ಕೊಯಿಂಬತ್ತೂರು: ಇದು ಒಂದು ಮುತ್ತಿನ ಕತೆ. ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಸಮವಸ್ತ್ರದಲ್ಲಿದ್ದಾಗ ಹೆಂಡತಿಯ ಅತ್ತಿಗೆಯ ಜೊತೆ ಪಾರ್ಕ್ನಲ್ಲಿ ಕುಳಿತು ಹರಟೆ ಹೊಡಯುತ್ತಿದ್ದ. ಅದೇನು ಮಾತನಾಡುತ್ತಿದ್ದರೋ ಅವರಿಬ್ಬರಿಗೇ ಗೊತ್ತು, ಆದರೆ ಆಕೆ ಇದ್ದಕ್ಕಿದ್ದಂತೆ ಕಾನ್ಸ್ಟೇಬಲ್ಗೆ ಮುತ್ತು ಕೊಟ್ಟಿದ್ದಾಳೆ. ಇದನ್ನು ಯಾರೋ ವಿಡಿಯೋ ಮಾಡಿ ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಟ್ಟಿದ್ದಾರೆ. ಕೇವಲ ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಟ್ಟಿದ್ದರೆ ಹೇಗೋ ಬಚಾವಾಗುತ್ತಿದ್ದರೇನೋ, ಆದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಆ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದೀಗ ಪೊಲೀಸ್ ಕಾನ್ಸ್ಟೇಬಲ್ ಅಮಾನತ್ತಾಗಿದ್ದಾರೆ. ಈ ಘಟನೆ ನಡೆದಿರುವುದು ಪಕ್ಕದ ತಮಿಳುನಾಡಿನ ಕುಡಲ್ಲೋರು ಜಿಲ್ಲೆಯಲ್ಲಿ.
ತಮಿಳುನಾಡು ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿರುವ ವಿ ಬಾಲಾಜಿ (29) ಅಮಾನತ್ತಾಗಿರುವ ಪೊಲೀಸ್ ಕಾನ್ಸ್ಟೇಬಲ್. ಅದ್ಯಾವ ಕಾರಣಕ್ಕೆ ಹೆಂಡತಿಯ ಅಣ್ಣನ ಹೆಂಡತಿ ಜೊತೆ ಪಾರ್ಕ್ಗೆ ಹೋಗಿದ್ದನೋ ಗೊತ್ತಿಲ್ಲ. ಅಥವಾ ಇದೇ ಮೊದಲು ಈ ರೀತಿ ಪಾರ್ಕ್ ಅಲೆದಾಟವೋ ಗೊತ್ತಿಲ್ಲ. ಆದರೆ ಇಬ್ಬರ ಪ್ರಣಯ ಪ್ರಸಂಗ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಪರಿಣಾಮ, ಬಾಲಾಜಿ ಕೆಲಸದಿಂದ ಅಮಾನತಾಗಿದ್ದಾನೆ. ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಕಾರಣ ನೀಡಿ ಹಿರಿಯ ಅಧಿಕಾರಿ ಬಾಲಾಜಿಯನ್ನು ಅಮಾನತ್ತು ಮಾಡಿದ್ದಾರೆ.
ಹೆಂಡತಿಯ ಅತ್ತಿಗೆ ಕೊಟ್ಟಳು ಮುತ್ತು:
ಬಾಲಾಜಿಗೆ ಇದಾಗಲೇ ಮದುವೆಯಾಗಿದೆ. ಮದುವೆಯಾಗಿ ಎರಡು ಮಕ್ಕಳು ಕೂಡ ಇದ್ದಾರೆ. ಕುಡಲ್ಲೋರಿನ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಬಾಲಾಜಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಕಳೆದ ಶುಕ್ರವಾರ, ಹೆಂಡತಿಯ ಅಣ್ಣನ ಹೆಂಡತಿಯ ಜೊತೆ ಬಾಲಾಜಿ ಪಾರ್ಕ್ಗೆ ಹೋಗಿದ್ದಾನೆ. ಪಾರ್ಕ್ನಲ್ಲಿ ಇಬ್ಬರೂ ತುಂಬಾ ಹೊತ್ತು ಮಾತನಾಡುತ್ತಿದ್ದಾರೆ. ಅದರ ನಡುವೆ ಇದ್ದಕ್ಕಿದ್ದಂತೆ ಹೆಂಡತಿಯ ಅತ್ತಿಗೆ ಕಾನ್ಸ್ಟೇಬಲ್ ಬಾಲಾಜಿಗೆ ಮುತ್ತು ಕೊಟ್ಟಿದ್ದಾಳೆ. ಇದನ್ನು ಕದ್ದು ನೋಡುತ್ತಿದ್ದ ಯಾರೋ ವ್ಯಕ್ತಿಗಳು ವಿಡಿಯೋ ಮಾಡಿದ್ದಾರೆ.
ಇದರ ಬಗ್ಗೆ ಕಾನ್ಸ್ಟೇಬಲ್ ಬಾಲಾಜಿಗಾಗಲೀ ಅಥವಾ ಅವನ ಹೆಂಡತಿಯ ಅತ್ತಿಗೆಗಾಗಲೀ ಗೊತ್ತೇ ಆಗಿರಲಿಲ್ಲ. ಅದರಲ್ಲೂ ಬಾಲಾಜಿ ಸಮವಸ್ತ್ರದಲ್ಲಿದ್ದ. ಇಲ್ಲದಿದ್ದರೆ ಈ ಚಿಕ್ಕ ಘಟನೆ ಇಡೀ ತಮಿಳುನಾಡಿನಾದ್ಯಂತ ಅಷ್ಟು ವೈರಲ್ ಆಗುತ್ತಿರಲಿಲ್ಲ. ವಿಡಿಯೋ ಮಾಡಿದ ವ್ಯಕ್ತಿಗಳು ಮೊದಲು ವಿಡಿಯೋವನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಅದರ ನಂತರವೂ ಕಾನ್ಸ್ಟೇಬಲ್ ಮೇಲೆ ಕ್ರಮ ಜರುಗಿಸದಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ವಿಡಯೋ ಹಾಕಲಾಗಿದೆ. ಅದು ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿ ಬಾಲಾಜಿಯನ್ನು ಅಮಾನತ್ತು ಮಾಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ಬಾಲಾಜಿ ಕೆಲಸ ಕಳೆದುಕೊಂಡಿದ್ದಾರೆ. ಉಪ ಪೊಲೀಸ್ ಆಯುಕ್ತ ಮುರಳೀಧರನ್ ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಕಾನ್ಸ್ಟೇಬಲ್ ಕೆಲಸದ ವೇಳೆ ಸಮವಸ್ತ್ರದಲ್ಲಿ ಅಸಭ್ಯವಾಗಿ ವರ್ತಿಸಿರುವ ಹಿನ್ನೆಲೆ ಅವರನ್ನು ಅಮಾನತ್ತು ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಪೊಲೀಸರು ಪಾರ್ಕಿನಲ್ಲಿ ಕುಳಿತಿರುವ ಯುವ ಪ್ರೇಮಿಗಳ ಮೇಲೆ ಸವಾರಿ ಮಾಡುತ್ತಾರೆ. ಪಾರ್ಕಿಗೆ ಬರಬೇಡಿ ಎಂದು ಧಮಕಿ ಹಾಕುವ ಅದೆಷ್ಟೋ ವಿಡಿಯೋಗಳು ಈ ಹಿಂದೆ ವೈರಲ್ ಆಗಿವೆ. ಕೆಲ ಘಟನೆಗಳಲ್ಲಿ ಪ್ರೇಮಿಗಳಿಗೆ ಪೊಲೀಸರು ಲಾಠಿ ಏಟು ಸಹ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಪೊಲೀಸ್ ಪಾರ್ಕಿನಲ್ಲಿ ಮುತ್ತು ಕೊಡಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಪೊಲೀಸರು ಪ್ರೇಮಿಗಳ ಖಾಸಗಿತನದ ಮೇಲೆ ಸವಾರಿ ಮಾಡದೇ ಹೋಗಿದ್ದರೆ, ಈ ವಿಡಿಯೋವನ್ನು ಯಾರೂ ಮಾಡುತ್ತಿರಲಿಲ್ಲವೇನೋ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದನ್ನೂ ಓದಿ: Viral Video: ಅದೇನು ಭಕ್ತಿ.. ಅದೇನು ಭಯ: ಹುಂಡಿ ಹಣ ಎಗರಿಸುವ ಮುನ್ನ ದೇವರಿಗೆ ನಮಸ್ಕರಿಸಿದ ಕಳ್ಳ!
ಮಹಿಳಾ ಕಾನ್ಸ್ಟೇಬಲ್ ಕೊಲೆ ಮಾಡಿದ ಗಂಡ:
ಕಳೆದ ಕೆಲ ದಿನಗಳ ಹಿಂದೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ರನ್ನು ಗಂಡ ಕೊಲೆ ಮಾಡಿದ್ದ. ಇಬ್ಬರ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ವರದಿ ತಿಳಿಸಿತ್ತು. ತಮಿಳುನಾಡಿನ ವಿರುಧಾನಗರದಲ್ಲಿ ವಾಸವಿದ್ದ 30 ವರ್ಷದ ಮಹಿಳಾ ಕಾನ್ಸ್ಟೇಬಲ್ರನ್ನು 35 ವರ್ಷದ ಗಂಡ ಕೊಲೆ ಮಾಡಿದ್ದ. ಸಾವಿಗೀಡಾದ ಹೆಂಡತಿಯ ಹೆಸರು ಭಾನುಪ್ರಿಯಾ. ಅವರು ವಿರುಧಾನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ವಿಗ್ನೇಶ್ ಎಂಬಾತನ ಜೊತೆ ಆರು ವರ್ಷಗಳ ಹಿಂದೆ ಅವರ ಮದುವೆಯಾಗಿತ್ತು. ವಿಗ್ನೇಶ್ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: Loverboy- ಕದ್ದುಮುಚ್ಚಿ ಲವ್ವಿಡವ್ವಿ ಮಾಡ್ತಿದ್ದವನ ಎಲ್ಲಾ ಗರ್ಲ್ಫ್ರೆಂಡ್ಸ್ ಒಟ್ಟಿಗೆ ಮನೆಗೆ ಬಂದಾಗ…
ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾಳೆ. ವರದಿಗಳ ಪ್ರಕಾರ ವಿಗ್ನೇಶ್ ಮಧುರೈಗೆ ಶಿಫ್ಟ್ ಆಗಬೇಕು ಎಂದುಕೊಂಡಿದ್ದ. ಆದರೆ ಭಾನುಪ್ರಿಯಾ ಇದಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಅದು ತಾರಕಕ್ಕೆ ಹೋಗಿದೆ. ಸಿಟ್ಟಿನ ಭರದಲ್ಲಿ ವಿಗ್ನೇಶ್ ಬೆಲ್ಟ್ ಬಳಸಿ ಹೆಂಡತಿಯ ಕತ್ತು ಹಿಸುಕಿ ಸಾಯಿಸಿದ್ದಾನೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ