ಮುಂಬೈ: ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಪಿಎಂ ಕೇರ್ಸ್ (PM Cares) ಹಣದಿಂದ ಮುಂಬೈನ ಮರಾತ್ವಾಡ ನಗರಕ್ಕೆ 150 ವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿತ್ತು. ಆದರೆ, ಈ 150 ವೆಂಟಿಲೇಟರ್ಗಳ ಪೈಕಿ 113 ವೆಂಟಿಲೇಟರ್ಗಳು ದೋಷ ಪೂರಿತವಾಗಿವೆ. ದೋಷಪೂರಿತ ವೆಂಟಿಲೇಟರ್ಗಳು ಖಾಲಿ ಡಬ್ಬಿ ಇದ್ದ ಹಾಗೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ನ್ಯಾಯಪೀಠ ಕಿಡಿಕಾರಿದೆ. ಅಲ್ಲದೆ, ಈ ದೋಷಪೂರಿತ ವೆಂಟಿಲೇಟರ್‌ಗಳನ್ನು ಪೂರೈಸಿದ ಸರಬರಾಜುದಾರರ ವಿರುದ್ಧ ಕಠಿಮ ಕ್ರಮ ತೆಗೆದುಕೊಳ್ಳಿ ಮತ್ತು ಕೂಡಲೇ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಉತ್ತಮ ಗುಣಮಟ್ಟದ ವೆಂಟಿಲೇಟರ್‌ಗಳನ್ನು ನೀಡಿ ಎಂದು ನ್ಯಾಯಪೀಠ ಕೇಂದ್ರ ಸರ್ಕಾರದ ಪರ ಹಾಜರಾದ ವಕೀಲರಿಗೆ ಸೂಚನೆ ನೀಡಿದೆ. ಅಲ್ಲದೆ, ಈ ಬಗ್ಗೆ ಕೇಂದ್ರ ಸರ್ಕಾರ ವಿವರಣೆ ನೀಡಬೇಕು ಎಂದೂ ತಾಕೀತು ಮಾಡಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ರವೀಂದ್ರ ವಿ. ಘುಗೆ ಮತ್ತು ಭಾಲ್ಚಂದ್ರ ಯು. ದೇಬದ್ವಾರ್ ಅವರ ವಿಭಾಗೀಯ ಪೀಠವು ಕೋವಿಡ್ -19 ರೋಗಿಗಳ ಅಂತ್ಯಕ್ರಿಯೆಯ ವಿಧಿಗಳು, ವೈದ್ಯಕೀಯ ಆಮ್ಲಜನಕದ ಪೂರೈಕೆಯ ಕೊರತೆ ಮತ್ತು ರೆಮ್ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಮಂಗಳವಾರ ದಾಖಲಾದ ಸುಯೋ ಮೋಟು ಪಿಐಎಲ್ ಅನ್ನು ವಿಚಾರಣೆ ನಡೆಸಿದೆ.
ಈ ವಿಚಾರಣೆ ವೇಳೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು "ಪಿಎಂ ಕೇರ್ಸ್ ಫಂಡ್ ಮೂಲಕ ನಿಷ್ಕ್ರೀಯ ವೆಂಟಿಲೇಟರ್‌ಗಳನ್ನು ಪೂರೈಸಿರುವ ವಿಚಾರದ ಬಗೆಗಿನ ಪರಿಸ್ಥಿತಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ವೆಂಟಿಲೇಟರ್ಗಳು ಜೀವ ಉಳಿಸುವ ಸಾಧನವೆಂದು ನಂಬಲಾಗಿದೆ ಮತ್ತು ಅಸಮರ್ಪಕ ಕಾರ್ಯವು ರೋಗಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಸಮರ್ಪಕ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಬೇಕು" ಎಂದು ಸೂಚನೆ ನೀಡಿದರು.
ಈ ಪ್ರಕರಣಕ್ಕೆ ಸಹಾಯ ಮಾಡಲು ನ್ಯಾಯಾಲಯವು ನೇಮಿಸಿದ ಅಮಿಕಸ್ ಕ್ಯೂರಿಯಾ ಸತ್ಯಜೀತ್ ಎಸ್ ಬೋರಾ, ಕಾರ್ಯನಿರ್ವಹಿಸದ ವೆಂಟಿಲೇಟರ್‌ಗಳಿಗೆ ಸಂಬಂಧಿಸಿದ ಸುದ್ದಿ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಡೀನ್ ಪಿಎಂ ಕೇರ್ಸ್ ನಿಧಿಯ ಮೂಲಕ ಪಡೆದ 150 ವೆಂಟಿಲೇಟರ್‌ಗಳಿಗೆ ಸಂಬಂಧಿಸಿದ ದಾಖಲೆಗಳ ಸಂಕಲನವನ್ನು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಮುಖ್ಯ ಸಾರ್ವಜನಿಕ ಅಭಿಯೋಜಕ ಡಿ ಆರ್ ಕೇಲ್ ನ್ಯಾಯಾಲಯಕ್ಕೆ ಸಲ್ಲಿಸಿದರು.
ವರದಿಯ ಪ್ರಕಾರ ಜ್ಯೋತಿ ಸಿಎನ್‌ಸಿ ಎಂಬ ಕಂಪನಿಯು ಧಾಮನ್- III ಎಂಬ ಹೆಸರಿನೊಂದಿಗೆ ಈ ವೆಂಟಿಲೇಟರ್‌ಗಳನ್ನು ತಯಾರಿಸಿದೆ. ಆದರೆ, ವೆಂಟಿಲೇಟರ್ಗಳು ಅತ್ಯಂತ ಗಂಭೀರವಾದ ನ್ಯೂನ್ಯತೆಗಳಿಗೆ ಕೂಡದೆ. ನ್ಯೂನತೆಗಳಲ್ಲಿ ಪ್ರಮುಖವಾದದ್ದು ಎಂದರೆ ‘ನೋ-ಇನ್ಲೆಟ್ ಆಕ್ಸಿಜನ್ (O2) ಒತ್ತಡ’ ಪ್ರದರ್ಶನ ಮತ್ತು ವೆಂಟಿಲೇಟರ್ ನಲ್ಲಿರುವಾಗ ರೋಗಿಯು ಹೈಪೋಕ್ಸಿಕ್ ಆಗುವುದು ಮತ್ತು ಅದೇ "ಜೀವಕ್ಕೆ ಅಪಾಯಕಾರಿ" ಎಂದು ವರದಿ ನೀಡಲಾಗಿದೆ. ಈ ವರದಿಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ರ ಕ್ರಮಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ: ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯುತ್ತಾರೆ ಎಂಬ ನೊಬೆಲ್ ಪ್ರಶಸ್ತಿ ವಿಜೇತ ತಜ್ಞನ ಹೇಳಿಕೆ ಸತ್ಯನಾ?
ಪಿಎಂ ಕೇರ್ಸ್ ಹಣದಿಂದ ಭಾರತ ಸರ್ಕಾರ ಅನೇಕ ರಾಜ್ಯಗಳಿಗೆ ವೆಂಟಿಲೇಟರ್ ಅನ್ನು ಪೂರೈಸಿದೆ. ಆದರೆ, ಹಲವೆಡೆ ವೆಂಟಿಲೇಟರ್ಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಸುದ್ದಿ ಕಳೆದ 6 ತಿಂಗಳ ಹಿಂದೆ ದೊಡ್ಡ ಸುದ್ದಿ ಮಾಡಿತ್ತು. ಆದರೆ, ಅದರ ಸಂಖ್ಯೆ ಕಡಿಮೆ ಇದ್ದ ಕಾರಣ ಬಹುತೇಕ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಇದೀಗ ಮುಂಬೈ ನಗರಕ್ಕೆ ನೀಡಲಾಗಿರುವ 150 ವೆಂಟಿಲೇಟರ್ಗಳ ಬೈಕಿ ಬರೋಬ್ಬರಿ 113 ವೆಂಟಿಲೇಟರ್ಗಳು ಕೈಕೊಟ್ಟಿವೆ. ಅಲ್ಲದೆ, ಈ ಬಗ್ಗೆ ಮುಂಬೈ ಹೈಕೋರ್ಟ್ ಮೊದಲ ಪಿಐಎಲ್ ಅರ್ಜಿಯೂ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ