ಇಮ್ರಾನ್​​ ಖಾನ್​​ಗೆ ಮೋದಿ ಸೆಡ್ಡು: ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ನಿರ್ಧಾರ

ಯಾವುದೇ ಕಾರಣಕ್ಕೂ ಭಾರತ ಮತ್ತು ಪಾಕ್​​ ವಿಚಾರದಲ್ಲಿ ಶಾಂತಿಯುತ ಮಾತುಕತೆಗೆ ಅವಕಾಶವಿಲ್ಲ ಎಂಬ ಎಚ್ಚರಿಕಾ ಸಂದೇಶವನ್ನು ಪ್ರಧಾನಿ ಮೋದಿಯವರು ಇಮ್ರಾನ್​ ಖಾನ್​​ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Ganesh Nachikethu
Updated:June 12, 2019, 4:47 PM IST
ಇಮ್ರಾನ್​​ ಖಾನ್​​ಗೆ ಮೋದಿ ಸೆಡ್ಡು: ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ(ಜೂನ್​​.12): ಸೆಂಟ್ರಲ್​​ ಏಷ್ಯಾದಲ್ಲಿರುವ ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್​ ನಗರದಲ್ಲಿ ಜೂನ್​​ 13ಕ್ಕೆ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ.

ಕಿರ್ಗಿಸ್ತಾನದ ಬಿಶ್ಕೆಕ್​​ಗೆ ಪ್ರಧಾನಿ ಮೋದಿಯವರು ಪಾಕ್ ವಾಯುಮಾರ್ಗ ಮೂಲಕ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಪ್ರಧಾನಿ ವಿಮಾನ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲಿದೆ ಎಂದು ಪಾಕಿಸ್ತಾನದ ಬಳಿ ಭಾರತ ತಾತ್ವಿಕ ಒಪ್ಪಿಗೆಯೂ ಪಡೆದಿತ್ತು. ಇದೀಗ ಪ್ರಧಾನಿ ಮೋದಿ ಪಾಕ್ ವಾಯುಮಾರ್ಗದಲ್ಲಿ ತೆರಳುತ್ತಿಲ್ಲ. ಬದಲಿಗೆ ಒಮನ್, ಇರಾನ್ ಮೂಲಕ ಬಿಶ್ಕೆಕ್​​ಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಸೆಡ್ಡು ಹೊಡೆದಿದೆ.

ಇತ್ತೀಚೆಗೆ ಫೆಬ್ರುವರಿ 26 ರಂದು ಪಾಕ್​ ಆಕ್ರಮಿತ ಬಾಲಾಕೋಟ್​​ನಲ್ಲಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರ ತಾಣದ ಮೇಲೆ ಭಾರತೀಯ ಸೇನೆ ದಿಢೀರ್​​ ವಾಯುದಾಳಿ ನಡೆಸಿತ್ತು. ಈ ಘಟನೆ ನಂತರದಲ್ಲಿ ಪಾಕ್​​ ತನ್ನ ಒಟ್ಟು 11 ವಾಯುಮಾರ್ಗಗಳನ್ನು ಬಂದ್​​ ಮಾಡಿದೆ. ಈ ಪೈಕಿ ದಕ್ಷಿಣ ಪಾಕಿಸ್ತಾನದ ಎರಡು ವಾಯುಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಭಾರತಕ್ಕೆ ಅನುಮತಿ ನೀಡಿತ್ತು. ಬೇರೆ ಮಾರ್ಗಗಳನ್ನು ಭಾರತದ ಪಾಲಿಗೆ ಪಾಕ್​ ಮುಚ್ಚಿ ಹಾಕಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ, ಬಾಲಾಕೋಟ್ ಏರ್ ಸ್ಟ್ರೈಕ್, ಉಗ್ರ ನಿಗ್ರಹ ಕಾರ್ಯಾಚರಣೆ ಬಗ್ಗೆ ನೆಟ್ವರ್ಕ್18 ಜೊತೆ ಮೋದಿ ಮಾತು

ಹಾಗಾಗಿ ಕಿರ್ಗಿಸ್ತಾನಕ್ಕೆ ಪಾಕ್​​ ವಾಯುಮಾರ್ಗದ ಮೂಲಕ ಮೋದಿಯವರ ವಿಮಾನ ಹಾರಾಟ ನಡೆಸಲು ಭಾರತ ಅಲ್ಲಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿತ್ತು. ಬಳಿಕ ಖುದ್ದು ಇಮ್ರಾನ್​​ ಖಾನ್​ ಅವರೇ ತಾತ್ವಿಕ ಒಪ್ಪಿಗೆ ನೀಡಿದ್ದರು. ಅಲ್ಲದೇ ತಾವು ಕೂಡ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದರು. ಜತೆಗೆ ಎರಡೂ ದೇಶಗಳ ನಡುವಿನ ಜಮ್ಮು-ಕಾಶ್ಮೀರ ವಿವಾದ ಸೇರಿದಂತೆ ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರದ ಅಗತ್ಯವಿದೆ ಎಂದು ಪ್ರಧಾನಿ ಮೋದಿಯವರಿಗೆ ಇಮ್ರಾನ್​ ಖಾನ್​​ ಪತ್ರ ಬರೆದಿದ್ದರು.

ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮಾರ್ಗವನ್ನು ಬದಲಿಸಿದ್ಧಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಭಾರತ ಮತ್ತು ಪಾಕ್​​ ವಿಚಾರದಲ್ಲಿ ಶಾಂತಿಯುತ ಮಾತುಕತೆಗೆ ಅವಕಾಶವಿಲ್ಲ ಎಂಬ ಎಚ್ಚರಿಕಾ ಸಂದೇಶವನ್ನು ಇಮ್ರಾನ್​ ಖಾನ್​​ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
------------
First published: June 12, 2019, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading