ನವದೆಹಲಿ: ಆರ್ಥಿಕ ಜಗತ್ತಿನ ಪ್ರಮುಖ ಧ್ವನಿಗಳು (India Budget 2023) ಸಕರಾತ್ಮಕ ಸಂಕೇತಗಳನ್ನು ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ಬಜೆಟ್ ಅಧಿವೇಶನಕ್ಕೂ (Budget Session) ಮುನ್ನ ಸುದ್ದಿಗಾರರಿಗೆ ಈ ಹೇಳಿಕೆ ನೀಡಿರುವ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಮೊದಲ ಬಾರಿಗೆ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿರೋದು ಬುಡಕಟ್ಟು ಸಮುದಾಯಕ್ಕೆ ಹೆಮ್ಮೆಯ ದಿನವಾಗಿದೆ. ಸಾಮಾನ್ಯವಾಗಿ ಹೊಸದಾಗಿ ಆಯ್ಕೆಯಾಗಿ ಬಂದ ಸಂಸದರು ಮೊದಲ ಬಾರಿಗೆ ಸಂಸತ್‌ನಲ್ಲಿ ಮಾತನಾಡುವಾಗ ಅವರಿಗೆ ಆತ್ಮವಿಶ್ವಾಸ ತುಂಬುವ ವಾತಾವರಣ ನಿರ್ಮಾಣ ಮಾಡಿ ಗೌರವ ನೀಡುವ ಸಂಪ್ರದಾಯ ಇದೆ. ಅದರಂತೆಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಕೂಡ ಇದು ಮೊದಲ ಭಾಷಣ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
'ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ'
2023ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ಒಬ್ಬರು ಮಹಿಳೆಯಾಗಿದ್ದು ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಅಸ್ಥಿರವಾಗಿ ನಲುಗುತ್ತಿರುವ ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಈ ಬಜೆಟ್ ಆಶಾಕಿರಣವಾಗಲಿದೆ. ಈ ಬಜೆಟ್ ಭಾರತದ ಸಾಮಾನ್ಯ ಪ್ರಜೆಗಳ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಪ್ರಯತ್ನವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ನಿರೀಕ್ಷೆಗಳನ್ನು ಪೂರೈಸಲಿದ್ದಾರೆ ಎಂದು ನನಗೆ ನಂಬಿಕೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Budget Session 2023: ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
'ನಮಗೆ ದೇಶ ಮೊದಲು'
ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ನಮಗೆ ಒಂದೇ ಒಂದು ಯೋಚನೆ ಇದೆ. ಅದು ದೇಶ ಮೊದಲು ಅನ್ನೋದು. ಬಜೆಟ್ ಅಧಿವೇಶನದಲ್ಲಿ ನಾವು ಪರಸ್ಪರ ವಾಗ್ವಾದ ಮಾಡೋದು ಮಾತ್ರವಲ್ಲದೇ ಚರ್ಚಿಸುತ್ತೇವೆ ಕೂಡ. ಸದನದಲ್ಲಿ ನಾವು ಪ್ರತೀ ವಿಚಾರದ ಕುರಿತೂ ಉತ್ತಮ ರೀತಿಯಲ್ಲಿ ಚರ್ಚೆ ಮಾಡುತ್ತೇವೆ. ಈ ಅಧಿವೇಶನದಲ್ಲಿ ಎಲ್ಲಾ ಸಂಸದರೂ ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸುತ್ತಾರೆ. ಈ ಅಧಿವೇಶನ ನಮಗೆಲ್ಲರಿಗೂ ಮಹತ್ವದ್ದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಬಿಜೆಪಿಗೆ ಸೋಲಿನ ಭೀತಿ, ಅದಕ್ಕೆ ಮೋದಿ-ಅಮಿತ್ ಶಾರನ್ನು ಪದೇ ಪದೇ ಕರೆಸುತ್ತಿದ್ದಾರೆ! ಸಿದ್ದರಾಮಯ್ಯ ವ್ಯಂಗ್ಯ
ಕೋವಿಡ್ ಕಾಲದ ಕೆಲಸವನ್ನು ಮೆಚ್ಚಿದ ರಾಷ್ಟ್ರಪತಿ
ನಿನ್ನೆ ಬಜೆಟ್ ಅಧಿವೇಶನದಲ್ಲಿ ಮೊದಲ ಬಾರಿಗೆ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಕೆಲಸ ಕಾರ್ಯಗಳನ್ನು ಮೆಚ್ಚಿದ್ದರು. ಸದನದಲ್ಲಿ ಅವರು ‘ಕೋವಿಡ್ ಅವಧಿಯಲ್ಲಿ ಪ್ರಪಂಚದಾದ್ಯಂತ ಬಡವರು ಜೀವಿಸಲು ಎಷ್ಟು ಕಷ್ಟಪಟ್ಟರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಭಾರತ ದೇಶದಲ್ಲಿ ಬಡವರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ದೇಶದಲ್ಲಿ ಯಾವುದೇ ಬಡವರು ಖಾಲಿ ಹೊಟ್ಟೆಯಲ್ಲಿ ಮಲಗದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಯಿತು. ಇನ್ನು ಕೋವಿಡ್ ಕಷ್ಟಕಾಲದಲ್ಲಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ಸುಮಾರು 27 ಲಕ್ಷ ಕೋಟಿ ಮೌಲ್ಯದ ಯೋಜನೆಗಳು ಭಾರತದ ಬಡಜನರನ್ನು ತಲುಪಿ ಅವರನ್ನು ಬಡತನ ರೇಖೆಗಿಂತ ಕೆಳಗಿಳಿಯದಂತೆ ಮಾಡಲು ಸಾಧ್ಯವಾಯಿತು ಎಂದು ವಿಶ್ವಬ್ಯಾಂಕ್ ಹೇಳುತ್ತದೆ ಎಂದು ಹೇಳಿದ್ದರು.
'ಸಮರ್ಥವಾಗಿರುವ ಭಾರತವನ್ನು ನಿರ್ಮಿಸಬೇಕಾಗಿದೆ'
ಅಲ್ಲದೇ, ‘ಆತ್ಮನಿರ್ಭರ್ ಮತ್ತು ಅದರ ಮಾನವೀಯ ಕರ್ತವ್ಯಗಳನ್ನು ಪೂರೈಸಲು ಸಮರ್ಥವಾಗಿರುವ ಭಾರತವನ್ನು ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ರಾಷ್ಟ್ರಪತಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸುವುದರಿಂದ ಹಿಡಿದು ತ್ರಿವಳಿ ತಲಾಖ್ ರದ್ದುಗೊಳಿಸುವವರೆಗೆ ಕೇಂದ್ರ ಸರ್ಕಾರವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. 2047ರ ವೇಳೆಗೆ ನಾವು ಗತಕಾಲದ ಹೆಮ್ಮೆಯೊಂದಿಗೆ ಸಂಪರ್ಕ ಹೊಂದುವ ಮತ್ತು ಆಧುನಿಕತೆಯ ಎಲ್ಲಾ ಸುವರ್ಣ ಅಧ್ಯಾಯಗಳನ್ನು ಹೊಂದಿರುವ ರಾಷ್ಟ್ರವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ