Chauri Chaura - ರೈತರ ಪ್ರತೀಕಾರದ ಜ್ವಾಲೆಗೆ ನೂರು ವರ್ಷ; ಚೌರಿ ಚೌರಾ ಘಟನೆ ಸ್ಮರಿಸಿದ ಪ್ರಧಾನಿ ಮೋದಿ

ಐತಿಹಾಸಿಕ ಚೌರಿ ಚೌರಾ ಘಟನೆಯಲ್ಲಿ ಬಲಿದಾನವಾದವರ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿಲ್ಲ. ಇತಿಹಾಸದ ಪುಟದಲ್ಲಿ ಅದಕ್ಕೆ ಹೆಚ್ಚಿನ ಸ್ಥಾನ ಸಿಗದೇ ಹೋದರೂ ಬಲಿದಾನವಾದವರ ರಕ್ತ ಈ ದೇಶದ ಮಣ್ಣಿನಲ್ಲಿದ್ದು, ಅದು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಮೋದಿ ಹೇಳಿದರು.

ನರೇಂದ್ರ ಮೋದಿ

ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಫೆ. 04): ಸ್ವಾವಲಂಬಿ ರೈತರು ಈ ದೇಶದ ಬೆನ್ನೆಲುಬಾಗಿದ್ದಾರೆ. ಕೊರೋನಾ ಮಹಾಮಾರಿಯಂಥ ಸಂಕಷ್ಟದ ಸಂದರ್ಭದಲ್ಲೂ ರೈತರು ದಾಖಲೆಯ ಮಟ್ಟದಲ್ಲಿ ಕೃಷಿ ಉತ್ಪಾದನೆ ಮಾಡಿದ್ದಾರೆ. ಈ ದೇಶದ ಅಭಿವೃದ್ಧಿ ಹಿಂದಿನ ಶಕ್ತಿ ಕೃಷಿಕರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ. ಚೌರಿ ಚೌರಾ ಘಟನೆಯ ಶತಮಾನೋತ್ಸವ ಕಾರ್ಯಕ್ರಮಗಳನ್ನ ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿಗಳು, ಚೌರಿ ಚೌರಾ ಘಟನೆ ಮೆಲುಕು ಹಾಕುತ್ತಾ, ಅದೊಂದು ಮಾಮೂಲಿಯ ಘಟನೆಯಲ್ಲ. ಅದರ ಹಿಂದಿರುವ ಸಂದೇಶ ಬಹಳ ಗಂಭೀರವಾದುದು ಎಂದು ಹೇಳಿದರು.

  ಏನದು ಘಟನೆ?: ಉತ್ತರ ಪ್ರದೇಶದ ಗೋರಖಪುರ್ ಸಮೀಪದ ಒಂದು ಪುಟ್ಟ ಪಟ್ಟಣ ಚೌರಿ ಚೌರಾ. ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಕರೆಕೊಟ್ಟಿದ್ದ ಅಸಹಕಾರ ಚಳವಳಿಗೆ ಸ್ಪಂದಿಸಿ ಚೌರಿ ಚೌರಾದಲ್ಲಿ 1922, ಫೆ. 4ರಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಬ್ರಿಟಿಷ್ ಅಧೀನದಲ್ಲಿದ್ದ ಪೊಲೀಸರು ಈ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಮಾಡಿದ್ದರು. ಆಗ ಆಕ್ರೋಶಗೊಂಡ ರೈತ ಪ್ರತಿಭಟನಾಕಾರರು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಸಂಪೂರ್ಣ ಸುಟ್ಟುಹಾಕಿದ್ದರು. ಠಾಣೆಯ ಒಳಗಿದ್ದ ಎಲ್ಲಾ 22 ಮಂದಿ ಪೊಲೀಸ್ ಸಿಬ್ಬಂದಿ ಸುಟ್ಟುಹೋಗಿದ್ದರು. ಈ ಘಟನೆಯಲ್ಲಿ 3 ಮಂದಿ ಪ್ರತಿಭಟನಾಕಾರರೂ ಅಸುನೀಗಿದ್ದರು. ಇದನ್ನು ರೈತರ ಆಕ್ರೋಶದ ಸಂಕೇತವಾಗಿ ಪರಿಗಣಿಸಲಾಗುತ್ತಿದೆ. ಮುಂದಿನ ವರ್ಷ ಈ ಘಟನೆಯಾಗಿ 100 ವರ್ಷ ಆಗುತ್ತಿರುವುದರಿಂದ ಇವತ್ತಿನಿಂದ ಇಡೀ ವರ್ಷ ಉತ್ತರ ಪ್ರದೇಶ ಸರ್ಕಾರ ಅದರ ಸ್ಮರಣಾರ್ಥವಾಗಿ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಆ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲೂ ವರ್ಷಾದ್ಯಂತ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿವೆ.

  ಇದನ್ನೂ ಓದಿ: ಭಾರತದ ಕೃಷಿ ಸುಧಾರಣೆಗಳಿಗೆ ಅಮೆರಿಕ ಸ್ವಾಗತ; ರೈತರ ಶಾಂತಿಯುತ ಪ್ರತಿಭಟನೆಗೂ ಭರಪೂರ ಬೆಂಬಲ

  ಈ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಇತಿಹಾಸದ ಪುಟದಲ್ಲಿ ಚೌರಿ ಚೌರಾಗೆ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದವರಿಗೆ ಗೌರವ ನೀಡುವ ಜವಾಬ್ದಾರಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊತ್ತುಕೊಂಡಿರುವುದಕ್ಕೆ ನನ್ನ ಅಭಿನಂದನೆ ಎಂದು ತಿಳಿಸಿದರು.

  “ಚೌರಿ ಚೌರಾ ಘಟನೆ ಒಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿಸಿದ್ದಕ್ಕೆ ಮಾತ್ರ ಸೀಮಿತವಾಗಿಲ್ಲ. ಆ ಘಟನೆ ನೀಡಿರುವ ಸಂದೇಶ ಬಹಳ ಮಹತ್ತರವಾದುದು. ಬೇರೆ ಬೇರೆ ಕಾರಣಗಳಿಗಾಗಿ ಅದನ್ನ ಸಣ್ಣ ಘಟನೆ ಎಂಬ ಅಭಿಪ್ರಾಯ ಬಂದಿದೆ. ನಾವು ಸಾಂದರ್ಭಿಕವಾಗಿ ಆ ಘಟನೆಯನ್ನ ವಿಶ್ಲೇಷಿಸಬೇಕು. ಕಿಚ್ಚು ಹಚ್ಚಿದ್ದು ಸ್ಟೇಷನ್​ನಲ್ಲಿ ಮಾತ್ರವಲ್ಲ ಜನರ ಹೃದಯದಲ್ಲಿ. ಈ ಐತಿಹಾಸಿಕ ಘಟನೆಯಲ್ಲಿ ಬಲಿದಾನವಾದವರ ಬಗ್ಗೆ ಚರ್ಚೆಗಳು ನಡೆದಿಲ್ಲ. ಇತಿಹಾಸದ ಪುಟದಲ್ಲಿ ಅದಕ್ಕೆ ಹೆಚ್ಚಿನ ಸ್ಥಾನ ಸಿಗದೇ ಹೋದರೂ ಬಲಿದಾನವಾದವರ ರಕ್ತ ಈ ದೇಶದ ಮಣ್ಣಿನಲ್ಲಿದ್ದು, ಅದು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ” ಎಂದು ಮೋದಿ ಹೇಳಿದರು.

  ಇದನ್ನೂ ಓದಿ: Mamata Banerjee: ಬಿಜೆಪಿ ಭ್ರಷ್ಟ ನಾಯಕರನ್ನು ಖರೀದಿ ಮಾಡಬಹುದೇ ಹೊರತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ; ಮಮತಾ ಬ್ಯಾನರ್ಜಿ

  ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ರೈತರು ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನ ಕೈಗೊಂಡಿರುವುದನ್ನು ಪ್ರಸ್ತಾಪಿಸಿದರು. “ರೈತರ ಹಿತದ ದೃಷ್ಟಿಯಲ್ಲಿ ನಾವು ಹಲವು ಕ್ರಮಗಳನ್ನ ಕೈಗೊಂಡಿದ್ದೇವೆ. ಮಾರುಕಟ್ಟೆಗಳು ರೈತರಿಗೆ ಲಾಭದಾಯಕವನ್ನಾಗಿ ಮಾಡಲು e-NAMಗೆ ಇನ್ನೂ ಒಂದು ಸಾವಿರ ಮಂಡಿಗಳನ್ನ ಜೋಡಿಸುತ್ತೇವೆ” ಎಂದು ತಿಳಿಸಿದರು.

  ಪ್ರತಿಭಟನಾನಿರತ ರೈತರನ್ನ ಪರೋಕ್ಷವಾಗಿ ಈ ಸಂದರ್ಭದಲ್ಲಿ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಏಕತೆ ಮತ್ತು ಗೌರವವು ಎಲ್ಲಕ್ಕಿಂತ ಹೆಚ್ಚು ಎಂಬ ಸಂಕಲ್ಪವನ್ನು ಎಲ್ಲಾ ನಾಗರಿಕರು ತೊಡಬೇಕಿದೆ ಎಂದು ಕರೆ ನೀಡಿದರು.
  Published by:Vijayasarthy SN
  First published: