ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ದೂಡಿದ್ದೊಂದೆ ಬಿಜೆಪಿ ಸಾಧನೆ; ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ದೇಶದ ಆರ್ಥಿಕ ಹಿಂಜರಿತ ಹಾಗೂ ಅದಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ಆಡಳಿತ ವೈಖರಿ ಕುರಿತು ಅಸಮಾಧಾನ ಹೊರಹಾಕಿರುವ ಚಿದಂಬರಂ, ಇಡೀ ದೇಶ ಇಂದು ಯಾರಿಂದಲೂ ಕಾಪಾಡಲು ಸಾಧ್ಯವಾಗದ ಮಟ್ಟಿಗಿನ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಅಚ್ಚೇ ದಿನದ ಹೆಸರಿನಲ್ಲಿ 7.4ರ ಆಸುಪಾಸಿನಲ್ಲಿದ್ದ ಜಿಡಿಪಿಯನ್ನು 4.5ಕ್ಕೆ ತಂದು ನಿಲ್ಲಿಸಿದೆ ಎಂದು ಆರೋಪಿಸಿದ್ದಾರೆ.

MAshok Kumar | news18-kannada
Updated:December 5, 2019, 2:40 PM IST
ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ದೂಡಿದ್ದೊಂದೆ ಬಿಜೆಪಿ ಸಾಧನೆ; ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ
ಕಾರ್ಟೂನ್​: ಮಿರ್​ ಸುಹೇಲ್​
  • Share this:
ನವ ದೆಹಲಿ (ಡಿಸೆಂಬರ್ 05); ದೇಶದ ಆರ್ಥಿಕಯನ್ನು ದುಸ್ಥಿತಿಗೆ ದೂಡಿದ್ದು ಹಾಗೂ ಅಚ್ಚೇ ದಿನದ ಹೆಸರಿನಲ್ಲಿ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದು ಮಾತ್ರ ಕಳೆದ ಆರು ವರ್ಷದಲ್ಲಿ ಬಿಜೆಪಿ ಪಕ್ಷದ ಏಕೈಕ ಸಾಧನೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೊಳಗಾಗಿ ಕಳೆದ 106 ದಿನಗಳನ್ನು ತಿಹಾರ್ ಜೈಲಿನಲ್ಲಿ ಕಳೆದಿದ್ದ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ದೊರಕಿದ ಮರುದಿನವೇ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕಾಗೋಷ್ಠಿ ಕರೆದಿರುವ ಪಿ. ಚಿದಂಬರಂ ಕೇಂದ್ರ ಸರ್ಕಾರದ ಆಡಳಿತ ವೈಖರಿ ಹಾಗೂ ಆರ್ಥಿಕ ಹಿಂಜರಿತದ ವಿರುದ್ಧ ಕಿಡಿಕಾರಿದ್ದಾರೆ.

ದೇಶದ ಆರ್ಥಿಕ ಹಿಂಜರಿತ ಹಾಗೂ ಅದಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ಆಡಳಿತ ವೈಖರಿ ಕುರಿತು ಅಸಮಾಧಾನ ಹೊರಹಾಕಿರುವ ಚಿದಂಬರಂ, “ಇಡೀ ದೇಶ ಇಂದು ಯಾರಿಂದಲೂ ಕಾಪಾಡಲು ಸಾಧ್ಯವಾಗದ ಮಟ್ಟಿಗಿನ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಅಚ್ಚೇ ದಿನದ ಹೆಸರಿನಲ್ಲಿ 7.4ರ ಆಸುಪಾಸಿನಲ್ಲಿದ್ದ ಜಿಡಿಪಿಯನ್ನು 4.5ಕ್ಕೆ ತಂದು ನಿಲ್ಲಿಸಿದೆ.

ಇದನ್ನೂ ಓದಿ : ನಾನು ಈರುಳ್ಳಿ ಬೆಳ್ಳುಳ್ಳಿ ತಿನ್ನದ ಕುಟುಂಬದಿಂದ ಬಂದಿದ್ದೇನೆ; ಸಚಿವೆ ನಿರ್ಮಲಾ ಸೀತಾರಾಮನ್ ಜವಾಬಿಗೆ ತಬ್ಬಿಬ್ಬಾದ ಲೋಕಸಭೆ

ಕಳೆದ 7 ತಿಂಗಳಿನಿಂದ ದೇಶದ ಆರ್ಥಿಕತೆ ಸತತವಾಗಿ ಕುಸಿಯುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟವನ್ನು ಭರಿಸಲಾಗದೆ ಬಾಗಿಲು ಎಳೆದುಕೊಳ್ಳುತ್ತಿವೆ. ಜಿಡಿಪಿ ಕುಸಿದಷ್ಟು ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಇದು ಜನ ಸಾಮಾನ್ಯರ ಖರ್ಚು ಮಾಡುವ ಸಾಮರ್ಥ್ಯವನ್ನು ಕಸಿಕೊಳ್ಳುತ್ತಿದೆ. ಭವಿಷ್ಯದ ಕುರಿತು ಭ್ರಮ ನಿರಸನಗೊಂಡಿರುವ ಜನ ಹಣ ಖರ್ಚು ಮಾಡಲು ಸಹ ಯೋಚಿಸುವಂತಾಗಿದೆ. ಪ್ರಸ್ತುತ ದೇಶದ ಆರ್ಥಿಕ ದುಸ್ಥಿತಿಯ ಕುರಿತು ಸ್ಪಷ್ಟ ಚಿತ್ರಣ ನಿಮಗೆ ಬೇಕಾದರೆ ಮನೆ ನಿಭಾಯಿಸುವ ಮಹಿಳೆಯರನ್ನು, ತರಕಾರಿ ಮಂಡಿ ಮಾಲೀಕರನ್ನು ಮಾತನಾಡಿಸಿ” ಎಂದು ಸಲಹೆ ನೀಡಿದ್ದಾರೆ.

“ಈ ಆರ್ಥಿಕ ಕುಸಿತಕ್ಕೆ ಕೇಂದ್ರ ಸರ್ಕಾರದ ಗೊತ್ತು ಗುರಿಯಿಲ್ಲದ ಆರ್ಥಿಕ ನೀತಿಯೇ ಕಾರಣ. ದೇಶದ ಆರ್ಥಿಕತೆ ಉತ್ತಮ ಸ್ಥಿತಿಗೆ ತಲುಪಲು ವ್ಯಯಕ್ತಿಯ ತೆರಿಗೆ ಉಳಿತಾಯಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಆದರೆ, ಕೇಂದ್ರ ಸರ್ಕಾರ ಎಂದಿಗೂ ಸಹ ಇಂತಹ ಸುಧಾರಣ ನೀತಿಯ ಕುರಿತು ಯೋಚನೆಯೇ ಮಾಡಿಲ್ಲ. ಬದಲಾಗಿ ನೋಟು ಅಮಾನ್ಯೀಕರಣ, ಅರಾಜಕ ತೆರಿಗೆ ನೀತಿಯಂತಹ ಕ್ರಮದಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ದೂಡಿದೆ. 2016ರಿಂದ ದೇಶದ ಲಕ್ಷಾಂತರ ಜನ ಬಡತನ ರೇಖೆಯ ಕೆಳಗೆ ದೂಡಲ್ಪಟ್ಟಿದ್ದಾರೆ.

ಆರ್ಥಿಕ ದುಸ್ಥಿತಿಯನ್ನು ದಿನ ಬೆಳಕಾಗುವುದರೊಳಗಾಗಿ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಅದಕ್ಕೆ ಅಗತ್ಯವಾದ ಕ್ರಮಗಳನ್ನು ನೀತಿ ನಿರೂಪಣೆಗಳನ್ನಾದರೂ ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಆದರೆ, ಅದ್ಯಾವುದೂ ಆಗದಿರುವುದು ದೇಶದ ಭವಿಷ್ಯವನ್ನು ಕತ್ತಲಿಗೆ ದೂಡುವ ಸೂಚನೆಯಂತೆ ಭಾಸವಾಗುತ್ತಿದೆ” ಎಂದು ಚಿದಂಬರಂ ಅಸಮಾಧಾನ ಹೊರಹಾಕಿದ್ದಾರೆ.ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ಮಾಧ್ಯಮ ಸೇರಿದಂತೆ ಎಲ್ಲಾ ಸಂಸ್ಥೆಗಳು ಹೆದರುತ್ತಿವೆ;

"ಮಾಧ್ಯಮ ಸೇರಿದಂತೆ ದೇಶದ ಎಲ್ಲಾ ಸಂಸ್ಥೆಗಳ ಮೇಲೆ ಬಿಜೆಪಿ ಇಂದು ಬಿಗಿ ಹಿಡಿತ ಸಾಧಿಸಿದೆ. ಇದೇ ಕಾರಣಕ್ಕೆ ಯಾರೂ ಸಹ ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ಕುರಿತು ಮಾತನಾಡಲು ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ.

ಆರ್ಥಿಕ ಹಿಂಜರಿತದ ವಿರುದ್ಧ ದೇಶದ ಬೃಹತ್​ ಉದ್ಯಮಿಗಳು ಹಾಗೂ ವ್ಯವಹಾರಸ್ಥರು ಸಹ ಅಸಮಾಧಾನಗೊಂಡಿರುವುದು ನಿಜ. ಆದರೆ, ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು  ಹೊರಹಾಕಲು ಹೆದರುತ್ತಿದ್ದಾರೆ. ರಾಹುಲ್ ಬಜಾಜ್ ನಂತಹ ಕೆಲವರು ಮಾತ್ರ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇನ್ನಾದರೂ ಮಾಧ್ಯಮಗಳು ಕೇಂದ್ರ ಸರ್ಕಾರದ ಕಪಿಮುಷ್ಠಿಯಿಂದ ಹೊರಬಂದು ಧೈರ್ಯವಾಗಿ ಜನರಿಗೆ ಸತ್ಯವನ್ನು ತಿಳಿಸುವ ಕೆಲಸಕ್ಕೆ ಮುಂದಾಗಬೇಕು" ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅತ್ಯಾಚಾರ ಪ್ರಕಣದ ಕುರಿತು ವಿಷಾಧ ವ್ಯಕ್ತಪಡಿಸಿದ ಅವರು, "ಅತ್ಯಾಚಾರ ಪ್ರಕರಣಗಳು ದೇಶದಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತ ಸ್ಪಷ್ಟ ಉದಾಹರಣೆ" ಎಂದಿದ್ದಾರೆ.

ಅಲ್ಲದೆ, "ಮಾದರಿ ದೇಶದಲ್ಲಿ ಉನ್ನತ ಶಿಕ್ಷಣ ಉಚಿತವಾಗಿರಬೇಕು ಅಥವಾ ಶಿಕ್ಷಣ ಶುಲ್ಕವಾದರೂ ಕಡಿಮೆ ಇರಬೇಕು. ಆದರೆ, ಬಿಜೆಪಿ ಸರ್ಕಾರ ಉನ್ನತ ಶಿಕ್ಷಣದ ಶುಲ್ಕವನ್ನು ದಿಢೀರನೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಈ ಹೋರಾಟದಲ್ಲಿ ನಾನು ದೆಹಲಿ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟಕ್ಕೆ ನನ್ನ ಬೆಂಬಲವನ್ನು ಸೂಚಿಸುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ : ಮಲ್ಯ ಬಳಿಕ ನೀರವ್​ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್

 

 
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ