಅಧಿಕಾರಿ; ಇಲ್ಲಿದೆ ಒಂದು ಅಪರೂಪದ ಕತೆ

ಮಕ್ಕಳು ಯಾವಾಗ ತಮ್ಮನ್ನೂ ಮೀರಿ ಸಾಧನೆ ಮಾಡುತ್ತಾರೋ ಆಗ ಅಪ್ಪ-ಅಮ್ಮನಿಗೂ ಹೆಮ್ಮೆ. ಅಂತಹ ಸಾರ್ಥಕತೆ ಸಿಗಬೇಕೆಂದರೆ ಸುಲಭವಲ್ಲ. ಆದರೆ, ಲಕ್ನೋದ ಅಪ್ಪ ಅಂತಹ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಮನೆಯಲ್ಲಿ ಮಗ ಅಪ್ಪನ ಪಾದಕ್ಕೆ ನಮಸ್ಕರಿಸಿದರೆ ಹೊರಗೆ ಅಪ್ಪ ಮಗನಿಗೆ ಸೆಲ್ಯೂಟ್​ ಹೊಡೆಯುತ್ತಾರೆ. ಏನಿದು ಕತೆ ಅಂತೀರಾ?

sushma chakre | news18
Updated:October 29, 2018, 6:43 PM IST
ಪೊಲೀಸ್​ ಕಾನ್ಸ್​ಟೇಬಲ್ ಮಗ ಈಗ ಐಪಿಎಸ್​ ಅಧಿಕಾರಿ; ಇಲ್ಲಿದೆ ಒಂದು ಅಪರೂಪದ ಕತೆ
ಜನಾರ್ದನ ಸಿಂಗ್​- ಅನೂಪ್​
  • Advertorial
  • Last Updated: October 29, 2018, 6:43 PM IST
  • Share this:
ನ್ಯೂಸ್​18 ಕನ್ನಡ

'ಹೌದು, ನಾನು ನನ್ನ ಮಗನಿಗೆ ದಿನಾ ಸೆಲ್ಯೂಟ್​ ಹೊಡೆಯುತ್ತೇನೆ. ನಿಜಕ್ಕೂ ಅದೊಂದು ಹೆಮ್ಮೆಯ ಕ್ಷಣ!' ಹೀಗೆ ಹೇಳಿಕೊಳ್ಳುವ ಅಪ್ಪನಿಗೆ ಮಗನ ಬಗ್ಗೆ ಹೇಳಿಕೊಳ್ಳುವುದೆಂದರೆ ಬಹಳ ಪ್ರೀತಿ. ಅವರದ್ದು ಅಪ್ಪ-ಮಕ್ಕಳು ಇದ್ದರೆ ಹೀಗಿರಬೇಕು ಎನ್ನುವಂತಹ ಸಂಬಂಧ. ಸಾಧನೆಗೆ ಬಡತನ ಅಡ್ಡಿ ಬರಲಾರದು ಎಂಬುದಕ್ಕೆ ಅವರೇ ನಿದರ್ಶನ. ಹೌದು, ಇದು ನೀವು ಸಿನಿಮಾದಲ್ಲಿ ನೋಡಬಹುದಾದ, ನಿಜ ಜೀವನದಲ್ಲಿ ಊಹಿಸಿಕೊಳ್ಳಲಾಗದ ಒಂದು ಅಪರೂಪದ ಕತೆ.

ಬಡತನದಲ್ಲಿ ಬೆಳೆದು ಕಷ್ಟಪಟ್ಟು ಕಾನ್ಸ್​ಟೇಬಲ್​ ಆಗಿ ಕೆಲಸಕ್ಕೆ ಸೇರಿಕೊಂಡ ಜನಾರ್ದನ ಸಿಂಗ್​ ಅವರಿಗೆ ತಮ್ಮ ಮಗನೂ ಪೊಲೀಸ್​ ಕೆಲಸಕ್ಕೆ ಸೇರಬೇಕೆಂಬ ಆಸೆ. ಅಪ್ಪ-ಅಮ್ಮನ ಆಸೆ ಮತ್ತು ಮಕ್ಕಳ ಆಸೆ ಒಂದೇ ಆದಾಗ ಆ ಕನಸು ನನಸಾಗಲು ಸಾಧ್ಯ. ಆ ವಿಷಯದಲ್ಲಿ ಜನಾರ್ದನ ಸಿಂಗ್​ ಅದೃಷ್ಟವಂತರೆಂದೇ ಹೇಳಬಹುದು. ಅವರ ಮಗ ಅನೂಪ್​ಗೆ ಕೂಡ ಪೊಲೀಸ್​ ಆಗಬೇಕೆಂಬ ಕನಸಿತ್ತು. ಆ ಕನಸಿಗೆ ಬಾಲ್ಯದಿಂದಲೇ ನೀರೆರೆದ ಜನಾರ್ದನ ಸಿಂಗ್​ ಅವರ ಶ್ರಮ ಕೊನೆಗೂ ಫಲ ಕೊಟ್ಟಿತ್ತು.

ಇದನ್ನೂ ಓದಿ: ಐಪಿಎಸ್​ ಮಗಳಿಗೆ, ಡಿಸಿಪಿ ಅಪ್ಪನ ಸೆಲ್ಯೂಟ್..!: ಮಗಳು ಆದೇಶ ಕೊಟ್ರೆ ಇವರಿಗೆ ಹೆಮ್ಮೆ

ಪೇದೆಯ ಮಗ ಎಸ್​ಪಿಯಾದ:

ಪೊಲೀಸ್​ ಪೇದೆಯಾಗಿ ಉತ್ತರ ಪ್ರದೇಶದ ಲಕ್ನೋದ ವಿಭೂತಿಖಂಡ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಜನಾರ್ದನ ಸಿಂಗ್​ ಅವರ ಮಗ ಅನೂಪ್​ ಕುಮಾರ್​ ಐಪಿಎಸ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಾವು ಎತ್ತಿ, ಆಡಿಸಿ, ಬೆಳೆಸಿದ ಮಗನಿಗೆ ಅಪ್ಪ ಸೆಲ್ಯೂಟ್​ ಹೊಡೆದು ಹೆಮ್ಮೆಯಿಂದ ಬೀಗುವಂತಾಗಿದೆ.

57 ವರ್ಷದ ಜನಾರ್ದನ ಸಿಂಗ್​ ಅವರ ಠಾಣೆಯಲ್ಲೇ ಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅನೂಪ್​ ಕುಮಾರ್​ ಈಗ ಅಪ್ಪನಿಗೇ ಬಾಸ್​!. ಈ ಬಗ್ಗೆ ಸಂತೋಷದಿಂದಲೇ ಪ್ರತಿಕ್ರಿಯಿಸುವ ಜನಾರ್ದನ ಸಿಂಗ್​, ಆತನನ್ನು ಅಧಿಕಾರಿ ಯೂನಿಫಾರಂನಲ್ಲಿ ನೋಡಿದಾಗ ನನ್ನ ಮಗನೆಂಬುದೇ ಮರೆತುಹೋಗುತ್ತದೆ. ಬೇರೆಲ್ಲ ಅಧಿಕಾರಿಗಳಿಗೆ ಸೆಲ್ಯೂಟ್​ ಮಾಡುವಂತೆ ಆತನಿಗೂ ಮಾಡುತ್ತೇನೆ. ಆತನ ಎಲ್ಲ ಆದೇಶಗಳನ್ನೂ ಪಾಲಿಸುತ್ತೇನೆ. ನಮ್ಮಿಬ್ಬರ ಸಂಬಂಧ ನಮ್ಮ ಕೆಲಸದ ಮೇಲೆ ಪರಿಣಾಮ ಬೀರದ ಹಾಗೆ ಎಚ್ಚರಿಕೆಯಿಂದ ಇರಬೇಕಾದ್ದರಿಂದ ಆ ಬಗ್ಗೆ ಇಬ್ಬರೂ ಗಮನ ಹರಿಸುತ್ತೇವೆ ಎಂದು ಟೈಮ್ಸ್​ ಆಫ್​ ಇಂಡಿಯಾ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಅಪ್ಪನೇ ನನ್ನ ಪ್ರೇರಣೆ:

29 ವರ್ಷದ ಅನೂಪ್​ ಕುಮಾರ್​ 2014ನೇ ಸಾಲಿನ ಐಪಿಎಸ್​ ಅಧಿಕಾರಿ. ತನ್ನ ಅಪ್ಪನ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಅನೂಪ್​, ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯೇನೂ ಚೆನ್ನಾಗಿರಲಿಲ್ಲ. ಅಪ್ಪ ಕಾನ್ಸ್​ಟೇಬಲ್​ ಆಗಿದ್ದರಿಂದ ಅವರೊಬ್ಬರ ಆದಾಯದಲ್ಲೇ ಮನೆ ನಡೆಯಬೇಕಿತ್ತು. ಆದರೂ ಅದು ನಮ್ಮ ವಿದ್ಯಾಭ್ಯಾಸದ ಮೇಲೆ ಯಾವ ರೀತಿಯಲ್ಲೂ ಪರಿಣಾಮ ಬೀರದಂತೆ ಅಪ್ಪ ನೋಡಿಕೊಂಡರು. ನನ್ನ ಅಪ್ಪನೇ ನನ್ನ ಮೊದಲ ಸ್ಫೂರ್ತಿ. ಪ್ರತಿದಿನ ಅವರ ಪಾದಕ್ಕೆ ನಮಸ್ಕರಿಸಿ ಕೆಲಸಕ್ಕೆ ಹೊರಡುತ್ತೇನೆ. ಆಫೀಸ್​ನಲ್ಲಿ ಅವರು ನನಗೆ ಸೆಲ್ಯೂಟ್​ ಹೊಡೆದರೂ ನಾನು ಅವರಿಗೆ ನಮಸ್ಕಾರ ಮಾಡುವ ಸಂಪ್ರದಾಯವನ್ನು ಬಿಟ್ಟಿಲ್ಲ. ಅವರು ಕಲಿಸಿಕೊಟ್ಟ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಪಟ್ಟಿದ್ದೇನೆ ಎಂದು ತಮ್ಮ ಅಪ್ಪನ ತ್ಯಾಗವನ್ನು ನೆನೆಯುತ್ತಾರೆ.

First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ