ರೈತರ ಭೂಮಿ ಕಬಳಿಸುತ್ತೇವೆಂಬ ಸುಳ್ಳು ಸೃಷ್ಟಿ: ಪಿಎಂ ಕಿಸಾನ್ ಕಾರ್ಯಕ್ರಮದಲ್ಲಿ ಪ್ರಧಾನಿ ಆಕ್ರೋಶ

ದೇಶಾದ್ಯಂತ 9 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ಪ್ರಧಾನಿಯಿಂದ 18,000 ಕೋಟಿಗೂ ಅಧಿಕ ಹಣ ಬಿಡುಗಡೆ; ಕೇಂದ್ರ ಯೋಜನೆಗಳ ಲಾಭ ಜನರಿಗೆ ಸಿಗದಂತೆ ಮಾಡಿರುವ ಬಂಗಾಳ ಸರ್ಕಾರವನ್ನು ಪ್ರಧಾನಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಡಿ. 25): ರೈತರ ಪ್ರತಿಭಟನೆಗಳಿಗೆ ಕಾರಣವಾಗಿರುವ ಕೇಂದ್ರದ ಕೃಷಿ ಕಾಯ್ದೆಗಳನ್ನ ಪ್ರಧಾನಿ ನರೇಂದ್​ರ ಮೋದಿ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡುತ್ತಿದ್ದ ಅವರು, ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ ಎಂದು ವಿಪಕ್ಷಗಳು ಹಾಗೂ ಕೆಲ ರೈತ ಸಂಘಟನೆಗಳ ವಿರುದ್ದ ಹರಿಹಾಯ್ದಿದ್ದಾರೆ. ರೈತರ ಭೂಮಿಯನ್ನು ಕಬಳಿಸಲಾಗುತ್ತದೆ ಎಂದು ಸುಳ್ಳುಗಳನ್ನ ಹಬ್ಬಿಸಲಾಗುತ್ತಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  “ಗುತ್ತಿಗೆ ಒಪ್ಪಂದಕ್ಕೆ ಮುಂದಾದರೆ ರೈತರು ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೆಲ ಜನರು ಸುಳ್ಳು ಹೇಳುತ್ತಿದ್ದಾರೆ” ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ವಾದಿಸುತ್ತಿರುವ ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ಧಾರೆ.

  ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎಡಪಕ್ಷಗಳ ಜೊತೆ ಮೈತ್ರಿಗೆ ಸಿದ್ದ; ಕಾಂಗ್ರೆಸ್​ ಘೋಷಣೆ

  ಇದೇ ವೇಳೆ, ಪಿಎಂ ಕಿಸಾನ್ ಯೋಜನೆಯ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು 18 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದರು. ಈ ಯೋಜನೆಯಲ್ಲಿ 9 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ರೈತ ಕುಟುಂಬಗಳು ಫಲಾನುಭವಿಗಳಾಗಿವೆ. ದೇಶಾದ್ಯಂತ 19,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಧಾನಿ ಭಾಷಣ ಕೇಳಲು ಮತ್ತು ಸಂವಾದ ನಡೆಸಲು ವಿಡಿಯೋ ಕಾನ್ಫೆರೆನ್ಸಿಂಗ್​ಗೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ಬಿಜೆಪಿ ಗುಡ್ ಗವರ್ನೆನ್ಸ್ ದಿನವಾಗಿಯೂ ಇತ್ತೀಚಿನ ವರ್ಷಗಳಿಂದ ಆಚರಿಸುತ್ತಾ ಬಂದಿದೆ. ಈ ಸಂದರ್ಭವನ್ನು ಪ್ರಧಾನಿಗಳು ತಮ್ಮ ಸರ್ಕಾರದ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಳ್ಳಲು ಒಳ್ಳೆಯ ವೇದಿಕೆಯಾಗಿ ಮಾಡಿಕೊಂಡರು. ಕರ್ನಾಟಕದ ಕೆಲವರನ್ನ ಸೇರಿದಂತೆ ದೇಶದ ವಿವಿಧೆಡೆಯ ಪ್ರಗತಿಪರ ಕೃಷಿಕರು ಮತ್ತು ಉದ್ಯಮಶೀಲ ಕೃಷಿಕರೊಂದಿಗೆ ಮೋದಿ ಸಂವಾದ ನಡೆಸಿದರು.

  ಇದನ್ನೂ ಓದಿ: CoronaVirus; ಬೆಂಗಳೂರಿಗೆ ವಕ್ಕರಿಸಿದ ರೂಪಾಂತರಿ ವೈರಸ್​; ಬ್ರಿಟನ್​ನಿಂದ ನಗರಕ್ಕೆ ಆಗಮಿಸಿದ್ದ 7 ಜನರಲ್ಲಿ ಸೋಂಕು ಪತ್ತೆ!

  ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗಳಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟಾರೆ 6 ಸಾವಿರ ರೂ ಹಣವನ್ನ ನೇರವಾಗಿ ಒದಗಿಸಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಗೆ ತಡೆ ಇರುವ ವಿಚಾರವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಬಂಗಾಳದ ರೈತರಿಗೆ ಸಿಗುತ್ತಿಲ್ಲ. ಕೇಂದ್ರದ ಯೋಜನೆಗಳು ಜನರಿಗೆ ತಲುಪಲು ಅವಕಾಶ ನೀಡದ ಒಂದೇ ರಾಜ್ಯ ಪಶ್ಚಿಮ ಬಂಗಾಳವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಬಂಗಾಳ ಸರ್ಕಾರ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದರು.

  ಹಾಗೆಯೇ, ದೇಶದ ವಿವಿಧೆಡೆ ರೈತರಿಗೆ ಪ್ರಚೋದನೆ ನೀಡುವ ವಿಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ರೈತರು ಕೇಂದ್ರ ಯೋಜನೆಗಳ ಫಲಾನುಭವದಿಂದ ವಂಚಿತರಾಗುತ್ತಿರುವ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದು ಮೋದಿ ಕೋಪ ವ್ಯಕ್ತಪಡಿಸಿರು.
  Published by:Vijayasarthy SN
  First published: