ಚೆನ್ನೈನಲ್ಲಿ ಅ.11ರಂದು ಮೋದಿ, ಜಿನ್​ಪಿಂಗ್ ಶೃಂಗಸಭೆ; ಕಾಶ್ಮೀರ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಸುವ ಸಾಧ್ಯತೆ?

ಪ್ರಸ್ತುತ ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ನಾಯಕರ ನಡುವಿನ ಈ ಎರಡನೇ ಶೃಂಗಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

MAshok Kumar | news18-kannada
Updated:October 9, 2019, 11:39 AM IST
ಚೆನ್ನೈನಲ್ಲಿ ಅ.11ರಂದು ಮೋದಿ, ಜಿನ್​ಪಿಂಗ್ ಶೃಂಗಸಭೆ; ಕಾಶ್ಮೀರ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಸುವ ಸಾಧ್ಯತೆ?
ನರೇಂದ್ರ ಮೋದಿ,
  • Share this:
ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕ್ಸಿ ಜಿನ್​ಪಿಂಗ್ ಕಳೆದ ವರ್ಷ ಏಪ್ರಿಲ್​ನಲ್ಲಿ ಚೀನಾದ ವುಹಾನ್ ಎಂಬಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮತ್ತೆ ಭೇಟಿಯಾಗಲಿದ್ದಾರೆ. ಅಕ್ಟೋಬರ್ 11,12 ರಂದು ನಡೆಯಲಿರುವ ಈ ಅನೌಪಚಾರಿಕ ಶೃಂಗಸಭೆಗೆ ತಮಿಳುನಾಡು ಆತಿಥ್ಯ ವಹಿಸಲಿದೆ.

ಬುಧವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, “ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ಕಳೆದ 2018ರ ಏಪ್ರಿಲ್ 27-28 ಚೀನಾದ ವುಹಾನ್​ನಲ್ಲಿ ಮೊದಲ ಬಾರಿಗೆ ಅನೌಪಚಾರಿಕ ಶೃಂಗಸಭೆಯನ್ನು ನಡೆಸಿದರು. ಆದರೆ, ಇದೀಗ ಚೆನ್ನೈನಲ್ಲಿ ಮತ್ತೆ ಅನೌಪಚಾರಿಕ ಶೃಂಗಸಭೆ ನಡೆಯಲಿದ್ದು, ಚರ್ಚೆಗಳನ್ನು ಮುಂದುವರಿಸಲು ಅವಕಾಶ ದೊರಕಿದೆ. ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತ-ಚೀನಾ ಪಾಲುದಾರಿಕೆ, ವಿನಿಮಯ ಮತ್ತು ಪ್ರಾದೇಶಿಕ, ಜಾಗತಿಕ ಸಮಸ್ಯೆಗಳ ಕುರಿತು ಇಬ್ಬರೂ ನಾಯಕರು ಚರ್ಚೆಸಲಿದ್ದಾರೆ” ಎಂದು ತಿಳಿಸಿದೆ.

ಮೋದಿ ಮತ್ತು ಕ್ಸಿ ಜಿನ್ಪಿಂಗ್ ಅವರ ಮೊದಲ ಶೃಂಗಸಭೆಯನ್ನು ಚೀನಾದ ವುಹಾನ್​ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿನ ವುಹಾನ್ ಸರೋವರದ ತಟದಲ್ಲಿ ಆಯೋಜಿಸಲಾಗಿದ್ದ ಚಹಾ ಕೂಟದಲ್ಲಿ ಇಬ್ಬರೂ ನಾಯಕರು ಸುಮಾರು 40 ನಿಮಿಷಕ್ಕೂ ಅಧಿಕ ಕಾಲ ಎರಡೂ ದೇಶಗಳ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದರು.

ಆದರೆ, ಪ್ರಸ್ತುತ ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ನಾಯಕರ ನಡುವಿನ ಈ ಎರಡನೇ ಶೃಂಗಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕಣಿವೆ ರಾಜ್ಯವನ್ನು ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂದು ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಮಾತಿನ ಯುದ್ಧದಲ್ಲಿ ತೊಡಗಿವೆ.

ವಿಶ್ವಸಂಸ್ಥೆಯ ಖಾಯಂ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಉಲ್ಲೇಖಿಸಿದ್ದ ಚೀನಾ "ವಿಶ್ವಸಂಸ್ಥೆ ನಿಯಮಗಳು, ದ್ವಿಪಕ್ಷೀಯ ಒಪ್ಪಂದಗಳು ಮತ್ತು ಸೆಕ್ಯೂರಿಟಿ ಕೌನ್ಸಿಲ್ ನಿರ್ಣಗಳಿಗೆ ಅನುಗುಣವಾಗಿ ಈ ವಿವಾದವನ್ನು ಶಾಂತಿಯುತವಾಗಿ ಮತ್ತು ನ್ಯಾಯಾಯುತವಾಗಿ ಪರಿಹರಿಸಬೇಕು. ಅಲ್ಲದೆ, ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು" ಎಂದು ಒತ್ತಿ ಹೇಳಿತ್ತು.

ಆದಾಗ್ಯೂ ಕ್ಸಿ ಜಿನ್​ಪಿಂಗ್ ಭಾರತಕ್ಕೆ ಭೇಟಿ ನೀಡುವ ಮುನ್ನವೇ “ಕಾಶ್ಮೀರದ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಭಾರತ ಮತ್ತು ಪಾಕಿಸ್ತಾನ ದೇಶಗಳು ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪರಸ್ಪರ ಮಾತುಕತೆ ಮತ್ತು ಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಲು, ಪರಸ್ಪರ ನಂಬಿಕೆಯನ್ನು ಗಟ್ಟಿಗೊಳಿಸಲು ಚೀನಾ ಸಹಕಾರ ನೀಡುತ್ತದೆ” ಎಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.ಮೋದಿ ಮತ್ತು ಜಿನ್​ಪಿಂಗ್ ಶೃಂಗಸಭೆ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಉಲ್ಲೇಖಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹೀಗೊಂದು ಹೇಳಿಕೆ ನೀಡಿರುವುದು ಎರಡೂ ದೇಶಗಳ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಗುರುತಿಸಲಾಗಿದೆ.


First published: October 9, 2019, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading