news18-kannada Updated:January 9, 2021, 7:00 PM IST
ನರೇಂದ್ರ ಮೋದಿ.
ನವದೆಹಲಿ (ಜ. 9): ಎರಡನೇ ಹಂತದ ಕೊರೋನಾ ಲಸಿಕೆ ವಿತರಣೆ ತಾಲೀಮು ಪೂರ್ಣಗೊಂಡಿದ್ದು, ಯಶಸ್ವಿಯಾಗಿದೆ. ಇದರ ಬೆನ್ನಿಗೆ ಪ್ರಧಾನಿ ಮೋದಿ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜ. 16ರಿಂದ ದೇಶಾದ್ಯಂತ ಕೊರೋನಾ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ. ನಾಗರೀಕರಿಗೂ ಮುನ್ನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆಯಲ್ಲಿ ಪ್ರಧಾನ ಆದ್ಯತೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇಂದು ಸಂಜೆ ಹಿರಿಯ ಅಧಿಕಾರಿಗಳೊಂದಿಗಿನ ಉನ್ನತ ಮಟ್ಟದ ಸಭೆ ನಡೆಸಿದ ಅವರು ದೇಶದಲ್ಲಿನ ಕೋವಿಡ್ ಸ್ಥಿತಿಗತಿಗಳ ಕುರಿತು ಅವಲೋಕನ ನಡೆಸಿದರು. ಈ ವೇಳೆ ಲಸಿಕೆ ವಿತರಣೆ ಕುರಿತು ಅಂತಿಮ ತೀರ್ಮಾನ ನಡೆಸಿದ್ದಾರೆ. ಈ ಲಸಿಕೆ ವಿತರಣಾ ಕಾರ್ಯಕ್ರಮವು ಕೋವಿಡ್ ವಿರುದ್ಧ ಹೋರಾಡುವ ಹೆಗ್ಗೆರುತಾಗಿರಲಿದೆ ಎಂದು ಅವರು ಬಣ್ಣಿಸಿದರು.
ಇನ್ನು ಈ ಲಸಿಕೆಯನ್ನು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೇರವಾಗಿ ತೊಡಗಿಸಿಕೊಂಡಿರುವ ಆರೋಗ್ಯ ಸಮುದಾಯ, ಪೊಲೀಸರಿಗೆ ಪ್ರಧಾನ ಆದ್ಯತೆ ನೀಡಲಾಗುವುದು. ಅಲ್ಲದೇ ಕೊರೋನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದ ಕಾರ್ಯಕರ್ತರಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಈಗಾಗಲೇ ಹರ್ಷವರ್ಧನ್ ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ 50 ವರ್ಷಕ್ಕೆ ಮೇಲ್ಪಟ್ಟ ಹಾಗೂ 50 ವರ್ಷದೊಳಗೆ ಆರೋಗ್ಯದ ಸಮಸ್ಯೆ ಹೊಂದಿರುವ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದರು.ಈ ಕುರಿತು ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರಧಾನ ಮಂತ್ರಿ ಈ ಕುರಿತು ಟ್ವೀಟ್ ಮಾಡಿದ್ದು, ಜ .16ರಿಂದ ಲಸಿಕೆ ವಿತರಣೆ ಕಾರ್ಯಕ್ಕೆ ದೇಶದಲ್ಲಿ ಚಾಲನೆ ನೀಡಲಾಗುವುದು. ಇದರಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಪ್ರಧಾನ ಆದ್ಯತೆ ಎಂದು ತಿಳಿಸಿದ್ದಾರೆ.
Published by:
Seema R
First published:
January 9, 2021, 7:00 PM IST