ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ, ಬಲಿಷ್ಠವಾಗುತ್ತಿದೆ ಇಡೀ ದೇಶ ವಿಶ್ವನಾಯಕನಾಗುವತ್ತ ಹೆಜ್ಜೆ ಇಟ್ಟಿದೆ; ಪ್ರಧಾನಿ ನರೇಂದ್ರ ಮೋದಿ

howdy modi; ಅಮೆರಿಕ ಹಾಗೂ ಭಾರತ ಎರಡೂ ದೇಶವನ್ನು ಭಯೋತ್ಪಾದನೆ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಎರಡೂ ದೇಶಗಳು ಒಂದಾಗಿ ಭಯೋತ್ಪಾದನೆಯನ್ನು ಎದುರಿಸಬೇಕು. ಭಯೋತ್ಪಾದನೆಯನ್ನು ಹುಟ್ಟುಹಾಕುವವರು ಹಾಗೂ ಅದಕ್ಕೆ ನೀರೆರೆದು ಪೊರೆಯುವವರನ್ನು ಬುಡ ಸಮೇತ ಕೀಳಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

MAshok Kumar | news18-kannada
Updated:September 23, 2019, 12:22 AM IST
ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ, ಬಲಿಷ್ಠವಾಗುತ್ತಿದೆ ಇಡೀ ದೇಶ ವಿಶ್ವನಾಯಕನಾಗುವತ್ತ ಹೆಜ್ಜೆ ಇಟ್ಟಿದೆ; ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ಹೂಸ್ಟನ್ (ಸೆಪ್ಟೆಂಬರ್.22); ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ, ಇಡೀ ದೇಶ ಬಲಿಷ್ಠವಾಗುತ್ತಿದೆ, ವಿಕಸನವಾಗುತ್ತಿದೆ ಅಲ್ಲದೆ, ವಿಶ್ವನಾಯಕನಾಗುವಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ದೇಶದ ಅಭಿವೃದ್ಧಿಗೆ ನಾನು ಹಗಲು ಹಾಗೂ ರಾತ್ರಿಯನ್ನು ಒಂದು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ 7 ದಿನಗಳ ಪ್ರವಾಸಕ್ಕಾಗಿ ಶನಿವಾರ ಅಮೆರಿಕಕ್ಕೆ ತೆರಳಿದ್ದು, ಇಂದು ಹೂಸ್ಟನ್ ನಗರದ ಎನ್ಆರ್ಜಿ ಸ್ಟೇಡಿಯಂ ನಲ್ಲಿ ನಡೆದ ಬಹು ನಿರೀಕ್ಷಿತ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಮೋದಿಯವರನ್ನು ಹರ್ಷೋದ್ಘಾರದೊಂದಿಗೆ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಭಾರತದ ಅಭಿವೃದ್ಧಿ ಹಾಗೂ ಬೆಳವಣಿಗೆ ಕುರಿತು ಮಾತನಾಡಿದ ಅವರು,

“ಭಾರತ ಈಗ ನಿಂತ ನೀರಾಗಿಲ್ಲ, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ದೇಶದ ಯುವ ಜನ ದೇಶದ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 8 ಕೋಟಿ ಯುವ ಜನ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. 60 ವರ್ಷದ ನಂತರ ದೇಶದಲ್ಲಿ ಇಷ್ಟು ದೊಡ್ಡ ಬಹುಮತದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಅತಿಹೆಚ್ಚು ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ" ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಅಭಿವೃದ್ಧಿಯ ಮಜಲುಗಳ ಕುರಿತು ಹೂಸ್ಟನ್ ನಗರದ ಅನಿವಾಸಿ ಭಾರತೀಯರಿಗೆ ವಿವರಿಸಿದ ಮೋದಿ, "ನಮ್ಮ ಸರ್ಕಾರ ಗ್ರಾಮೀಣ ವಿಕಾಸ ಮಂತ್ರದ ಅಡಿಯಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ‘ಸಬ್ ಕಾ ಸಾಥ್ ಕಾ ವಿಕಾಸ್’ ನಮ್ಮ ಅಭಿವೃದ್ಧಿಯ ಧ್ಯೇಯೋದ್ದೇಶ, ಕಳೆದ 5 ವರ್ಷದಲ್ಲಿ ಗ್ರಾಮೀಣ ಭಾರತದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ. ಮನೆ ಮನೆಗೆ ಅಡಿಗೆ ಅನಿಲ ಪೂರೈಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ 1200 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಮೂಲಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

"ನಾವು ದೇಶದಲ್ಲಿ ಭ್ರಷ್ಟಾಚಾರ ನಡೆಯದಂತೆ ತಡೆದಿದ್ದೇವೆ. ಭ್ರಷ್ಟಾಚಾರಕ್ಕೆ ಸವಾಲು ಎಸೆದಿದ್ದೇವೆ. ಆಡಳಿತದ ಯಾವ ಹಂತದಲ್ಲೂ ಭ್ರಷ್ಟಾಚಾರ ನಡೆಯದಂತೆ ತಡೆಯುವ ಸಲುವಾಗಿಯೇ ಹಳೆಯ ತೆರಿಗೆ ಪದ್ಧತಿಗೆ ವಿದಾಯ ಹೇಳಿ, ಇಡೀ ದೇಶವನ್ನು ಒಂದೇ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ತರುವ ಜಿಎಸ್​ಟಿಯನ್ನು ಪರಿಚಯಿಸಿದ್ದೇವೆ.

ಆದಾಯ ತೆರಿಗೆಯನ್ನೂ ಇದೀಗ ಆನ್​ಲೈನ್​ ನಲ್ಲೇ ಪಾವತಿಸುವ ವ್ಯವಸ್ಥೆ ಇದ್ದು ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲದಂತಾಗಿದೆ.  ದೇಶದಲ್ಲಿ ಎಲ್ಲರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ  ಡೇಟಾ ಸಿಗುವಂತೆ ಮಾಡಿದ್ದೇವೆ. ಅವಶ್ಯಕತೆ ಇರುವವರಿಗೆ ವೆಲ್​ಫೇರ್​ ಯೋಜನೆ ಲಭ್ಯವಾಗುತ್ತಿದೆ. ಇದು ಡಿಜಿಟಲ್ ಇಂಡಿಯಾಗೆ ಹಿಡಿದ ಕೈಗನ್ನಡಿ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆಗಾಗಿ ಕಲಂ 370 ರದ್ದು:ಹೂಸ್ಟನ್ ನಗರದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ರ ಕುರಿತು ಉಲ್ಲೇಖ ಮಾಡಿದ ನರೇಂದ್ರ ಮೋದಿ, “ಜಮ್ಮು ಕಾಶ್ಮೀರ ಹಾಗೂ ಲಡಾಕ್ ಸೇರಿದಂತೆ ಎಲ್ಲಾ ಭೂ ಭಾಗಗಳಿಗೂ ಸಮಾನ ಅವಕಾಶ ನೀಡಬೇಕು, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂಬ ಏಕೈಕ ಕಾರಣದಿಂದಾಗಿ ಕಲಂ 370 ಅನ್ನು ರದ್ದು ಮಾಡಲಾಯಿತು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ರದ್ದು ಮಾಡುವ ಮಸೂದೆಯನ್ನು ಭಾರತ ಸರ್ಕಾರ ಸಂಸತ್​ನ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಕಡೆ ಮಂಡಿಸಿ ಚರ್ಚೆ ಮಾಡಲಾಯಿತು. ಇದನ್ನು ಇಡೀ ವಿಶ್ವ ಟಿವಿಯಲ್ಲಿ ವೀಕ್ಷಿಸಿತ್ತು. ಬಿಜೆಪಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ. ಆದರೂ, ಎರಡೂ ಸಭೆಯಲ್ಲಿ ಒಪ್ಪಿಗೆ ಪಡೆದು ಈ ಮಸೂದೆಯನ್ನು ಜಾರಿ ಮಾಡಲಾಯಿತು. ಇದರಿಂದಾಗಿ ಇದೀಗ ಕಾಶ್ಮೀರದಲ್ಲಿ ಹೆಂಗಸರು ಹಾಗೂ ಮಕ್ಕಳು ಮುಕ್ತವಾಗಿ ಸ್ವಾತಂತ್ರ್ಯವಾಗಿ ಒಡಾಡುವಂತಾಗಿದೆ" ಎಂದು ಹೇಳುವ ಮೂಲಕ ಕಲಂ 370 ರದ್ದತಿಯ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

ಅಲ್ಲದೆ, ಭಯೋತ್ಪಾದನೆ ಕುರಿತು ಉಲ್ಲೇಖಿಸುವ ಮೂಲಕ ಪಾಕಿಸ್ತಾನಕ್ಕೆ ನೇರ ಟಾಂಗ್ ನೀಡಿದ ಪ್ರಧಾನಿ ಮೋದಿ, "ಭಯೋತ್ಪಾದನೆಯನ್ನು ಅಮೆರಿಕ ಹಾಗೂ ಭಾರತ ಒಟ್ಟಾಗಿ ಎದುರಿಸಬೇಕು. ಎರಡೂ ದೇಶವನ್ನು ಭಯೋತ್ಪಾದನೆ ಎಂಬ ಆತಂಕ ಕಾಡುತ್ತಿದೆ. ಅಮೆರಿಕದಲ್ಲಿ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನೋವು ಇರುವಂತೆ, ಭಾರತದಲ್ಲೂ ಸಹ ಭಯೋತ್ಪಾದಕರ ತಾಜ್ ಹೋಟೆಲ್ ದಾಳಿಯ ನೋವು ಈಗಲೂ ಹಚ್ಚಹಸಿರಾಗಿದೆ.

ಹೀಗಾಗಿ ಎರಡೂ ದೇಶಗಳು ಒಂದಾಗಿ ಈ ಭಯೋತ್ಪಾದನೆಯನ್ನು ಎದುರಿಸಬೇಕು. ಭಯೋತ್ಪಾದನೆಯನ್ನು ಹುಟ್ಟುಹಾಕುವವರು ಹಾಗೂ ಅದಕ್ಕೆ ನೀರೆರೆದು ಪೊರೆಯುವವರನ್ನು ಬುಡ ಸಮೇತ ಕೀಳಬೇಕು. ಈ ಉದ್ದೇಶದಿಂದಲೇ ಕಲಂ 370 ರದ್ದು ಮಾಡಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ; ನರೇಂದ್ರ ಮೋದಿ

First published: September 23, 2019, 12:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading