• Home
  • »
  • News
  • »
  • national-international
  • »
  • PM Narendra Modi: ನಿಮ್ಮನ್ನು ಭೇಟಿಯಾಗಲು ಕಾಯುತ್ತಿದ್ದೇನೆ; ಇಸ್ರೇಲ್ ನೂತನ ಪ್ರಧಾನಿ ನಫ್ಟಾಲಿ ಬೆನೆಟ್​ಗೆ ಪಿಎಂ ಮೋದಿ ಅಭಿನಂದನೆ

PM Narendra Modi: ನಿಮ್ಮನ್ನು ಭೇಟಿಯಾಗಲು ಕಾಯುತ್ತಿದ್ದೇನೆ; ಇಸ್ರೇಲ್ ನೂತನ ಪ್ರಧಾನಿ ನಫ್ಟಾಲಿ ಬೆನೆಟ್​ಗೆ ಪಿಎಂ ಮೋದಿ ಅಭಿನಂದನೆ

ನರೇಂದ್ರ ಮೋದಿ.

ನರೇಂದ್ರ ಮೋದಿ.

PM Naftali Bennett | ನಿಮ್ಮನ್ನು ಭೇಟಿ ಮಾಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಇಸ್ರೇಲ್ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಇಸ್ರೇಲ್ ಪ್ರಧಾನಿ ನಫ್ಟಾಲಿ ಬೆನೆಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ (ಜೂನ್ 14): ಇಸ್ರೇಲ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನಫ್ಟಾಲಿ ಬೆನೆಟ್ ಅವರಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮನ್ನು ಭೇಟಿ ಮಾಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಇಸ್ರೇಲ್ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


12 ವರ್ಷಗಳ ಕಾಲ ಇಸ್ರೇಲ್ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ್ದ ಬೆಂಜಮಿನ್ ನೆತನ್ಯಾಹು ನಿನ್ನೆ ಅಧಿಕಾರದಿಂದ ಕೆಳಗಿಳಿದಿದ್ದು, ಇಸ್ರೇಲ್ ನೂತನ ಪ್ರಧಾನಮಂತ್ರಿಯಾಗಿ ನಫ್ಟಾಲಿ ಬೆನೆಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್​ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ನಫ್ಟಾಲಿ ಬೆನೆಟ್ ಅವರಿಗೆ ಅಭಿನಂದನೆಗಳು. ಮುಂದಿನ ವರ್ಷಕ್ಕೆ ನಮ್ಮ ದೇಶ ಮತ್ತು ಇಸ್ರೇಲ್ ನಡುವಿನ ಡಿಪ್ಲೊಮ್ಯಾಟಿಕ್ ಸಂಬಂಧಕ್ಕೆ 30 ವರ್ಷಗಳು ತುಂಬುತ್ತವೆ. ಭಾರತ ಮತ್ತು ಇಸ್ರೇಲ್ ನಡುವಿನ ಸೌಹಾರ್ದಯುತ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ನಿಮ್ಮನ್ನು ಭೇಟಿಯಾಗಲು ನಾನು ಕಾಯುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.ಇಸ್ರೇಲ್ ರಾಜಕೀಯ ಪಕ್ಷಗಳ ಮೈತ್ರಿಕೂಟ ನಿನ್ನೆ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿವೆ. ಇಸ್ರೇಲ್​ನಲ್ಲಿ ಇದುವರೆಗೂ ಆಡಳಿತ ನಡೆಸಿದವರಲ್ಲಿ ಅತಿ ಸುದೀರ್ಘ ಕಾಲ ಪ್ರಧಾನಮಂತ್ರಿಯಾಗಿದ್ದ ಬೆಂಜಮಿನ್ ನೆತನ್ಯಾಹು 12 ವರ್ಷಗಳ ಬಳಿಕ ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ದಾರೆ. ಇಷ್ಟು ವರ್ಷಗಳ ಕಾಲ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದಕ್ಕೆ ನೆತನ್ಯಾಹು ಅವರಿಗೂ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.ಯಾರು ಈ ನಫ್ಟಾಲಿ ಬೆನೆಟ್?:
ಈ ಹಿಂದೆ ಇಸ್ರೇಲ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ನಫ್ಟಾಲಿ ಬೆನೆಟ್ ಬಲಪಂಥೀಯ ಪಕ್ಷವಾದ ಯಾಮಿನಾ ಪಕ್ಷದ ಮುಖಂಡರಾಗಿದ್ದಾರೆ. ಟೆಕ್ ಮಿಲಿಯನೇರ್ ಕೂಡ ಆಗಿದ್ದ ಬೆನೆಟ್ ಅವರಿಗೆ 49 ವರ್ಷ. 8 ವಿಭಿನ್ನ ಸಿದ್ಧಾಂತಗಳಿರುವ ಪಕ್ಷಗಳ ಬೆಂಬಲದೊಂದಿಗೆ ಬೆನೆಟ್ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ. ಒಪ್ಪಂದದ ಪ್ರಕಾರ ಇನ್ನು 2 ವರ್ಷ ನಫ್ಟಾಲಿ ಬೆನೆಟ್ ಇಸ್ರೇಲ್​ನ ಪ್ರಧಾನಿಯಾಗಿರಲಿದ್ದಾರೆ. ಬಳಿಕ ಯೆಶ್ ಅತಿಡ್ ಪಕ್ಷಯ ಯೇರ್ ಲ್ಯಾಪಿಡ್ ಇಸ್ರೇಲ್​ನ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ.


ಇದನ್ನೂ ಓದಿ: PM Naftali Bennett: ನಫ್ಟಾಲಿ ಬೆನೆಟ್ ಇಸ್ರೇಲ್​ನ ನೂತನ ಪ್ರಧಾನಿ; 12 ವರ್ಷಗಳ ಬೆಂಜಮಿನ್ ನೆತನ್ಯಾಹು ಯುಗಾಂತ್ಯ


ಇಸ್ರೇಲ್​ನ ಮಾಧ್ಯಮಗಳಿಂದ ಅಲ್ಟ್ರಾ ನ್ಯಾಷನಲಿಸ್ಟ್​ ಎಂದೇ ಕರೆಸಿಕೊಳ್ಳುವ ನಫ್ಟಾಲಿ ಬೆನೆಟ್, ನೆತನ್ಯಾಹು ಅವರಿಗೆ ಹೋಲಿಸಿದರೆ ನಾನು ಹೆಚ್ಚು ಬಲಪಂಥೀಯ ಎಂಬುದು ಸತ್ಯ. ಆದರೆ, ನಾನು ಯಾರೊಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ. ನನ್ನ ಸಿದ್ಧಾಂತಗಳು ರಾಜಕೀಯ ಮತ್ತು ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ನೆತನ್ಯಾಹು ಸರ್ಕಾರದಲ್ಲಿ 2006ರಿಂದ 2008ರ ಅವಧಿಯಲ್ಲಿ ಹಿರಿಯ ಸಲಹೆಗಾರನಾಗಿದ್ದ ಬೆನೆಟ್ ಬಳಿಕ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದಿಂದ ಹೊರಬಂದಿದ್ದರು. ಆಗ ಬೆನೆಟ್ ಇಸ್ರೇಲ್​ನ ಬಿಲಿಯನೇರ್​ ಆಗಿದ್ದರು.


ನಂತರ ನಫ್ಟಾಲಿ ಬೆನೆಟ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡು ಬಲಪಂಥೀಯ ರಾಜಕೀಯ ನಾಯಕನಾಗಿ ಗುರುತಿಸಿಕೊಂಡರು. 2013ರಲ್ಲಿ ಸಂಸತ್ ಅನ್ನು ಕೂಡ ಪ್ರವೇಶಿಸಿದರು. ಇದೀಗ ಇಸ್ರೇಲ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.


ಮೈತ್ರಿಕೂಟ ಒಪ್ಪಂದದ ಪ್ರಕಾರ ಬೆನೆಟ್ ಅವರ ಅಧಿಕಾರವು 2023ಕ್ಕೆ ಕೊನೆಯಾಗಲಿದೆ. ಬಳಿಕ ಯೇರ್ ಲ್ಯಾಪಿಡ್ ಪ್ರಧಾನಿಯಾಗಲಿದ್ದಾರೆ. ಬೆನೆಟ್ ಅವರ ಅಧಿಕಾರಾವಧಿಯಲ್ಲಿ ಲ್ಯಾಪಿಡ್ ಇಸ್ರೇಲ್​ನ ವಿದೇಶಾಂಗ ಸಚಿವರಾಗಿರಲಿದ್ದಾರೆ. ಇಸ್ರೇಲ್​ನ ಬಿಲಿಯನೇರ್ ಆಗಿರುವ ಬೆನೆಟ್ ನೇತೃತ್ವದಲ್ಲಿ 2 ವರ್ಷಗಳ ಕಾಲ ಇಸ್ರೇಲ್ ಮುಂದೆ ಸಾಗಲಿದೆ. ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನಫ್ಟಾಲಿ ಬೆನೆಟ್ ಅವರ ಸಂಪುಟದಲ್ಲಿ 27 ಸಚಿವರಿದ್ದು, ಅವರಲ್ಲಿ 9 ಮಂದಿ ಮಹಿಳೆಯರಾಗಿರುವುದು ವಿಶೇಷ. ಇಸ್ರೇಲ್​ನ ನೂತನ ಪ್ರಧಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

Published by:Sushma Chakre
First published: