ಮಗುವಿಗೆ ತಾಯಿ ಹಾಲುಣಿಸುವ ಕವರ್​ ಫೋಟೋ, ‘ಕಾಮಪ್ರಚೋದಕವಲ್ಲ: ಕೇರಳ ಹೈಕೋರ್ಟ್​

 • Share this:
  -ಗಣೇಶ್​ ನಚಿಕೇತು, ನ್ಯೂಸ್​18 ಕನ್ನಡ

  ಕೇರಳ(ಜೂನ್​. 21): ಕೇರಳದ ಖ್ಯಾತ ಮಾಸ ಪತ್ರಿಕೆ​ ‘ಗೃಹಲಕ್ಷ್ಮಿ’ ಮುಖಪುಟದಲ್ಲಿ ಮಗುವಿಗೆ ಹಾಲುಣಿಸುವ ಫೋಟೊ ಪ್ರಕಟವಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೇರಳ ಹೈಕೋರ್ಟ್​ ಫೋಟೊದಲ್ಲಿ ಕಾಣಿಸಿಕೊಂಡಿದ್ದ ರೂಪದರ್ಶಿ ಹಾಗೂ ಪತ್ರಿಕೆ ವಿರುದ್ಧ ಸಲ್ಲಿಸಿದ್ದ ದೂರು ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಕಾಮಪ್ರಚೋದಕವಲ್ಲ ಎಂದು ಆದೇಶ ನೀಡಿದೆ.

  ತಾಯಿ ಮಗುವಿಗೆ ಹಾಲುಣಿಸುವ ಮಾದರಿಯಲ್ಲಿ ಚಿತ್ರವನ್ನು ಕ್ಲಿಕ್ಕಿಸಿ ಮ್ಯಾಗಜೇನ್​ ಕವರ್​ ಪೋಟೊವನ್ನಾಗಿಸಲಾಗಿತ್ತು. ಬಳಿಕ ಒಳ್ಳೆಯ ಉದ್ದೇಶದೊಂದಿಗೆ ಪ್ರಕಟವಾಗಿದ್ದ​ ಕವರ್​​ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಸಾರ್ವಜನಿಕರಲ್ಲಿ ಪರ-ವಿರೋಧ ಚರ್ಚೆಗೆ ಒಳಗಾಗಿತ್ತು.

  ಎದೆಹಾಲು ಉಣಿಸುವ ಪೋಸ್ ನೀಡಿದ್ದ ಗಿಲು ಜೋಸೆಫ್ ಅವರ ನೋಟ, ಭಂಗಿ ಕಾಮೋತ್ತೇಜಕವಾಗಿದೆ ಎಂದು ಪತ್ರಿಕೆ ಮತ್ತು ರೂಪದರ್ಶಿ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿ, ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

  ಕಾಮ ಪ್ರಚೋದಿಸುವಂಥ ಚಿತ್ರ ಬಳಸುವ ಮೂಲಕ ಸ್ತ್ರೀತನದ ಗೌರವಕ್ಕೆ ಚ್ಯುತಿ ತರಲಾಗಿದೆ. ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986ರ ಸೆಕ್ಷನ್​ 3 ಮತ್ತು 4 ರ ಅಡಿಯಲ್ಲಿ ವಕೀಲ ವಿನೋದ್​ ಮ್ಯಾಥ್ಯೂ ವಿಲ್ಸನ್​ ಪತ್ರಿಕೆ ಮತ್ತು ರೂಪದರ್ಶಿ ವಿರುದ್ಧ ದೂರು ದಾಖಲಿಸಿದ್ದರು. ಇದು ಅಸಹ್ಯಕರ ಎಂದು ಆರೋಪಿಸಲಾಗಿತ್ತು.

  28 ವರ್ಷದ ನಟಿ, ಅವಿವಾಹಿತೆ ಮಹಿಳೆ ಗಿಲು ಜೋಸೆಫ್ ಅವರು ಮಗುವಿಗೆ ಹಾಲುಣಿಸುವಂತೆ ಪೋಸ್ ನೀಡಿದ್ದು ಕಾಮಪ್ರಚೋದಕ ಎಂದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಟೀಕೆ ಮತ್ತು ಆಕ್ಷೇಪ ವ್ಯಕ್ತವಾಗಿತ್ತು.

  ಇನ್ನೊಂದೆಡೆ, ಸೀರೆ, ಸಿಂಧೂರ, ತಾಳಿ ಧರಿಸಿ ಮಗುವಿಗೆ ಎದೆ ಹಾಲು ಕುಡಿಸುತ್ತಿರುವ ಚಿತ್ರದಲ್ಲಿ ಯಾವುದೇ ತಪ್ಪಿಲ್ಲ. ಇದು ತಾಯಂದಿರಿಗೆ ನೈತಿಕ ಬೆಂಬಲ ನೀಡುತ್ತಿದೆ ಎಂದು ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.

  ಈ ಬೆನ್ನಲ್ಲೇ ಪ್ರತಿಕ್ರಿಯಿಸಿದ ಗಿಲು ಜೋಸೆಫ್​, ಈ ಮುಖಪುಟ ಚಿತ್ರ ನಿಮಗೆ ಇಷ್ಟಪಡದೆ ಇರಬಹುದು. ಆದರೆ, ಚಿತ್ರ ದೇಶದ ಎಲ್ಲ ತಾಯಿಯರಿಗೆ ಒಳ್ಳೆಯ ಸಂದೇಶ ನೀಡುತ್ತಿದೆ. ಯಾರು ಏನಾದರು ಅಂದುಕೊಳ್ಳಲಿ ಹಿಂಜರಿಕೆಯಿಲ್ಲದೆ ತಾಯಂದಿರು ಮಗುವಿಗೆ ಎದೆಹಾಲು ಉಣಿಸಿ ಎಂದು ಹೇಳಿ ಮತ್ತೊಂದು ವಿವಾದಕ್ಕೆ ಮತ್ತು ಮೆಚ್ಚುಗೆಗೆ ಪಾತ್ರರಾದರು.

  ವಕೀಲ ವಿನೋದ್​ ಅವರ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್​ ದೂರನ್ನು ತಳ್ಳಿಹಾಕಿದೆ. ಈ ಮೂಲಕ ತಾಯಿಗೆ ಹಾಲುಣಿಸುವ ಫೋಟೋ ಅಸಹ್ಯಕರವಲ್ಲ ಎಂದು ಮಹತ್ವದ ಆದೇಶದ ನೀಡಿದೆ. ಈ ವೇಳೆ ಭಾರತೀಯರು ಪ್ರಭುದ್ದರು ಇದು ಕಾಮಪ್ರಚೋದಕವಲ್ಲ ಎಂದು ಖಡಕ್​ ಆಗಿ ಹೇಳಿದೆ.

  ಇನ್ನು ಭಾರತೀಯ ಪ್ರಾಚೀನ ಕಾಲದಲ್ಲಿ ಶಿಲೆಗಳು ಮತ್ತು ಇತ್ಯಾದಿಗಳನ್ನು ಪೌರಾಣಿಕ ದೇವಸ್ಥಾನಗಳಲ್ಲಿ ಇದೆ ಮಾದರಿಯಲ್ಲಿ ಕೆತ್ತಲಾಗಿದೆ. ಅಲ್ಲದೇ ಇದು ಯಾರ ಭಾವನೆಗಳಿಗೂ ಧಕ್ಕೆ ತರಲಿಲ್ಲ. ಇನ್ನು ಈ ಚಿತ್ರವೂ ತಾಯ್ತನವನ್ನು ತೋರಿಸುತ್ತದೆಯೇ ಹೊರತು, ಕಾಮಪ್ರಚೋದನೆ ಮಾಡಲ್ಲ ಎಂದು ಹೇಳಿದೆ.
  First published: