ಹೈದ್ರಾಬಾದ್ (ನವೆಂಬರ್ 26); ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಪಶ್ಚಿಮ ಬಂಗಾಳ ಘಟಕ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಸಭೆಯನ್ನು ಅನುಮತಿ ಪಡೆಯದೆ ಆಯೋಜಿಸಿದ್ದ ಕಾರಣ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಸದ ತೇಜಸ್ವಿ ಸೂರ್ಯ ಅಲ್ಲಿ ಹದ್ದು ಮೀರಿ ತಮ್ಮ ಬೆಂಬಲಿಗರ ಜೊತೆಗೆ ಉಸ್ಮಾನಿಯ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿದ್ದಾರೆ.
ಮುನ್ಸಿಪಾಲಿಟಿ ಚುನಾವಣೆಯ ಪ್ರಯುಕ್ತ ಪಕ್ಷದ ಪ್ರಚಾರದಲ್ಲಿ ಭಾಗವಹಿಸಲು ಮಂಗಳವಾರ ಹೈದರಾಬಾದ್ಗೆ ಆಗಮಿಸಿದ್ದ ತೇಜಸ್ವಿ ಸೂರ್ಯ ಎನ್ಸಿಸಿ ಗೇಟ್ ಬಳಿ ಅಡೆತಡೆಗಳನ್ನು ಮುರಿದು ತಮ್ಮ ಬೆಂಬಲಿಗರೊಂದಿಗೆ ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸಿದ್ದರು. ನಂತರ ಅವರು ಆರ್ಟ್ಸ್ ಕಾಲೇಜಿನಲ್ಲಿ ಭಾಷಣ ಮಾಡಿದರು.
ಉಸ್ಮಾನಿಯಾ ವಿವಿಯ ರಿಜಿಸ್ಟ್ರಾರ್ ಡಾ.ಚ.ಗೋಪಾಲ್ ರೆಡ್ಡಿ, "ವಿಶ್ವವಿದ್ಯಾಲಯ ಪ್ರವೇಶಿಸಿ ಭಾಷಣ ಮಾಡಲು ನಾವು ಸಂಸದ ತೇಜಸ್ವಿ ಸೂರ್ಯ ಅವರಿಗೆ ಯಾವುದೇ ಅನುಮತಿ ನೀಡಿರಲಿಲ್ಲ. ಇಂತಹ ರಾಜಕೀಯ ಘಟನೆಗಳನ್ನು ವಿಶ್ವವಿದ್ಯಾಲಯದಲ್ಲಿ ಅನುಮತಿಸಲಾಗುವುದಿಲ್ಲ. ಉಪಕುಲಪತಿಗಳ ನಿರ್ದೇಶನದ ಮೇರೆಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಬಂದ್, ಅತ್ತಿಬೆಲೆ ಗಡಿ ಬಂದ್, ಕಾರ್ಮಿಕರ ಮುಷ್ಕರ, ಕ್ಯಾಬ್ ಚಾಲಕರ ಪ್ರತಿಭಟನೆ
ಅಲ್ಲದೆ, "2017 ರಲ್ಲಿ ವಿವಿ ಆಡಳಿತವು ಕ್ಯಾಂಪಸ್ನಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಿತ್ತು. ಶಿಕ್ಷಣತಜ್ಞರಿಗೆ ಸಂಬಂಧವಿಲ್ಲದ ಚಟುವಟಿಕೆಗಳನ್ನು ಕ್ಯಾಂಪಸ್ನಲ್ಲಿ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು ಕ್ಯಾಂಪಸ್ನಲ್ಲಿ ಇಂತಹ ಘಟನೆಗಳು ನಡೆದಿರುವುದು ದುರಾದೃಷ್ಟಕರ" ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ