• Home
  • »
  • News
  • »
  • national-international
  • »
  • Mehul Choksi –ಮೆಹುಲ್ ಚೋಕ್ಸಿಗೆ ಡಾಮಿನಿಕಾ ಕೋರ್ಟ್ ಜಾಮೀನು; ಭಾರತಕ್ಕೆ ತಾತ್ಕಾಲಿಕ ಹಿನ್ನಡೆ

Mehul Choksi –ಮೆಹುಲ್ ಚೋಕ್ಸಿಗೆ ಡಾಮಿನಿಕಾ ಕೋರ್ಟ್ ಜಾಮೀನು; ಭಾರತಕ್ಕೆ ತಾತ್ಕಾಲಿಕ ಹಿನ್ನಡೆ

ಮೆಹುಲ್ ಚೋಕ್ಸಿ

ಮೆಹುಲ್ ಚೋಕ್ಸಿ

ಡಾಮಿನಿಕಾ ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿಗೆ ಅಲ್ಲಿನ ನ್ಯಾಯಾಲಯವೊಂದು ಜಾಮೀನು ನೀಡಿದೆ. ಪಿಎನ್​ಬಿ ಹಗರಣದ ಪ್ರಮುಖ ಆರೋಪಿಯಾದ ಅವರನ್ನ ವಶಕ್ಕೆ ಪಡೆಯುವ ಭಾರತದ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ಜುಲೈ 13): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನ ಬಂಧಿಸಿ ಭಾರತಕ್ಕೆ ವಾಪಸ್ ತರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮತ್ತೆ ಹಿನ್ನಡೆ ಆಗಿದೆ. ಡಾಮಿನಿಕಾ ದೇಶದ ಉಚ್ಚ ನ್ಯಾಯಾಲಯವೊಂದು ಮೆಹುಲ್ ಚೋಕ್ಸಿಗೆ ಜಾಮೀನು ನೀಡಿದೆ. ಇದರಿಂದ ಚೋಕ್ಸಿ ಕೆರಿಬಿಯನ್ ದ್ವೀಪವಾದ ಆಂಟಿಗುವಾ ಮತ್ತು ಬರ್ಬುಡಾಗೆ ಹೋಗಲು ಅನುಮತಿ ಸಿಕ್ಕಿದೆ. ವೈದ್ಯಕೀಯ ಚಿಕಿತ್ಸೆಯ ಕಾರಣಕ್ಕೆ ನೀಡಲಾಗಿರುವ ಜಾಮೀನಿಗೆ 10 ಸಾವಿರ ಕೆರಿಬಿಯನ್ ಡಾಲರ್ (East Caribbean Dollar) ಹಣದ ಬಾಂಡ್ ಪಡೆಯಲಾಗಿದೆ.


ಡಾಮಿನಿಕಾ ದೇಶಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪವನ್ನು ಮೆಹುಲ್ ಚೋಕ್ಸಿ ಎದುರಿಸುತ್ತಿದ್ದಾರೆ. ಆದರೆ, ಆಂಟಿಗುವಾದ ಜಾಲಿ ಬಂದರಿನಲ್ಲಿ ಪೊಲೀಸರು ಚೋಕ್ಸಿ ಅವರನ್ನ ಕಿಡ್ನಾಪ್ ಮಾಡಿ ದೋಣಿಯ ಮೂಲಕ ಡಾಮಿನಿಕಾಗೆ ತಂದಿದ್ದಾರೆ. ಈ ಪೊಲೀಸರು ಚಹರೆಯಲ್ಲಿ ಆಂಟಿಗುವಾ ಮತ್ತು ಭಾರತೀಯರನ್ನ ಹೋಲುತ್ತಾರೆ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮುಂದಿಟ್ಟಿದ್ದಾರೆ.


ಹಾಗೆಯೇ, ಡಾಮಿನಿಕಾದ ದೇಶದ ಪೊಲೀಸ್ ಮುಖ್ಯಸ್ಥರೂ ಹಾಗೂ ಈ ಪ್ರಕರಣದ ತನಿಖಾಧಿಕಾರಿ ಅಲೆಯ್ನೆ ಮ್ಯಾಕಸಿಮಿಯಾ, ರಾಷ್ಟ್ರೀಯ ಭದ್ರತಾ ಸಚಿವ ರೇಬರ್ನ್ ಬ್ಲ್ಯಾಕ್​ಮೂರ್ ಮತ್ತು ಮ್ಯಾಜಿಸ್ಟ್ರೇಟ್ ಕ್ಯಾಂಡಿಯಾ ಕೆರೆಟ್-ಜಾರ್ಜ್ ವಿರುದ್ಧವೇ ಮೆಹುಲ್ ಚೋಕ್ಸಿ ಕಳೆದ ವಾರದಂದು ಪ್ರಕರಣ ದಾಖಲಿಸಿದ್ದರು. ಇವರು ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಮಾಡಿಕೊಂಡಿದ್ದಾರೆ. ದೇಶದ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂಬುದು ಪೊಲೀಸ್ ಅಧಿಕಾರಿಗಳ ವಿರುದ್ಧ ಚೋಕ್ಸಿ ಆರೋಪ.


13,000 ಕೋಟಿ ರೂ ಮೊತ್ತದೆನ್ನಲಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ನೀರವ್ ಮೋದಿ ಮತ್ತವರ ಸಂಬಂಧಿ ಮೆಹುಲ್ ಚೋಕ್ಸಿ ಇದ್ಧಾರೆ. ಬ್ಯಾಂಕ್​ನ ಅಧಿಕಾರಿಗಳಿಗೆ ಲಂಚ ನೀಡಿ ಅವರಿಂದ ಅಂಡರ್​ಟೇಕಿಂಗ್ ಲೆಟರ್ (ಒಂದು ರೀತಿಯ ಶೂರಿಟಿ) ಗಳನ್ನ ಪಡೆದು ಅವುಗಳ ಮೂಲಕ ವಿದೇಶದ ಬ್ಯಾಂಕ್​ಗಳಲ್ಲಿ ಸಾಲ ಪಡೆದುಕೊಂಡು ವಂಚಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುವ ಕೆಲ ವಾರಗಳ ಮೊದಲು, ಅಂದರೆ, 2018ರ ಜನವರಿಯ ಮೊದಲ ವಾರದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಇಬ್ಬರೂ ದೇಶ ಬಿಟ್ಟು ಪರಾರಿಯಾಗಿದ್ದರು.


ಇದನ್ನೂ ಓದಿ: Money Doubling- ಮಸಿ, ನಿಂಬೆ, ಬೆಂಕಿ… ನೆಲಮಂಗಲದ ಮನಿ ಡಬ್ಲಿಂಗ್ ಗ್ಯಾಂಗ್ ಮಾಡುತ್ತಿದ್ದ ಐನಾತಿ ಪ್ಲಾನ್ ಇದು


ಕೆರಿಬಿಬಿಯನ್ ದ್ವೀಪವಾದ ಆಂಟಿಗುವಾ ಮತ್ತು ಬರ್ಬುಡಾದಲ್ಲಿ ತಲೆಮರೆಸಿಕೊಂಡಿದ್ದ ಮೆಹುಲ್ ಚೋಕ್ಸಿಇತ್ತೀಚೆಗಷ್ಟೇ ಡಾಮಿನಿಕಾ ದೇಶದಲ್ಲಿ ಬಂಧಿತರಾಗಿರುವ ಸುದ್ದಿ ಬಂದಿತ್ತು. ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಅವರನ್ನ ಬಂಧಿಸಲಾಗಿತ್ತು. ಡಾಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್​ವೊಂದು ಚೋಕ್ಸಿಗೆ ಜಾಮೀನು ನಿರಾಕರಿಸಿತ್ತು. ಇದೇ ವೇಳೆ, ಡಾಮಿನಿಕಾದಲ್ಲಿ ಚೋಕ್ಸಿ ಬಂಧಿತರಾಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ಭಾರತದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ಡಾಮಿನಿಕಾಗೆ ದೌಡಾಯಿಸಿತು. ಚೋಕ್ಸಿ ವಿರುದ್ಧ ಇಂಟರ್​ಪೋಲ್ ರೆಡ್ ನೋಟೀಸ್ ಇರುವುದರಿಂದ ಅವರನ್ನ ಭಾರತದ ವಶಕ್ಕೆ ಪಡೆಯಲು ಸಿಬಿಐ ಡಿಐಜಿ ಶಾರ್ದಾ ರಾವತ್ ನೇತೃತ್ವದ ತಂಡ ಡಾಮಿನಿಕಾಗೆ ತೆರಳಿದಾಗ ಶಾಕ್ ಕಾದಿತ್ತು. ಚೋಕ್ಸಿ ಪರ ವಕೀಲರು ಬಹಳ ಅನಿರೀಕ್ಷಿತವಾಗಿ ಡಾಮಿನಿಕಾ ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದರು. ಮೆಹುಲ್ ಚೋಕ್ಸಿಯ ವೈದ್ಯಕೀಯ ಸಮಸ್ಯೆ ಹಿನ್ನೆಲೆಯಲ್ಲಿ ಅರ್ಜಿ ಪರಿಗಣಿಸಿದ ಉಚ್ಚ ನ್ಯಾಯಾಲಯವು ಆತನಿಗೆ ಜಾಮೀನು ನೀಡಲು ಸಮ್ಮತಿಸಿದೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

Published by:Vijayasarthy SN
First published: