news18-kannada Updated:December 17, 2020, 11:41 AM IST
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ
ಇಂದೋರ್: ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು "ಪ್ರಮುಖ ಪಾತ್ರ" ವಹಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಬಹಿರಂಗ ಹೇಳಿಕೆ ನೀಡುವ ಮೂಲಕ ಇದೀಗ ಪೇಚಿಗೆ ಸಿಲುಕಿದ್ದಾರೆ. ಇಂದೋರ್ನಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, "ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಸಿಎಂ ಕಮಲ್ ನಾಥ್ ಅವರನ್ನು ಪದಚ್ಯುತಗೊಳಿಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಪ್ರಮುಖವಾದದ್ದು" ಎಂದು ಅವರು ಹೇಳಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಧಾನ್ ಮತ್ತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ಹಾಜರಿದ್ದರು ಎಂಬುದು ಉಲ್ಲೇಖಾರ್ಹ.
ವೈರಲ್ ಆಗುತ್ತಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮಾತನಾಡಿರುವ ವಿಡಿಯೋದಲ್ಲಿ ಅವರು, "ಈ ವಿಚಾರವನ್ನು ನಾನು ಮೊದಲ ಬಾರಿಗೆ ಸಾರ್ವಜನಿಕಗೊಳಿಸುತ್ತಿದ್ದೇನೆ. ಹೀಗಾಗಿ ನೀವೂ ಸಹ ಯಾರಿಗೂ ಹೇಳಬೇಡಿ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರವಹಿಸಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯೇ ಹೊರತು ಧರ್ಮೇಂದ್ರ ಪ್ರಧಾನ್ ಅಲ್ಲ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಜ್ಯೋತರಾದಿತ್ಯ ಸಿಂಧಿಯಾ ತನ್ನ ಬೆಂಬಲಿಗ 22 ಶಾಸಕರ ಜೊತೆಗೆ ಬಿಜೆಪಿಗೆ ಪಕ್ಷಾಂತರ ಮಾಡಿದ ಕಾರಣದಿಂದಾಗಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಉರುಳಿ ಶಿವರಾಜ್ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿತ್ತು. ಅಂದಿನಿಂದಲೂ ಕೇಂದ್ರ ಸರ್ಕಾರವೇ ಮುಂದೆ ನಿಂತು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಸಂಚು ರೂಪಿಸಿದೆ ಎಂದು ಕಮಲ್ ನಾಥ್ ನಿರಂತರವಾಗಿ ಆರೋಪಿಸುತ್ತಲೇ ಇದ್ದರು. ಆದರೆ, ಆ ಆರೋಪಕ್ಕೆ ಇಂದು ಬಿಜೆಪಿ ನಾಯಕರೇ ಉತ್ತರ ನೀಡಿದಂತಿದೆ.
ಇದನ್ನೂ ಓದಿ : ದೆಹಲಿ ಗಡಿ ಪ್ರತಿಭಟನೆ ತೆರವುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಇಂದು ಮತ್ತೆ ವಿಚಾರಣೆ
ಕೈಲಾಶ್ ವಿಜಯವರ್ಗಿಯಾ ಅವರ ಹೇಳಿಕೆಯನ್ನು ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಕಾಂಗ್ರೆಸ್ ಪಕ್ಷದ ವಕ್ತಾರ ನರೇಂದ್ರ ಸಲೂಜಾ, "ಸಾಂವಿಧಾನಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ಕೆಳಗಿಳಿಸುವವರು ಪ್ರಧಾನಿ ನರೇಂದ್ರ ಮೋದಿ ಎಂಬುದು ಈಗ ಸ್ಪಷ್ಟವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ಕಾಂಗ್ರೆಸ್ ಸರ್ಕಾರ ಉರುಳಲು ಪ್ರಧಾನಿ ಮೋದಿಯೇ ಕಾರಣ ಎಂದು ಮೊದಲ ದಿನದಿಂದಲೇ ನಾವು ಹೇಳುತ್ತಿದ್ದೇವೆ. ಆದರೆ, ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಆಂತರಿಕ ಜಗಳವೇ ಬಿಜೆಪಿ ದೂಷಿಸುತ್ತಿತ್ತು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸತ್ಯವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.
Published by:
MAshok Kumar
First published:
December 17, 2020, 11:04 AM IST