ನವದೆಹಲಿ(ಆ. 13): ನೇರ ತೆರಿಗೆ ನೀತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ “ಪಾರದರ್ಶಕ ತೆರಿಗೆ - ಪ್ರಾಮಾಣಿರಿಗೆ ಸನ್ಮಾನ” ಎಂಬ ವೇದಿಕೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. ಹಾಗೆಯೇ, ತೆರಿಗೆ ಪಾವತಿದಾರರ ಸನ್ನದು ಮತ್ತು ಅಜ್ಞಾತ ಮೌಲ್ಯಮಾಪನ (Taxpayers Charter and Faceless Assessment) ವ್ಯವಸ್ಥೆಗೂ ಅವರು ಚಾಲನೆ ನೀಡಿದರು. ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರನ್ನ ಗೌರವಿಸಲು ಹಾಗೂ ತೆರಿಗೆ ಪಾವತಿಯಲ್ಲಿ ಪ್ರಾಮಾಣಿಕತೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.
“ನಮ್ಮ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಹಾಗೂ ಸುಧಾರಣೆ ತರಲು ಇದು ಸಹಕಾರಿಯಾಗಲಿದೆ. ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರನಿಗೆ ಈ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಇದೆ. ಇಂತಹ ಪ್ರಾಮಾಣಿಕರಿಗೆ ಗೌರವ ಸಲ್ಲಿಸಲು ಸರ್ಕಾರಕ್ಕಿರುವ ಬದ್ಧತೆ ಇವತ್ತು ಮತ್ತೊಮ್ಮೆ ತೋರ್ಪಟ್ಟಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮ್ಮ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು “ಪಾರದರ್ಶಕ ತೆರಿಗೆ – ಪ್ರಾಮಾಣಿಕರಿಗೆ ಗೌರವ“ ವೇದಿಕೆ ಸಹಕಾರಿಯಾಗುತ್ತದೆ. ಇದು ಹಲವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಪ್ರಧಾನಿಗಳು ತಿಳಿಸಿದರು.
ಇದನ್ನೂ ಓದಿ: ಕೃಷ್ಣ ಜೈಲಿನಲ್ಲಿ ಹುಟ್ಟಿದ ದಿನವೇ ನಿಮಗೆ ಬಿಡುಗಡೆ ಬೇಕಾ?; ಜಾಮೀನು ಕೇಳಿದವನಿಗೆ ಸುಪ್ರೀಂಕೋರ್ಟ್ ತಮಾಷೆ
“ಪಾರದರ್ಶಕ ತೆರಿಗೆ ವ್ಯವಸ್ಥೆ ಬಹಳ ಮುಖ್ಯ. ಇವತ್ತು ನಾವು ಹೊರತರುತ್ತಿರುವ ವೇದಿಕೆಯು ತೆರಿಗೆ ವ್ಯವಸ್ಥೆಯನ್ನು ಅಜ್ಞಾತ(Faceless) ಸ್ಪರ್ಶ ನೀಡುತ್ತದೆ. ಇವತ್ತು ನಾವು ಹೊಸ ಪ್ರಯಾಣ ಪ್ರಾರಂಭಿಸಿದ್ಧೇವೆ. ಹೊಸ ವ್ಯವಸ್ಥೆ, ಹೊಸ ಸೌಲಭ್ಯಗಳು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ನಮ್ಮ ಸಂಕಲ್ಪವನ್ನು ಬಲಗೊಳಿಸುತತವೆ. ದೇಶವಾಸಿಗಳ ಜೀವನದಲ್ಲಿ ಸರ್ಕಾರದ ಮಧ್ಯಪ್ರವೇಶವನ್ನು ಕಡಿಮೆಗೊಳಿಸಲು ಇದು ದೊಡ್ಡ ಹೆಜ್ಜೆಯಾಗಿದೆ” ಎಂದರು.
ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವ್ಯಾಪಾರ ಸಂಘಟನೆಗಳು, ಚಾರ್ಟರ್ಡ್ ಅಕೌಂಟೆಂಟ್ಗಳ ಸಂಘಟನೆಗಳು, ಗಣ್ಯ ತೆರಿಗೆ ಪಾವತಿದಾರರು, ವಾಣಿಜ್ಯ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪಾರದರ್ಶಕ ತೆರಿಗೆ ಮತ್ತು ಪ್ರಾಮಾಣಿಕರಿಗೆ ಗೌರವ ವೇದಿಕೆಯಲ್ಲಿ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ಹಲವು ಕ್ರಮಗಳಿವೆ. ಅದರಲ್ಲಿ ಪ್ರಮುಖವಾದುದು ಅಜ್ಞಾತ ಮನವಿ (Faceless Appeal) ಮತ್ತು ಅಜ್ಞಾತ ಮೌಲ್ಯಮಾಪನ (Faceless Assessment) ವ್ಯವಸ್ಥೆ. ಇಲ್ಲಿ ತೆರಿಗೆ ಪಾವತಿದಾರರು ಹಾಗೂ ತೆರಿಗೆ ಅಧಿಕಾರಿಗಳ ಮಧ್ಯೆ ಭೌತಿಕ ಅಥವಾ ನೇರ ಸಂಪರ್ಕವಿಲ್ಲದಂತೆ ಕಾರ್ಯನಿರ್ವಹಿಸುವ ಸ್ವಯಂಚಾಲಿತ ವ್ಯವಸ್ಥೆ ಇರುತ್ತದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ತೈಲ ಪೂರೈಕೆ ಸ್ಥಗಿತಗೊಳಿಸಿದ ಸೌದಿ; ಕಾಶ್ಮೀರ ವಿಚಾರದಲ್ಲಿ ಪಾಕ್ಗೆ ಮತ್ತೆ ಮುಖಭಂಗ
ಏನಿದು ಫೇಸ್ಲೆಸ್ ಅಸೆಸ್ಮೆಂಟ್ ವ್ಯವಸ್ಥೆ?
ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹಾಗೂ ಡಾಟಾ ಅನಾಲಿಟಿಕ್ಸ್ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಯಾದೃಚ್ಛಿಕವಾಗಿ (Random) ತೆರಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ತೆರಿಗೆ ಪಾವತಿದಾರರು ಆದಾಯ ತೆರಿಗೆ ಕಚೇರಿಗೆ ಭೇಟಿ ಕೊಡುವುದಾಗಲೀ ತೆರಿಗೆ ಅಧಿಕಾರಿಗಳನ್ನ ಭೇಟಿ ಆಗುವುದಾಗಲೀ ಅಗತ್ಯ ಬೀಳುವುದಿಲ್ಲ. ಸ್ವಯಂಚಾಲಿತವಾಗಿ ಆಯ್ಕೆಯಾದ ತೆರಿಗೆ ಪ್ರಕರಣದ ಮೌಲ್ಯೀಕರಣವನ್ನು ಮೂರು ಸ್ತರಗಳಲ್ಲಿ ಮಾಡಲಾಗುತ್ತದೆ. ಒಂದು ನಗರದಲ್ಲಿ ಡ್ರಾಫ್ಟ್ ಅಸೆಸ್ಮೆಂಟ್ ನಡೆದರೆ, ಮತ್ತೊಂದು ನಗರದಲ್ಲಿ ಅದರ ಪರಿಶೀಲನೆಯಾಗುತ್ತದೆ. ಮೂರನೇ ನಗರದಲ್ಲಿ ಅಂತಿಮ ಮೌಲ್ಯಮಾಪನ ಆಗುತ್ತದೆ. ಇದರಿಂದ ಪಾರದರ್ಶಕತೆ ಸಾಧ್ಯವಾಗುತ್ತದೆ.
ಆದರೆ, ಗಂಭೀರ ಸ್ವರೂಪದ ವಂಚನೆ, ಪ್ರಮುಖ ತೆರಿಗೆಗಳ್ಳತನ ಪ್ರಕರಣ ಹಾಗೂ ಸೂಕ್ಷ್ಮ ಪ್ರಕರಣಗಳಿಗೆ ಹಾಗೂ ಕಪ್ಪು ಹಣ ಕಾಯ್ದೆ ಮತ್ತು ಬೇನಾಮಿ ಆಸ್ತಿ ಕಾಯ್ದೆಯಡಿ ಬರುವ ಪ್ರಕರಣಗಳಿಗೆ ಯಾವುದೇ ವಿನಾಯಿತಿ ಇರುವುದಲ್ಲ. ತೆರಿಗೆ ಅಧಿಕಾರಿಗಳು ಭೌತಿಕವಾಗಿ ಈ ಪ್ರಕರಣಗಳ ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಮುನ್ನಡೆಯುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ