ಕೇರಳ ಸಂತ್ರಸ್ತರ ಹಿಂದೆ ದೇಶವೇ ನಿಂತಿದೆ; ಸಹಾಯಹಸ್ತ ಚಾಚಿ ಜನರು ಮಾನವೀಯತೆ ಮೆರೆದಿದ್ದಾರೆ; ಪ್ರಧಾನಿ ಮೋದಿ

news18
Updated:August 26, 2018, 5:17 PM IST
ಕೇರಳ ಸಂತ್ರಸ್ತರ ಹಿಂದೆ ದೇಶವೇ ನಿಂತಿದೆ; ಸಹಾಯಹಸ್ತ ಚಾಚಿ ಜನರು ಮಾನವೀಯತೆ ಮೆರೆದಿದ್ದಾರೆ; ಪ್ರಧಾನಿ ಮೋದಿ
news18
Updated: August 26, 2018, 5:17 PM IST
ನ್ಯೂಸ್​18 ಕನ್ನಡ

ನವದೆಹಲಿ(ಆ. 26): ಕೇರಳದ ನೆರೆಸಂತ್ರಸ್ತರಿಗೆ ನನ್ನ ಕೈಯಲ್ಲಾದ ಸಹಾಯವನ್ನು ಮಾಡಿದ್ದೇನೆ, ನೀವು ಕೇರಳ ಕಟ್ಟುವ ಹೊಸ ಪ್ರಯತ್ನಕ್ಕೆ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲ್ಲಿ ಮನವಿ ಮಾಡಿದ್ದಾರೆ.

ದೇವರನಾಡೆಂದೇ ಖ್ಯಾತಿ ಗಳಿಸಿದ್ದ ಕೇರಳದಲ್ಲಿ ಉಂಟಾದ ಮಹಾ ಪ್ರವಾಹಕ್ಕೆ ಇಡೀ ದೇಶವೇ ಸಹಾಯಹಸ್ತ ಚಾಚಿದೆ. ದೇಶದ 125 ಕೋಟಿ ಜನರು ಕೇರಳದ ಪ್ರವಾಹಪೀಡಿತರ ಸಂಕಷ್ಟಕ್ಕೆ ಮರುಗಿದ್ದಾರೆ. ಅಲ್ಲಿನ ಜನರ ಆತ್ಮಸ್ಥೈರ್ಯದಿಂದ ಕೆಲವೇ ವರ್ಷಗಳಲ್ಲಿ ಕೇರಳ ಮತ್ತೆ ಹೊಸರೂಪ ತಾಳಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇರಳದ ಜನರು ಈಗ ಬಹಳ ಕಠಿಣವಾದ ಸಂದರ್ಭವನ್ನು ಎದುರಿಸುತ್ತಿದ್ದಾರೆ. ಅವರಿಗೆ ನಾವು ಮನೋಸ್ಥೈರ್ಯ ತುಂಬಬೇಕಿದೆ. ಅವರ ಹಿಂದೆ ಇಡೀ ದೇಶವೇ ಸಹಾಯಕ್ಕೆ ನಿಂತಿದೆ. ಕೇರಳದ ಪ್ರವಾಹದಲ್ಲಿ ಜೀವ, ಜಮೀನು ಕಳೆದುಕೊಂಡ ಕುಟುಂಬಗಳ ಬಗ್ಗೆ ನಮಗೆ ಅತೀವ ಅನುಕಂಪವಿದೆ. ಹೋದ ಜೀವಗಳಂತೂ ವಾಪಾಸು ಬರುವುದಿಲ್ಲ. ಆದರೆ, ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಗಳ ಜೊತೆಗೆ ದೇಶದ 125 ಕೋಟಿ ಭಾರತೀಯರು ನೆರವಿಗೆ ನಿಂತಿದ್ದಾರೆ ಎಂದು ಮೋದಿ ತಮ್ಮ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮಳೆಯೆಂಬುದು ರೈತರಿಗೆ ವರವೂ ಆಗಬಲ್ಲದು ಶಾಪವೂ ಆಗಬಲ್ಲದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಇಲ್ಲ. ಒಂದು ಕಡೆ ಮಳೆ ಬಂದರೆ ಬಿತ್ತನೆ ಮಾಡಬಹುದು ಎಂದು ರೈತ ಕಾದು ಕುಳಿತಿದ್ದಾನೆ. ಅಲ್ಲಿ ಮಳೆಯಾದರೆ ಮಾತ್ರ ಜೀವ, ಜೀವನ ಉಳಿಯುತ್ತದೆ. ಆದರೆ, ಇನ್ನೊಂದು ಕಡೆ ಮಳೆ ನಿಂತರೆ ಸಾಕಪ್ಪ ಎಂದು ಜನರು ಕಾದು ಕುಳಿತಿದ್ದಾರೆ. ಅಲ್ಲಿ ಮಳೆ ನಿಂತರೆ ಮಾತ್ರ ಜೀವಗಳು ಉಳಿಯುತ್ತವೆ. ಇಂತಹ ವಿಪರ್ಯಾಸದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಇಂತಹ ವಿಪತ್ತಿನ ಸನ್ನಿವೇಶದಲ್ಲಿ ನಾವು ನಮ್ಮ ಮಾನವೀಯತೆಯನ್ನು ಮರೆಯದೆ ಸಂತ್ರಸ್ತರಿಗೆ ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಬೆಂಬಲ ನೀಡಬೇಕಿದೆ ಎಂದು ಮೋದಿ ಮನವಿ ಮಾಡಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬರೂ ಕೇರಳಕ್ಕೆ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾವು ಎಮ್​ಡಿಆರ್​ಎಫ್​ ಸಿಬ್ಬಂದಿಯ ಬದ್ಧತೆ ಮತ್ತು ಸಹಾಯವನ್ನು ನೆನಪಿಸಿಕೊಳ್ಳಲೇಬೇಕು. ಅವರ ಕಾರ್ಯಕ್ಷಮತೆಗೆ ಕೇರಳದ ಪ್ರವಾಹ ಉತ್ತಮ ನಿದರ್ಶನ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published:August 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ