PM Modi Interview | 2014ಕ್ಕೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸಂಖ್ಯಾಬಲದೊಂದಿಗೆ ಸರ್ಕಾರ ರಚಿಸುತ್ತೇವೆ; ಮೋದಿ ವಿಶ್ವಾಸ

ಎಲ್ಲಾ ಮತದಾರರು ಬೆಳಗ್ಗೆಯೇ ಬಂದು ತಮ್ಮ ಹಕ್ಕು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಮೊದಲು ಮತದಾನ ನಂತರ ಜಲಪಾನ. ಇಂದಿನ ಮತದಾರರು ತುಂಬಾ ಜಾಗೃತರಾಗಿದ್ದಾರೆ. ಪೋಲಿಂಗ್ ಬೂತ್​ಗಳಲ್ಲಿ ದೊಡ್ಡ ಕ್ಯೂ ಇರುತ್ತೆ. ಮತದಾರರು ಕುಡಿಯಲು ನೀರು ತೆಗೆದುಕೊಂಡು ಬನ್ನಿ. ಶಾಂತಿಯುತ ಮತದಾನದ ಮೂಲಕ ಅತಿಹೆಚ್ಚು ಮತದಾನ ಮಾಡೋಣ.

news18
Updated:April 9, 2019, 8:19 PM IST
PM Modi Interview | 2014ಕ್ಕೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸಂಖ್ಯಾಬಲದೊಂದಿಗೆ ಸರ್ಕಾರ ರಚಿಸುತ್ತೇವೆ; ಮೋದಿ ವಿಶ್ವಾಸ
ಪ್ರಧಾನಿ ಮೋದಿ ಮತ್ತು ಪ್ರಧಾನ ಸಂಪಾದಕ ರಾಹುಲ್ ಜೋಶಿ
news18
Updated: April 9, 2019, 8:19 PM IST
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಮ್ಮ ನೆಟ್​ವರ್ಕ್​ 18 ಚಾನೆಲ್​ಗೆ ಎರಡನೇ ಸಂದರ್ಶನ ನೀಡಿದ್ದಾರೆ. ನೆಟ್​ವರ್ಕ್​ 18 ಪ್ರಧಾನ ಸಂಪಾದಕರಾದ ರಾಹುಲ್​ ಜೋಶಿ ಅವರು ನಡೆಸಿಕೊಟ್ಟ ಈ ಸಂದರ್ಶನದಲ್ಲಿ ಪ್ರಧಾನಿ ಮೋದಿ ಐದು ವರ್ಷದ ಆಡಳಿತ, ದೇಶದ ಆರ್ಥಿಕತೆ, ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಉಗ್ರರ ಮೇಲಿನ ದಾಳಿ, ದೇಶದ ರಕ್ಷಣೆ, ಕಾಶ್ಮೀರದ ವಿಚಾರವಾಗಿ ಬಿಜೆಪಿ ನಿಲುವು... ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

 • ರಾಹುಲ್ ಜೋಶಿ: ನ್ಯೂಸ್ 18 ನೆಟ್ ವರ್ಕ್ ಗೆ ಸಂದರ್ಶನ ನೀಡಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದಗಳು. ಇದು ನಿಮ್ಮ ಅಧಿಕಾರಾವಧಿಯಲ್ಲಿ ನಮಗೆ ನೀಡುತ್ತಿರುವ ಎರಡನೇ ಸಂದರ್ಶನವಾಗಿದೆ. ಈ ಸಂದರ್ಶನ ನಮ್ಮ ನೆಟ್​ವರ್ಕ್ ನ 20 ಚಾನೆಲ್ ಮೂಲಕ 70 ಕೋಟಿ ಜನರನ್ನು ತಲುಪಲಿದೆ.


Loading...

ನರೇಂದ್ರ ಮೋದಿ: ಎಲ್ಲಾ ವೀಕ್ಷಕರಿಗೂ ಧನ್ಯವಾದಗಳು ಮತ್ತು ನವರಾತ್ರಿಯ ಶುಭಾಶಗಳು. • ರಾಹುಲ್ ಜೋಶಿ: ಪ್ರಧಾನಿ ಮೋದಿ ಅವರೆ, ಇಂದು ಬಿಜೆಪಿ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಿಮ್ಮ ಪ್ರಕಾರ ಪ್ರಮುಖ ಅಂಶಗಳು ಯಾವುವು?


ನರೇಂದ್ರ ಮೋದಿ: ಇದು ಜವಾಬ್ದಾರಿಯುತ ರಾಜಕೀಯ ಪಕ್ಷ ನೀಡಿರುವ ಪ್ರಬುದ್ದತೆಯ ಪ್ರಣಾಳಿಕೆಯಾಗಿದ್ದು, ದೇಶದ ಆಡಳಿತವನ್ನು ಮುನ್ನಡೆಸಲು ನೀಡಿರುವ ಭರವಸೆಗಳಾಗಿವೆ. ಇದೇ ಮೊದಲ ಬಾರಿಗೆ 2022 ಮತ್ತು 2024ರಲ್ಲಿ ರೂಪಿಸಲಿರುವ ರೋಡ್ ಮ್ಯಾಪ್​ನ್ನು ಕೂಡ ಒಳಗೊಂಡಿದೆ. ಇದರ ಅರ್ಥ ಸರ್ಕಾರದ ಹೊಣೆಗಾರಿಕೆ ಕೇವಲ 5 ವರ್ಷಗಳಲ್ಲಿ ಮುಗಿಯುವುದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ನಾವು ಸಾಧಿಸಬಹುದಾದ 75 ಹಂತಗಳನ್ನು ತೆಗೆದು ಹಾಕಿದ್ದೇವೆ. ಸ್ವಾತಂತ್ರ್ಯ ಬಂದು 100 ವರ್ಷಗಳ ನಂತರ ಭಾರತ ಎಲ್ಲಿರಬೇಕು ಎಂಬ ಬಗ್ಗೆ ಇನ್ನು ಐದು ವರ್ಷಗಳಲ್ಲಿ ನಾವು ಅಡಿಪಾಯ ಹಾಕಿಕೊಳ್ಳಬೇಕು. ಕಪ್ಪು ಹಣ ಹಾಗೂ ಭ್ರಷ್ಟಚಾರವನ್ನು ಕಿತ್ತುಹಾಕಬೇಕು. ದೇಶದ ರಕ್ಷಣೆ ಕುರಿತು ಚರ್ಚೆ ನಡೆಸಬೇಕಿದೆ. ಈ ಹಿಂದಿನ ಪ್ರಣಾಳಿಕೆಗಳಲ್ಲಿ ಬಡವರಿಗೆ, ದಲಿತರಿಗೆ, ಬುಡಕಟ್ಟು ವರ್ಗದವರಿಗೆ ಅನ್ಯಾಯವಾಗಿತ್ತು. ಅವರ ಅಭಿವೃದ್ಧಿಗೆ ನಿಗದಿತ ಅವಧಿಯೊಳಗೆ ಕಾರ್ಯಕ್ರಮ ರೂಪಿಸಿರಲಿಲ್ಲ. ಮಹಿಳೆಯರಿಗೆ, ಹಿರಿಯ ನಾಯರಿಕರಿಗೆ, ಯುವಕರಿಗೆ  ಏನು ಮಾಡಬೇಕು?. ಗ್ರಾಮೀಣರ ಹಾಗೂ ಮಹಿಳೆಯರ ಬದಲಾವಣೆಗೆ ಏನು ಮಾಡಬಹುದು? ಮತ್ತು ಹೇಗೆ ಆಧುನಿಕ ಭಾರತವನ್ನು ನಿರ್ಮಿಸಬೇಕು? ಸಾಮಾನ್ಯ ಜನರ ಬಯಕೆಯನ್ನು ಈಡೇರಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು? ಸಾಮಾನ್ಯ ಜನರ ಅವಶ್ಯಕತೆಗಳಾದ ವಿದ್ಯುತ್, ನೀರು, ರಸ್ತೆಯಂತಹ ವಿಷಯಗಳ ಮೇಲೆ ನಾವು ಹೆಚ್ಚಿನ ಗಮನ ಹೊಂದಿದ್ದೇವೆ. ಇವುಗಳ ಅವಶ್ಯಕತೆಗಳನ್ನು ಐದು ವರ್ಷಗಳಲ್ಲಿ ಪೂರೈಸಿದ್ದೇವೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಸಾಮಾನ್ಯ ಜನರ ಬಯಕೆಗಳನ್ನು ಪೂರೈಸಿ, ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. • ರಾಹುಲ್ ಜೋಶಿ: ಬಿಜೆಪಿ ಪ್ರಣಾಳಿಕೆ ಇತರೆ ರಾಜಕೀಯ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಗಿಂತ ಹೇಗೆ ಭಿನ್ನ?


ನರೇಂದ್ರ ಮೋದಿ: ಹೆಸರಲ್ಲಿಯೇ ಬಿಜೆಪಿ ಪ್ರಣಾಳಿಕೆ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಕಲ್ಪದ ಕುರಿತು ಘೋಷಣೆ ಮಾಡಿದ್ದೇವೆ. ಪ್ರಬುದ್ಧ ವರ್ಗಗಳು ನಮ್ಮಿಬ್ಬರ ಪ್ರಣಾಳಿಕೆಯನ್ನು ಹೋಲಿಕೆ ಮಾಡಬೇಕು ಎಂಬುದನ್ನು ಇಚ್ಛಿಸುತ್ತೇನೆ. ನಮ್ಮ ಪ್ರಣಾಳಿಕೆಯನ್ನು ಸಾಧನೆಯ ದಾಖಲೆಯ ಮೇಲೆ ನೋಡಬೇಕು. ಕಾಂಗ್ರೆಸ್ ಸಾಧನೆಯ ದಾಖಲೆ ಆಧಾರದ ಮೇಲೆ ಅವರ ಪ್ರಣಾಳಿಕೆಯನ್ನು ತೂಗಬೇಕಿದೆ. ಹಲವು ಮಾನದಂಡಗಳಲ್ಲಿ ನಾವು ಭಿನ್ನವಾಗಿದ್ದೇವೆ. ಭಯೋತ್ಪಾದನೆಯನ್ನು ತೊಡೆದು ಹಾಕಲು ನಾವು ಬದ್ಧರಾಗಿದ್ದೇವೆ. ಭಯೋತ್ಪಾದಕರು ಅನೈತಿಕರು, ಅವರನ್ನು ನಾವು ಮಾನಸಿಕ ಯುದ್ಧದ ಮೂಲಕ ಜಯಿಸಿದ್ದೇವೆ. ಕಾಂಗ್ರೆಸ್ ಪ್ರಣಾಳಿಕೆ ಮೃದು ಹಾಗೂ ಭಯೋತ್ಪಾದಕವಾಗಿದೆ. ಸೇನೆ ಬಗ್ಗೆ ಅವರ ದೃಷ್ಟಿಕೋನ ಪಾಕಿಸ್ತಾನದ ಪರವಾಗಿದೆ. ಯಾವುದೇ ದೇಶಾಭಿಮಾನಿಯೂ ಈ ಭಾಷೆಯನ್ನು ಸಹಿಸುವುದು ಅಸಾಧ್ಯ. ಅವರ ಅಫ್ಸ್ಪಾ (ಎಎಫ್​ಎಸ್​ಪಿಎ) ತೆಗೆದು ಹಾಕುವುದರ ಬಗ್ಗೆ ಅವರ ಪ್ರಣಾಳಿಕೆ ತಿಳಿಸುತ್ತದೆ. ಇದು ಯೋಧರ ಕೈಯಿಂದ ಶಸ್ತ್ರಾಸ್ತ್ರಗಳನ್ನು ತೆಗೆದುಹಾಕುವ ಬಗ್ಗೆ ಹೇಳುತ್ತದೆ. • ರಾಹುಲ್ ಜೋಶಿ: ಅಫ್ಸ್ಪಾವನ್ನು ಹೇಗೆ ನೋಡುತ್ತೀರಾ? ನಿಗದಿತ ಸಮಯದಲ್ಲಿ ಇದನ್ನು ನಿಭಾಯಿಸಬಹುದೇ?


ನರೇಂದ್ರ ಮೋದಿ: ಅರುಣಾಚಲ ಪ್ರದೇಶದಲ್ಲಿ ಮಾಡಿದ ರೀತಿಯಲ್ಲಿಯೇ ಅಫ್ಸ್ಪಾ ಅವಶ್ಯಕತೆ ಇದೆ ಎಂಬ ವಾತಾವರಣವನ್ನು ನಾವು ಸೃಷ್ಟಿಸಬೇಕಿದೆ. 1980ರಿಂದ ಈ ಬಗ್ಗೆ ಕ್ರಮ ತೆಗೆದುಕೊಂಡವರಲ್ಲಿ ನಾವು ಮೊದಲಿಗರು ಆದರೆ, ಕಾನೂನು ಮತ್ತು ಸುವ್ಯವಸ್ಥೆಗಳನ್ನು ನಾವು ನಿರ್ವಹಿಸಲೇಬೇಕು. ಸರ್ಕಾರಗಳು ತಮ್ಮ ಸೇನಾಬಲವನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ. ಹೀಗಿದ್ದಾಗ ಮಾತ್ರ ನಾವು ನೈತಿಕ ಯುದ್ಧ ಮಾಡಲು ಸಾಧ್ಯ. ಜಮ್ಮ ಮತ್ತು ಕಾಶ್ಮೀರದಲ್ಲಿ ಅಫ್ಸ್ಪಾವನ್ನು ತೆಗೆದು ಹಾಕುವುದರಿಂದ ಯೋಧರನ್ನು ಗಲ್ಲಿಗೆ ಹಾಕಿದಂತಾಗುತ್ತದೆ. ನಮ್ಮ ಯೋಧರಿಗೆ ಇಂತಹ ಪರಿಸ್ಥಿತಿ ಬಂದೊದಗಲು ನಾನು ಬಿಡುವುದಿಲ್ಲ. ​

 • ರಾಹುಲ್​ ಜೋಶಿ: ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಸೇನಾ ತುಕಡಿಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಫೆಬ್ರವರಿ 25ರಂದು ನಾನು ರೈಸಿಂಗ್ ಇಂಡಿಯಾ ಸಮ್ಮೇಳನದಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ. ಈ ಭೇಟಿಯಾಗಿ ಕೆಲವೇ ಗಂಟೆಗಳಲ್ಲಿ ಬಾಲಾಕೋಟ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಜೆ ನಿಮ್ಮ ಮನಸಲ್ಲಿ ಏನಿದೆ ಎಂದು ಯಾರೂ ಊಹಿಸುವುದು ಸಾಧ್ಯವಾಗಿರಲಿಲ್ಲ. ಆದರೆ, ಮರುದಿನ ಬೆಳಗ್ಗೆ 3.40ಕ್ಕೆ ಸೈನಿಕ ಕಾರ್ಯಾಚರಣೆ ಯಶಸ್ವಿಯಾದ ಮಾಹಿತಿ ನಿಮಗೆ ಲಭ್ಯವಾಗಿತ್ತು. ಆ 10-15 ದಿನಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಏನಿತ್ತು?


ಮೋದಿ: ನಾನು ಮೊದಲ ದಿನವೇ ಈ ಕುರಿತು ಘೋಷಿಸಿದ್ದೆ. ನನ್ನ ಆಂಗಿಕ ಭಾಷೆ ಹಾಗೂ ಆಗಿನ ನನ್ನ ಭಾಷಣಗಳನ್ನು ಗಮನಿಸಿದರೆ ನಿಮಗದು ಅರ್ಥವಾಗುತ್ತದೆ ಎಂಬುದು ನನ್ನ ಭಾವನೆ. ಪಾಕಿಸ್ತಾನ ಹಾಗೂ ಉಗ್ರಗಾಮಿಗಳು ಭಾರತದ ಮೇಲೆ ದಾಳಿ ನಡೆಸಿ, ದೊಡ್ಡ ತಪ್ಪಿಗೆ ದಾರಿ ಮಾಡಿಕೊಟ್ಟಿದ್ದರು. ಆದರೆ, ನಾನು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ. ಬದಲಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ. ಸೈನಿಕ ಕಾರ್ಯಾಚರಣೆ ನಡೆಸುವ ಕುರಿತು ರಕ್ಷಣಾ ಪಡೆ ಹಾಗೂ ನಮ್ಮ ಅಧಿಕಾರಿಗಳಿಂದ ಸಲಹೆ ಪಡೆದಿದ್ದೆ. ಅಷ್ಟರಲ್ಲಾಗಲೆ ನಮ್ಮ ರಕ್ಷಣಾ ಪಡೆ ಪುಲ್ವಾಮಾ ದಾಳಿ ಹಿಂದಿನ ಕೆಲವು ಉಗ್ರರನ್ನು ಸದೆಬಡಿದಿತ್ತು. ಇದು ನಿಜಕ್ಕೂ ಒಂದು ದೊಡ್ಡ ಸಾಧನೆಯೇ ಸರಿ. ಆದರೆ, ಇದು ನನಗೆ ತೃಪ್ತಿ ನೀಡಿರಲಿಲ್ಲ. ನಾವು ಉಗ್ರಗಾಮಿಗಳ ಹೃದಯ ಭಾಗಕ್ಕೆ ಆಘಾತ ನೀಡದಿದ್ದಲ್ಲಿ ಅವರು ಪಾಠ ಕಲಿಯುವುದಿಲ್ಲ. 26/11 ಹಾಗೂ ಪಾರ್ಲಿಮೆಂಟ್ ಮೇಲಿನ ದಾಳಿ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಆದರೆ, ಈಗಿನ ದಾಳಿ ಅದಕ್ಕಿಂತ ಕ್ರೂರವಾಗಿತ್ತು. ಹೀಗಾಗಿಯೇ ನಾವು ಉರಿ ನಂತರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡುವ ತೀರ್ಮಾನಕ್ಕೆ ಬಂದೆವು. ವಾಯು ದಾಳಿ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ ನಾವು ಇದರಲ್ಲಿ ಸಫಲರಾದೆವು. • ರಾಹುಲ್​ ಜೋಶಿ: ನಿಮ್ಮ ಪಕ್ಷ ಆರ್ಟಿಕಲ್ 35ಎ & 370 ತೆಗೆದುಹಾಕುವುದರ ಪರ ಇದೆ. ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಇದರ ಉಲ್ಲೇಖವಿದೆ. ನಿಮ್ಮ ಪ್ರಣಾಳಿಕೆ ಬಿಡುಗಡೆಯಾದಾಗ ವಿಪಕ್ಷ ಈ ವಿಚಾರವಾಗಿ ಮುಗಿಬಿತ್ತು, ಕಾಶ್ಮೀರದ ಕೆಲ ಪಕ್ಷಗಳು ರಕ್ತಪಾತದ ಮಾತನಾಡಿದ್ವು. ಫಾರೂಖ್ ಅಬ್ದುಲ್ಲಾ & ಮೆಹಬೂಬಾ ಮುಫ್ತಿ ಈ ಬಗ್ಗೆ ಮಾತನಾಡಿದ್ರು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?


ನರೇಂದ್ರ ಮೋದಿ: ಕಾಶ್ಮೀರದಲ್ಲಿ ಸಮಸ್ಯೆಗೆ ಕಾರಣ ಅಲ್ಲಿರುವ ಸುಮಾರು 50 ರಾಜಕೀಯ ಕುಟುಂಬಗಳು. ಸಮಸ್ಯೆಗೆ ಅವರು ಹಾಲೆರೆಯುತ್ತಿದ್ದಾರೆ. ಕಾಶ್ಮೀರ ಜನರಿಗೆ ಯಾವುದೇ ಯೋಜನೆ ಕೊಡೋದು ಅವರಿಗೆ ಬೇಕಿಲ್ಲ. ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನ ಬಳಸಿಕೊಳ್ತಿದ್ದಾರೆ. ಉಗ್ರರ ರಕ್ಷಣೆಗಾಗಿ ಪಾಕಿಸ್ತಾನ ಕಲ್ಲು ತೂರುವವರಿಗೆ ಹಣಕಾಸಿನ ಸಹಾಯ ಮಾಡ್ತಿದೆ. ಆದರೆ ಉಗ್ರರ ಬೆಂಬಲಿಗರ ಮೇಲೆ ಎನ್​ಐಎ ದಾಳಿ ಬಳಿಕ ಜನ ಹೊರಬಂದು ಚಪ್ಪಾಳೆ ತಟ್ಟುತ್ತಿದ್ದಾರೆ. ಕಳೆದ 50 ವರ್ಷಗಳಿಂದ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡ್ತಿರೋ ರಾಜಕೀಯ ಕುಟುಂಬಗಳಿಂದ ಜನ ಮುಕ್ತಿ ನಿರೀಕ್ಷಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಜನ ಬದಲಾವಣೆ ನಿರೀಕ್ಷಿಸುತ್ತಿದ್ದು, ಅದು ಆರ್ಟಿಕಲ್ 35ಎ ಅಥವಾ 370 ಕೂಡ ಆಗಿರಬಹುದು. • ರಾಹುಲ್​ ಜೋಶಿ: ಚುನಾವಣೆ ಬಗ್ಗೆ ಮಾತನಾಡೋಣ. ರಾಷ್ಟ್ರೀಯತೆಯೇ ಇವತ್ತು ಅತಿದೊಡ್ಡ ವಿಷಯ ಅನಿಸುತ್ತಾ ನಿಮಗೆ? ನೈಜ ವಿಚಾರಗಳಿಂದ ನೀವು ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದೀರಾ ಅಂತ ವಿಪಕ್ಷಗಳು ಹೇಳುತ್ತಿವೆ.


ನರೇಂದ್ರ ಮೋದಿ: ರಾಷ್ಟ್ರೀಯತೆ ಅಂದ್ರೆ ‘ಭಾರತ್ ಮಾತಾ ಕೀ ಜೈ’. ನಾನು ‘ಭಾರತ್ ಮಾತಾ ಕೀ ಜೈ’ ಎಂದು, ನನ್ನ ತಾಯಿನಾಡು ನೋವಿನಲ್ಲಿದ್ರೆ, ನನ್ನ ರಾಷ್ಟ್ರೀಯತೆ ನ್ಯಾಯಬದ್ಧವೇ? ನಾನು ಸ್ವಚ್ಛ ಭಾರತ ನೀಡಬೇಕು ಎಂದು ಪ್ರಯತ್ನಿಸಿದರೆ ಅದು ರಾಷ್ಟ್ರೀಯತೆ ಅಲ್ಲವೇ? ಬಡವರ ತಲೆ ಮೇಲೆ ಸೂರು ಕೊಟ್ಟರೆ ಅದು ರಾಷ್ಟ್ರೀಯತೆ ಅಲ್ಲವೇ? ಬಡವರ ಬಳಿ ಚಿಕಿತ್ಸೆಗೆ ಹಣವಿಲ್ಲದೇ ಸಾವಿಗೀಡಾದ್ರೆ ಅದು ರಾಷ್ಟ್ರೀಯತೆಯೇ? ರಾಷ್ಟ್ರೀಯತೆ ಅಂದ್ರೇನು? ಬಡವರನ್ನು ಸಾಯಲು ಬಿಡಬೇಕೇ ಅಥವಾ ಆಯುಷ್ಮಾನ್ ಭಾರತ್ ಅಡಿ 5 ಲಕ್ಷ ನೀಡಬೇಕಾ? ಇದು ರಾಷ್ಟ್ರೀಯತೆ ಅಲ್ಲವೇ? ರೈತರು ಆಧುನಿಕ ತಂತ್ರಜ್ಞಾನ ಬಳಸಿ ತಮ್ಮ ಬೆಳೆಗೆ ಗರಿಷ್ಠ ಬೆಲೆಗಿಂತ ಒಂದೂವರೆ ಪಟ್ಟು ಹೆಚ್ಚು ಪಡೆಯೋದು ರಾಷ್ಟ್ರೀಯತೆ ಅಲ್ಲವೇ? ನಮ್ಮ ಸೇನೆಗೆ ಆಧುನಿಕ ಶಸ್ತ್ರಾಸ್ತ್ರ ನೀಡೋದು ರಾಷ್ಟ್ರೀಯತೆ ಅಲ್ಲವೇ? ಅದಕ್ಕೇ ನಾನು ಹೇಳೋದು ರಾಷ್ಟ್ರೀಯತೆಯ ವಿವರಣೆ ಕ್ರಿಯಾತ್ಮಕವಾಗಿದೆ. ‘ಭಾರತ್ ಮಾತಾ ಕೀ ಜೈ’ ಅಂದ್ರೆ ಭಾರತದ 130 ಕೋಟಿ ಜನರ ಜೈ ಎಂದೇ ಅರ್ಥ. ಜನರ ಬದುಕು ಹಸನಾಗಲು ಅವಕಾಶ ಕೊಡೋದು ನನ್ನ ದೃಷ್ಟಿಯಲ್ಲಿ ರಾಷ್ಟ್ರೀಯತೆ. ಇದೆಲ್ಲಾ ರಾಷ್ಟ್ರೀಯತೆ ಅನ್ನೋದಾದ್ರೆ ನಾವೆಲ್ಲಾ ರಾಷ್ಟ್ರೀಯತಾವಾದಿಗಳು. ದೇಶದ 125 ಕೋಟಿ ಜನರ ಒಳಿತಿಗಾಗಿ ನಮ್ಮ ರಾಷ್ಟ್ರೀಯತೆ. • ರಾಹುಲ್​ ಜೋಶಿ: ರಾಷ್ಟ್ರೀಯತೆಯ ಹೊರತಾಗಿ, ಮತದಾರರ ಮುಂದೆ ಬೇರೆ ಯಾವೆಲ್ಲಾ ವಿಷಯಗಳನ್ನು ಪ್ರಮುಖವಾಗಿ ಮಂಡಿಸುತ್ತೀರಾ?


ನರೇಂದ್ರ ಮೋದಿ: ಅಭಿವೃದ್ಧಿಗೆ ಮೊದಲ ಆದ್ಯತೆ ಮತ್ತು ಅದಕ್ಕೆ ಎರಡು ಸ್ಥರಗಳಿವೆ. ಒಂದು ಸಾಮಾಜಿಕ ಸೌಕರ್ಯಗಳಿಗೆ ಸಂಬಂಧಿಸಿದ್ದು, ಇನ್ನೊಂದು ಭೌತಿಕ ಸೌಕರ್ಯ. ಕನಿಷ್ಠ ಸೌಲಭ್ಯಗಳೂ ಇಲ್ಲದ ಇನ್ನೂ ಹಲವರು ಭಾರತದಲ್ಲಿದ್ದಾರೆ. ಮನೆಯಿಲ್ಲದವರಿಗೆ ನಾವು ಮನೆ ಒದಗಿಸಬೇಕಿದೆ, ಬಡವರಿಗೆ ವೈದ್ಯಕೀಯ ಸೇವೆ ಹಾಗೂ ಶಿಕ್ಷಣ ಒದಗಿಸಬೇಕಿದೆ. ಪ್ರತಿಯೊಬ್ಬ ನಾಗರೀಕನೂ ಗೌರವದಿಂದ ಬದುಕುವ ಅವಕಾಶ ಕಲ್ಪಿಸಬೇಕಿದೆ. ಭಾರತದ ಮಧ್ಯಮವರ್ಗವೇ ಅತಿದೊಡ್ಡ ಶಕ್ತಿ. ಹಿಂದಿನ ಸರ್ಕಾರ ಮಧ್ಯಮ ವರ್ಗವನ್ನ ನಿರ್ಲಕ್ಷಿಸಿದೆ. ದೇಶವನ್ನ ಮುನ್ನಡೆಸಲು ಮಧ್ಯಮವರ್ಗ ಪ್ರಮುಖ ಪಾತ್ರ ವಹಿಸಲಿದೆ. ಮಧ್ಯಮ ವರ್ಗದವರು ನ್ಯಾಯ ವ್ಯವಸ್ಥೆಯನ್ನು ಗೌರವಿಸುತ್ತಾರೆ, ಕಾನೂನು ಪಾಲಿಸುತ್ತಾರೆ. ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರುತ್ತಾರೆ. ಮಧ್ಯಮ ವರ್ಗದವರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಾರೆ ಹಾಗೂ ಸರ್ಕಾರದಿಂದ ಕನಿಷ್ಠ ಸಹಕಾರ ಬಯಸುತ್ತಾರೆ. ಅವರನ್ನು ದೌರ್ಜನ್ಯದಿಂದ ರಕ್ಷಿಸೋದು ನಮ್ಮ ಕರ್ತವ್ಯ. ಕಾಂಗ್ರೆಸ್ ಪಕ್ಷ ಮಧ್ಯಮ ವರ್ಗವನ್ನು ಅವಮಾನಿಸುತ್ತಿದೆ. ಕಳೆದ ಕೆಲ ದಿನಗಳಲ್ಲಿ ಅವರ ಹೇಳಿಕೆಗಳು ಸ್ವೀಕಾರರ್ಹವಲ್ಲ. ಗ್ರಾಮೀಣ ಭಾರತದಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ದ್ವಿಗುಣ ಮಾಡಲು ನಾವು ಕೆಲಸ ಮಾಡಿದ್ದೇವೆ, ಅವರೆಲ್ಲಾ 60 ವರ್ಷ ದಾಟಿನ ನಂತರ ಪೆನ್ಷನ್ ಪಡೆಯುವಂತೆ ಮಾಡುತ್ತಿದ್ದೇವೆ. ಪೆನ್ಷನ್ ಸಿಗುತ್ತೆ ಅಂತ ಅವರೇನೂ ಮನೆಯಲ್ಲಿ ಕೂರುವಂತಿಲ್ಲ. ಒಬ್ಬ ಶಿಕ್ಷಕ ನಿವೃತ್ತನಾದ್ಮೇಲೆ ಪೆನ್ಷನ್ ಪಡೆಯುತ್ತಾನೆ. ಆದರೂ ತನ್ನನ್ನ ತಾನು ಚಟುವಟಿಕೆಯಲ್ಲಿಡಲು ಮನೆ ಪಾಠ ಮಾಡುತ್ತಾನೆ. ರೈತರು ಹಾಗೂ ಕೃಷಿ ಕಾರ್ಮಿಕರ ಭವಿಷ್ಯದ ಭದ್ರತೆಗಾಗಿ ನಾವು ಪೆನ್ಷನ್ ನೀಡುತ್ತಿದ್ದೇವೆ. ಸಣ್ಣ ವ್ಯಾಪಾರಿಗಳಿಗೂ ಪೆನ್ಷನ್ ಸ್ಕೀಂನಲ್ಲಿ ತಂದಿದ್ದೇವೆ. 100 ಕೋಟಿ ಹೂಡಿಕೆಯ ನಿರೀಕ್ಷೆಯಿದ್ದು, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಇದರಿಂದ ಅಪಾರ ಉದ್ಯೋಗ ಸೃಷ್ಟಿಯಾಗಲಿದೆ. ಈ ಎಲ್ಲಾ ಕನಸು, ನಿರೀಕ್ಷೆಗಳಿಂದ ಕೂಡಿದೆ ನಮ್ಮ ಪ್ರಣಾಳಿಕೆ ಸಂಕಲ್ಪ ಪತ್ರ. 5 ವರ್ಷಗಳ ಸಮರ್ಥ ಆಡಳಿತ, ಈ ಸಂಕಲ್ಪ ಪತ್ರವನ್ನ ರೂಪಿಸಿದೆ. ನಾವು ಮಾತ್ರ ಕೊಟ್ಟ ಮಾತನ್ನ ಮುಂದಿನ 5 ವರ್ಷಗಳಲ್ಲಿ ಈಡೇರಿಸಲು ಸಾಧ್ಯ. ಮುಂದಿನ 24 ಗಂಟೆ ಸುದ್ದಿಯಲ್ಲಿ ಹೆಡ್​ಲೈನ್ ಆಗಲಷ್ಟೇ ನಾವು ಸಂಕಲ್ಪ ಪತ್ರ ಬಿಡುಗಡೆ ಮಾಡಿಲ್ಲ. ನಮ್ಮ ಸಂಕಲ್ಪ ಪತ್ರ ಕೇವಲ 24 ತಾಸು ಇರಲ್ಲ, 2024ರವರೆಗೂ ಇರಲಿದೆ. ಸಾಮಾನ್ಯ ನಾಗರೀಕರ ಬದುಕು ಬದಲಿಸಲು ನಾವು ಕಟೀಬದ್ಧವಾಗಿದ್ದೇವೆ. • ರಾಹುಲ್​ ಜೋಶಿ: ರಫೇಲ್ ಆರೋಪದ ಮೂಲಕ ವಿಪಕ್ಷ ನಿಮ್ಮನ್ನ ಸಿಲುಕಿಸಲು ಯತ್ನಿಸುತ್ತಿದೆ. ‘ಚೌಕಿದಾರ್ ಚೋರ್ ಹೈ’ ಎಂದೂ ಘೋಷಣೆ ಕೂಗುತ್ತಿದ್ದಾರೆ. ಇದನ್ನ ನೀವು ‘ನಾನೂ ಚೌಕಿದಾರ್’ ಎಂದು ಬದಲಿಸಿದ್ರಿ, ಈ ಐಡಿಯಾ ನಿಮಗೆ ಎಲ್ಲಿಂದ ಸಿಕ್ತು? ಸಾರ್ವಜನಿಕರ ಎದುರು ಹೇಗೆ ಇದನ್ನ ತಂದ್ರಿ?


ನರೇಂದ್ರ ಮೋದಿ: ರಫೇಲ್ ವಿಷಯವನ್ನ ವಿಪಕ್ಷವೂ ಹೆಚ್ಚಾಗಿ ಬಳಸ್ತಿಲ್ಲ. ಓರ್ವ ವ್ಯಕ್ತಿ ಮಾತ್ರ ಅದೇ ಸುಳ್ಳನ್ನ ಪುನರುಚ್ಚರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್, ಸಿಎಜಿ, ಎಲ್ಲೆಡೆ ಆ ಸುಳ್ಳು ತಿರಸ್ಕೃತವಾಗಿದೆ. ಬೋಫೋರ್ಸ್​ನಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ಕೆಲ ಪತ್ರಕರ್ತರೂ ಪ್ರಶ್ನೆ ಎತ್ತಿದ್ದಾರೆ. ಆದರಿಲ್ಲಿ ಓರ್ವ ವ್ಯಕ್ತಿ ಯಾವುದೇ ಆಧಾರವಿಲ್ಲದೇ ಮಾತನಾಡ್ತಿದ್ದಾರೆ, ಎಷ್ಟು ದಿನ ನಡೆಯಬಹುದು ಇದು? ಇದು ರಾಜಕೀಯವಾಗಿ ಸಹಕಾರಿಯಾಗೋದಿಲ್ಲ ಅಂತ ಅವರ ಸಲಹೆಗಾರರೂ ಹೇಳಿದ್ದಾರೆ. ವಿಷಯ ಬಿಟ್ಹಾಕುವಂತೆ ಅವರ ಆಪ್ತರೇ ಹೇಳಿದ್ದಾರೆ. ಆದ್ರೆ, ತನ್ನ ತಂದೆಗೆ ಅಂಟಿರುವ ಬೋಫೋರ್ಸ್ ಕಲೆಯನ್ನ ಅಳಿಸಿಹಾಕಲು ರಫೇಲ್ ವಿಷಯ ಎತ್ತಿಕೊಂಡಿದ್ದಾರೆ. ರಕ್ಷಣಾ ಹಗರಣಗಳಿಂದ ಕಾಂಗ್ರೆಸ್ ನಾಶವಾಗಿದೆ. ಹೀಗಾಗಿ ಎಲ್ಲಾ ಸರ್ಕಾರಗಳ ಮೇಲೆ ಅದೇ ಆರೋಪ ಮಾಡ್ತಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಶವಪೆಟ್ಟಿಗೆ ಹಗರಣದ ಮೂಲಕ ಜಾರ್ಜ್ ಫರ್ನಾಂಡಿಸ್​ರನ್ನ ಸಿಲುಕಿಸಲು ಯತ್ನಿಸಿದ್ರು. ಇದು ಸುಳ್ಳು ಎಂದು ಸಾಬೀತಾಯ್ತು. ಅದೇ ರೀತಿ ಈಗ ಅವರು ನನ್ನನ್ನ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಸಾರ್ವಜನಿಕವಾಗಿ ಸಾಕ್ಷ್ಯ ನೀಡುವಂತೆ ನಾವು ಕೇಳುತ್ತಿದ್ದು, ಅವರು ನಿರಾಕರಿಸುತ್ತಿದ್ದಾರೆ. ಅವರು ಬರೀ ಸುಳ್ಳು ಹೇಳ್ತಿದ್ದಾರೆ. ಹೀಗಾಗಿ ಈ ವಿಷಯ ಕಾರ್ಯಗತವಾಗ್ತಿಲ್ಲ, ಮುಂದೆಯೂ ಆಗಲ್ಲ. ನಾನು ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ, ಒಂದು ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದೆ. ಕಾಂಗ್ರೆಸ್ ವಿಪಕ್ಷ ನಾಯಕ ಕೂಡ ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದಿದ್ರು. ಹೀಗಾಗಿ ಅವರು ಎಷ್ಟೇ ಪ್ರಯತ್ನಿಸಿದರೂ, ಭಾರತದ ಜನ ಸುಳ್ಳನ್ನು ಸ್ವೀಕರಿಸುವುದಿಲ್ಲ. ಜನ ಬುದ್ಧಿವಂತರಿದ್ದು, ಇಂಥವರನ್ನ ಜನ ಅರ್ಥ ಮಾಡಿಕೊಳ್ತಾರೆ. ಇನ್ನು ಚೌಕಿದಾರ್ ಘೋಷಣೆ ಬಗ್ಗೆ ಹೇಳೋದಾದ್ರೆ, 2013-14ರಲ್ಲಿ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವಾಗ ‘ನೀವು ನನಗೆ ಚೌಕಿದಾರ್ ಮಾಡಿ ನಾನು ಯಾರೂ ಭಾರತವನ್ನ ಲೂಟಿ ಮಾಡಲು ಬಿಡಲ್ಲ’ ಎಂದು ಜನರಿಗೆ ಹೇಳ್ತಿದ್ದೆ. ಅದು ನನ್ನ ಭಾಷಣದ ಭಾಗವಾಗಿತ್ತು. ಇವತ್ತೂ ಹೇಳ್ತೀನಿ, ನಾನು ಚೌಕಿದಾರ್, ನಮ್ಮ ದೇಶ ದೋಚಲು ಯಾರಿಗೂ ಬಿಡಲ್ಲ. ಯಾರಾದ್ರೂ ಇಂಥಾ ಕೆಲಸ ಮಾಡಿದ್ರೆ, ನಾನು ಕಾನೂನಿನ ಬಲ ಹೆಚ್ಚಿಸುತ್ತಿದ್ದು, ಖಡಕ್ ಕ್ರಮ ಕೈಗೊಳ್ಳುತ್ತೇನೆ. ಪ್ರಾಮಾಣಿಕತೆಯನ್ನು ಉತ್ತೇಜಿಸುವ ವಾತಾವರಣ ನಿರ್ಮಿಸಲುವಲ್ಲಿ ಸರ್ಕಾರ ಯಶಸ್ವಿಯಾಗಿದೆ. • ರಾಹುಲ್​ ಜೋಶಿ: ಹೀಗಾಗಿಯೇ ಅವರು ಮತ್ತೊಂದು ವಿಷಯ ಎತ್ತಿಕೊಂಡಿದ್ದಾರೆ. ಈಗ ‘ನ್ಯಾಯ್’ ಅಂತ ಪ್ರಚಾರ ಮಾಡ್ತಿದ್ದಾರೆ. ಶೇಕಡಾ 20ರಷ್ಟು ಬಡ ಕುಟುಂಬಗಳಿಗೆ ತಲಾ 72 ಸಾವಿರ ನೀಡುವ ‘ನ್ಯಾಯ್’ ಸ್ಕೀಂ ಉಲ್ಲೇಖಿಸ್ತಿದ್ದಾರೆ. ಈ ಸ್ಕೀಂ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರಿಗೆ ಇದು ಲಾಭವಾಗಬಹುದಾ?


ನರೇಂದ್ರ ಮೋದಿ: ಈ ಬಾರಿ ಚುನಾವಣೆಗೆ ಅವರ ಪ್ರಮುಖ ಘೋಷಣಯಾದ ‘ಈಗ ನ್ಯಾಯ ಆಗುತ್ತೆ’ ಅಂತ. ಇದರರ್ಥ ಕಳೆದ 60 ವರ್ಷಗಳ ಅವರ ಆಡಳಿತಾವಧಿಯಲ್ಲಿ ಅವರು ಅನ್ಯಾಯ ಮಾಡಿದ್ದಾರೆ ಎಂದೇ ಅರ್ಥ. 60 ವರ್ಷಗಳ ಆಡಳಿತದಲ್ಲಿ ಅವರು ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿದೋ ತಿಳಿಯದೆಯೋ ಒಪ್ಪಿಕೊಂಡಿದ್ದಾರೆ. ಅವರು ನ್ಯಾಯದ ಬಗ್ಗೆ ಮಾತನಾಡೋದಾದ್ರೆ, 1984 ಸಿಖ್ ದಂಗೆಯ ಸಂತ್ರಸ್ತರಿಗೆ 'ನ್ಯಾಯ' ಇಲ್ಲವೇ? ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ 'ನ್ಯಾಯ' ಇಲ್ವಾ? ರೈತರಿಗೆ 'ನ್ಯಾಯ' ದೊರಕಿಸಲ್ವಾ ಕಾಂಗ್ರೆಸ್? ತ್ರಿವಳಿ ತಲಾಖೆ ಸಂತ್ರಸ್ತರಿಗೆ ನ್ಯಾಯ ದೊರಕಿಸಲ್ವಾ? ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶದ ರೈತರಿಗೆ ಸಾಲಮನ್ನಾ ಆಶ್ವಾಸನೆ ನೀಡಿದ್ರಲ್ಲ, ಅವರಿಗೆ ನ್ಯಾಯ ಇಲ್ವಾ? ಇವರಿಗೆಲ್ಲಾ 10 ದಿನಗಳಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿದ್ರಿ. ಈಗಾಗ್ಲೇ 100 ದಿನಗಳಾಗಿವೆ. ಯಾವಾಗ ರೈತರಿಗೆ ನ್ಯಾಯ ಸಿಗೋದು? ಅಪರಾಧಿ ದೇಶ ಬಿಡಲು ಕಾಂಗ್ರೆಸ್ ಯಾಕೆ ಅವಕಾಶ ಮಾಡಿಕೊಡ್ತು ಅಂತ ಭೋಪಾಲ್ ಅನಿಲ ದುರಂತದ ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ. ಅವರೆಲ್ಲಾ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಮಹಾನ್ ವಿಜ್ಞಾನಿ ನಂಬಿ ನಾರಾಯಣನ್​ರನ್ನ ಸುಳ್ಳು ಆರೋಪದಡಿ ಜೈಲಿಗಟ್ಟಲಾಗಿದೆ. ಇದು ಭಾರತದ ಸ್ಪೇಸ್ ಪ್ರೋಗ್ರಾಂಗೆ ದೊಡ್ಡ ಪೆಟ್ಟಾಗಿದೆ. ನ್ಯಾಯದ ನಿರೀಕ್ಷೆಯಲ್ಲಿದ್ದಾರೆ ನಂಬಿ ನಾರಾಯಣನ್. ಸಂಜೋತಾ ಎಕ್ಸ್​ಪ್ರೆಸ್ ಸ್ಫೋಟ ಪ್ರಕರಣದಲ್ಲೂ ಅಮಾಯಕರನ್ನ ಜೈಲಿಗೆ ಕಳುಹಿಸಿದ್ರಿ. ಸುಳ್ಳು ಪ್ರಕರಣದಲ್ಲಿ ಅವರು ಹಲವಾರು ವರ್ಷ ಜೈಲಿನಲ್ಲಿದ್ರು. ಇವರೆಲ್ಲಾ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಸಂಜೋತಾ ಎಕ್ಸ್​ಪ್ರೆಸ್ ಪ್ರಕರಣದ ಹೆಸರಲ್ಲಿ ‘ಹಿಂದೂ ಉಗ್ರವಾದ’ ಎನ್ನೋ ಮೂಲಕ ಉಗ್ರವಾದಕ್ಕೆ ಹಿಂದುಗಳನ್ನ ಲಿಂಕ್ ಮಾಡಿದ್ರಿ. ಈ ದೇಶದ ಹಿಂದೂಗಳು ನ್ಯಾಯ ಕೇಳ್ತಿದ್ದಾರೆ. ನಮ್ಮನ್ನ ಯಾಕೆ ಭಯೋತ್ಪಾದಕರೆಂದು ಬ್ರ್ಯಾಂಡ್ ಮಾಡಿದ್ರಿ ಎಂದು ಹೇಳಿ ಅಂತಿದ್ದಾರೆ. ಪಿ.ವಿ ನರಸಿಂಹರಾವ್ ನ್ಯಾಯ ಕೇಳ್ತಿದ್ದಾರೆ. ತನ್ನ ಇಡೀ ಜೀವನವನ್ನ ಪಕ್ಷಕ್ಕಾಗಿ ಮೀಸಲಿಟ್ಟಿದ್ರೂ, ಅವರ ಪಾರ್ಥಿವ ಶರೀರವನ್ನ ಕಾಂಗ್ರೆಸ್ ತನ್ನ ಪಕ್ಷದ ಕಚೇರಿಯಲ್ಲಿ ಬಿಟ್ಟುಕೊಳ್ಳಲಿಲ್ಲ. ಅವರ ಆತ್ಮ ನ್ಯಾಯ ಕೇಳ್ತಿದೆ. ಈ ದೇಶದ ಪ್ರಮುಖ ವ್ಯಕ್ತಿಗಳಾದ ಡಾ. ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೂಡ ನ್ಯಾಯ ಕೇಳ್ತಿದ್ದಾರೆ. ಯಾಕೆ ಇವರಿಗೆಲ್ಲಾ ಇತಿಹಾಸದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿಲ್ಲ. ಯಾಕೆ ಇವರ ಕೊಡುಗೆಯನ್ನ ನಿರ್ಲಕ್ಷಿಸಲಾಯ್ತು? ಅವರು ನ್ಯಾಯ ಒದಗಿಸಲು ಸೂಕ್ತರು ಅಂತ ನನಗೆ ಅನಿಸೋದಿಲ್ಲ. • ರಾಹುಲ್​ ಜೋಶಿ: ಈ ಚುನಾವಣೆಯಲ್ಲಿ ಎನ್​ಡಿಎ ಎಷ್ಟು ಸ್ಥಾನ ಗೆಲ್ಲಬಹುದು ಅಂತ ಅನಿಸುತ್ತೆ?


ನರೇಂದ್ರ ಮೋದಿ: ಎಷ್ಟು ಸ್ಥಾನ ಅಂತ ನಾನು ನಿರ್ಧರಿಸೋದಲ್ಲ, ಮತದಾರರು ನಿರ್ಧರಿಸುತ್ತಾರೆ. ಬಿಜೆಪಿ ಗೆಲ್ಲಿಸಲು 125 ಕೋಟಿ ಭಾರತೀಯರು ನಿರ್ಧರಿಸಿದ್ದಾರೆ. 2014ಕ್ಕೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸಂಖ್ಯಾಬಲದೊಂದಿಗೆ ಸರ್ಕಾರ ರಚಿಸುತ್ತೇವೆ. ಎನ್​ಡಿಎ ಸಂಖ್ಯಾಬಲ ಕೂಡ ಹೆಚ್ಚಾಗಲಿದೆ. ಈ ಚುನಾವಣೆಯಲ್ಲಿ ಎನ್​ಡಿಎ ಬಲ ಹೆಚ್ಚಾಗಲಿದೆ. ಈ 5 ವರ್ಷ ವೈಯಕ್ತಿಕ ಹಿತಾಸಕ್ತಿ ಇಲ್ಲದೇ, ವಿಶ್ವಾಸದೊಂದಿಗೆ ಸರ್ಕಾರ ನಡೆಸಿದ ರೀತಿ ಮುಂದುವರಿಯುತ್ತೇವೆ. • ರಾಹುಲ್​ ಜೋಶಿ: 2014ಕ್ಕೆ ಹೋಲಿಸಿದರೆ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂತಿದ್ದೀರಾ. ಹಿಂದಿ ಭಾಷಿಕ ಪ್ರದೇಶದಲ್ಲಿ ಯಾವ ರೀತಿ ಸಂಖ್ಯಾಬಲ ಹೆಚ್ಚಿಸಿಕೊಳ್ತೀರಾ? ಉತ್ತರ ಪ್ರದೇಶದಲ್ಲಿ 80ರ ಪೈಕಿ 73 ಸೀಟ್, ಗುಜರಾತ್​ನಲ್ಲಿ ಎಲ್ಲಾ 26 ಸ್ಥಾನ ಗಳಿಸಿದ್ದೀರಾ. ಕೆಲ ರಾಜ್ಯಗಳಲ್ಲಿ 178ರ ಪೈಕಿ 168 ಸ್ಥಾನ ಗಳಿಸಿದ್ದೀರಾ, ಇನ್ನಷ್ಟು ಸ್ಥಾನ ಗೆಲ್ಲಲು ಹೇಗೆ ಸಾಧ್ಯ?


ನರೇಂದ್ರ ಮೋದಿ: ಇದೇ ಸಂಖ್ಯಾಬಲ ನೋಡೋದಾದ್ರೆ, ತ್ರಿಪುರಾ ಚುನಾವಣಾ ಫಲಿತಾಂಶ ಹೇಗೆ ನೋಡಬಹುದು? ಓರ್ವ ಶಾಸಕ ಕೂಡ ಇರಲಿಲ್ಲ, ಈಗ 3/4 ಬಹುಮತದ ನಮ್ಮ ಸರ್ಕಾರವಿದೆ. ಇದನ್ನಷ್ಟೇ ನೋಡ್ತಿದ್ರೆ, ನಾವು ಮುಂದೆ ಸಾಗಲು ಸಾಧ್ಯವಾಗುತ್ತಿರಲಿಲ್ಲ. 1984ರಲ್ಲಿ ನಮಗೆ 2 ಲೋಕಸಭೆ ಸ್ಥಾನಗಳಿದ್ದವು. 2014ರಲ್ಲಿ ಸಂಪೂರ್ಣ ಬಹುಮತದ ಕಾಂಗ್ರೆಸ್ಸೇತರ ಸರ್ಕಾರ ನಮ್ಮದಾಯ್ತು. ರಾಜಕೀಯದಲ್ಲಿ ಸದಾ ಅರ್ಥಮೆಟಿಕ್​ನಿಂದ ನಡೆಯಲ್ಲ ಅಂತ ಅನಿಸುತ್ತೆ. • ರಾಹುಲ್​ ಜೋಶಿ: ಹಾಗಾದ್ರೆ ಉತ್ತರ ಪ್ರದೇಶದಲ್ಲಿ ಅರ್ಥಮೆಟಿಕ್ ಕೆಲಸ ಮಾಡಲ್ಲ ಅನಿಸುತ್ತಾ? 1993ರಲ್ಲಿ ಕಾನ್ಶಿರಾಂ ಹಾಗೂ ಮುಲಾಯಂ ಸಿಂಗ್ ಒಂದಾದಾಗ, ‘ ಸಾಥ್ ಮೇ ಮುಲಾಯಂ-ಕಾನ್ಶಿರಾಂ, ಉಡ್ ಗಯೇ ಶ್ರೀರಾಂ ’ ಘೋಷಣೆ ಜೋರಾಗಿತ್ತು. ಈ ಮೈತ್ರಿ 42ರಿಂದ 45 ಶೇಕಡಾ ಮತದಾರರನ್ನ ಸೆಳೆಯಬಹುದು ಅನ್ನೋ ಚಿಂತೆ ನಿಮಗಿಲ್ಲವೇ?


ನರೇಂದ್ರ ಮೋದಿ: ಶತ್ರುಗಳಾಗಿದ್ದವರು, ಪರಸ್ಪರ ತೊಂದರೆ ಕೊಡಲು ನಿರ್ಧರಿಸಿದ್ದವರು ಅವರಿಬ್ಬರು. ಇಂಥಾ ಪಕ್ಷಗಳು ಒಂದಾದಾಗ, ಅಸ್ತಿತ್ವಕ್ಕೆ ಹೋರಾಡ್ತಿದ್ದಾರೆ ಎಂದರ್ಥ. ಅವರು ಅಸ್ತಿತ್ವದ ನಿರೀಕ್ಷೆಯಲ್ಲಿದ್ದು, ಯಶಸ್ವಿ ಆಗ್ತಾರೆ ಅನ್ನೋ ವಿಶ್ವಾಸ ನನಗಿಲ್ಲ. • ರಾಹುಲ್​ ಜೋಶಿ: ಮಹಾಮೈತ್ರಿಗೆ ಮತ ಹಾಕುವಂತೆ ಮಾಯಾವತಿ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ. ಮತಗಳು ವಿಭಜನೆ ಆಗಬಾರದು ಎಂದಿದ್ದಾರೆ. ಚುನಾವಣಾ ಆಯೋಗ ಈ ಹೇಳಿಕೆಯನ್ನ ಗಮನಿಸಿದೆ. ಇಂಥಾ ಹೇಳಿಕೆಗಳನ್ನ ನೀವು ಯಾವ ರೀತಿ ನೋಡ್ತೀರಾ?


ನರೇಂದ್ರ ಮೋದಿ: ಪದೇಪದೇ ಸೋಲಿನಿಂದ ಮಾಯಾವತಿ ಹತಾಶರಾಗಿದ್ದಾರೆ. ಮುಸ್ಲಿಮರು ತಮಗೇ ಮತ ಹಾಕ್ಬೇಕು ಅಂತಾರೆ, ಆದ್ರೆ ಮಾಯಾವತಿ ಹೇಳಿಕೆ ಸ್ವಾಭಾವಿಕವಾಗಿದೆ. ಈ ಕುರಿತು ಚುನಾವಣಾ ಆಯೋಗ ಗಮನ ಹರಿಸಬೇಕು. ಮಾಯಾವತಿ ಬಗ್ಗೆ ನನಗೆ ಚಿಂತೆ ಇಲ್ಲ, ಮಾಯಾವತಿ ಮುಳುಗುತ್ತಿರುವ ಹಡಗು, ಹೀಗಾಗಿ ಮುಸ್ಲಿಮರ ಆಸರೆ ಪಡೆಯುತ್ತಿದ್ದಾರೆ. ಈಗ ಎಲ್ಲಿ ಹೋಗಿದೆ ಜಾತ್ಯತೀತ ಗ್ಯಾಂಗ್? ಪ್ರಶಸ್ತಿ ವಾಪಸ್ ಮಾಡುವ ಗ್ಯಾಂಗ್ ಎಲ್ಲಿದೆ? ಹಿಂದೂ ಮತಗಳಿಗೆ ಹೀಗೇ ಪ್ರಚಾರ ಮಾಡಿದ್ರೆ? ಯಾರಾದ್ರೂ ಹಿಂದೂ ಧರ್ಮದ ಹೆಸ್ರಲ್ಲಿ ಮತ ಕೇಳಿದ್ರೆ? ಪ್ರಶಸ್ತಿ ವಾಪಸ್ ಮಾಡೋರು ಸುಮ್ಮನಿರುತ್ತಿದ್ರಾ? ಎಷ್ಟು ಜನ ಸಿಗ್ನೇಚರ್ ಕ್ಯಾಂಪೇನ್​ನವರು ಎದ್ದು ಬರ್ತಿದ್ರು? ಇವರೇ ದೇಶಕ್ಕೆ ಚಿಂತೆಯ ವಿಷಯವಾಗಿದ್ದಾರೆ. ಜಾತ್ಯತೀತೆಯ ಮುಖವಾಡ ಹಾಕಿಕೊಂಡವರಿಂದ್ಲೇ ದೇಶಕ್ಕೆ ಸಂಚಕಾರ ಇರೋದು. ರಾಜಕೀಯ ಅಸ್ತಿತ್ವಕ್ಕಾಗಿ ಮಾಯಾವತಿ ಹಪಹಪಿಸುತ್ತಿದ್ದಾರೆ. ಹೇಗಾದ್ರೂ ಮಾಡಿ ಮತ ಪಡೆಯಲು ಮಾಯಾವತಿ ಯತ್ನಿಸುತ್ತಿದ್ದಾರೆ. • ರಾಹುಲ್​ ಜೋಶಿ: ಕಳೆದ 5 ವರ್ಷಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯದಲ್ಲಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ. ಈ ರಾಜ್ಯಗಳಿಂದ ನೀವು ಎಷ್ಟು ಸ್ಥಾನ ನಿರೀಕ್ಷಿಸುತ್ತೀರಾ? ಪಶ್ಚಿಮ ಬಂಗಾಳದಲ್ಲಿ ನಿಮ್ಮ ನಂಬರ್ ಹೆಚ್ಚಾಗಬಹುದಾ?


ನರೇಂದ್ರ ಮೋದಿ: ಇಡೀ ದೇಶದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತು ಹೆಚ್ಚಿಸಲಿದೆ. ಇಡೀ ದೇಶದಲ್ಲಿ ನಮ್ಮ ಬಲ ಹೆಚ್ಚುತ್ತಿದ್ದು, ಸ್ಥಾನಗಳೂ ಹೆಚ್ಚಾಗಲಿವೆ. ಈ ಹಿಂದೆ ನಾವು ಗೆದ್ದ ಜಾಗದಲ್ಲಿ ನಮ್ಮ ಬಲ ಹೀಗೇ ಇರಲಿದ್ದು, ವೋಟ್ ಷೇರ್  ಹೆಚ್ಚಾಗಲಿದೆ. ಒಂದೆರಡು ಸ್ಥಾನ ಸೋತ ಜಾಗದಲ್ಲೂ ನಾವು ಗೆಲ್ಲುತ್ತೇವೆ. ಇಡೀ ದೇಶದಲ್ಲಿ ನಮ್ಮ ಪರ ಅಲೆ ಇದೆ. • ರಾಹುಲ್​ ಜೋಶಿ: ಪಶ್ಚಿಮ ಬಂಗಾಳದಲ್ಲೂ ಇದು ಅನ್ವಯವಾಗುತ್ತಾ?


ನರೇಂದ್ರ ಮೋದಿ: ಇಡೀ ದೇಶದಲ್ಲಿ. ಈಶಾನ್ಯವಾಗಲಿ, ಪಶ್ಚಿಮ ಕಚ್ ಆಗಲಿ, ಇಡೀ ದೇಶದಲ್ಲಿ ಬಿಜೆಪಿ ಅಲೆ ಇದೆ. • ರಾಹುಲ್​ ಜೋಶಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 23ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಒಡಿಶಾದಲ್ಲಿ 11-12 ಸ್ಥಾನ ಗೆಲ್ಲೋದಾಗಿ ಹೇಳಿದ್ದಾರೆ. ಇದು ಸಾಧ್ಯ ಅನಿಸುತ್ತಾ?


ನರೇಂದ್ರ ಮೋದಿ: ನಾನು ಸಂಖ್ಯೆಗಳ ವಿಷಯ ಮಾತನಾಡಲ್ಲ. ಆದ್ರೆ ಎಲ್ಲಾ ನಾಯಕರ ಪೈಕಿ ಹೆಚ್ಚು ಹಾರ್ಡ್ ವರ್ಕ್ ಮಾಡೋರು ಅಮಿತ್ ಶಾ. ನನ್ನ ಪ್ರಚಾರಕ್ಕೆ ಮಾಧ್ಯಮದಲ್ಲಿ ಹೆಚ್ಚು ಅವಕಾಶ ಸಿಗುತ್ತೆ, ಅವರ ಪ್ರಚಾರಕ್ಕೆ ಸಿಗಲ್ಲ. ಇಡೀ ವರ್ಷ ಅಮಿತ್ ಶಾ ಕೆಲಸ ಮಾಡಿದಷ್ಟು, ಯಾವೊಬ್ಬ ರಾಷ್ಟ್ರೀಯ ಪಕ್ಷದ ನಾಯಕನೂ ಕೆಲಸ ಮಾಡಲ್ಲ ಅನಿಸುತ್ತೆ. ಕೇವಲ ಚುನಾವಣೆ ಸಮಯದಲ್ಲಷ್ಟೇ ಅಲ್ಲ, ತಳಮಟ್ಟದ ಕಾರ್ಯಕರ್ತರನ್ನ ಭೇಟಿಯಾಗಿ ವಿಚಾರ ತಿಳಿದುಕೊಳ್ತಾರೆ. ಇಂಥಾ ಹಾರ್ಡ್​ವರ್ಕ್​ನಿಂದ್ಲೇ ಬಿಜೆಪಿಗೆ ಸಹಕಾರಿಯಾಗಿದೆ. ಹೀಗಾಗಿ ಅವರ ವಿಶ್ಲೇಷಣೆ ಮೇಲೆ ನನಗೆ ಹೆಚ್ಚು ವಿಶ್ವಾಸವಿದೆ. • ರಾಹುಲ್​ ಜೋಶಿ: ಆಂಧ್ರ, ತೆಲಂಗಾಣದಲ್ಲಿ ಜಗನ್, ಕೆಸಿಆರ್ ಜೊತೆ ಚುನಾವಣೋತ್ತರ ಮೈತ್ರಿ ಏನಾದ್ರೂ ಸಾಧ್ಯ ಇದೆಯಾ?


ನರೇಂದ್ರ ಮೋದಿ: ಸಂಪೂರ್ಣ ಬಲದೊಂದಿಗೆ ಬಿಜೆಪಿ ಜಯಶಾಲಿಯಾಗಲಿದೆ. ನಮಗೆ ಎನ್​ಡಿಎ ಪ್ರತ್ಯೇಕ ಬಲವಾಗಿದ್ದು, ಅದರ ಸಂಖ್ಯಾಬಲ ಕೂಡ ಹೆಚ್ಚಾಗಲಿದೆ. ಅಗತ್ಯ ಸಂಖ್ಯಾಬಲಕ್ಕಿಂತ ಹೆಚ್ಚು ಬಲದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ. ಸರ್ಕಾರ ರಚಿಸಲು ನಮಗೆ ಯಾರ ಸಹಾಯವೂ ಬೇಕಾಗುವುದಿಲ್ಲ. ನಮ್ಮ ಉದ್ದೇಶ ಕೇವಲ ಸರ್ಕಾರ ರಚಿಸೋದಾಗ್ಲಿ ಅಥವಾ ಸರ್ಕಾರ ನಡೆಸೋದಾಗ್ಲಿ ಅಲ್ಲ. ನಮ್ಮ ಉದ್ದೇಶ ದೇಶ ನಡೆಸೋದು, ದೇಶ ಮುನ್ನಡೆಸೋದು. ದೇಶ ನಡೆಸಲು ಸರ್ವಮತದ ಅವಶ್ಯಕತೆ ಇದೆ. ಹೀಗಾಗಿ ಸಂಸತ್​ಗೆ ಓರ್ವ ಸದಸ್ಯನನ್ನ ಕಳುಹಿಸುವ ಪಕ್ಷವನ್ನೂ ನಾವು ಜೊತೆಯಲ್ಲಿ ಕರೆದುಕೊಂಡು ಹೋಗ್ತೇವೆ. ನಮ್ಮನ್ನ ಕಟುವಾಗಿ ಟೀಕಿಸುವ ಪಕ್ಷ ನಮಗೆ ಬೆಂಬಲಿಸಿದರೆ, ಅವರನ್ನೂ ನಮ್ಮ ಜೊತೆ ಕರೆದುಕೊಂಡು ಮುಂದೆ ಸಾಗುತ್ತೇವೆ ಯಾಕೆ ಅಂದರೆ ದೇಶ ಮುನ್ನಡೆಸೋದು ನಮ್ಮ ಉದ್ದೇಶ. • ರಾಹುಲ್​ ಜೋಶಿ: ವರ್ಷದ ಹಿಂದಿನವರೆಗೂ ರಾಮ ಮಂದಿರ ಹಾಟ್ ಟಾಪಿಕ್ ಆಗಿತ್ತು. ನಿಮ್ಮ ಪ್ರಣಾಳಿಕೆಯಲ್ಲೂ ಈ ವಿಷಯವಿದೆ, ಕಳೆದ ಪ್ರಣಾಳಿಕೆಯಲ್ಲೂ ಇತ್ತು. ಆದ್ರೆ ಕಳೆದ 6 ತಿಂಗಳಿಂದ ನಿಮ್ಮ ನಾಯಕರು ರಾಮ ಮಂದಿರದ ಬಗ್ಗೆ ಮೌನವಾಗಿದ್ದಾರೆ ಯಾಕೆ?


ನರೇಂದ್ರ ಮೋದಿ: ಸಮಸ್ಯೆ ಇರೋದು ಮಾಧ್ಯಮದಲ್ಲಿ. ಈ ಬಗ್ಗೆ ಮಾತನಾಡಿದಾಗ ಹಿಂದುತ್ವದ ಹೊರತಾಗಿ ನಿಮಗೆ ಬೇರೆ ಯಾವ ವಿಷಯವೂ ಇಲ್ಲಾ ಅಂತಾರೆ. ನಾವು ಮೌನವಾದಾಗ, ರಾಮ ಮಂದಿರದ ಬಗ್ಗೆ ಯಾಕೆ ಮಾತನಾಡ್ತಿಲ್ಲ ಅಂತಾರೆ. ಬಿಜೆಪಿ ನಿಲುವು ಸ್ಪಷ್ಟವಾಗಿದೆ. ನಮ್ಮ ನಿಲುವು ಎಂದೂ ಬದಲಾಗುವುದಿಲ್ಲ. • ರಾಹುಲ್​ ಜೋಶಿ: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಫ್ಯಾಕ್ಟರ್​ನ ಯಾವ ರೀತಿ ನೋಡ್ತೀರಾ? ಕಾಂಗ್ರೆಸ್​ಗೆ ಇದರಿಂದ ಲಾಭ ಆಗಬಹುದಾ?


ನರೇಂದ್ರ ಮೋದಿ: ಯಾರಾದ್ರೂ ಪ್ರತ್ಯೇಕ ವ್ಯಕ್ತಿ ಕುರಿತು ಮಾತನಾಡಿದ್ರೆ ಅದು ತಪ್ಪಾಗಲಿದೆ ಅನಿಸುತ್ತೆ. • ರಾಹುಲ್​ ಜೋಶಿ: 2 ಕ್ಷೇತ್ರಗಳಿಂದ ರಾಹುಲ್ ಗಾಂಧಿ ಸ್ಪರ್ಧೆ ಕುರಿತು ಏನು ಅನಿಸುತ್ತೆ? ವಯನಾಡ್​ನಿಂದ ರಾಹುಲ್ ಸ್ಪರ್ಧೆ ಕುರಿತು ನಮ್ಮ ಅಭಿಪ್ರಾಯ ಏನು?


ನರೇಂದ್ರ ಮೋದಿ: ಎರಡು ಕಡೆ ಸ್ಪರ್ಧಿಸಲು ಸಂವಿಧಾನವೇ ಅವಕಾಶ ನೀಡಿದೆ. ಅದರಲ್ಲಿ ತಪ್ಪೇನಿಲ್ಲ, ಆದ್ರೆ ಅಮೇಥಿಯಿಂದ ಪಲಾಯನವಾಗ್ತಿರೋದು ನಿಜವಾದ ಸಂಗತಿ. ಕುಟುಂಬದ ಕ್ಷೇತ್ರದಿಂದ ಪಲಾಯನ ಆಗ್ತಿರೋ ಬಗ್ಗೆ ಚರ್ಚೆ ಆಗಬೇಕಿದೆ. • ರಾಹುಲ್​ ಜೋಶಿ: ಕಳೆದ 4-5 ವರ್ಷಗಳಲ್ಲಿ ನೀವು ಗಾಂಧಿ ಕುಟುಂಬದ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿದ್ದೀರಿ... 


ನರೇಂದ್ರ ಮೋದಿ: ವೈಯಕ್ತಿಕವಾಗಿ ನಾನೆಂದೂ ಅವರ ಮೇಲೆ ವಾಗ್ದಾಳಿ ನಡೆಸಿಲ್ಲ. ಕುಟುಂಬ ರಾಜಕಾರಣಕ್ಕೆ ನನ್ನ ಸೈದ್ಧಾಂತಿಕ ವಿರೋಧವಿದೆ. ಕುಟುಂಬ ರಾಜಕಾರಣದ ಮೂಲಕ ಲಾಭ ಪಡೆಯೋದು ತಪ್ಪು. ಯಾರ ಬಗ್ಗೆಯೂ ನಾನು ವೈಯಕ್ತಿಕ ದಾಳಿ ನಡೆಸಿಲ್ಲ. ಕುಟುಂಬ ರಾಜಕಾರಣದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ ಅನ್ನೋದು ನನ್ನ ಸೈದ್ಧಾಂತಿಕ ನಂಬಿಕೆ. ಇದನ್ನ ನಾನು ಹೇಳ್ತಿಲ್ಲ, ಹಲವು ಬಾರಿ ಡಾ. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಡಾ. ಅಂಬೇಡ್ಕರ್​ರನ್ನ ನಾನು ಗೌರವಿಸುತ್ತೇನೆ. • ರಾಹುಲ್​ ಜೋಶಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನೀವು ಅವರ ಮೇಲೆ ಹಲವು ಬಾರಿ ವಾಗ್ದಾಳಿ ನಡೆಸಿದ್ದೀರಿ...


ನರೇಂದ್ರ ಮೋದಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ನಾವು ವಾಗ್ದಾಳಿ ನಡೆಸಿಲ್ಲ. ಭ್ರಷ್ಟಾಚಾರವನ್ನು ನಾನು ಒಂದು ಇಶ್ಯೂ ಎಂದು ಪರಿಗಣಿಸುತ್ತೇನೆ. ಭೋಪಾಲ್​ನಲ್ಲಿ ಏನಾಯ್ತು? ಭ್ರಷ್ಟ ಏನ್ ಹೇಳ್ತಾನೆ ಅನ್ನೋದು ಮುಖ್ಯವಲ್ಲ. ಭ್ರಷ್ಟಾಚಾರದ ವಿರುದ್ಧ ಕ್ರಮ ನ್ಯಾಯಸಮ್ಮತವಲ್ಲವೇ? ನ್ಯಾಷನಲ್ ಹೆರಾಲ್ಡ್ ಪ್ರಕರಣ ನಮ್ಮ ಕಾಲದಲ್ಲಿ ಆಯ್ತಾ? ಲಾಲು ಪ್ರಸಾದ್ ಯಾದವ್ ಪ್ರಕರಣ ನಮ್ಮ ಆಡಳಿತಾವಧಿಯಲ್ಲಾಯ್ತಾ? ಕೋಲ್ಡ್ ಸ್ಟೋರೇಜ್​ನಲ್ಲಿಡಲಾಗಿದ್ದ ಪ್ರಕರಣಗಳನ್ನ ನಾವು ರೀಓಪನ್ ಮಾಡಿದ್ದೇವೆ ಅಷ್ಟೇ. ಕಾನೂನು ತನ್ನ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥನೇ ಜಾಮೀನು ನಿರೀಕ್ಷಿಸೋದು. ಅವರು ತಪ್ಪು ಮಾಡಿದ್ದಾರೆ ಅಂತ ಹೇಳಲು ನಾನ್ಯಾರು? ತಾಯಿ ಮಗ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ. • ರಾಹುಲ್​ ಜೋಶಿ: ಸರ್ದಾರ್ ಪಟೇಲ್ ಸೇರಿದಂತೆ ಹಲವು ನಾಯಕರ ಕೊಡುಗೆಗಳ ಕುರಿತು ನೀವು ಮಾತನಾಡಿದ್ದೀರಾ. ಜವಾಹರಲಾಲ್ ನೆಹರು ಬಗ್ಗೆ ನಿಮ್ಮ ಅಭಿಪ್ರಾಯ ಏನು?


ನರೇಂದ್ರ ಮೋದಿ: ಇವತ್ತು ದೇಶ ಈ ಮಟ್ಟಕ್ಕೆ ಬೆಳೆಯಲು ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ಕೊಡುಗೆ ಇದೆ ಎಂದು ಕೆಂಪು ಕೋಟೆ ಮೇಲಿನಿಂದ್ಲೇ ನಾನು ಹೇಳಿದ್ದೇನೆ. ಇಂಥಾ ಹೇಳಿಕೆ ನೀಡಿದ ಏಕೈಕ ಪ್ರಧಾನಿ ನಾನು. ಸಂಸತ್​ನಲ್ಲೂ ಇದೇ ಮಾತು ಹೇಳಿದ್ದೇನೆ. ಎಲ್ಲಾ ರಾಜ್ಯ ಸರ್ಕಾರಗಳೂ ಕೊಡುಗೆ ನೀಡಿವೆ. ಈ ಸರ್ಕಾರಗಳನ್ನ ನಡೆಸಿದ ಎಲ್ಲಾ ವ್ಯಕ್ತಿಗಳ ಕೊಡುಗೆಯೂ ಇದೆ. ಆದ್ರೆ ನಮ್ಮ ದೂರು ಇರೋದು, ಸರ್ದಾರ್ ಪಟೇಲ್ ಈ ದೇಶದ ಮೊದಲ ಪ್ರಧಾನಿಯಾಗ್ತಿದ್ರೆ, ಪರಿಸ್ಥಿತಿ ಬೇರೆಯದ್ದಾಗಿರುತ್ತಿತ್ತು. ದೇಶ ಇನ್ನಷ್ಟು ಎತ್ತರದಲ್ಲಿರುತ್ತಿತ್ತು. ಸರ್ದಾರ್ ಪಟೇಲ್ ಪ್ರಧಾನಿಯಾಗ್ತಿದ್ರೆ, 2014ರಿಂದೀಚೆಗೆ ನಾನು ನಿರ್ಮಿಸಿದ ಶೌಚಾಲಯಗಳನ್ನ ಎಂದೋ ಮಾಡಿರುತ್ತಿದ್ದರು. • ರಾಹುಲ್​ ಜೋಶಿ: ಕಳೆದ 5 ವರ್ಷಗಳ ಆರ್ಥಿಕತೆ  ಬಗ್ಗೆ ನಿಮ್ಮ ಅನಿಸಿಕೆ ಏನು? ಈಗಿನ ಶೇ.7 ಅಭಿವೃದ್ಧಿ ಬಗ್ಗೆ ನಿಮಗೆ ತೃಪ್ತಿಇದೆಯಾ?


ನರೇಂದ್ರ ಮೋದಿ:  ಅಭಿವೃದ್ಧಿಯಲ್ಲಿ ನಂಬಿಕೆ ಇಡೋ ವ್ಯಕ್ತಿ ಶೇ.10ರ ಅಭಿವೃದ್ಧಿ ಏರಿಕೆ ಬಗ್ಗೆಯೂ ಸಂತಸಪಡಬಾರದು. ಕೆಲವೊಮ್ಮೆ ತೃಪ್ತರಾಗದೇ ಇರೋದೇ ಶಕ್ತಿಯ ಮೂಲವಾಗಿರಲಿದೆ. ಆದ್ರೆ ಭಾರತ ಅತಿವೇಗವಾಗಿ ಅಭಿವೃದ್ಧಿಯಾಗ್ತಿರೋ ರಾಷ್ಟ್ರ ಅಂತ ವರ್ಲ್ಡ್ ಬ್ಯಾಂಕ್, ಐಎಂಎಫ್ ಹೇಳಿರೋದು ಗೌರವದ ವಿಷಯ. ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ. • ರಾಹುಲ್​ ಜೋಶಿ: ನೋಟು ಅಮಾನ್ಯೀಕರಣವನ್ನ ನೀವು ಯಾವ ರೀತಿ ವಿಶ್ಲೇಷಿಸುತ್ತೀರಾ?


ನರೇಂದ್ರ ಮೋದಿ: ಈ ಹಿಂದಿನ ಲೆಕ್ಕಾಚಾರ ಪರಿಗಣಿಸೋದಾದ್ರೆ, ನೋಟು ಅಮಾನ್ಯೀಕರಣ ಆಗದೇ ಇರದಿದ್ರೆ, ಇವತ್ತು ಹೆಚ್ಚು ಕರೆನ್ಸಿ ವ್ಯವಸ್ಥೆಯಲ್ಲಿರುತ್ತಿತ್ತು. ನೋಟಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನೋಟು ಅಮಾನ್ಯೀಕರಣದಿಂದ ಬೆತ್ತಲಾದವರು ಇಂದೂ ಕೂಡ ಹೊರಬರಲಾಗಿಲ್ಲ. ಆದ್ರೆ ಆರಂಭದಲ್ಲಿ ತೊಂದರೆಗೀಡಾದ ಜನಸಾಮಾನ್ಯರು ನಮ್ಮ ಜೊತೆ ಇದ್ದಾರೆ. ಡೀಮಾನಿಟೈಸೇಷನ್ ಮೇಲೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾವು ಗೆದ್ದೆವು. ನೋಟು ಅಮಾನ್ಯೀಕರಣದಿಂದ ಸಂಕಷ್ಟಕ್ಕೀಡಾದವರು, ಬಡವರ  ವೋಟ್ ಬ್ಯಾಂಕ್ ಕಳೆದುಕೊಂಡವರು, ಕಪ್ಪುಹಣದ ವ್ಯವಹಾರ ನಡೆಸಲು ಅಶಕ್ತರಾದವರು ಇಂದು ಕಣ್ಣೀರು ಹಾಕ್ತಿದ್ದಾರೆ. ಡೀಮಾನಿಟೈಸೇಷನ್​ನಿಂದ್ಲೇ ನಮ್ಮ ಆರ್ಥಿಕತೆ ಇಷ್ಟು ವೇಗವಾಗಿ ಅಭಿವೃದ್ಧಿಯಾಗ್ತಿದೆ. ಕಳೆದ 5 ವರ್ಷಗಳಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 60 ವರ್ಷಗಳಿಗೆ ಹೋಲಿಸಿದರೆ ದ್ವಿಗುಣವಾಗಿದೆ. ಕಾನೂನುಬಾಹಿರ, ಹವಾಲಾ ವ್ಯವಹಾರ ನಡೆಸುತ್ತಿದ್ದ 3.5 ಲಕ್ಷ ಕಂಪನಿಗಳನ್ನ ಗುರುತಿಸಲಾಗಿದ್ದು, ಅವರ ಕೆಲಸ ಸ್ಥಗಿತಗೊಳಿಸಲಾಗಿದೆ. ನಾವು ಡೀಮಾನಿಟೈಸೇಷನ್ ನಿರ್ಧಾರ ಕೈಗೊಳ್ಳದೇ ಇರುತ್ತಿದ್ದರೆ, ಪರ್ಯಾಯ ಆರ್ಥಿಕತೆಯೇ ಮುಂದುವರಿಯುತ್ತಿತ್ತು. ಆಸ್ತಿಗಳ ಬೆಲೆ ಇಳಿಕೆಯಾಗಲು ಕಾರಣ ಕಪ್ಪುಹಣ ಮಾಯವಾಗಿರೋದು. • ರಾಹುಲ್​ ಜೋಶಿ: ನಿಮ್ಮ ಆಡಳಿತದಲ್ಲಿ ಹಲವು ಸಂಸ್ಥೆಗಳಿಗೆ ಸಮಸ್ಯೆ ಆಗಿದೆ ಅನ್ನೋದು ಹಲವರ ಆರೋಪ. ಇಬ್ಬರು ಆರ್​ಬಿಐ ಗವರ್ನರ್​ಗಳಿಗೆ ಸರ್ಕಾರದೊಂದಿಗೇ ಸಮಸ್ಯೆ ಇತ್ತು, ಸಿಬಿಐನಲ್ಲಿ ಆಂತರಿಕ ಕಚ್ಚಾಟ ಇದೆ, ನಾಲ್ವರು ಸುಪ್ರೀಂ ನ್ಯಾಯಮೂರ್ತಿಗಳು ಭುಗಿಲೆದ್ದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?


ನರೇಂದ್ರ ಮೋದಿ: ಕಾಂಗ್ರೆಸ್ ಎತ್ತಿಕೊಳ್ತಿರೋ ವಿಷಯಗಳಲ್ಲಿ ಅರ್ಥವಿಲ್ಲ. ಅವರು ಚುನಾವಣೆ ಸೋತಾಗ ಚುನಾವಣಾ ಆಯೋಗದಲ್ಲಿ ಸಮಸ್ಯೆ ಅಂತಾರೆ. ನ್ಯಾಯಾಂಗವನ್ನ ಅವರ ತಾಳಕ್ಕೆ ತಕ್ಕಂತೆ ನಡೆಸಬೇಕು ಅಂತಾರೆ. ದೇಶದಲ್ಲಿ ಪ್ರತಿಯೊಂದು ಸಂಸ್ಥೆಯ ಅವಸಾನಕ್ಕೆ ಕಾರಣ ಕಾಂಗ್ರೆಸ್. ಈ ದೇಶದಲ್ಲಿ ಸ್ವಾಯತ್ತ ಸಂಸ್ಥೆಗಳನ್ನ ಯಾರಾದ್ರೂ ಶಕ್ತಿಯುತಗೊಳಿಸಿದ್ರೆ ಅದು ನಾವು. ತುರ್ತು ಪರಿಸ್ಥಿತಿ ಹೇರಿದವರು ಅವರು, ದೇಶವನ್ನೇ ಜೈಲು ಮಾಡಿದವರು, ಹಿರಿಯ ರಾಜಕೀಯ ನಾಯಕರನ್ನ ಜೈಲಿಗಟ್ಟಿದ್ದು, ಮಾಧ್ಯಮವನ್ನ ನಿರ್ಬಂಧಿಸಿದವರು ಸ್ವಾಯತ್ತ ಸಂಸ್ಥೆಗಳ ಬಗ್ಗೆ ಮಾತನಾಡ್ತಾರಾ? ಇದು ಅವರಿಗೆ ಶೋಭೆ ತರುವಂಥದ್ದಲ್ಲ. • ರಾಹುಲ್​ ಜೋಶಿ: ಅಡ್ವಾಣಿ ಹೇಳಿದ್ರು, ‘ದೇಶ ಮೊದಲು, ಪಕ್ಷ ನಂತರ, ನಾನು ಕೊನೆಯಲ್ಲಿ’. ನೀವು ಇದನ್ನ ಸಮ್ಮತಿಸಿದ್ರಿ. ಅಡ್ವಾಣಿ ಇನ್ನೊಂದು ಮಾತು ಹೇಳಿದ್ರು, ಭಿನ್ನ ಅಭಿಪ್ರಾಯ ಹೊಂದಿದವರನ್ನ ದೇಶವಿರೋಧಿಗಳು ಅಂತ ಹೇಳಬಾರದು ಎಂದಿದ್ರು.


ನರೇಂದ್ರ ಮೋದಿ: ಅವರು ಬಿಜೆಪಿಯ ಮೂಲ ಆಶಯ ಹೇಳಿದ್ದಾರೆ. ಇದೇ ನಮ್ಮ ಧ್ಯೇಯಗಳು. ಎಲ್ಲಾ ಬಿಜೆಪಿ ಕಾರ್ಯಕರ್ತರು ಒಂದೇ ರೀತಿ ಮಾತನಾಡ್ತಾರೆ. ದೇಶವೇ ಸರ್ವೋಚ್ಚ, ನಂತರ ಪಕ್ಷ, ನಾನು ಅನ್ನೋದು ಕೊನೆಯಲ್ಲಿ ಬರೋದು. ರಾಷ್ಟ್ರೀಯತೆ ವಿಚಾರದಲ್ಲೂ ನಮ್ಮದು ಇದೇ ನಿಲುವು. ವಾಜಪೇಯಿ ಅವರನ್ನ ಕಾಂಗ್ರೆಸ್ ನಾಯಕನೊಬ್ಬ ಸಂಸತ್​ನಲ್ಲೇ ದೇಶದ್ರೋಹಿ ಎಂದಿದ್ರು. ಆ ಹಿರಿಯ ಕಾಂಗ್ರೆಸ್ ನಾಯಕ ಇತ್ತೀಚೆಗೆ ಅಸುನೀಗಿದ್ರು. ಅಡ್ವಾಣಿ ಅವರ ಅನಿಸಿಕೆ ಸರಿಯಾಗಿದೆ. • ರಾಹುಲ್​ ಜೋಶಿ: ಮತದಾನ ಜಾಗೃತಿಗೆ ನೀವು ಪತ್ರಕರ್ತರಿಗೆ ಮನವಿ ಮಾಡಿದ್ರಿ. ನಮ್ಮ ನೆಟ್​ವರ್ಕ್ 18ನ ‘ಬಟನ್ ದಬಾವೋ ದೇಶ್ ಬನಾವೋ’ ಅಭಿಯಾನದ ಬಗ್ಗೆ ಮತದಾರರಿಗೆ ಏನನ್ನು ಹೇಳಲು ಬಯಸುತ್ತೀರಾ?


ನರೇಂದ್ರ ಮೋದಿ: ಎಲ್ಲಾ ಮತದಾರರು ಬೆಳಗ್ಗೆಯೇ ಬಂದು ತಮ್ಮ ಹಕ್ಕು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಮೊದಲು ಮತದಾನ ನಂತರ ಜಲಪಾನ. ಇಂದಿನ ಮತದಾರರು ತುಂಬಾ ಜಾಗೃತರಾಗಿದ್ದಾರೆ. ಪೋಲಿಂಗ್ ಬೂತ್​ಗಳಲ್ಲಿ ದೊಡ್ಡ ಕ್ಯೂ ಇರುತ್ತೆ. ಮತದಾರರು ಕುಡಿಯಲು ನೀರು ತೆಗೆದುಕೊಂಡು ಬನ್ನಿ. ಶಾಂತಿಯುತ ಮತದಾನದ ಮೂಲಕ ಅತಿಹೆಚ್ಚು ಮತದಾನ ಮಾಡೋಣ. ಮೊದಲ ಬಾರಿ ಮತದಾರರಿಗೆ ನನ್ನ ಹೆಚ್ಚಿನ ಒತ್ತು. ಈ ಬಾರಿ ಮೊದಲಸಲ ರಾಷ್ಟ್ರೀಯತೆಯ ವಿಷಯಗಳ ಮೇಲೆ ಮತದಾನ ಮಾಡ್ತಿದ್ದಾರೆ. ನಮ್ಮ ಹೆಸರುಗಳನ್ನ ಮತದಾರರ ಪಟ್ಟಿಯಲ್ಲಿ ಇದೆಯಾ ಇಲ್ಲ ಅನ್ನೊದರ ಬಗ್ಗೆ ಮೊದಲೇ ಆನ್​ಲೈನ್​ನಲ್ಲಿ ನೋಡಿಕೊಳ್ಳೋಣ. ಎಲ್ಲಾ ಮತದಾರರು ಈ ದೊಡ್ಡ ಚುನಾವಣಾ ಹಬ್ಬದ ಭಾಗವಾಗೋಣ. ಪ್ರಜಾಪ್ರಭುತ್ವ ಅಜರಾಮರವಾಗಲಿ. ಇದೇ ಧ್ಯೇಯದೊಂದಿಗೆ ಮುಂದೆ ಸಾಗೋಣ.​
First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
 • I agree to receive emails from NW18

 • I promise to vote in this year's elections no matter what the odds are.

  Please check above checkbox.

 • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626