ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಬೆಂಬಲ; ಶಿವಸೇನೆಯ ಠಾಕ್ರೆಗೆ ಕರೆ ಮಾಡಿ ಕೃತಜ್ಞತೆ ಹೇಳಿದ ಮೋದಿ

news18
Updated:August 10, 2018, 9:04 AM IST
ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಬೆಂಬಲ; ಶಿವಸೇನೆಯ ಠಾಕ್ರೆಗೆ ಕರೆ ಮಾಡಿ ಕೃತಜ್ಞತೆ ಹೇಳಿದ ಮೋದಿ
news18
Updated: August 10, 2018, 9:04 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ.10): ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಶಿವಸೇನೆಗೆ ಬಿಜೆಪಿ ಧನ್ಯವಾದ ಸಲ್ಲಿಸಿದೆ.

ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ, ಕೃತಜ್ಞತೆ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ 7ರಂದು ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ, ಎನ್ಡಿಎ ಅಭ್ಯರ್ಥಿಯಾದ ಜೆಡಿ(ಯು)ನ ಹರಿವಂಶ ಅವರನ್ನು ಬೆಂಬಲಿಸುವಂತೆ ಕೋರಿದ್ದರು. ಅದರಂತೆ ಗುರುವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ 20 ಮತಗಳ ಅಂತರದಿಂದ ಪರಾಭವಗೊಂಡರು.

ಬಿಜೆಪಿಯ ಮಿತ್ರಪಕ್ಷವೇ ಆದ ಮಹಾರಾಷ್ಟ್ರದ ಶಿವಸೇನೆ ಆರಂಭದಿಂದಲೂ ಬಿಜೆಪಿಯೊಂದಿಗೆ ಶೀತಲ ಸಮರ ನಡೆಸಿಕೊಂಡೇ ಬರುತ್ತಿದೆ. ಬಿಜೆಪಿ ಸರ್ಕಾರದ ಪ್ರತಿ ತಪ್ಪುಗಳನ್ನು ಶಿವಸೇನೆ ಕಟು ವಾಕ್ಯಗಳಿಂದ ನಿಂದಿಸಿಕೊಂಡೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಮತ್ತು ವಿದೇಶ ನೀತಿಗಳನ್ನು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿದೆ.

ಮೇ 28ರಂದು ನಡೆದ ಮಹಾರಾಷ್ಟ್ರದ ಪಾಲ್ಗಾರ್ ಲೋಕಸಭಾ ಉಪಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಎದುರಾಳಿಯಾಗಿ ಸ್ಪರ್ಧಿಸಿದ್ದವು. ಚುನಾವಣೆಯಲ್ಲಿ ಎರಡು ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡೇ ಪ್ರಚಾರ ಮಾಡಿದ್ದವು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು. ಶಿವಸೇನಾ ಮೈತ್ರಿಯಲ್ಲಿ ‘ರಾಜಕೀಯದ ಅತಿದೊಡ್ಡ ಶತ್ರು’ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಕಳೆದ ತಿಂಗಳು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ಶಿವಸೇನೆ ತಟಸ್ಥವಾಗಿತ್ತು. ಇದೇ ವೇಳೆ 2019ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮಹಾರಾಷ್ಟ್ರದ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದರು. ಅಮಿತ್ ಶಾ ಹೀಗೆ ಹೇಳಿದ ಕೆಲವೇ ಗಂಟೆಗಳಲ್ಲಿ, ಉದ್ಧವ್ ಠಾಕ್ರೆ ಅವರು, “ನಾನು ಸಾಮಾನ್ಯ ಜನರ ಕನಸುಗಳಿಗೆ ಹೋರಾಟ ಮಾಡುತ್ತೇನೆಯೇ ಹೊರತು ಮೋದಿ ಅವರ ಕನಸಿಗೆ ಅಲ್ಲ,” ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಅಲ್ಲದೇ, “ನಮಗೆ ಕೇವಲ ಒಬ್ಬರು ಸ್ನೇಹಿತರು ಮಾತ್ರವಿಲ್ಲ. ನಾವು ಜನರ ಸ್ನೆಹಿತರು. ಬೇರೆಯವರ ಬಂದೂಕಿನಿಂದ ಗುಂಡು ಹೊಡೆಯುವ ಅಗತ್ಯವಿಲ್ಲ,” ಎನ್ನುವ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿತ್ತು.
Loading...

ಇದೀಗ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಶಿವಸೇನೆ ಎನ್ಡಿಎ ಬೆಂಬಲಿಸಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ಠಾಕ್ರೆ ಅವರಿಗೆ ಕರೆ ಮಾಡಿ, ಕೃತಜ್ಞತೆ ಸಲ್ಲಿಸಿರುವುದು ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ