ನಾಳೆ ಕಚ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ : ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

ನಿತ್ಯ 10 ಕೋಟಿ ಲೀಟರ್ ಸಾಮರ್ಥ್ಯ (100 ಎಂಎಲ್‌.ಡಿ) ಹೊಂದಿರುವ ಈ ಉಪ್ಪು ನೀರು ಶುದ್ಧೀಕರಣ ಘಟಕವು ನರ್ಮದಾ ಗ್ರಿಡ್, ಸೌನಿ ನೆಟ್‌ ವರ್ಕ್ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಸೌಕರ್ಯಗಳಿಗೆ ಪೂರಕವಾಗಿ ಗುಜರಾತ್‌ ನಲ್ಲಿ ನೀರಿನ ಸುರಕ್ಷತೆಯನ್ನು ಬಲಪಡಿಸುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ

  • Share this:
ನವದೆಹಲಿ(ಡಿಸೆಂಬರ್​. 14 ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ (ಡಿಸೆಂಬರ್ 15) ಗುಜರಾತ್ ರಾಜ್ಯದ ಕಚ್ ನ ಧೋರ್ಡೋಗೆ ಭೇಟಿ ನೀಡಲಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಸ್ಥಾವರ ಸೇರಿವೆ. ಬಳಿಕ ವೈಟ್ ರಾನ್‌ ಗೆ ಭೇಟಿ ನೀಡಲಿರುವ ಮೋದಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ವಿಶಾಲವಾದ ಕರಾವಳಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗುಜರಾತ್, ಕಚ್‌ ನ ಮಾಂಡ್ವಿಯಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕದ ಮೂಲಕ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವದ ಹೆಜ್ಜೆ ಇಡುತ್ತಿದೆ. ನಿತ್ಯ 10 ಕೋಟಿ ಲೀಟರ್ ಸಾಮರ್ಥ್ಯ (100 ಎಂಎಲ್‌.ಡಿ) ಹೊಂದಿರುವ ಈ ಉಪ್ಪು ನೀರು ಶುದ್ಧೀಕರಣ ಘಟಕವು ನರ್ಮದಾ ಗ್ರಿಡ್, ಸೌನಿ ನೆಟ್‌ ವರ್ಕ್ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಸೌಕರ್ಯಗಳಿಗೆ ಪೂರಕವಾಗಿ ಗುಜರಾತ್‌ ನಲ್ಲಿ ನೀರಿನ ಸುರಕ್ಷತೆಯನ್ನು ಬಲಪಡಿಸುತ್ತದೆ.

ಇದು ದೇಶದಲ್ಲಿ ಸುಸ್ಥಿರ ಮತ್ತು ಕೈಗೆಟುಕುವ ಜಲ ಸಂಪನ್ಮೂಲ ಕೊಯ್ಲಿಗೆ ಪ್ರಮುಖ ಮೈಲಿಗಲ್ಲಾಗಲಿದೆ. ಮುಂಡ್ರಾ, ಲಖಪತ್, ಅಬ್ದಾಸಾ ಮತ್ತು ನಖತ್ರಾನಾ ತಾಲೂಕು ಪ್ರದೇಶಗಳ ಸುಮಾರು 8 ಲಕ್ಷ ಜನರು ಈ ಸ್ಥಾವರದಿಂದ ಉಪ್ಪಿನ ಅಂಶ ಇಲ್ಲದ ನೀರನ್ನು ಪಡೆಯಲಿದ್ದಾರೆ, ಇದು ಭಚೌ, ರಾಪರ್ ಮತ್ತು ಗಾಂಧಿ ಧಾಮ ಮೇಲ್ದಂಡೆ ಜಿಲ್ಲೆಗಳಿಗೆ ಹೆಚ್ಚುವರಿ ನೀರಿನ ಹಂಚಿಕೆಗೂ ಸಹಕಾರಿಯಾಗುತ್ತದೆ.

ಗುಜರಾತ್‌ ನಲ್ಲಿ ನಿರ್ಮಾಣವಾಗುತ್ತಿರುವ ಐದು ಉಪ್ಪು ನೀರು ಶುದ್ಧೀಕರಣ ಘಟಕಗಳ ಪೈಕಿ ಕೂಡ ಒಂದು. ದಹೇಜ್ (100 ಎಂಎಲ್‌.ಡಿ), ದ್ವಾರಕಾ (70 ಎಂಎಲ್‌.ಡಿ), ಘೋಘಾ ಭಾವನಗರ (70 ಎಂಎಲ್‌.ಡಿ) ಮತ್ತು ಗಿರ್ ಸೋಮನಾಥ್ (30 ಎಂಎಲ್‌.ಡಿ) ಇತರೆ ಘಟಕಗಳಾಗಿವೆ.

ಇದನ್ನೂ ಓದಿ : ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ : ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

ವಿಘಕೋಟ್ ಗ್ರಾಮದ ಬಳಿಯ ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ದೇಶದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್ ಆಗಲಿದೆ. ಇದು 30 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಉತ್ಪಾದಿಸಲಿದೆ. 72,600 ಹೆಕ್ಟೇರ್ ಭೂಮಿಯಲ್ಲಿರುವ ಈ ಉದ್ಯಾನವನವು ಪವನ ಮತ್ತು ಸೌರವಿದ್ಯುತ್ ಸಂಗ್ರಹಣೆಗಾಗಿ ಮೀಸಲಾದ ಹೈಬ್ರೀಡ್ ಪಾರ್ಕ್ ವಲಯವನ್ನು ಹೊಂದಿರುತ್ತದೆ, ಜೊತೆಗೆ ಪವನ ಪಾರ್ಕ್ ಚಟುವಟಿಕೆಗಳಿಗೆ ವಿಶೇಷ ವಲಯವನ್ನು ಹೊಂದಿರುತ್ತದೆ.

ಕಚ್‌ ನ ಸರ್ಹಾದ್ ಡೈರಿ ಅಂಜರ್ ನಲ್ಲಿ ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಘಟಕಕ್ಕೆ ಶಂಕುಸ್ಥಾಪನೆಯನ್ನು ಕೂಡ ಪ್ರಧಾನ ಮಂತ್ರಿ ಮೋದಿ ನೆರವೇರಿಸದ್ದಾರೆ. ಸ್ಥಾವರಕ್ಕೆ 121 ಕೋಟಿ ರೂ. ವೆಚ್ಚವಾಗಲಿದ್ದು, ದಿನಕ್ಕೆ 2 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಪ್ರಧಾನಿ ನರೇಂದ್ರ  ಮೋದಿಯವರ ಪ್ರವಾಸದ ವೇಳೆ ಜೊತೆಗಿರುತ್ತಾರೆ.
Published by:G Hareeshkumar
First published: