ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ; ಮುಖಾಮುಖಿಯಾಗಲಿದ್ದಾರೆ ಮೋದಿ ಮತ್ತು ಇಮ್ರಾನ್ ಖಾನ್

ಕಳೆದ ಭಾನುವಾರ ಅಮೆರಿಕದ ಹೂಸ್ಟನ್ ನಗರದಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮೋದಿ ಹಾಗೂ ಅಮೆರಿದ ಅಧ್ಯಕ್ಷ ಡೊನಾಲ್ಡ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದಾದ ಮರು ದಿನವೇ ಇಮ್ರಾನ್ ಖಾನ್ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಸಹ ಸಾಕಷ್ಟು ಭಾರೀ ಚರ್ಚೆಗೆ ಕಾರಣವಾಗಿತ್ತು.

MAshok Kumar | news18-kannada
Updated:September 27, 2019, 5:48 PM IST
ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ; ಮುಖಾಮುಖಿಯಾಗಲಿದ್ದಾರೆ ಮೋದಿ ಮತ್ತು ಇಮ್ರಾನ್ ಖಾನ್
ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ.
  • Share this:
ನ್ಯೂಯಾರ್ಕ್ (ಸೆಪ್ಟೆಂಬರ್.27); ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಂದು ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮುಖಾಮುಖಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇಂದು ನ್ಯಾಯಾರ್ಕ್ ನಗರದಲ್ಲಿ ನಡೆಯಲಿರುವ 74ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡುವವರ ಪಟ್ಟಿಯ ಅನುಕ್ರಮಣದ ಪ್ರಕಾರ ನರೇಂದ್ರ ಮೋದಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ನಂತರ ಇಮ್ರಾನ್ ಖಾನ್ ಮಾತನಾಡಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 8.30 ರಿಂದ 9.00 ಗಂಟೆಯ ನಡುವೆ ಮೋದಿ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ (ನ್ಯೂಯಾರ್ಕ್​ನಲ್ಲಿ ಸಮಯ ಬೆಳಗ್ಗೆ 9 ಗಂಟೆ)

ನರೇಂದ್ರ ಮೋದಿ ಬಹುಮತದೊಂದಿಗೆ ಎರಡನೇ ಬಾರಿ ಗೆಲುವು ಸಾಧಿಸಿ ದೇಶದ ಪ್ರಧಾನ ಮಂತ್ರಿ ಹುದ್ದೆಗೆ ಏರಿದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವುದು ಇದೇ ಮೊದಲು. ಮೋದಿ ನಂತರ ಇಮ್ರಾನ್ ಖಾನ್ ಸಹ ಮಾತನಾಡಲಿದ್ದು, ಈ ವೇಳೆ ಖಾನ್ ತಮ್ಮ ಭಾಷಣದ ನಡುವೆ ಕಾಶ್ಮೀರದ ಬಿಕ್ಕಟ್ಟಿನ ಕುರಿತು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಸೆಪ್ಟೆಂಬರ್.1ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದಾಗ ದೊಡ್ಡ ಮಟ್ಟದ ಚರ್ಚೆ ಉಂಟಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಕಣಿವೆ ರಾಜ್ಯದಲ್ಲಿ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ಆದರೂ ಯಾವುದಕ್ಕೂ ಬಗ್ಗದ ಬಿಜೆಪಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. ಅಲ್ಲದೆ, ಈ ರಾಜ್ಯವನ್ನು ವಿಭಜಿಸಿ ಮೂರು ಕೇಂದ್ರಾಡಳಿತ ಪ್ರದೇಶವನ್ನಾಗಿ ರಚನೆ ಮಾಡಿತ್ತು.

ಭಾರತದ ಈ ನಡೆ ಸಾಮಾನ್ಯವಾಗಿ ಪಾಕಿಸ್ತಾನವನ್ನು ಕೆರಳಿಸಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಒತ್ತಡ ಹೇರಲು ಸಾಕಷ್ಟು ಪ್ರಯತ್ನಿಸಿದ ಪಾಕಿಸ್ತಾನ ತನ್ನ ಎಲ್ಲಾ ಪ್ರಯತ್ನದಲ್ಲೂ ನಿರಂತರವಾಗಿ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕಳೆದ ಭಾನುವಾರ ಅಮೆರಿಕದ ಹೂಸ್ಟನ್ ನಗರದಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮೋದಿ ಹಾಗೂ ಅಮೆರಿದ ಅಧ್ಯಕ್ಷ ಡೊನಾಲ್ಡ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದಾದ ಮರು ದಿನವೇ ಇಮ್ರಾನ್ ಖಾನ್ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಸಹ ಸಾಕಷ್ಟು ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ : ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ, ಬಲಿಷ್ಠವಾಗುತ್ತಿದೆ ಇಡೀ ದೇಶ ವಿಶ್ವನಾಯಕನಾಗುವತ್ತ ಹೆಜ್ಜೆ ಇಟ್ಟಿದೆ; ಪ್ರಧಾನಿ ನರೇಂದ್ರ ಮೋದಿ
First published:September 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ