ಚೆನ್ನೈ: ದೇಶದಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷಾ ವೈವಿಧ್ಯತೆಯ ಚರ್ಚೆಯ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Tamil Nadu CM MK Stalin) ಗುರುವಾರ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು (PM Narenrda Modi) ಉಪಸ್ಥಿತರಿದ್ದ ಸಮಾರಂಭದಲ್ಲಿಯೇ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲ ಆರ್ ಎನ್ ರವಿ, ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ 2,960 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 5 ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು.
ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ಭಾಷಣ ಮಾಡುವಾಗ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವ ಮೊದಲ ಸರ್ಕಾರಿ ಕಾರ್ಯಕ್ರಮ ಇದಾಗಿದೆ.
ತಮಿಳು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ
ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳು ಭಾಷೆ ಶಾಶ್ವತ ಮತ್ತು ತಮಿಳು ಸಂಸ್ಕೃತಿ ಜಾಗತಿಕವಾಗಿದೆ. ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ವರ್ಷದ ಜನವರಿಯಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ ಹೊಸ ಕ್ಯಾಂಪಸ್ ಅನ್ನು ಚೆನ್ನೈನಲ್ಲಿ ಉದ್ಘಾಟಿಸಲಾಗಿದೆ. ಹೊಸ ಕ್ಯಾಂಪಸ್‌ಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಸೃಷ್ಟಿಗೆ ಉತ್ತೇಜನೆ
ದೇಶದ ಇತರ ಭಾಗಗಳಲ್ಲಿ ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಮ್ಮ ದೇಶದ ವ್ಯಾಪಾರ ಪರಿಸರ ವ್ಯವಸ್ಥೆಯಲ್ಲಿ ಒಂದು ಮಾದರಿ ಬದಲಾವಣೆಯಾಗಲಿದೆ. ಇದು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ. 'ಆತ್ಮನಿರ್ಭರ್' ಎಂಬ ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತದೆ ಎಂದು ಸಹ ಪ್ರಧಾನಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಘೋಷಿಸಿದರು.
ಕೃತಜ್ಞತೆ ವ್ಯಕ್ತಪಡಿಸಿದ ಎಂ.ಕೆ.ಸ್ಟಾಲಿನ್
ನಾನು ಪ್ರಧಾನಿಯವರಿಗೆ ನನ್ನ ಸ್ವಾಗತ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ತಮಿಳು ಭಾಷೆಗೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಅಧಿಕೃತತೆಯ ಸ್ಥಾನಮಾನ ನೀಡುವಂತೆ ಆಗ್ರಹಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆಯೂ ಆಗ್ರಹಿಸಿದ್ದಾರೆ. ತಮಿಳುನಾಡಿನ ಬೆಳವಣಿಗೆಯು ಕೇವಲ ಆರ್ಥಿಕ ಮಾನದಂಡಗಳ ಮೇಲೆ ಮಾತ್ರವಲ್ಲದೆ ಅಂತರ್ಗತ ಬೆಳವಣಿಗೆಯ 'ದ್ರಾವಿಡ ಮಾದರಿ'ಯನ್ನು ಆಧರಿಸಿದೆ ಎಂದು ವಿವರಿಸಿದರು.
ತಮಿಳುನಾಡಿನ ಬೆಳವಣಿಗೆಗೆ ಇಂತಹ ಮೂಲಸೌಕರ್ಯ ಯೋಜನೆಗಳು ಪ್ರಮುಖವಾಗಿವೆ ಮತ್ತು ರಾಜ್ಯವು ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿ ಮುನ್ನಡೆಯಲ್ಲಿದೆ ಎಂದು ಅವರು ಹೇಳಿದರು.
ತಮಿಳುನಾಡಿಗೆ ಧನ ಸಹಾಯ ಹೆಚ್ಚಿಸಿ
ತಮಿಳುನಾಡಿನ ಬೆಳವಣಿಗೆಯ ಪಥವು ಅನನ್ಯವಾಗಿದೆ. ಏಕೆಂದರೆ ಇದು ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ನಡೆಸಲ್ಪಡುವ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಾಗಿದೆ. ಇದು 'ದ್ರಾವಿಡ ಮಾದರಿ' ಎಂದು ಸ್ಟಾಲಿನ್ ಹೇಳಿದರು.
ಇದನ್ನೂ ಓದಿ: Tamil Nadu: ತಮಿಳುನಾಡಿನಲ್ಲಿ ವಿಶ್ವದರ್ಜೆಯ 5 ವಿಮಾನ ನಿಲ್ದಾಣ! ಹೇಗಿರಲಿವೆ? ಇಲ್ನೋಡಿ ಫೋಟೋಸ್
ಸಹಕಾರಿ ಫೆಡರಲಿಸಂಗೆ ಒತ್ತು ನೀಡಿದ ಸ್ಟಾಲಿನ್, ತಮಿಳುನಾಡು ಯೋಜನೆಗಳಿಗೆ ಕೇಂದ್ರ ಸರ್ಕಾರ ಧನಸಹಾಯವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ