news18-kannada Updated:January 14, 2021, 8:51 PM IST
ಡಿಸಿಪಿ ಐಶ್ವರ್ಯಾ ಡೊಂಗ್ರೆ
ಕೊಚ್ಚಿ (ಜ. 14): ಸಾಮಾನ್ಯ ಉಡುಗೆಯಲ್ಲಿ (ಮಪ್ತಿ) ಬಂದಿದ್ದ ತನ್ನನ್ನು ಗುರುತಿಸದ ಮಹಿಳಾ ಪೊಲೀಸ್ ಕಾನ್ಸಟೇಬಲ್ಗೆ ಕೊಚ್ಚಿಯ ಡಿಸಿಪಿ ಅಧಿಕಾರಿ ಐಶ್ವರ್ಯಾ ಡೊಂಗ್ರೆ ದಂಡನಾತ್ಮಕ ಶಿಕ್ಷೆಗೆ ಒಳಪಡಿಸಿರುವ ಪ್ರಕರಣ ಕೇರಳದಲ್ಲಿ ವರದಿಯಾಗಿದೆ. ಕೊಚ್ಚಿಯ ಡಿಸಿಪಿ ಐಶ್ವರ್ಯ ಡೊಂಗ್ರೆ ಅವರನ್ನು ಕಚೇರಿಯ ಮಹಿಳಾ ಪೊಲೀಸ್ ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಡಿಸಿಪಿ ಐಶ್ವರ್ಯ ಮಹಿಳಾ ಪೊಲೀಸ್ ಕಾನ್ಸಟೇಬಲ್ನನ್ನು ಎರಡು ದಿನ ಟ್ರಾಫಿಕ್ ಡ್ಯೂಟಿ ನಿರ್ವಹಿಸುವಂತೆ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣಕ್ಕೆ ಕೇರಳದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರಿ ಐಶ್ವರ್ಯ ಮಾತ್ರ ತಮ್ಮ ಕಾರ್ಯವನ್ನು ಸಮರ್ಥಿಸಿ ಕೊಂಡಿದ್ದಾರೆ. ಅಷ್ಟಕ್ಕೂ ಈ ಎಡವಟ್ಟಾಗಲು ಕಾರಣ ಮಹಿಳಾ ಅಧಿಕಾರಿ ಮಫ್ತಿಯಲ್ಲಿ ಮಾಸ್ಕ್ ಧರಿಸಿ ಬಂದಿದ್ದರಿಂದ ಅವರನ್ನು ಮಹಿಳಾ ಸೆಂಟ್ರಿ ಅಧಿಕಾರಿ (ಠಾಣೆಯ ಮುಂದೆ ಕಾವಲು ನಿಲ್ಲುವವರು) ಗುರುತು ಹಿಡಿದಿಲ್ಲ.
ಜ. 1ರಿಂದ ಕೊಚ್ಚಿ ಡಿಸಿಪಿಯಾಗಿ ಯುವ ಐಪಿಎಸ್ ಅಧಿಕಾರಿ ಐಶ್ವರ್ಯಾ ಕರ್ತವ್ಯ ವಹಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿನ ಉತ್ತರ ಠಾಣೆಗೆ ಅವರು ಪರಿಶೀಲನೆಗಾಗಿ ಮಫ್ತಿ ಬಟ್ಟೆಯಲ್ಲಿ ಬಂದಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕಾರನ್ನು ಅವರು ಠಾಣೆಯಿಂದ ಕೊಂಚ ದೂರು ನಿಲ್ಲಿಸಿದ್ದರು. ಈ ಹಿನ್ನಲೆ ಸೆಂಟ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ಟೇಬಲ್ ಇವರನ್ನು ತಡೆದು ನಿಲ್ಲಿಸಿ, ಠಾಣೆಗೆ ಬಂದ ಕಾರಣ ವಿಚಾರಿಸಿದ್ದಾರೆ.
ತಾವು ಐಪಿಎಸ್ ಅಧಿಕಾರಿ ಎಂಬುದನ್ನು ಮಹಿಳಾ ಕಾನ್ಸಟೇಬಲ್ ಪತ್ತೆ ಮಾಡುವಲ್ಲಿ ವಿಫಲರಾದ ಹಿನ್ನಲೆ ಸಿಟ್ಟಿಗೆದ್ದ ಅಧಿಕಾರಿ ಸೆಂಟ್ರಿ ಡ್ಯೂಟಿ ಬದಲು ಎರಡು ದಿನ ಟ್ರಾಫಿಕ್ ಡಿಪಾರ್ಟ್ಮೆಂಟ್ಗೆ ಆಕೆಯನ್ನು ಶಿಕ್ಷೆ ಮೇಲೆ ಕಳುಹಿಸಿದ್ದಾರೆ.
ಇದನ್ನು ಓದಿ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು
ಈ ಕುರಿತು ಮಾತನಾಡಿದ ಐಪಿಎಸ್ ಅಧಿಕಾರಿ ಐಶ್ವರ್ಯಾ, ಸೆಂಟ್ರಿಗಳು ಯಾರು ಅಧಿಕಾರಿ, ಯಾರು ಸಾಮಾನ್ಯರು ಎಂಬ ಬಗ್ಗೆ ಅರಿವನ್ನು ಹೊಂದಿರಬೇಕು. ಕಾರಿನಲ್ಲಿ, ಐಪಿಎಸ್ ಧಿರಿಸಿನಲ್ಲಿ ಬಾರದಿದ್ದ ಮಾತ್ರಕ್ಕೆ ಗುರುತು ಪತ್ತೆ ಮಾಡದಿದ್ದರೆ ಇದು ಅವರ ಕರ್ತವ್ಯ ಲೋಪ. ಹಿರಿಯ ಅಧಿಕಾರಿಗಳು ಮಫ್ತಿಯಲ್ಲಿದ್ದರು ಅವರನ್ನು ಕಿರಿಯ ಅಧಿಕಾರಿಗಳು ಪತ್ತೆ ಮಾಡಬೇಕು ಎಂಬ ಕಾನೂನು ಇದೆ ಎಂದಿದ್ದಾರೆ.
ಆದರೆ, ಯುವ ಅಧಿಕಾರಿ ತೆಗೆದುಕೊಂಡ ಈ ನಿರ್ಣಯ ಕೊಂಚ ಕಠೋರವಾಗಿದೆ ಎಂದ ಮಾತು ಕೇಳಿಬಂದಿದೆ. ಇತ್ತೀಚೆಗಷ್ಟೇ ಐಶ್ವರ್ಯಾ ಇಲ್ಲಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನಲೆ ಈ ರೀತಿ ತಪ್ಪಾಗಿದೆ. ಅವರು ಈ ರೀತಿ ಶಿಕ್ಷೆ ನೀಡುವ ಬದಲು ಮಹಿಳಾ ಕಾನ್ಸ್ಟೇಬಲ್ಗೆ ಎಚ್ಚರಿಕೆ ನೀಡಬಹುದಿತ್ತು. ಅಲ್ಲದೇ ಮಾಸ್ಕ್ ಧರಿಸಿದ್ದ ಕಾರಣ ಈ ಪ್ರಮಾದ ಆಗಿರಬಹುದು. ಡಿಸಿಪಿ ತಮ್ಮ ಮೇಲಾಧಿಕಾರಿ ಸಲಹೆ ಪಡೆದು ಶಿಕ್ಷೆ ವಿಧಿಸಬೇಕಿತ್ತು. ಈ ಹಿನ್ನಲೆ ಈ ಪ್ರಕರಣ ಕುರಿತು ಕಮಿಷನರ್ಗೆ ವರದಿ ಮಾಡಲಾಗಿದೆ ಎಂದು ಕೇರಳ ಪೊಲೀಸ್ ಸಂಘದ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ತಿಳಿಸಿದ್ದಾರೆ.
Published by:
Seema R
First published:
January 14, 2021, 8:49 PM IST