ನವದೆಹಲಿ(ಮಾ. 27): ಭೂಕಕ್ಷೆಯ ಮೇಲಿರುವ ಸೆಟಿಲೈಟ್ಗಳನ್ನ ನಾಶ ಮಾಡಬಲ್ಲ ಮಿಷನ್ ಶಕ್ತಿ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮಿಷನ್ ಶಕ್ತಿಯಂಥ ಯೋಜನೆಯನ್ನು ಡಿಆರ್ಡಿಓದಂಥ ಸಂಬಂಧಿತ ವೈಜ್ಞಾನಿಕ ಸಂಸ್ಥೆಯವರು ಘೋಷಣೆ ಮಾಡುವ ಬದಲು ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಈ ಕೆಲಸ ಮಾಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.
ಇದನ್ನೂ ಓದಿ: 'ಮಿಷನ್ ಶಕ್ತಿ' ಯೋಜನೆ ಯಶಸ್ವಿ; ಬಾಹ್ಯಾಕಾಶದಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರ; ಪ್ರಧಾನಿ ಮೋದಿ
ದೇಶವನ್ನುದ್ದೇಶಿಸಿ ಮಾತನಾಡುವಾಗ ಈ ವಿಚಾರವನ್ನು ತಿಳಿಸಲು ಪ್ರಧಾನಿ ಅವರು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದಿದ್ದರೆ? ಪೂರ್ವಾನುಮತಿ ಇದ್ದದ್ದೇ ಆದಲ್ಲಿ ಆಯೋಗವು ಯಾವ ಆಧಾರದ ಮೇಲೆ ಮೋದಿ ಅವರ ಈ ಭಾಷಣಕ್ಕೆ ಅನುಮತಿ ಕೊಡಲಾಗಿದೆ? ಎಂದು ಯೆಚೂರಿ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹತ್ವದ ವಿಷಯ ತಿಳಿಸುವುದಾಗಿ ಟ್ವೀಟ್ ಮಾಡಿದ್ದ ಮೋದಿ ಬಗ್ಗೆ ಜನರ ನಿರೀಕ್ಷೆಗಳೇನಿತ್ತು?
ಇದೇ ವೇಳೆ, ಮಿಷನ್ ಶಕ್ತಿ ಯೋಜನೆಯನ್ನು ಸಾಕಾರ ಮಾಡಿದ್ದಕ್ಕೆ ಯೆಚೂರಿ ಅವರು ಭಾರತೀಯ ವಿಜ್ಞಾನಿಗಳನ್ನು ಕೊಂಡಾಡಿದ್ಧಾರೆ. “ಭೂಕಕ್ಷೆಯಲ್ಲಿರುವ ಸೆಟಿಲೈಟ್ಗಳನ್ನು ಟಾರ್ಗೆಟ್ ಮಾಡಬಲ್ಲ ಕ್ಷಿಪಣಿ ಸಾಮರ್ಥ್ಯ ತಮ್ಮಲ್ಲಿದೆ ಎಂದು 2012ರಲ್ಲೇ ಡಿಆರ್ಡಿಓ ಮುಖ್ಯಸ್ಥರು ಘೋಷಿಸಿದ್ದರು. ಖಂಡಾಂತರ ಕ್ಷಿಪಣಿ ಹಾಗೂ ಅಗ್ನಿ ಕ್ಷಿಪಣಿಗಳ ಯಶಸ್ಸಿನ ನಂತರ ಉಪಗ್ರಹ ನಾಶಕ ಕ್ಷಿಪಣಿ ಅಭಿವೃದ್ಧಿಗೆ ಭಾರತ ಮುಂದಾಯಿತು. ಮುಂಬರುವ ದಿನಗಳಲ್ಲಿ ಇನ್ನೂ ಎತ್ತರದ ಕಕ್ಷೆಗಳಲ್ಲಿರುವ ಸೆಟಿಲೈಟ್ಗಳನ್ನು ಗುರಿ ಮಾಡಬಲ್ಲ ಕ್ಷಿಪಣಿಗಳನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಮಾಡಬಲ್ಲರು,” ಎಂದು ಸಿಪಿಐಎಂ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಏನಿದು 'ಮಿಷನ್ ಶಕ್ತಿ'?; ಇಲ್ಲಿದೆ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಉತ್ತರ
ಇವತ್ತು, ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಶಕ್ತಿಯ ಪ್ರಯೋಗ ಯಶಸ್ವಿಯಾಗಿರುವುದನ್ನು ಘೋಷಿಸಿದರು. ಭೂಮಿಯ ಕೆಳ ಸ್ತರದ ಕಕ್ಷೆಯಲ್ಲಿದ್ದ ನಿರುಪಯುಕ್ತ ಉಪಗ್ರಹವೊಂದನ್ನು ಗುರಿ ಮಾಡಿ 3 ನಿಮಿಷದಲ್ಲಿ ಹೊಡೆದುರುಳಿಸಲಾಯಿತು. ಭೂಮಿಯಿಂದಲೇ ಲೇಸರ್ ಕಿರಣಗಳ ಮೂಲಕ ಉಪಗ್ರಹವನ್ನು ನಾಶ ಮಾಡಲಾಯಿತು.
ಉಪಗ್ರಹವನ್ನು ನಾಶ ಮಾಡುವ ಸಾಮರ್ಥ್ಯ ಈ ಮೊದಲು ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳಿಗೆ ಮಾತ್ರ ಇದ್ದವು. ಈಗ ಈ ಗುಂಪಿಗೆ ಭಾರತವೂ ಸೇರ್ಪಡೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ