ಲಕ್ನೋ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣವನ್ನು ಪಡೆದುಕೊಂಡ ಮಹಿಳೆಯರು ಗಂಡಂದಿರಿಗೆ ಪಂಗನಾಮ ಹಾಕಿ, ಆ ದುಡ್ಡಿನ ಜೊತೆಗೆ ಪ್ರೇಮಿಗಳೊಂದಿಗೆ ಪಲಾಯನ ಮಾಡಿರುವಂಥ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು, ಇಂಥದ್ದೊಂದು ವಿಚಿತ್ರ ಘಟನೆ ನಡೆದಿರೋದು ಉತ್ತರ ಪ್ರದೇಶದ (Uttar Pradesh News) ಬಾರಾಬಂಕಿಯಲ್ಲಿ. ಇಲ್ಲಿನ ವಿವಾಹಿತ ನಾಲ್ಕು ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಹಣವನ್ನು ಪಡೆದ ನಂತರ ತಮ್ಮ ಗಂಡನನ್ನು ಬಿಟ್ಟು ತಮ್ಮ ಪ್ರೇಮಿಗಳೊಂದಿಗೆ (Lovers) ಓಡಿಹೋಗಿರುವುದು ಬೆಳಕಿಗೆ ಬಂದಿದೆ.
ಕುಟುಂಬದ ಮಹಿಳೆಯರ ಖಾತೆಗೆ ಬಂದಿತ್ತು ಹಣ
PMAY ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಬಡವರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲ ವರ್ಗ (EWS) ಹಾಗೂ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವವರು ಈ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಹಣ ಪಡೆಯುತ್ತಾರೆ. ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಪಿಎಂಎವೈ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು, ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರುವುದನ್ನು ಕೇಂದ್ರವು ಕಡ್ಡಾಯಗೊಳಿಸಿದೆ.
ಪತ್ನಿಯರ ಪಲಾಯನ ಕಂಡು ಕಂಗಾಲಾದ ಗಂಡಂದಿರು
ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಮತ್ತು ಸಿದ್ಧೌರ್‌ನ ನಾಲ್ವರು ಮಹಿಳಾ ಫಲಾನುಭವಿಗಳ ಖಾತೆಗೆ ಯೋಜನೆಯ ಮೊದಲ ಕಂತಿನ ಹಣವನ್ನು ನೀಡಲಾಗಿದೆ. ಅವರೆಲ್ಲರೂ ₹ 50,000 ಅನುದಾನದ ಜೊತೆಗೆ ಗಂಡನನ್ನು ಬಿಟ್ಟು ಹೋಗಿದ್ದಾರೆ.
ಈ ಮಧ್ಯೆ ದುಡ್ಡೆತ್ತಿಕೊಂಡು ಓಡಿಹೋಗಿರುವ ಪತ್ನಿಯರಿಂದಾಗಿ ಅವರ ಗಂಡಂದಿರು ಎರಡು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಒಂದು ಮನೆಯ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗದೇ ಇರುವುದಕ್ಕೆ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ (DUDA) ಯವರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು, ಕಂತಿನಿಂದ ಪಡೆದ ಹಣ ಅವರ ಕೈಸೇರದೇ ಇದ್ದರೂ ಅವರು ರಿಕವರಿ ನೋಟೀಸ್ ಬರಬಹುದೆಂಬ ಬಗ್ಗೆ ಆತಂಕಗೊಂಡಿದ್ದಾರೆ.
ಪತ್ನಿಯರ ಖಾತೆಗೆ ಹಣ ಹಾಕಬೇಡಿ ಎಂದು ಮನವಿ
ಯೋಜನೆಯ ಫಲಾನುಭವಿಗಳ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದಿದ್ದಾಗ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಗರಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ನೋಟಿಸ್ ಕಳುಹಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಆದೇಶಿಸಿದರೂ ಯಾವುದೇ ಪರಿಣಾಮವಾಗಿಲ್ಲ.
ಓಡಿಹೋಗಿರುವಂಥ ಮಹಿಳೆಯರ ಗಂಡಂದಿರು ಏನು ಮಾಡಬೇಕೆಂದು ತಿಳಿಯದೇ ಕಂಗಾಲಾ ಕೊನೆಗೂ ಈ ಬಗ್ಗೆ ಅಧಿಕಾರಿಗಳಿಗೆ ವಿವರ ನೀಡಿದ್ದಾರೆ. ತಮ್ಮ ಹೆಂಡತಿಯರು ಅವರ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಓಡಿಹೋದ ಹೆಂಡತಿಯರು ಎಕ್ಸೆಸ್ ಮಾಡಬಹುದಾದ ಬ್ಯಾಂಕ್ ಖಾತೆಗಳಿಗೆ ಮುಂದಿನ ಕಂತಿನ ಹಣ ಹಾಕದಂತೆ DUDA ಯ ಯೋಜನಾಧಿಕಾರಿಯನ್ನು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Mangaluru News: ಕೊರಗಜ್ಜ ದೈವದ ಕೋಲಕ್ಕಾಗಿ ಅಮಿತ್ ಶಾ ರೋಡ್ ಶೋ ರದ್ದು
ಅಂದಹಾಗೆ ಪಿಎಂಎವೈ ಯೋಜನೆಯಡಿ ಬಾರಾಬಂಕಿ ಜಿಲ್ಲೆಯಲ್ಲಿ 1604 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಇಲಾಖೆಯು ಮೊದಲ ಕಂತಿನ ಹಣವನ್ನು ಎಲ್ಲ ಫಲಾನುಭವಿಗಳಿಗೆ ವಿತರಿಸಿದೆ. ತನಿಖೆಯ ನಂತರ 40 ಮಂದಿ ಇನ್ನೂ ಕಾಮಗಾರಿ ಆರಂಭಿಸದಿರುವುದು ಕಂಡುಬಂದಿದೆ.
ಯೋಜನಾಧಿಕಾರಿ ಹೇಳೋದು ಹೀಗೆ
ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಈ ಕೂಡಲೇ ಮನೆ ನಿರ್ಮಾಣ ಆರಂಭಿಸುವಂತೆ ಆದೇಶಿಸಿಸಲಾಗಿದೆ. ಆದರೆ ಕೆಲ ಮನೆಗಳಲ್ಲಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಮಹಿಳೆಯರು ಹಣ ಪಡೆದು ಬೇರೆಯವರೊಂದಿಗೆ ಓಡಿ ಹೋಗಿದ್ದಾರೆ ಎಂದು ದುಡಾ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ತಿಳಿಸಿದ್ದಾರೆ.
"ಗಂಡಂದಿರು ತಮ್ಮ ಹೆಂಡತಿಯರನ್ನು ಮನವೊಲಿಸಿ ಮನೆಗೆ ಕರೆತರಲು ಸೂಚಿಸಲಾಗಿದೆ. ಇದು ಸರ್ಕಾರದ ಹಣ, ಇದನ್ನು ದುರುಪಯೋಗಪಡಿಸಿಕೊಳ್ಳಬಾರದು. ಅಲ್ಲದೇ ಹೋದರೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ" ಎಂಬುದಾಗಿ ತ್ರಿಪಾಠಿ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ