ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದ್ರು, ಆದ್ರೆ 1 ಕೋಟಿ ಜನ ನಿರುದ್ಯೋಗಿಗಳಾದ್ರು: ರಾಹುಲ್ ಗಾಂಧಿ

ಪ್ರಧಾನಿಗೆ ಆರ್ಥಿಕತೆಯ ಗಂಧ ಗಾಳಿಯೇ ಇಲ್ಲ. ಜಿಎಸ್​ಟಿ ಏನು ಎಂಬುದೇ ಅರ್ಥವಾದಂತಿಲ್ಲ. ನೋಟ್ ಬ್ಯಾನ್ ಎಷ್ಟು ಹಾನಿ ಮಾಡುತ್ತದೆ ಎಂಬುದನ್ನು ಒಬ್ಬ ಎಂಟು ವರ್ಷದ ಹುಡುಗನೇ ಹೇಳಬಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ಧಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

 • News18
 • Last Updated :
 • Share this:
  ಜೈಪುರ(ಜ. 28): ದೇಶಾದ್ಯಂತ ಸಿಎಎ-ಎನ್​ಆರ್​ಸಿ ಹೋರಾಟದ ಬಿಸಿ ಹೆಚ್ಚಾಗುತ್ತಿರುವ ಹೊತ್ತಲ್ಲಿ ಕೆಲವು ದಿನಗಳ ಕಾಲ ತೆರೆಮರೆಗೆ ಸರಿದಿದ್ದ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಕಂಬ್ಯಾಕ್ ಮಾಡಿದ್ಧಾರೆ. ಸಿಎಎ-ಎನ್​ಆರ್​ಸಿ ವಿರುದ್ಧ ಪ್ರತಿಭಟಿಸಲು ಆಯೋಜಿಸಲಾಗಿದ್ದ “ಯುವ ಆಕ್ರೋಶ್” ಸಮಾವೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಅಬ್ಬರಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ಆರ್ಥಿಕತೆಯ ಪರಿಜ್ಞಾನ ಇಲ್ಲ, ಜಿಎಸ್​ಟಿ ಅಂದರೆ ಏನೆಂದೇ ಗೊತ್ತಿಲ್ಲ ಎಂದು ರಾಹುಲ್ ವ್ಯಂಗ್ಯ ಮಾಡಿದರು. ಹಾಗೆಯೇ, ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನೇ ನಶಿಸುವಂತೆ ಮಾಡಿದ್ಧಾರೆ; ವಿಶ್ವಮಟ್ಟದಲ್ಲಿ ದೇಶದ ಘನತೆಗೆ ಕಪ್ಪುಚುಕ್ಕೆ ತಂದಿದ್ದಾರೆ; ಬಂಡವಾಳ ಹೂಡಿಕೆದಾರರು ದೂರವೇ ಇರುವಂತೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಾ ಪ್ರಹಾರ ಮಾಡಿದರು.

  “ಯುಪಿಎ ಸರ್ಕಾರದ ಅವಧಿಯ ನಂತರ ದೇಶದ ಆರ್ಥಿಕ ಅಭಿವೃದ್ಧಿ ಕುಂಠಿಗೊಳ್ಳುತ್ತಿರುವುದು ನಾಚಿಕೆಗೇಡಿತನದ ಸಂಗತಿ. ಯುವ ಸಮುದಾಯ ಭಾರತದ ಅತಿದೊಡ್ಡ ಆಸ್ತಿ. ಆದರೆ, ಇದನ್ನು ಬಳಸಿಕೊಳ್ಳಲಾಗದಂಥ ಸ್ಥಿತಿ ಬಂದಿದೆ. ಪ್ರಧಾನಿ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ ಕಳೆದ ವರ್ಷ 1 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ” ಎಂದು ಮಾಜಿ ಎಐಸಿಸಿ ಅಧ್ಯಕ್ಷರಾದ ಅವರು ವಿಷಾದಿಸಿದರು.

  ಇದನ್ನೂ ಓದಿ: ದೇಶದ್ರೋಹ ಪ್ರಕರಣದಲ್ಲಿ ಸಿಎಎ ವಿರೋಧಿ ಹೋರಾಟಗಾರ ಶರ್ಜಿಲ್ ಇಮಾಮ್ ಬಂಧನ

  ಹಳೆಯ ಮಾನದಂಡ ಹಾಕಿದರೆ ಜಿಡಿಪಿ ದರ ಇನ್ನೂ ಕಡಿಮೆ:

  ದೇಶದ ಆರ್ಥಿಕತೆ ಕುಸಿಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಪ್ರಧಾನಿಗೆ ಆರ್ಥಿಕತೆಯ ಗಂಧ ಗಾಳಿಯೇ ಇಲ್ಲ ಎಂದು ಲೇವಡಿ ಮಾಡಿದರು.

  “ಯುಪಿಎ ಅವಧಿಯಲ್ಲಿ ಭಾರತ ಶೇ. 9ರ ದರದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿತ್ತು. ಇಡೀ ವಿಶ್ವವೇ ನಮ್ಮತ್ತ ನೋಡುತ್ತಿತ್ತು. ಇವತ್ತು ನೀವು ಜಿಡಿಪಿಗೆ ಬೇರೆ ಮಾನದಂಡಗಳನ್ನು ಹಾಕಿ ಎಣಿಸುತ್ತಿದ್ದೀರಿ. ಅದರಂತೆ ಜಿಡಿಪಿ ದರ ಶೇ. 5 ಇದೆ. ನೀವು ಹಳೆಯ ಮಾನದಂಡಗಳನ್ನ ಇಟ್ಟು ಗಣಿಸಿದರೆ ಭಾರತದ ಆರ್ಥಕತೆಯ ವೃದ್ಧಿ ದರ ಶೇ. 2.5 ಮಾತ್ರ ಇರಬಹುದು” ಎಂದು ಕೇರಳದ ವಯನಾಡು ಕ್ಷೇತ್ರದ ಸಂಸದರೂ ಆಗಿರುವ ಅವರು ಅಂದಾಜಿಸಿದರು.

  ಇದನ್ನೂ ಓದಿ: ಶಾಹೀನ್​ ಬಾಗ್​ನ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ನಡೆಸಬಹುದು; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

  “ಮೋದಿ ಅವರಿಗೆ ಜಿಎಸ್​ಟಿ ಏನು ಎಂಬುದೇ ಅರ್ಥವಾದಂತಿಲ್ಲ. ನೋಟ್​ ಬ್ಯಾನ್​ನಂತಹ ಒಂದು ಕ್ರಮ ತೆಗೆದುಕೊಳ್ಳುವ ವ್ಯಕ್ತಿ ಅವರು. ನೋಟ್ ಬ್ಯಾನ್ ಎಷ್ಟು ಹಾನಿ ಮಾಡುತ್ತದೆ ಎಂಬುದನ್ನು ಒಬ್ಬ ಎಂಟು ವರ್ಷದ ಹುಡುಗ ಹೇಳಬಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದರು.

  “ಜಗತ್ತಿನ ಕಣ್ಣಿನಲ್ಲಿ ಭಾರತವೆಂದರೆ ಭ್ರಾತೃತ್ವವೇ ಎದ್ದುಗಾಣುತ್ತದೆ. ಜನರು ಪಾಕಿಸ್ತಾನವನ್ನು ಟೀಕಿಸುತ್ತಿದ್ದರು. ನಮ್ಮ ಪ್ರಧಾನಿಗಳು ಈಗ ಭಾರತದ ಘನತೆಯನ್ನು ಕುಂದಿಸಿದ್ಧಾರೆ. ಭಾರತವನ್ನು ವಿಶ್ವದ ರೇಪ್ ರಾಜಧಾನಿ ಎಂದು ಈಗ ಕರೆಯಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ತುಟಿ ಬಿಚ್ಚುವುದಿಲ್ಲ. ನಮ್ಮ ಮರ್ಯಾದೆಗೆ ಭಂಗವಾಗುತ್ತಿರುವುದರ ಬಗ್ಗೆ, ನಿರುದ್ಯೋಗದ ಬಗ್ಗೆ ಯುವ ಸಮುದಾಯದವರು ಪ್ರಧಾನಿಯನ್ನು ಪ್ರಶ್ನಿಸಿದರೆ ಸಾಕು ಅವರನ್ನು ಗುರಿ ಮಾಡಿಬಿಡುತ್ತಾರೆ. ಭಾರತದ ಯಾವುದೇ ವಿಶ್ವವಿದ್ಯಾಲಯಕ್ಕೆ ನಮ್ಮ ಪ್ರಧಾನಿಗಳು ಹೋಗಿ ಅಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳನ್ನ ಎದುರಿಸಿ ನೋಡಲಿ ಎಂದು ನಾನು ಸವಾಲು ಹಾಕುತ್ತೇನೆ. ಅವರಿಂದ ಅದು ಸಾಧ್ಯವಿಲ್ಲ. ಅವರು ಕೇವಲ ಸುಳ್ಳು ಭರವಸೆಗಳನ್ನ ಮಾತ್ರ ನೀಡಬಲ್ಲರು” ಎಂದು ರಾಹುಲ್ ಹರಿಹಾಯ್ದರು.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: