Farm Laws: ಕೃಷಿ ಮಸೂದೆ ವಾಪಸ್ ಘೋಷಣೆ ಬಳಿಕ ಮೊದಲ ಬಾರಿ ಮೋದಿ ನ. 25ಕ್ಕೆ ಉತ್ತರಪ್ರದೇಶಕ್ಕೆ ಭೇಟಿ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ. ಆದರೆ ಅವುಗಳನ್ನು ಸಂಸತ್ ಅಧಿವೇಶನದ (Parliament Session) ವೇಳೆ ಅಧಿಕೃತವಾಗಿ ವಾಪಸ್ ಪಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇನ್ನೂ ಬಗೆಹರಿದಿಲ್ಲ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ನವದೆಹಲಿ, ನ. 23: ಕೇಂದ್ರ ಸರ್ಕಾರ (Union Government) ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು (Three Agricultural Laws) ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಘೋಷಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಉತ್ತರ ಪ್ರದೇಶದ ಜೇವಾರ್ ನಲ್ಲಿ ನಿರ್ಮಿಸಲಾಗುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆನಂತರ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾಷಣದ ವೇಳೆ ತಮ್ಮ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

ನವೆಂಬರ್ 19ರಂದು ಗುರುನಾನಕ್ (Guru nanak) ಜಯಂತಿ ದಿನ‌ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಘೋಷಣೆ ಮಾಡಿದ್ದರು. ಅಲ್ಲದೆ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಲು ಮುಂದಾದದ್ದಕ್ಕೆ ದೇಶವಾಸಿಗಳ ಕ್ಷಮೆಯನ್ನೂ ಯಾಚಿಸಿದ್ದರು. ಕೃಷಿ ಕಾಯಿದೆಗಳಿಂದ ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections) ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಹೇಳಲಾಗುತ್ತಿತ್ತು. ಅದೇ ಕಾರಣಕ್ಕೆ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ವ್ಯಾಖ್ಯಾನ ಮಾಡಲಾಗುತ್ತಿತ್ತು. ಅದೇ ರೀತಿ ಈಗ ಮೋದಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಕೂಡ ಚುನಾವಣೆ ಹಿನ್ನೆಲೆಯಲ್ಲೇ ಎನ್ನಲಾಗುತ್ತಿದೆ.

ಖುದ್ದು ಪ್ರಧಾನಿ ಮೋದಿಯೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರೂ ಈ ಕಾನೂನುಗಳನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡಿಸಿ ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (Samyukta Kisan Morcha) ಸ್ಪಷ್ಟಪಡಿಸಿದೆ. ಜೊತೆಗೆ ಪ್ರಧಾನಿ ಮೋದಿಗೆ ಆರು ಬೇಡಿಕೆಗಳನ್ನು ಒಳಗೊಂಡ ಪತ್ರ ಬರೆದಿದೆ.

ಸಂಯುಕ್ತ ಕಿಸಾನ್ ಮೋರ್ಚಾವು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಅವರ ಆರು ಬೇಡಿಕೆಗಳು ಈ ರೀತಿ ಇವೆ.

1) ರೈತರು ಬೆಳೆದ ಎಲ್ಲಾ ರೀತಿಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯಿದೆಯನ್ನು ಜಾರಿ ಮಾಡಬೇಕು.
2) ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದನ್ನು ತಡೆಯಲು ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಾರದು.
3) ಬೆಳೆ ತ್ಯಾಜ್ಯಗಳನ್ನು ಸುಡುವ ರೈತರ ಮೇಲೆ ಕೇಸು ಹಾಕಬಾರದು.
4) ಕಳೆದ ಒಂದು ವರ್ಷದಿಂದ ಕೃಷಿ ಕಾಯಿದೆ ಹೋರಾಟ ನಡೆಸಿದ ರೈತರ ವಿರುದ್ಧ ಹಾಕಲಾಗಿರುವ ಕೇಸುಗಳನ್ನು ವಾಪಸ್ ಪಡೆಯಬೇಕು.
5) ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡಬೇಕು.
6) ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಹತ್ಯಾಕಾಂಡ ನಡೆಸಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರನ್ನು ಸಂಪುಟದಿಂದ ವಜಾ ಮಾಡಬೇಕು.

ಲಖನೌದಲ್ಲಿ ರೈತ ಮಹಾಪಂಚಾಯಿತಿ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ. ಆದರೆ ಅವುಗಳನ್ನು ಸಂಸತ್ ಅಧಿವೇಶನದ (Parliament Session) ವೇಳೆ ಅಧಿಕೃತವಾಗಿ ವಾಪಸ್ ಪಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇನ್ನೂ ಬಗೆಹರಿದಿಲ್ಲ. ಜೊತೆಗೆ ಈ ಕಾನೂನುಗಳಿಗೆ ಬೇರೆ ಯಾವ ರೀತಿಯ ತಿದ್ದುಪಡಿಗಳನ್ನು (Amendments) ತರಲಿದೆಯೋ ಎಂಬ ಅನುಮಾನಗಳು ಬಗೆಹರಿದಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ ನಿನ್ನೆ (ನವೆಂಬರ್ 22) ರೈತ ಮಹಾಪಂಚಾಯಿತಿ (Raita Mahapancayath) ನಡೆಸಲಾಯಿತು.

ನ. 27ಕ್ಕೆ ಮತ್ತೊಂದು ಸಭೆ

ಇದಲ್ಲದೆ ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ ಆಗಲಿದ್ದು ಆಗ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವಂತೆ ಒತ್ತಡ ಹೇರಲು ರೈತ ಸಂಘಟನೆಗಳು  ನವೆಂಬರ್ 27ರಂದು ಮತ್ತೊಂದು ಸುತ್ತಿನ ಸಭೆ ನಡೆಸಲಯ ನಿರ್ಧರಿಸಿವೆ ಎಂದು ತಿಳಿದುಬಂದಿದೆ. ಅಂದಿನ ಸಭೆಯಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದನ್ನು ಓದಿ: MLC Election: ನಮಗೆ ಕಾಂಪಿಟೇಟರ್ ಯಾರು ಇಲ್ಲ, ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ; ಲಖನ್ ಜಾರಕಿಹೊಳಿ

ಸಂಪುಟ ಒಪ್ಪಿಗೆ ಸಾಧ್ಯತೆ

ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ನೆರವು) ಕಾಯ್ದೆ, ದರ ಭರವಸೆ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಈಗಾಗಲೇ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಅಧಿಕೃತವಾಗಿ ಈ‌ ಕಾಯಿದೆಗಳನ್ನು ವಾಪಸ್ ಪಡೆಯಲು ಮತ್ತೆ ಮಸೂದೆಗಳ ರೂಪದಲ್ಲಿ ಸಂಸತ್ತಿನಲ್ಲಿ ಮಂಡಿಸಿ ಸಂಸತ್ತಿನ ಅಂಗೀಕಾರ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 24ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗಳನ್ನು ಇಟ್ಟು ಒಪ್ಪಿಗೆ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ.
Published by:HR Ramesh
First published: