ನವದೆಹಲಿ(ಆ. 29): ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆಗಳವರೆಗೂ ಎಲ್ಲದಕ್ಕೂ ಸಾಮಾನ್ಯವಾದ ಮತದಾರರ ಪಟ್ಟಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇರಿಸುತ್ತಿದೆ. ಈ ಸಂಬಂಧ ಪ್ರಧಾನಿ ಕಾರ್ಯಾಲಯ (ಪಿಎಂಒ) ಇತ್ತೀಚೆಗೆ ಸಭೆ ನಡೆಸಿ ಚರ್ಚೆ ಮಾಡಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಆಗಸ್ಟ್ 13ರಂದು ನಡೆದ ಸಭೆಯಲ್ಲಿ ಸಂವಿಧಾನದ 243K ಮತ್ತು 243ZA ವಿಧಿಯನ್ನು ತಿದ್ದುಪಡಿ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದೆನ್ನಲಾಗಿದೆ.
ಪಿಎಂಒನ ಮುಖ್ಯಕಾರ್ಯದರ್ಶಿ ಪಿ.ಕೆ. ಮಿಶ್ರಾ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ದೇಶಾದ್ಯಂತ ಎಲ್ಲಾ ಸ್ತರದ ಚುನಾವಣೆಗಳಿಗೆ ಒಂದೇ ಎಲೆಕ್ಟೋರಲ್ ಪಟ್ಟಿ ಮಾಡಲು ಅನುವಾಗುವಂತೆ ಅ ಎರಡು ವಿಧಿಗಳನ್ನ ತಿದ್ದುಪಡಿ ಮಾಡಲು ಹಾಗೂ ಚುನಾವಣಾ ಆಯೋಗ ತಯಾರಿಸುವ ಮತದಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಅನ್ವಯ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಳಿಕೊಳ್ಳುವುದರ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 24 ಗಂಟೆಗಳಲ್ಲಿ 7 ಉಗ್ರರ ಹತ್ಯೆ
ಸದ್ಯದಲ್ಲಿ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಬಳಕೆಯಾಗುತ್ತದೆ. ಆದರೆ, ಪಂಚಾಯಿತಿ, ನಗರಸಭೆ ಮೊದಲಾದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ತಯಾರಿಸುವ ಪಟ್ಟಿ ಬಳಕೆಯಾಗುತ್ತದೆ. ಇದರಲ್ಲಿ ಕೇಂದ್ರ ಚುನಾವಣಾ ಆಯೋಗದ ನಿಯಂತ್ರಣ ಇರುವುದಿಲ್ಲ. ವಾಸ್ತವದಲ್ಲಿ ಅನೇಕ ರಾಜ್ಯಗಳ ಚುನಾವಣಾ ಆಯೋಗಗಳು ಕೇಂದ್ರ ಆಯೋಗದ ಮತದಾರರ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆಗಳಿಗೂ ಬಳಕೆ ಮಾಡಿಕೊಳ್ಳುವುದುಂಟು. ಇಂಥ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ, ಉತ್ತರ ಪ್ರದೇಶ, ಕೇರಳ, ಮಧ್ಯ ಪ್ರದೇಶ, ಉತ್ತರಾಖಂಡ್ ಒಡಿಶಾ ಸೇರಿ 11 ರಾಜ್ಯಗಳಲ್ಲಿ ಮಾತ್ರ ಪ್ರತ್ಯೇಕ ಮತದಾರರ ಪಟ್ಟಿ ಅಸ್ತಿತ್ವದಲ್ಲಿದೆ.
ಇದನ್ನೂ ಓದಿ: ಆಂತರಿಕ ಚುನಾವಣೆ ನಡೆಯದಿದ್ದರೆ ಇನ್ನೂ 50 ವರ್ಷ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನವೇ ಗತಿ; ಗುಲಾಂ ನಬಿ ಆಜಾದ್
ಈಗ ಎಲ್ಲಾ ರಾಜ್ಯಗಳಿಗೂ ಏಕ ತೆರನಾದ ಮತದಾರರ ಪಟ್ಟಿ ಇರಬೇಕೆನ್ನುವ ಕಾನೂನನ್ನು ಕೇಂದ್ರ ಸರ್ಕಾರ ರೂಪಿಸಲು ಮುಂದಾಗಿರುವುದು ವೇದ್ಯವಾಗಿದೆ. ಆದರೆ, ಕುತೂಹಲವೆಂದರೆ ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣೆಯತ್ತ ಹೆಜ್ಜೆ ಇಟ್ಟಿರುವ ಅನುಮಾನ ಇದೆ. ಒಂದು ಮತದಾರರ ಪಟ್ಟಿಗೂ ಒಂದು ದೇಶ-ಒಂದು ಚುನಾವಣೆಗೂ ಕೊಂಡಿ ಇದೆ. ಒಂದು ದೇಶ ಒಂದು ಚುನಾವಣೆಗೆ ನರೇಂದ್ರ ಮೋದಿ ಪ್ರಧಾನಿಯಾದ ಹೊಸದರಲ್ಲೇ ಪ್ರಸ್ತಾಪಿಸಿದ್ದರು.
ಏನಿದು ಒಂದು ದೇಶ ಒಂದು ಚುನಾವಣೆ?
ಇಡೀ ದೇಶದಲ್ಲಿ ಲೋಕಸಭೆ, ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪ ಇದು. ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಅವಧಿಯಲ್ಲಿ ನಡೆಯುತ್ತವೆ. ಸ್ಥಳೀಯ ಸಂಸ್ಥೆ ಚುನಾವಣೆಗಳೂ ಕೂಡ ಬೇರೆ ಬೇರೆ ಅವಧಿಯಲ್ಲಿ ನಡೆಯುತ್ತವೆ. ಇದರಿಂದ ಸಾಕಷ್ಟು ಸಂಪನ್ಮೂಲ ಅಪವ್ಯಯವಾಗುತ್ತದೆ. ಪ್ರತೀ ಐದು ವರ್ಷಕ್ಕೊಮ್ಮೆ ಎಲ್ಲಾ ಚುನಾವಣೆಗಳನ್ನ ಒಂದೇ ಸಮಯದಲ್ಲಿ ಮಾಡಿದರೆ ಸಂಪನ್ಮೂಲ ಉಳಿಸಬಹುದು. ಗೊಂದಗಳನ್ನ ನಿವಾರಿಸಬಹುದು ಎಂಬ ಕೂಗು ಬಹಳ ಕಾಲದಿಂದ ಕೇಳಿಬಂದಿತ್ತು. ಆದರೆ, ಕೆಲವಾರು ರಾಜ್ಯಗಳು ಇದನ್ನು ವಿರೋಧಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ