Gati Shakti Plan: 100 ಲಕ್ಷ ಕೋಟಿ ಮೌಲ್ಯದ ‘ಗತಿ ಶಕ್ತಿ ಯೋಜನೆ‘ ಅನಾವರಣಗೊಳಿಸಿದ ಪ್ರಧಾನಿ ಮೋದಿ; ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ..

ಈ ಯೋಜನೆ ಪ್ರಾರಂಭಕ್ಕೂ ಮುನ್ನವೇ ಅಂದರೆ ಈ ವರ್ಷದ ಆಗಸ್ಟ್‌ 15ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ 'ಪಿಎಂ ಗತಿ ಶಕ್ತಿ - ರಾಷ್ಟ್ರೀಯ ಮಾಸ್ಟರ್ ಪ್ಲಾನ್' ಅನ್ನು ಘೋಷಣೆ ಮಾಡಿದ್ದರು.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ದೇಶಾದ್ಯಂತ 2 ರಕ್ಷಣಾ ಕಾರಿಡಾರ್‌(Defence Corridor)ಗಳನ್ನು ಒಳಗೊಂಡಂತೆ 1,200 ಕ್ಕೂ ಹೆಚ್ಚು ಕೈಗಾರಿಕಾ ಕ್ಲಸ್ಟರ್‌(Industrial cluster)ಗಳಿಗೆ ಬಹು-ಮಾದರಿ ಸಂಪರ್ಕವನ್ನು ಒದಗಿಸುವ ಮಹತ್ವಾಕಾಂಕ್ಷೆಯ 100 ಲಕ್ಷ ಕೋಟಿ ರೂ.ಗಳ ಗತಿ ಶಕ್ತಿ ಮಾಸ್ಟರ್ ಪ್ಲಾನ್(Gati shakti master plan) ಅನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಬುಧವಾರ ಉದ್ಘಾಟಿಸಿದರು. ಈ ಯೋಜನೆ ಪ್ರಾರಂಭಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, "ನಾವು ಮುಂದಿನ 25 ವರ್ಷಗಳಿಗೆ ಅಡಿಪಾಯ ಹಾಕುತ್ತಿದ್ದೇವೆ. ಈ ರಾಷ್ಟ್ರೀಯ ಮಾಸ್ಟರ್ ಪ್ಲಾನ್ 21ನೇ ಶತಮಾನದ ಅಭಿವೃದ್ಧಿ ಯೋಜನೆಗಳಿಗೆ 'ಗತಿಶಕ್ತಿ' ನೀಡುತ್ತದೆ ಮತ್ತು ಈ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದರು.

ಗತಿ ಶಕ್ತಿ ಎಂದರೇನು..?

ಈ ಯೋಜನೆ ಪ್ರಾರಂಭಕ್ಕೂ ಮುನ್ನವೇ ಅಂದರೆ ಈ ವರ್ಷದ ಆಗಸ್ಟ್‌ 15ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ 'ಪಿಎಂ ಗತಿ ಶಕ್ತಿ - ರಾಷ್ಟ್ರೀಯ ಮಾಸ್ಟರ್ ಪ್ಲಾನ್' ಅನ್ನು ಘೋಷಣೆ ಮಾಡಿದ್ದರು.

ಈ ಪ್ಲ್ಯಾನ್‌ ಅಂತರ ಸಚಿವಾಲಯಗಳ ಪ್ರತ್ಯೇಕತೆಯನ್ನು ಮುರಿಯುತ್ತದೆ ಮತ್ತು ಸಾಮಾನ್ಯ ಹಾಗೂ ಸಮಗ್ರ ದೃಷ್ಟಿಕೋನದೊಂದಿಗೆ ಪ್ರಾಜೆಕ್ಟ್‌ಗಳ ಯೋಜನೆ ಮತ್ತು ವಿನ್ಯಾಸವನ್ನು ಸಂಯೋಜಿಸುತ್ತದೆ. ಅಲ್ಲದೆ, ಮುಂದಿನ ಪೀಳಿಗೆಯ ಮೂಲಸೌಕರ್ಯ ಮತ್ತು ತಡೆರಹಿತ ಮಲ್ಟಿ-ಮೋಡಲ್ ಸಂಪರ್ಕದ ಮೂಲಕ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಈ ಯೋಜನೆ ಹೆಚ್ಚಿಸುತ್ತದೆ. ಹಾಗೂ, ಸರಕು ಮತ್ತು ಜನರ ತಡೆರಹಿತ ಚಲನೆಯನ್ನು ಖಚಿತಪಡಿಸುತ್ತದೆ ಮತ್ತು ಜೀವನ ಮಾಡುವ ಸುಲಭತೆ ಹಾಗೂ ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತದೆ ಎಂದೂ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.

ಇನ್ನು, ಗತಿ ಶಕ್ತಿ ಯೋಜನೆಯ ಅಡಿಯಲ್ಲಿ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ ಅನ್ನು ರಚಿಸಲಾಗಿದೆ. ಇದು ರೈಲ್ವೆ ಮತ್ತು ರಸ್ತೆಗಳನ್ನು ಒಳಗೊಂಡಂತೆ 16 ಸಚಿವಾಲಯಗಳನ್ನು ಒಟ್ಟುಗೂಡಿಸಿ ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮನ್ವಯವನ್ನು ಅನುಷ್ಠಾನಕ್ಕೆ ತರಲಿದೆ. ಹಾಗೂ, ಈ ಪ್ಲ್ಯಾಟ್‌ಫಾರ್ಮ್‌ ಹೆಚ್ಚಿನ ರೆಸಲ್ಯೂಶನ್‌ವುಳ್ಳ ಉಪಗ್ರಹ ಚಿತ್ರಗಳು, ಮೂಲಸೌಕರ್ಯ, ಉಪಯುಕ್ತತೆಗಳು, ಆಡಳಿತಾತ್ಮಕ ಗಡಿಗಳು, ಭೂಮಿ ಮತ್ತು ಲಾಜಿಸ್ಟಿಕ್ಸ್ ಅನ್ನು ಒದಗಿಸುತ್ತದೆ.

ಈ ಯೋಜನೆಯನ್ನು ವಾಣಿಜ್ಯ ಸಚಿವಾಲಯದ ಲಾಜಿಸ್ಟಿಕ್ಸ್ ವಿಭಾಗವು ಮುನ್ನಡೆಸುತ್ತದೆಯಾದರೂ, ಈ ಪ್ರಮುಖ ಉಪಕ್ರಮದ ಅನುಷ್ಠಾನ ನೋಡಲು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿ ಅಧಿಕಾರ ಹೊಂದಿರುವ ಕಾರ್ಯದರ್ಶಿಗಳ ಗುಂಪು ಇರುತ್ತದೆ.

ರಾಷ್ಟ್ರೀಯ ಯೋಜನೆಯ ಗುರಿ

"ಪಿಎಂ ಗತಿ ಶಕ್ತಿ ರಾಷ್ಟ್ರೀಯ ವಲಯದ ಮಲ್ಟಿ-ಮೋಡಲ್ ಇನ್ಫ್ರಾಸ್ಟ್ರಕ್ಚರ್ ಕನೆಕ್ಟಿವಿಟಿ" "ಗತಿ ಸೇ ಶಕ್ತಿ" ಎಂಬ ಟ್ಯಾಗ್ ಲೈನ್‌ನೊಂದಿಗೆ ಭಾರತಮಾಲಾ, ಸಾಗರಮಾಲಾ, ಉಡಾನ್, ರೈಲ್ವೆ ನೆಟ್ವರ್ಕ್ ವಿಸ್ತರಣೆ, ಒಳನಾಡು, ಜಲಮಾರ್ಗಗಳು ಮತ್ತು ಭಾರತ್ ನೆಟ್‌ನಂತಹ ವಿವಿಧ ಸಚಿವಾಲಯಗಳ ಯೋಜನೆಗಳನ್ನು ಒಳಗೊಂಡಿದೆ.

ತಡೆರಹಿತ ಮಲ್ಟಿ-ಮೋಡಲ್ ಸಂಪರ್ಕವು ಸರಕುಗಳು ಮತ್ತು ಜನರ ತಡೆರಹಿತ ಚಲನೆಯನ್ನು ಖಾತ್ರಿಪಡಿಸುತ್ತದೆ ಮತ್ತು ಜೀವನದ ಸುಲಭತೆ ಹಾಗೂ ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಜಾಲದ ಉದ್ದವನ್ನು 2 ಲಕ್ಷ ಕಿ.ಮೀಗೆ ವಿಸ್ತರಿಸುವುದು, 200ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ನೀರಿನ ಏರೋಡ್ರೋಮ್‌ಗಳು ಮತ್ತು ಗ್ಯಾಸ್ ಪೈಪ್‌ಲೈನ್‌ ನೆಟ್‌ವರ್ಕ್‌ ಅನ್ನು 35,000 ಕಿ.ಮೀಗೆ ದ್ವಿಗುಣಗೊಳಿಸುವಿಕೆ ಸೇರಿದಂತೆ 2024-25ರ ಅವಧಿಗೆ ಸರ್ಕಾರ ನಿಗದಿಪಡಿಸಿದ ಮಹತ್ವಾಕಾಂಕ್ಷೆಯ ಗುರಿಗಳನ್ನು ಪೂರೈಸಲು ಗತಿ ಶಕ್ತಿಯು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಆರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಟಿ.ವಿ ನರೇಂದ್ರನ್, "ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಆರಂಭವು ಉದ್ಯಮಕ್ಕೆ ಒಂದು ಗೇಮ್ ಚೇಂಜರ್ ಆಗಿರುತ್ತದೆ ಮತ್ತು ಪ್ರಧಾನಮಂತ್ರಿಯವರ ಪ್ರಮಾಣ ಮತ್ತು ವೇಗದ ದೃಷ್ಟಿಕೋನಕ್ಕೆ ಅನುಗುಣವಾಗಿ ಉದ್ಯಮ ಅದರ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ" ಎಂದು ಹೇಳಿದ್ದಾರೆ. ‘’ಈ ಯೋಜನೆಯು ಭಾರತದ ಮೂಲಸೌಕರ್ಯದ ವಿನ್ಯಾಸದಲ್ಲಿ ಲೇಸರ್‌ನಂತಿದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಗಮನಾರ್ಹ ಪ್ರಚೋದನೆಯನ್ನು ನೀಡುವ ನಿರೀಕ್ಷೆಯಿದೆ’’ ಎಂದೂ ಅವರು ಹೇಳಿದ್ದಾರೆ.

ಹಾಗೂ, "ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಮತ್ತು ರಾಷ್ಟ್ರೀಯ ಮಾನಿಟೈಸೇಷನ್‌ ಯೋಜನೆಗಳ ರೀತಿಯಲ್ಲೇ, ಗತಿ ಶಕ್ತಿ ದೃಷ್ಟಿಕೋನವು ವಿಶ್ವದರ್ಜೆಯ ಮೂಲಸೌಕರ್ಯ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ನೀಡಿರುವ ಸ್ಥಳದ ಆದ್ಯತೆಯನ್ನು ಒತ್ತಿಹೇಳುತ್ತದೆ. ಅಲ್ಲದೆ, ಇದು ಭವಿಷ್ಯದಲ್ಲಿ 5 ಟ್ರಿಲಿಯನ್ ಅಮೆರಿಕ ಡಾಲರ್‌ ಮೌಲ್ಯದ ಆರ್ಥಿಕತೆಯಾಗಿ ಹೊರಹೊಮ್ಮುವ ದೇಶದ ಗುರಿಯನ್ನು ವೇಗಗೊಳಿಸುತ್ತದೆ’’ ಎಂದೂ ಅವರು ಹೇಳಿದರು.

ಅಲ್ಲದೆ, ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟದ (IRF) ಅಧ್ಯಕ್ಷ ಎಮಿರಿಟಸ್ ಕೆಕೆ ಕಪಿಲಾ ಅವರು, ‘’ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸುವುದನ್ನು IRF ಸ್ವಾಗತಿಸಿದೆ. ಏಕೆಂದರೆ ಇದು ದೇಶದಲ್ಲಿ ಇಂದಿನ ಅಗತ್ಯವಾಗಿತ್ತು ಮತ್ತು ಸುಧಾರಣೆಗೆ ಮತ್ತು ವೇಗವಾಗಿ ಸಹಾಯ ಮಾಡುತ್ತದೆ. ಹಾಗೂ, ದೇಶಕ್ಕೆ ವಿಶ್ವ ದರ್ಜೆಯ ಮೂಲಸೌಕರ್ಯದ ಟ್ರ್ಯಾಕಿಂಗ್ ನೀಡುತ್ತದೆ’’ ಎಂದೂ ಹೇಳಿದರು.

ಗತಿ ಶಕ್ತಿಯ ಅಡಿಯಲ್ಲಿ 2024-25ರ ವೇಳೆಗೆ ಸರ್ಕಾರವು ಏನನ್ನು ಸಾಧಿಸುವ ಗುರಿ ಹೊಂದಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

* ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ 11 ಕೈಗಾರಿಕಾ ಕಾರಿಡಾರ್‌ಗಳು ಮತ್ತು ಎರಡು ಹೊಸ ರಕ್ಷಣಾ ಕಾರಿಡಾರ್‌ಗಳು

* ಎಲ್ಲಾ ಗ್ರಾಮಗಳಲ್ಲಿ 4ಜಿ ಸಂಪರ್ಕ

* ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 87.7 GW ನಿಂದ 225 GWಗೆ ಹೆಚ್ಚಿಸುವುದು

* ರಾಷ್ಟ್ರೀಯ ಹೆದ್ದಾರಿ ಜಾಲವನ್ನು 2 ಲಕ್ಷ ಕಿ.ಮೀ.ಗೆ ವಿಸ್ತರಿಸುವುದು

* ಪ್ರಸರಣ ಜಾಲದ ಉದ್ದವನ್ನು 4,54,200 ಸರ್ಕ್ಯೂಟ್ ಕಿ.ಮೀ.ಗೆ ಹೆಚ್ಚಿಸುವುದು

* 220 ಹೊಸ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ನೀರಿನ ಏರೋಡ್ರೋಮ್‌ಗಳ ಸೃಷ್ಟಿ

* ರೈಲ್ವೆಯ ಸರಕು ನಿರ್ವಹಣಾ ಸಾಮರ್ಥ್ಯವನ್ನು 1210 ದಶಲಕ್ಷ ಟನ್‌ಗಳಿಂದ 1,600 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವುದು

* ಗ್ಯಾಸ್ ಪೈಪ್‌ಲೈನ್ ನೆಟ್‌ವರ್ಕ್‌ಗೆ 17,000 ಕಿ.ಮೀ ಸೇರಿಸುವುದು

* 202 ಮೀನುಗಾರಿಕೆ ಕ್ಲಸ್ಟರ್‌ಗಳು/ಬಂದರುಗಳು/ಲ್ಯಾಂಡಿಂಗ್ ಕೇಂದ್ರಗಳು

ಹಾಗೂ ಇನ್ನೂ ಮುಂತಾದ ಗುರಿಯನ್ನು ಹೊಂದಿದೆ.

ಪ್ರಗತಿಯ ಹೊಸ ಮಂತ್ರ

ಗತಿ ಶಕ್ತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇದು ಒಂದು ಅಭೂತಪೂರ್ವ ಕಾರ್ಯವನ್ನು ನೀಡಲು ಒಂದು ಅಭೂತಪೂರ್ವ ವಿಧಾನ ಅಳವಡಿಸಿಕೊಂಡ ಸಮಗ್ರ ದೃಷ್ಟಿಕೋನ ನೀಡುತ್ತದೆ ಎಂದು ಹೇಳಿದರು.

"ನಾವು ವಿಶ್ವದರ್ಜೆಯ ಮೂಲಸೌಕರ್ಯಕ್ಕೆ ಬಂದಾಗ ಪ್ಲಗ್ ಮತ್ತು ಪ್ಲೇ ವಿಧಾನವನ್ನು ಹೊಂದಿರುವ ಒಂದು ಸಂಯೋಜಿತ ವಿಧಾನ ನಿರ್ಮಿಸಲು ಮತ್ತು ತಲುಪಿಸಲು ನಾವು ಬಯಸುತ್ತೇವೆ" ಎಂದೂ ಅವರು ಹೇಳಿದರು.

ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಕನಸನ್ನು ಭಾರತ ಮುಂದುವರಿಸಿದರೆ, ಅದು ಶೀಘ್ರದಲ್ಲೇ ವಿಶ್ವದ ವ್ಯಾಪಾರ ರಾಜಧಾನಿಯಾಗುವ ಸಾಮರ್ಥ್ಯ ಹೊಂದಿರುತ್ತದೆ ಎಂದೂ ಮೋದಿ ಹೇಳಿದರು.

ಇನ್ನು, ಪ್ರಧಾನಿ ಮೋದಿ ಈ ವೇಳೆ "ಪ್ರಗತಿಗೆ ಇಚ್ಛೆ, ಪ್ರಗತಿಗೆ ಕೆಲಸ, ಸಂಪತ್ತಿನ ಪ್ರಗತಿ, ಪ್ರಗತಿಗೆ ಯೋಜನೆ ಮತ್ತು ಪ್ರಗತಿಗೆ ಆದ್ಯತೆ" ಎಂದು 21ನೇ ಶತಮಾನಕ್ಕೆ ಹೊಸ ಮಂತ್ರ ನೀಡಿದರು.

"ನಮ್ಮ ಸರ್ಕಾರವು ನಿಗದಿತ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ-ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದಲ್ಲದೆ ಯೋಜನೆಗಳನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ" ಎಂದೂ ಗತಿ ಶಕ್ತಿ ಯೋಜನೆಯ ಉದ್ಘಾಟನಾ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Published by:Latha CG
First published: