ಆಮ್ ಆದ್ಮಿ ವಿರುದ್ಧ ಗೆಲುವಿಗಾಗಿ ದೆಹಲಿ ಚುನಾವಣಾ ಅಖಾಡಕ್ಕಿಳಿದ ಪ್ರಧಾನಿ ಮೋದಿ

ಇವತ್ತು ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಆಮ್ ಆದ್ಮಿ ಪಕ್ಷ ತಮ್ಮ ಕೆಲಸ ನೋಡಿಕೊಂಡು ಮತನೀಡಿ ಎಂದು ಪ್ರಚಾರ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಆರ್ಟಿಕಲ್ 370ಅನ್ನು ರದ್ದುಗೊಳಿಸಿದ ಕ್ರಮವನ್ನು ದೆಹಲಿ ಮತದಾರರ ಮುಂದಿಟ್ಟರು.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • News18
  • Last Updated :
  • Share this:
ನವದೆಹಲಿ(ಫೆ. 03): ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಖುದ್ದು ಪ್ರಧಾನ ನರೇಂದ್ರ ಮೋದಿ ಅವರೇ ಬಿಜೆಪಿ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಇನ್ನೊಂದೆಡೆ, ಶಾಹೀನ್ ಬಾಗ್ ವಿಷಯದಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಅಂತಾ ಕರೆದಿದೆ‌.

ಸತತ ಸೋಲುಗಳಿಂದ ಕಂಗೆಟ್ಟಿರುವ ಬಿಜೆಪಿ, ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತೆ ಆಯಿತು. ಬಳಿಕ ಜಾರ್ಖಂಡ್​ನಲ್ಲಿ ಇದ್ದ ಅಧಿಕಾರ ಮರೀಚಿಕೆಯಾದ ಬಳಿಕ ಬಿಜೆಪಿಗೆ ಈಗ ಗೆಲುವು ಅನಿವಾರ್ಯವಾಗಿದೆ. ದೆಹಲಿಯಲ್ಲಿ ಗೆದ್ದು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯಿದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ತಕ್ಕ ಉತ್ತರ ನೀಡಬೇಕು. ಜನ ಈ ಕಾಯಿದೆಗಳ ಪರ ಇದ್ದಾರೆ ಎಂದು ಬಿಂಬಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಹಾಗಾಗಿ ದೆಹಲಿ ಚುನಾವಣೆ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ.

ಇದನ್ನೂ ಓದಿ: ಕನ್ನಡ ಬಳಸಿದ್ರೆ ಈ ಶಾಲೆಯಲ್ಲಿ ದಂಡ ಹಾಕ್ತಾರಂತೆ: ಸ್ವಾಮಿ ಇದು ತಾಯಿ ಭುವನೇಶ್ವರಿಯ ನಾಡು, ಇಲ್ಲೂ ಕನ್ನಡ ಮಾತಾಡ್ಬಾರ್ದು ಅಂದ್ರೆ ಹೇಗೆ?

ಇದಲ್ಲದೆ ಆಡಳಿತ ರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಸೆಣಸಿ ಗೆಲ್ಲುವುದು ಕಷ್ಟ. ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿರುವ ಕೆಲಸಗಳ ಮುಂದೆ, ಆ ಪಕ್ಷದ ಸಂಘಟನೆ ಮುಂದೆ ತಮ್ಮ ಪಕ್ಷದ ಸಾಧನೆ ಮತ್ತು ಸಂಘಟನೆ ಸಣ್ಣವು. ಅರವಿಂದ ಕೇಜ್ರಿವಾಲ್ ಅವರನ್ನು ಎದುರಿಸಬಲ್ಲ ಸಮರ್ಥ ನಾಯಕತ್ವ ತಮ್ಮ ಪಕ್ಷದಲ್ಲಿ ಇಲ್ಲ ಎಂಬ ಸಂಗತಿಗಳು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ನರೇಂದ್ರ ಮೋದಿ ಅವರನ್ನೇ ಚುನಾವಣಾ ಪ್ರಚಾರಕ್ಕಿಳಿಸಿದೆ. ಇಂದು ಮತ್ತು ನಾಳೆ ಮೋದಿ ದೆಹಲಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಅಗತ್ಯಬಿದ್ದರೆ ಇನ್ನೂ ಒಂದು ದಿನ ಹೆಚ್ಚು ಬೆವರು ಹರಿಸಲಿದ್ದಾರೆ.

ಇವತ್ತು ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಆಮ್ ಆದ್ಮಿ ಪಕ್ಷ ತಮ್ಮ ಕೆಲಸ ನೋಡಿಕೊಂಡು ಮತನೀಡಿ ಎಂದು ಪ್ರಚಾರ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಆರ್ಟಿಕಲ್ 370ಅನ್ನು ರದ್ದುಗೊಳಿಸಿದ ಕ್ರಮವನ್ನು ದೆಹಲಿ ಮತದಾರರ ಮುಂದಿಟ್ಟರು.

ಇದನ್ನೂ ಓದಿ: ಭಯೋತ್ಪಾದಕ ಕೇಜ್ರಿವಾಲ್: ಸಂಸದ ಪರ್ವೇಶ್ ವರ್ಮಾ ಆರೋಪಕ್ಕೆ ಧ್ವನಿಗೂಡಿಸಿದ ಪ್ರಕಾಶ್ ಜಾವಡೇಕರ್

ಹೇಗಾದರೂ ಮಾಡಿ ದೆಹಲಿಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಬೇಕೆಂದು ಹರಸಾಹಸ ಮಾಡುತ್ತಿರುವ ಬಿಜೆಪಿ ಈಗ ಅರವಿಂದ ಕೇಜ್ರಿವಾಲ್ ಅವರಿಗೆ ಭಯೋತ್ಪಾದಕ ಎಂಬ ಪಟ್ಟ ಕಟ್ಟಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಅರವಿಂದ ಕೇಜ್ರಿವಾಲ್ ಭಯೋತ್ಪಾದಕ ಎನ್ನುವುದಕ್ಕೆ ಬೇಕಾದಷ್ಟು ಪುರಾವೆಗಳಿವೆ ಎಂದು ಹೇಳಿದ್ದಾರೆ.

ಬಿಜೆಪಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ಅರವಿಂದ ಕೇಜ್ರಿವಾಲ್ ನಿಜಕ್ಕೂ ಭಯೋತ್ಪಾದಕ ಆಗಿದ್ದರೆ ಕೂಡಲೇ ಅವರನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಮತದಾನದ ದಿನ ಹತ್ತಿರ ಆಗುತ್ತಿರುವುದರಿಂದ ದೆಹಲಿ ಚುನಾವಣೆಯಲ್ಲಿ ವಾಕ್ಸಮರ ಜೋರಾಗಿದ್ದು, ಇದು ಮತ್ತೂ ಮುಂದೂವರೆಯಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: