Mob at US Capitol: ಟ್ರಂಪ್​ ಬೆಂಬಲಿಗರಿಂದ ಸಂಸತ್​ ದಾಳಿ; ಘಟನೆಗೆ ಖಂಡನೆ, ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮೋದಿ ಒತ್ತಾಯ

ವಾಷಿಂಗ್ಟನ್ ಡಿಸಿಯಲ್ಲಿನ ಗಲಭೆ ಮತ್ತು ಹಿಂಸಾಚಾರದ ಸುದ್ದಿಗಳನ್ನು ನೋಡಿ ಬೇಸರವಾಗಿದೆ. ಅಮೆರಿಕದಲ್ಲಿ ಕ್ರಮಬದ್ಧವಾಗಿ ಮತ್ತು ಶಾಂತಿಯುತವಾಗಿ ಅಧಿಕಾರ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
    ನವ ದೆಹಲಿ (ಜನವರಿ 07); ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಅಧಿಕಾರದ ಹಸ್ತಾಂತರ ಪ್ರಕ್ರಿಯೆಗಳು ಮುಂದುವರೆಯುತ್ತಿವೆ. ಈವರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಸೋಲನ್ನು ಒಪ್ಪಿಲ್ಲವಾದರೂ, ಅಧಿಕಾರವನ್ನು ಬಿಟ್ಟುಕೊಡದೆ ಬೇರೆ ದಾರಿ ಇಲ್ಲ ಎಂಬಂತಾಗಿದೆ. ಅಧಿಕಾರಕ್ಕೆ ಏರಲು ನೂತನ ಅಧ್ಯಕ್ಷ ಜೋ ಬೈಡನ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಸೋಲನ್ನು ಒಪ್ಪದ ಡೊನಾಲ್ಡ್​ ಟ್ರಂಪ್​ ಬೆಂಬಲಿಗರು ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್​ ಭವನದ ಮೇಲೆಯೇ ಅನಿರೀಕ್ಷಿತ ದಾಳಿ ನಡೆಸಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು ಮತ್ತೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಈ ಘಟನೆಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದ್ದಾರೆ. ಈ ನಡುವೆ ತಮ್ಮ ಗೆಳೆಯ ಡೊನಾಲ್ಡ್​ ಟ್ರಂಪ್​ಗೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, "ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ತಗ್ಗಿಸಲು ಸಾಧ್ಯವಿಲ್ಲ. ಅಧಿಕಾರವನ್ನು ಶಾಂತಿಯುವವಾಗಿ ಹಸ್ತಾಂತರಿಸಿ" ಎಂದು ತಿಳಿಸಿದ್ದಾರೆ.

    ನವೆಂಬರ್ 03 ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ಇಂದು ನಿಗಧಿಯಾಗಿತ್ತು. ಅದಕ್ಕಾಗಿ ಹಲವಾರು ಶಾಸಕರು ಸೇರಿದ್ದರು. ಈ ವೇಳೆ ಸಂಸತ್ ಹೊರಗಿದ್ದ ಟ್ರಂಪ್ ಬೆಂಬಲಿಗರು ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯನ್ನೇ ರದ್ದುಗೊಳಿಸಿ ಮರು ಚುನಾವಣೆಗೆ ಒತ್ತಾಯಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡಿದ್ದ ಜನಪ್ರತಿನಿಧಿಗಳು ತಮ್ಮ ರಕ್ಷಣೆಗಾಗಿ ಪರದಾಡಿದ ಘಟನೆಯೂ ನಡೆದಿದೆ. ಇದರಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.



    ಈ ಘಟನೆ ಬೆನ್ನಿಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, "ವಾಷಿಂಗ್ಟನ್ ಡಿಸಿಯಲ್ಲಿನ ಗಲಭೆ ಮತ್ತು ಹಿಂಸಾಚಾರದ ಸುದ್ದಿಗಳನ್ನು ನೋಡಿ ಬೇಸರವಾಗಿದೆ. ಅಮೆರಿಕದಲ್ಲಿ ಕ್ರಮಬದ್ಧವಾಗಿ ಮತ್ತು ಶಾಂತಿಯುತವಾಗಿ ಅಧಿಕಾರ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ" ಎಂದು ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಚುನಾವಣೆಯಲ್ಲಿ ಫಲಿತಾಂಶದ ವೇಳೆ ಭ್ರಷ್ಟಾಚಾರ ನಡೆದಿದೆ. ಚುನಾವಣಾ ಫಲಿತಾಂಶವನ್ನು ತಿರುಚಲಾಗಿದೆ. ಹೀಗಾಗಿ ನಾನು ನನ್ನ ಸೋಲನ್ನು ಒಪ್ಪುವುದಿಲ್ಲ. ಈ ಚುನಾವಣೆಯನ್ನು ರದ್ದು ಮಾಡಿ ಮತ್ತೊಂದು ಚುನಾವಣೆ ನಡೆಯಲಿ ಎಂದು ಡೊನಾಲ್ಡ್​ ಟ್ರಂಪ್ ಆಗಿಂದಾಗ್ಗೆ ಕಿಡಿಕಾರುತ್ತಲೇ ಇದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಹೇಳಿಕೆಗಳಿ ಕಳೆದ ಎರಡು ತಿಂಗಳಿನಿಂದ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಲೇ ಇದ್ದವು.

    ಇದನ್ನೂ ಓದಿ: ಅಮೆರಿಕ ಸಂಸತ್​ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ, ಓರ್ವ ಸಾವು; ಮಾಜಿ ಅಧ್ಯಕ್ಷರ ಖಾತೆ ನಿರ್ಬಂಧಿಸಿದ ಟ್ವಿಟರ್​ ಫೇಸ್​ಬುಕ್

    ಅವರ ಇಂತಹ ಹೇಳಿಕೆಗಳೇ ಗಲಭೆಗೆ ಕಾರಣ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದರು ಆರೋಪಿಸುತ್ತಿದ್ದಾರೆ. ಹೀಗಾಗಿ ಟ್ವಿಟರ್​ ಮತ್ತು ಫೇಸ್​ಬುಕ್ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಅಲ್ಲದೆ, ಅವರ ಹಳೆಯ ಟ್ವೀಟ್​ ಮತ್ತು ಪೇಸ್​ಬುಕ್​ ಬರಗಳನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

    ಜನವರಿ 20 ರಂದು ಜೋ ಬೈಡೆನ್ ಅವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ. ಬೈಡೆನ್ ಪ್ರಮಾಣವಚನ ಸ್ವೀಕರಿಸುವುದನ್ನು ತಡೆಯುವ ಡೊನಾಲ್ಡ್​ ಟ್ರಂಪ್ ಅವರ ಪ್ರಯತ್ನಗಳು ವಿಫಲವಾಗಿರುವುದು ಖಚಿತವಾಗಿದೆ.  ಆದರೆ, ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸುವ ಟ್ರಂಪ್ ಅವರ ಪ್ರಯತ್ನಗಳಿಗೆ ಅವರ ಬೆಂಬಲಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯುಎಸ್​ ಸಂಸತ್​ ದಾಳಿಗೆ ಇದೇ ಕಾರಣ ಎನ್ನಲಾಗುತ್ತಿದ್ದು, ಇಂತಹ ಘಟನೆಗಳು ಅಥವಾ ಮನಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ವಿಶ್ಲೇಷಿಸಲಾಗುತ್ತಿದೆ.
    Published by:MAshok Kumar
    First published: