Covid Vaccination: ಇಂದು ಲಸಿಕೆ ಉತ್ಪಾದಕರ ಜೊತೆ ಪ್ರಧಾನಿ ಮೋದಿ ಸಂವಾದ

ಮಾತುಕತೆ ವೇಳೆ ಕೊರೋನಾ ಲಸಿಕೆ ತಯಾರಕರ ಅನುಭವವನ್ನು ಕೇಳಲಿದ್ದಾರೆ. ಅಲ್ಲದೆ ಲಸಿಕೆ ಸಂಶೋಧನೆ ಮುಂದುವರೆಸುವ ಬಗ್ಗೆ ಕೂಡ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ನವದೆಹಲಿ, (ಅ. 23): ದೇಶಾದ್ಯಂತ ಶತಕೋಟಿ ಕೋವಿಡ್-19 ಡೋಸ್ ಗಳನ್ನು ಹಾಕಲಾಗಿರುವ (100 Crore Corona Vaccine Dose Distribution) ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕೊರೋನಾ ‌ಲಸಿಕೆ ಉತ್ಪಾದಕರ ಜೊತೆ ಸಂವಾದ ನಡೆಸಲಿದ್ದಾರೆ. ಈ ಮಾತುಕತೆ ವೇಳೆ ಕೊರೋನಾ ಲಸಿಕೆ ತಯಾರಕರ ಅನುಭವವನ್ನು ಕೇಳಲಿದ್ದಾರೆ. ಅಲ್ಲದೆ ಲಸಿಕೆ ಸಂಶೋಧನೆ ಮುಂದುವರೆಸುವ ಬಗ್ಗೆ ಕೂಡ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಶತಕೋಟಿ ಕೋವಿಡ್-19 ಡೋಸ್ ಹಾಕಿದ ಹಿನ್ನೆಲೆಯಲ್ಲಿ ನಿನ್ನೆ (ಅಕ್ಟೋಬರ್ 22ರಂದು) ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ನರೇಂದ್ರ ಮೋದಿ, ಶತಕೋಟಿ ಲಸಿಕೆ ಪ್ರಮಾಣ ಕೇವಲ ಸಂಖ್ಯೆಯಲ್ಲ, ಇದು ರಾಷ್ಟ್ರವಾಗಿ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ (Achievement Of Every Indian). ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದರ ಯಶಸ್ಸು ದಕ್ಕುತ್ತದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರನ್ನೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಶತಕೋಟಿ ಲಸಿಕೆ ಪೂರೈಕೆ ಕೇವಲ ಸಂಖ್ಯೆಯಷ್ಟೇ ಅಲ್ಲ, ಇದರಿಂದ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ. ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಜೀವಂತ ಉದಾಹರಣೆ
ಆರಂಭದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮದ ಬಗ್ಗೆ ಆತಂಕವಿತ್ತು. ಆದರೀಗ ಶಿಸ್ತು ಹೇಗೆ ಕೆಲಸ ಮಾಡುತ್ತದೆ ಎಂದು ಸಹ ತೋರಿಸಲಾಗಿದೆ. ನಮ್ಮ ಸರ್ಕಾರದ 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಘೋಷಣೆಗೆ ಜೀವಂತ ಉದಾಹರಣೆ ಈ ಲಸಿಕೆ ಅಭಿಯಾನ ಎಂದು ಹೇಳಿದ್ದರು.

ಕೋವಿಡ್ ಲಸಿಕೆ ಪೂರೈಕೆಯಲ್ಲಿ ನಾವು ವಿಐಪಿ ಸಂಸ್ಕೃತಿ (VIP Culture), ಉಳ್ಳವರಿಗೆ ಆದ್ಯತೆ ಎಂದು ನೋಡಲಿಲ್ಲ. ಅದರ ನೆರಳು ಕೂಡ ಸೋಂಕಲಿಲ್ಲ. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನದಿಂದ ಹುಟ್ಟಿಕೊಂಡಿದ್ದು, ವಿಜ್ಞಾನ ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದರು.

ಇದನ್ನು ಓದಿ: ಇಡುಕ್ಕಿ, ಮುಲ್ಲಪೆರಿಯರ್​ ಡ್ಯಾಂ ನೀರಿನ ಮಟ್ಟ ಹೆಚ್ಚಳ; ಮತ್ತೊಂದು ಪ್ರವಾಹ ಭೀತಿ

ಮೇಡ್ ಇನ್ ಇಂಡಿಯಾ
ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಧನಾತ್ಮಕವಾಗಿದ್ದಾರೆ. ಇಂದು ಭಾರತೀಯ ಕಂಪನಿಗಳಿಗೆ ದಾಖಲೆಯ ಹೂಡಿಕೆ ಬರುವುದರ ಜೊತೆಗೆ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈಗ ಮತ್ತೆ ಜನರಲ್ಲಿ ಆಶಾವಾದ ಮೂಡಿದೆ. ಮೊದಲು ವಿಜ್ಞಾನ-ತಂತ್ರಜ್ಞಾನದ ಕೆಲಸಗಳು ವಿದೇಶದಲ್ಲಿ ಆಗಿರುವ ಬಗ್ಗೆ ಕೇಳುತ್ತಿದ್ದೆವು. ಇಂದು ಎಲ್ಲರೂ 'ಮೇಡ್ ಇನ್ ಇಂಡಿಯಾ' (Made In India) ಬಗ್ಗೆ ಮಾತನಾಡುತ್ತಿದ್ದಾರೆ. ಸಾಂಕ್ರಾಮಿಕದ ಹೊರತಾಗಿಯೂ, ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸೆಂಟ್ರಲ್ ವಿಸ್ಟಾ (Central Vista), ಪಿಎಂ ಗತಿಶಕ್ತಿ (PM Gatishatki) ಯಂತಹ ಯೋಜನೆಗಳನ್ನು ಪರಿಚಯಿಸಿದ್ದೇವೆ ಎಂದು ಹೇಳಿದ್ದರು.

ಇದನ್ನು ಓದಿ: 100 ಕೋಟಿ ಲಸಿಕೆ ಸಾಧನೆ; ದೇಶದ ಜನರಿಗೆ ಮೋದಿ ಶುಭಾಶಯ; ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್​​

ಮುಂಬರುವ ಹಬ್ಬವನ್ನು ಎಚ್ಚರಿಕೆಯಿಂದ ಆಚರಿಸಿ
ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಿ, ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕಲು ಹೆಚ್ಚಿನ ಆದ್ಯತೆ ನೀಡಬೇಕು. ಲಸಿಕೆ ಹಾಕಿಸಿಕೊಂಡವರು ಇತರರನ್ನು ಪ್ರೋತ್ಸಾಹಿಸಬೇಕು.‌ ಒಂದು ಬಿಲಿಯನ್ ಲಸಿಕೆ ಹೆಗ್ಗುರುತನ್ನು ತಲುಪಿದರೂ ಕೋವಿಡ್ -19 ವಿರುದ್ಧದ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವಿಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಂದಿನ ದೀಪಾವಳಿ ಸಮಯದಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದರು.

ಟೀಕೆಗಳಿಗೆ ಉತ್ತರ

ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನು ಬಳಸುವುದು ಮಾತ್ರವಲ್ಲದೆ ನಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಸ್ಥಳೀಯತೆಗೆ ಆದ್ಯತೆ ನೀಡುವಂತೆ ಕೇಳಿಕೊಳ್ಳೋಣ. ಸಾಂಕ್ರಾಮಿಕ ರೋಗದ ವಿರುದ್ಧದ ಮೊದಲಿಗೆ ದೀಪ ಹಚ್ಚುವಂತೆ, ಚಪ್ಪಾಳೆ ತಟ್ಟುವಂತೆ ಹೇಳಿ ಆರೋಗ್ಯ ವಲಯ ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾಗಿದ್ದನ್ನು ಅನೇಕರು ಮೂದಲಿಸಿದ್ದರು. ದೀಪ ಹಚ್ಚಿದರೆ, ಗಂಟೆ ಬಡಿದರೆ, ಚಪ್ಪಾಳೆ ತಟ್ಟಿದರೆ ಸೋಂಕು ಹೋಗುತ್ತದೆಯೇ ಎಂದು ಕೆಲವರು ಪ್ರಶ್ನೆ ಮಾಡಿದರು. ಇಂದು ಅವರ ಸಂಶಯ ದೂರವಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
Published by:Seema R
First published: