PM Narendra Modi Speech: ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭ; ಪ್ರಧಾನಿ ಮೋದಿಯ ಇಂದಿನ ಭಾಷಣದಲ್ಲಿ ಏನೇನಿತ್ತು? ಇಲ್ಲಿದೆ ಪೂರ್ಣ ಮಾಹಿತಿ!

Narendra Modi Speech Highlights: ಜಮ್ಮು-ಕಾಶ್ಮೀರ ನಮ್ಮ ದೇಶದ ಮುಕುಟು ಇಂತಹ ರಾಜ್ಯದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆ ತಲೆ ಎತ್ತಲು ರಾಜ್ಯ ಅಭಿವೃದ್ಧಿಯಿಂದ ವಮಚಿತವಾಗಲು ಕಲಂ 370 ಮತ್ತು 35ಎ ಕಾರಣವಾಗಿತ್ತು. ಹೀಗಾಗಿ ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಈ ವಿಧಿಗಳನ್ನು ರದ್ದು ಮಾಡಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

MAshok Kumar | news18
Updated:August 8, 2019, 9:25 PM IST
PM Narendra Modi Speech: ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭ; ಪ್ರಧಾನಿ ಮೋದಿಯ ಇಂದಿನ ಭಾಷಣದಲ್ಲಿ ಏನೇನಿತ್ತು? ಇಲ್ಲಿದೆ ಪೂರ್ಣ ಮಾಹಿತಿ!
ಪ್ರಧಾನಿ ಮೋದಿ
MAshok Kumar | news18
Updated: August 8, 2019, 9:25 PM IST
ನವ ದೆಹಲಿ (ಆಗಸ್ಟ್​.08); ಜಮ್ಮು-ಕಾಶ್ಮೀರ ನಮ್ಮ ದೇಶದ ಮುಕುಟು ಇಂತಹ ರಾಜ್ಯದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆ ತಲೆ ಎತ್ತಲು, ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಲು ಕಲಂ 370 ಮತ್ತು 35ಎ ಕಾರಣವಾಗಿತ್ತು. ಹೀಗಾಗಿ ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಈ ವಿಧಿಗಳನ್ನು ರದ್ದು ಮಾಡಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಲಂ 370 ರದ್ದು ಮಾಡಿರುವ ತಮ್ಮ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಕಳೆದ ಸೋಮವಾರ ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಿದ್ದರು. ಈ ಮಸೂದೆಗೆ ರಾಜ್ಯಸಭೆ ಹಾಗೂ ಲೋಕಸಭೆ ಅನುಮತಿಯನ್ನೂ ಪಡೆಯಲಾಗಿತ್ತು.

ಈ ವಿಚಾರ ರಾಷ್ಟ್ರಾದಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ಈ ಕುರಿತು ಕಳೆದ ಮೂರು ದಿನಗಳಿಂದ ಮೌನ ವಹಿಸಿದ್ದ ಪ್ರಧಾನಿ ಮೋದಿ ಕೊನೆಗೂ ಇಂದು ತಮ್ಮ ಮೌನ ಮುರಿದಿದ್ದಾರೆ. ಕಲಂ 370 ರದ್ದು ಮಾಡಲು ಕಾರಣ ಏನು? ಹಾಗೂ ಇದರಿಂದ ಕಣಿವೆ ರಾಜ್ಯಕ್ಕೆ ಆಗುವ ಲಾಭವೇನು? ಎಂಬ ಕುರಿತು ಸವಿಸ್ತಾರವಾಗಿ ತಮ್ಮ ಮನದಾಳದ ಮಾತನ್ನು ದೇಶದ ಜನರ ಜೊತೆಗೆ ಹಂಚಿಕೊಂಡಿದ್ದಾರೆ.

ಕಾಶ್ಮೀರದ ಅಭಿವೃದ್ಧಿಗೆ ಕಲಂ 370 ರದ್ದತಿ ಅನಿವಾರ್ಯ ಎಂದ ಮೋದಿ:

ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ ಕಲಂ 370 ರದ್ದು ಮಾಡಿದ ನಿರ್ಣಯದ ಬಗ್ಗೆ ಮಾತನಾಡಿದ ಅವರು, “ಈ ದೇಶದಲ್ಲಿ ಏನೂ ಬದಲಾವಣೆ ಆಗಲ್ಲ ಅನ್ನೋ ಭಾವನೆ ಇತ್ತು, ಆರ್ಟಿಕಲ್ 370ರ ವಿಷಯದಲ್ಲೂ ಅದೇ ಆಗಿತ್ತು. ನಮ್ಮ ಮಕ್ಕಳಿಗೆ ಹಾನಿಯಾಗ್ತಿದ್ದ ಬಗ್ಗೆ ಚರ್ಚೆ ಆಗುತ್ತಿರಲಿಲ್ಲ, ಆರ್ಟಿಕಲ್ 370ಯಿಂದ ಕಣಿವೆ ರಾಜ್ಯಕ್ಕೆ ಏನು ಸಿಕ್ಕಿದೆ? ಜನರಿಗೆ ಏನು ಸಿಕ್ಕಿದೆ? ಎಂದು ಯಾರೂ ಹೇಳ್ತಿರಲಿಲ್ಲ. ಕೇಳುತ್ತಲೂ ಇರಲಿಲ್ಲ.

ಆದರೆ, ಕಲಂ 370, 35ಎ ಯಿಂದ  ಕಾಶ್ಮೀರಕ್ಕೆ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಮಾತ್ರ ಸಿಕ್ಕಿದೆ ಎಂಬುದೇ ಸತ್ಯ. ಕಳೆದ 3 ದಶಕಗಳಲ್ಲಿ 42 ಸಾವಿರ ನಿರ್ದೋಶಿಗಳು ಮೃತಪಟ್ಟಿದ್ದಾರೆ.  ಹೀಗೆ ಜನ ಸಾಯಲು ಹಾಗೂ ಈ ರಾಜ್ಯ ವೇಗವಾಗಿ ಅಭಿವೃದ್ಧಿ ಕೂಡ ಆಗಿಲ್ಲ ಇದಕ್ಕೆ ಕಾರಣ ಯಾರು? ಎಂದು ಮೋದಿ ಪ್ರಶ್ನಿಸಿದರು.

ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಮುನ್ನ ನಾವು ನೂರಾರು ಬಾರಿ ಚಿಂತಿಸಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ. ಒಂದು ರಾಜ್ಯದ ಅಭಿವೃದ್ಧಿ ಮಾಡುವುದು ಹೇಗೆ ಮತ್ತು ಆಡಳಿತ ನಡೆಸುವುದು ಹೇಗೆ ಎಂದು ಇಲ್ಲಿನ ರಾಜಕಾರಣಿಗಳಿಗೆ ಮನದಟ್ಟು ಮಾಡುವ ಅಗತ್ಯವಿದೆ. ಇದೇ ಕಾರಣಕ್ಕೆ ಕಲಂ 370 ಅನ್ನು ರದ್ದು ಮಾಡಿ ಕೇಂದ್ರಾಡಳಿತ ಅಧಿಕಾರ ಹೇರಲಾಗಿದೆ. ಆದರೆ, ಇದು ಕೇವಲ ತಾತ್ಕಾಲಿಕ  ನಿರ್ಣಯವಾಗಿದ್ದು, ಇಡೀ ರಾಜ್ಯವನ್ನು ಮಾದರಿ ರಾಜ್ಯವಾಗಿ ಅಭಿವೃದ್ಧಿಪಡಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.
Loading...

ದೇಶದ ಕಾನೂನು ಈ ಭಾಗಕ್ಕೆ ಅನ್ವಯವೇ ಆಗುತ್ತಿರಲಿಲ್ಲ:

ಈ ದೇಶದ ಕಾನೂನು, ಸಂವಿಧಾನ ದೇಶದ ಒಂದು ಭಾಗದಲ್ಲಿ ಜಾರಿಯೇ ಆಗ್ತಿರ್ಲಿಲ್ಲ. ಪರಿಣಾಮ ಇಲ್ಲಿನ 1.5 ಕೋಟಿ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳು ಲಭ್ಯವೇ ಆಗುತ್ತಿರಲಿಲ್ಲ. ದೇಶದ ಬೇರೆಡೆ ಮಕ್ಕಳಿಗೆ ಶಿಕ್ಷಣದ ಹಕ್ಕು ಇದೆ, ಹೆಣ್ಣುಮಕ್ಕಳಿಗೆ ಹಕ್ಕಿದೆ. ಆದರೆ ಕಾಶ್ಮೀರಿ ಹೆಣ್ಣುಮಕ್ಕಳಿಗೆ ಈ ಹಕ್ಕು ಮರೀಚಿಕೆಯಾಗಿತ್ತು.

ಆದರೆ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಷ್ಟ್ರದ ಎಲ್ಲಾ ಕಾನೂನುಗಳು ಹಾಗೂ ಹಕ್ಕುಗಳು ಇನ್ನು ಕಣಿವೆ ರಾಜ್ಯಕ್ಕೆ ಅನ್ವಯವಾಗಲಿದೆ. ಇದರ ಲಾಭ ಸ್ಥಳೀಯ ಜನರಿಗೆ ಲಭ್ಯವಾಗಲಿದೆ. ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಹಾಗೂ ಮಹಿಳೆಯರಿಗೆ ಸ್ವಾತಂತ್ರ್ಯ ದಕ್ಕಲಿದೆ. ಇದು ಈ ಭಾಗದ ಜನರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿ ಇನ್ನೂ ಆರಂಭವಾಗಲಿದೆ ಅಭಿವೃದ್ಧಿಯ ಹೊಸ ಶಕೆ

ಭಾರತದ ಇತರೆ ಭಾಗಗಳಿಗೆ ಹೋಲಿಸಿದರೆ ಜಮ್ಮು ಕಾಶ್ಮೀರ ಸಾಕಷ್ಟು ಹಿಂದುಳಿದಿದೆ. ಇದಕ್ಕೆ ಕಾರಣ ಕಲಂ 370. ಆದರೆ, ಇದೀಗ ಈ ವಿಧಿಯನ್ನು ರದ್ದು ಮಾಡಲಾಗಿದೆ. ಇನ್ನೂ ಕಾಶ್ಮೀರದಲ್ಲಿ ರಸ್ತೆ, ರೈಲು ಮಾರ್ಗ ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕೆಲಸ ಮಾಡಲಾಗುವುದು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು

ದೇಶದ ಎಲ್ಲಾ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಶಿಕ್ಷಣ ಹಕ್ಕು ಕಾಯ್ದೆಯಿಂದ ಕಾಶ್ಮೀರಿಗಳು ವಂಚಿತರಾಗಿದ್ದರು. ಭವಿಷ್ಯದಲ್ಲಿ ಕಣಿವೆ ರಾಜ್ಯದಲ್ಲಿ ಐಐಎಂ ಐಐಟಿ ಸ್ಥಾಪನೆ ಮಾಡಲಾಗುವುದು ಹಾಗೂ ಇಲ್ಲಿನ ಜನರನ್ನು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸಮಾಜದ ಮೇಲ್​ ಸ್ತರಕ್ಕೆ ತರಲು ಶ್ರಮಿಸಲಾಗುವುದು.

ಇನ್ನೂ ಕಾಶ್ಮೀರದಲ್ಲಿ ಉದ್ಯಮ ಆರಂಭಿಸುವ ಖಾಸಗಿ ಕ್ಷೇತ್ರದವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ಕೇಂದ್ರ ಸರ್ಕಾರ ಮಾಡಿಕೊಡಲಿದೆ. ಈ ಮೂಲಕ ಉದ್ಯೋಗ ಸೃಷ್ಟಿಸಿ ಇಲ್ಲಿನ ಬಡತನವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶ್ವಾಸನೆ ನೀಡಿದ್ಧಾರೆ.

ಕಣಿವೆ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು

ಭಾಷಣದ ವೇಳೆ ಪ್ರವಾಸೋದ್ಯಮದ ಕುರಿತು ಉಲ್ಲೇಖಿಸಿದ ಮೋದಿ, “ಕಾಶ್ಮೀರ ಪ್ರವಾಸಿಗರ ಸ್ವರ್ಗ. ಇಲ್ಲಿ ಪ್ರವಾಸೋದ್ಯಮವನ್ನು ಬೆಳೆಸಿದರೆ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಗೂ ಮಾದರಿ ಪ್ರವಾಸೋದ್ಯಮವಾಗಿ ಕಾಶ್ಮೀರ ಬೆಳೆಯುವ ಸಾಧ್ಯತೆ ಇದೆ. ಈ ಮೂಲಕ ಸ್ಥಳೀಯರು ಆರ್ಥಿಕವಾಗಿ ಮತ್ತಷ್ಟು ಲಾಭಪಡೆಯಬಹುದು.

ಹಿಂದಿ, ತೆಲುಗು, ತಮಿಳು ಸಿನಿಮಾ ಉದ್ಯಮದವರು ಇಲ್ಲಿಗೆ ಆಗಮಿಸಿ ಚಿತ್ರೀಕರಣದಲ್ಲಿ ತೊಡಗುವಂತೆ ನಾನು ಮನವಿ ಮಾಡುತ್ತೇನೆ. ಇಲ್ಲಿ ಚಿತ್ರಮಂದಿರಗಳು ತಲೆ ಎತ್ತಲಿವೆ. ಸ್ಥಳೀಯ ಪದಾರ್ಥಗಳು, ಔಷಧೀಯ ವಸ್ತುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗುವುದು, ಈ ಮೂಲಕ ಅಪಾರ ಪ್ರಮಾಣದ ಹಣ ಹರಿದುಬರಲಿದೆ. ಈ ಮೂಲಕವೂ ರಾಜ್ಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಮಹಿಳೆಯರು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದ ಅವರು, ಈ ರಾಜ್ಯದಲ್ಲಿ ಶೀಘ್ರವಾಗಿ ಪಾರದರ್ಶಕ ಹಾಗೂ ನ್ಯಾಯಯುತವಾಗಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಭಯೋತ್ಪಾದನೆ ರಹಿತ ಸರ್ವತೋಮುಖ ಅಭಿವೃದ್ಧಿಯ ಕಡೆ ಕಾಶ್ಮೀರವನ್ನು ಚಲಿಸುವಂತೆ ಮಾಡಲು, ದೇಶದ ಜನ ಕೈಜೋಡಿಸಬೇಕು, ದೇಶದ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕರೆ ನೀಡಿದ್ದಾರೆ.
First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...