ಕೆಲವೊಮ್ಮೆ ಎಷ್ಟೋ ಜನರಿಗೆ ಚೆನ್ನಾಗಿ ಓದಿಕೊಂಡರೂ (Studies) ಬೇಗನೆ ಒಂದು ಕೆಲಸ (Job) ಸಿಕ್ಕಿರುವುದಿಲ್ಲ, ಆದರೆ ಇನ್ನೂ ಕೆಲವರಿಗೆ ಬೇಗನೆ ಕೆಲಸ ಸಿಕ್ಕಿರುತ್ತದೆ. ಇದರಲ್ಲಿ ಸ್ವಲ್ಪ ಅದೃಷ್ಟದ (Luck) ಪಾತ್ರವು ಇರುತ್ತದೆ ಅಂತ ಹೇಳಬಹುದು. ಆದರೆ ಕೆಲಸ ತಡವಾಗಿ ಸಿಕ್ಕರೂ ಆ ಕೆಲಸದಲ್ಲಿ ಕೆಲವೊಂದು ಸಂದರ್ಭಗಳು ಅವರನ್ನು ತುಂಬಾನೇ ಹೆಮ್ಮೆ ಪಡುವಂತೆ (Proud Situations) ಮಾಡುತ್ತವೆ. ಇದೇ ರೀತಿಯ ಒಂದು ಘಟನೆ ಮೊನ್ನೆ ನಡೆದಿದೆ.
ಮೊನ್ನೆ ತಾನೇ ಅಂಧೇರಿಯ ಗುಂದಾವಲಿ ನಿಲ್ದಾಣದಿಂದ ಮುಂಬೈ ಮೆಟ್ರೋ ಮಾರ್ಗಗಳು 2ಎ ಮತ್ತು 7ರ ಎರಡನೇ ಹಂತವನ್ನು ಉದ್ಘಾಟಿಸಿದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ಮೆಟ್ರೋದಲ್ಲಿ ಕೂತು ಪ್ರಯಾಣಿಸಿದ್ದರು. ಪ್ರಧಾನಿ ಮೋದಿ ಅವರನ್ನು ನೋಡಿದ ಅಲ್ಲಿನ ಜನರು ಸಾಕಷ್ಟು ಸಂತೋಷಪಟ್ಟಿದ್ದರು. ಇನ್ನು, ಪ್ರಧಾನಿ ಅವರನ್ನ ಕೂರಿಸಿಕೊಂಡು ಹೋದ ಆ ಮೆಟ್ರೋ ರೈಲನ್ನು ಓಡಿಸಿದವರಿಗೆ ಇನ್ನೆಷ್ಟು ಖುಷಿ ಅಗಲಿಕ್ಕಿಲ್ಲ ನೀವೇ ಹೇಳಿ? ಆ ಮೆಟ್ರೋವನ್ನು ಓಡಿಸಿದವರಲ್ಲಿ ತೃಪ್ತಿ ಶೇಟೆ ಸಹ ಒಬ್ಬರು ಅಂತ ಹೇಳಬಹುದು.
ಯಾರಿವರು ಮೆಟ್ರೋ ಪೈಲಟ್ ತೃಪ್ತಿ ಶೇಟೆ?
ಮೆಟ್ರೋ 2ಎ ಮತ್ತು 7 ರ ಮಾರ್ಗದ ರೈಲುಗಳನ್ನು ನಿರ್ವಹಿಸಲಿರುವ 91 ಮಹಿಳಾ ಮೆಟ್ರೋ ರೈಲು ಪೈಲಟ್ ಗಳಲ್ಲಿ ಒಬ್ಬರಾದ 27 ವರ್ಷದ ಶೇಟೆ ಅವರು ಕಳೆದ ಏಪ್ರಿಲ್ ನಲ್ಲಿ ಈ ಯೋಜನೆಯ ಮೊದಲ ಹಂತದ ಮೆಟ್ರೋ ಉದ್ಘಾಟನೆ ಸಮಯದಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರನ್ನು ಕರೆದೊಯ್ದಿದ್ದರು.
"ಪ್ರಧಾನಿ, ಸಿಎಂ ಮತ್ತು ಉಪಮುಖ್ಯಮಂತ್ರಿ ಮೆಟ್ರೋದಲ್ಲಿ ಪ್ರಯಾಣಿಸಿದಾಗ ನನಗೆ ಆ ಮೆಟ್ರೊ ರೈಲು ಓಡಿಸುವ ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಉತ್ಸುಕಳಾಗಿದ್ದೆ ಮತ್ತು ಸಂತೋಷಪಟ್ಟೆ. ಇದು ಒಂದು ಗೌರವ" ಎಂದು ಶೇಟೆ ಅವರು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
"ಇಂದು ನನ್ನ ತಾಯಿ, ತಂದೆ ಮತ್ತು ಇತರ ಎಲ್ಲಾ ಕುಟುಂಬ ಸದಸ್ಯರು ನನ್ನ ಬಗ್ಗೆ ತುಂಬಾನೇ ಹೆಮ್ಮೆ ಪಡುತ್ತಾರೆ. ಅವರು ತುಂಬಾ ಸಂತೋಷವಾಗಿದ್ದಾರೆ" ಎಂದು ತೃಪ್ತಿ ಅವರು ಹೇಳಿದ್ದಾರೆ.
ರೋಮಾಂಚನದ ಅನುಭವಾಯ್ತು ಎಂದ ತೃಪ್ತಿ
ನಿಮಗೆ ಅಂತಹ ದೊಡ್ಡ ವ್ಯಕ್ತಿಗಳನ್ನು ಕೂರಿಸಿಕೊಂಡು ಮೆಟ್ರೋ ಓಡಿಸುವುದಕ್ಕೆ ಸ್ವಲ್ಪ ಭಯವಾಗಲಿಲ್ಲವೇ? ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿರೋ ತೃಪ್ತಿ ಶೇಟೆ, "ನಾನು ರೋಮಾಂಚನಗೊಂಡಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ಆದರೆ ಎಂದಿಗೂ ಹೆದರಲಿಲ್ಲ. ನನ್ನ ಕೌಶಲ್ಯಗಳ ಬಗ್ಗೆ ನನಗೆ ತುಂಬಾನೇ ವಿಶ್ವಾಸವಿದೆ.
ನಾನು ತರಬೇತಿ ಪಡೆದ ಮೆಟ್ರೋ ಪೈಲಟ್ ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರ ಬೆಂಬಲವನ್ನು ಸಹ ನಾನು ಹೊಂದಿದ್ದೇನೆ” ಎಂದು ಹೇಳಿದ್ದಾರೆ.
ಔರಂಗಾಬಾದ್ (ಈಗ ಸಂಭಾಜಿ ನಗರ) ಮೂಲದ ಶೇಟೆ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮತ್ತು ಬ್ಯಾಚುಲರ್ ಪದವಿಯನ್ನ ಪಡೆದಿದ್ದಾರೆ. 2020 ರಲ್ಲಿ ಹೈದರಾಬಾದ್ ನಲ್ಲಿ ಮೆಟ್ರೋ ರೈಲು ಪೈಲಟ್ ಆಗಲು ತರಬೇತಿ ಪಡೆದುಕೊಂಡಿದ್ದರು.
"ನಾನು ಹೈದರಾಬಾದ್ ನಲ್ಲಿ ಆರು ತಿಂಗಳ ತರಬೇತಿ ಪಡೆದಿದ್ದೇನೆ, ನಂತರ ನಾನು 2020 ರಲ್ಲಿ ಮುಂಬೈಗೆ ಬಂದೆ. ನಂತರ ಈ ರೈಲನ್ನು ಓಡಿಸಲು ನನಗೆ ಮತ್ತೆ ತರಬೇತಿ ನೀಡಲಾಯಿತು" ಎಂದು ಅವರು ಹೇಳಿದ್ದಾರೆ.
On board the Metro, which will boost ‘Ease of Living’ for the people of Mumbai. pic.twitter.com/JG4tHwAAXA
— Narendra Modi (@narendramodi) January 19, 2023
ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಕೆಲಸ ಪಡೆಯಲು ಮೂರು ವರ್ಷಗಳ ಕಾಲ ಹೆಣಗಾಡಬೇಕಾಯಿತು ಎಂದು ಶೇಟೆ ತಿಳಿಸಿದ್ದಾರೆ.
"ಒಬ್ಬ ಮಹಿಳೆಯಾಗಿ, ಈ ಅವಕಾಶವನ್ನು ಪಡೆದಿದ್ದೇನೆ. 91 ಪೈಲಟ್ ಗಳ ಗುಂಪಿನಿಂದ ಬಂದದ್ದು ಒಂದು ದೊಡ್ಡ ವಿಷಯವಾಗಿತ್ತು. ಈಗ ಹೋರಾಟ ಮತ್ತು ಕಠಿಣ ಪರಿಶ್ರಮವು ಫಲ ನೀಡಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಹಲವಾರು ಯೋಜನೆಗಳಿಗೆ ವರ್ಚುವಲ್ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಮಂತ್ರಿಯವರು ಅಂಧೇರಿಯ ಗುಂದಾವಲಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದರು. ಅಲ್ಲಿಂದ ಅವರು ಮೆಟ್ರೋ 2ಎ ಮತ್ತು 7 ರ ಮಾರ್ಗದ 2ನೇ ಹಂತವನ್ನು ಲೋಕಾರ್ಪಣೆ ಮಾಡಿದರು.
ಸಂಜೆ 7 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮೋದಿ ಅವರು ಶೇಟೆ ಅವರ ರೈಲಿನಲ್ಲಿ ಮೊಗರಾ ನಿಲ್ದಾಣಕ್ಕೆ ಪ್ರಯಾಣಿಸಿ 2.4 ಕಿಲೋ ಮೀಟರ್ ದೂರದಲ್ಲಿರುವ ಗುಂದಾವಲಿ ನಿಲ್ದಾಣಕ್ಕೆ ಮರಳಿದರು.
ಪ್ರಯಾಣದ ಸಮಯದಲ್ಲಿ, ಪ್ರಧಾನಿ ಅವರು ವಿದ್ಯಾರ್ಥಿಗಳು, ಕೆಲವು ಜನರು ಮತ್ತು ಮೆಟ್ರೋ ಸಿಬ್ಬಂದಿಯೊಂದಿಗೆ ಸಂವಾದ ಸಹ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ