ವಾರಣಾಸಿ (ಯುಪಿ): ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು(Indian Students ) ವಿದೇಶಕ್ಕೆ ತೆರಳಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಆರೋಪಿಸಿದರು. ವೈದ್ಯಕೀಯ ಶಿಕ್ಷಣಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ಗೆ ತೆರಳುತ್ತಾರೆ. ಆದರೆ ಕಳೆದೊಂದು ವಾರದಿಂದ ಉಕ್ರೇನ್ (Ukraine) ದೇಶದ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಯುದ್ಧ ಪೀಡಿತ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಯೋಜನೆಯನ್ನು ಕೈಗೆತ್ತಿಗೊಂಡಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತ ತಲುಪಿದ್ದಾರೆ. ಹೀಗೆ ವಾಪಸ್ ಆದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ಭಾರತದಲ್ಲಿ ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದಿರುವ ಕಾರಣ ನಾವೆಲ್ಲಾ ಉಕ್ರೇನ್ಗೆ ಹೋಗಬೇಕಾಯಿತು ಎಂದು ಕೆಲ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆಲ್ಲಾ ಕಾರಣ ಹಿಂದಿನ ಸರ್ಕಾರಗಳು ಎಂದು ಉತ್ತರಿಸಿದ ಪ್ರಧಾನಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ತಮ್ಮ ಸರ್ಕಾರವು ಶ್ರಮಿಸುತ್ತಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಪುಟಿನ್ ಜೊತೆ PM Modi ಮಾತುಕತೆ ಬಳಿಕ ದೊಡ್ಡ ಬದಲಾವಣೆ.. ಯುವತಿಯರ ಕುಟುಂಬಸ್ಥರು ನಿರಾಳ..!?
ಅವರು ಕೋಪಗೊಳ್ಳುವುದು ಸಹಜ
ಭಾರತೀಯ ಶಿಕ್ಷಣ ವ್ಯವಸ್ಥೆ ಬಗೆಗೆ ವಿದ್ಯಾರ್ಥಿಗಳು, ಪೋಷಕರು ವ್ಯಕ್ತಪಡಿಸಿದ ಸಿಟ್ಟಿಗೆ ಪ್ರತಿಕ್ರಿಯಿಸಿದ ಮೋದಿ, ಈ ಬಿಕ್ಕಟ್ಟಿನಲ್ಲಿ ಅವರು ಕೋಪಗೊಳ್ಳುವುದು ಸಹಜ ಎಂದು ನಾನು ಭಾವಿಸುತ್ತೇನೆ. ಅವರು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಅದಕ್ಕಾಗಿ ವಿಷಾದಿಸುತ್ತೇನೆ ಎಂದರು. ಅನೇಕ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು. ಯುದ್ಧ ಪೀಡಿತ ಪ್ರದೇಶದಲ್ಲಿ ಎಲ್ಲಾ ಭರವಸೆಯನ್ನು ಕಳೆದುಕೊಂಡಾಗ ರಕ್ಷಿಸಿದ್ದಕ್ಕಾಗಿ ಸರ್ಕಾರವನ್ನು ಶ್ಲಾಘಿಸಿದರು. ಈ ತೊಂದರೆಗಳಿಗೆ ಬಲಿಷ್ಠ ಭಾರತವೇ ಉತ್ತರ ಎಂದು ಹೇಳಿದ ಪ್ರಧಾನಿ ಮೋದಿ, ಚಿಕ್ಕ ವಯಸ್ಸಿನಲ್ಲಿ ಇಂತಹ ಅನುಭವವನ್ನು ಅನುಭವಿಸಿದ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಿದ್ದೇವೆ..
ನಮ್ಮ ದೇಶದಲ್ಲೇ ವೈದ್ಯಕೀಯ ಶಿಕ್ಷಣ ನೀತಿಗಳು ಸರಿಯಿದ್ದರೆ ವಿದೇಶಕ್ಕೆ ಹೋಗಬೇಕಾಗಿರಲಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ಮಕ್ಕಳು ವಿದೇಶಕ್ಕೆ ಹೋಗುವುದನ್ನು ಯಾವ ಪೋಷಕರೂ ಬಯಸುವುದಿಲ್ಲ. ತಮ್ಮ ಸರ್ಕಾರ ಹಿಂದಿನ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು. ಮೊದಲು 300 ರಿಂದ 400 ವೈದ್ಯಕೀಯ ಕಾಲೇಜುಗಳಿದ್ದವು, ಈಗ ಅವುಗಳ ಸಂಖ್ಯೆ ಸುಮಾರು 700ಕ್ಕೆ ಏರಿಕೆಯಾಗಿವೆ. ಮೆಡಿಕಲ್ ಸೀಟುಗಳ ಸಂಖ್ಯೆಯು ಈ ಹಿಂದೆ 80,000-90,000 ಇತ್ತು, ಈಗ 1.5 ಲಕ್ಷಕ್ಕೆ ಏರಿದೆ ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ: ರಾಕೆಟ್ ಮೇಲಿದ್ದ ಅಮೆರಿಕಾ, ಬ್ರಿಟನ್ ಧ್ವಜಗಳಿಗೆ ಕೊಕ್: ಭಾರತದ ಧ್ವಜವನ್ನು ಉಳಿಸಿಕೊಂಡ Russia.. ಏಕೆ?
ಪುಟಿನ್ ಜೊತೆ ಮೋದಿ ಮಾತುಕತೆ
ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಚರ್ಚೆ ನಡೆಸಿದ್ದಾರೆ. ಮೋದಿ ಮಾತುಕತೆಯ ಪರಿಣಾಮ ರಷ್ಯಾದ ಸಹಕಾರದಿಂದ ವಿದ್ಯಾರ್ಥಿನಿಯರನ್ನು ಈಗಾಗಲೇ ರೈಲಿನ ಮೂಲಕ ಉಕ್ರೇನ್ನ ಪಶ್ಚಿಮ ಗಡಿಗೆ ಕಳುಹಿಸಲಾಗಿದೆ. ಇದು ಸರಿ ಸುಮಾರು 20 ಗಂಟೆಗಳ ಪ್ರಯಾಣವಾಗಿರುತ್ತದೆ. ಗಡುವು ಮುಗಿಯುವ ಮುನ್ನ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ವಿದೇಶಾಂಗ ಸಚಿವಾಲಯ ಹೇಳಿರುವ ಪ್ರಕಾರ ಪಿಎಂ ಮೋದಿ ಮತ್ತು ಪುಟಿನ್ ಉಕ್ರೇನ್ನಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅನೇಕ ಭಾರತೀಯ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ಖಾರ್ಕಿವ್ ನಗರದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಮೋದಿ ಯುದ್ಧ ಭೂಮಿಯಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಮೋದಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳ ಮತ್ತು ಸ್ಥಳಾಂತರವಾಗಲು ಸಹಾಯದ ಕುರಿತು ಮಾತುಕತೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ